ಕೆ. ಜಿ. ಕೃಪಾಲ್
ಕೆ. ಜಿ. ಕೃಪಾಲ್
ಕೆ ಜಿ ಕೃಪಾಲ್ ಅವರು ಆರ್ಥಿಕ ಚಿಂತಕರು, ಷೇರು ಪೇಟೆ ತಜ್ಞರು ಮತ್ತು ಕನ್ನಡದಲ್ಲಿ ಆ ಕುರಿತದ ಪ್ರಸಿದ್ಧ ಬರಹಗಾರರು. ಇವರು ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ
ಸಲ್ಲಿಸುತ್ತ ಬಂದಿದ್ದಾರೆ.
ಏಪ್ರಿಲ್ 13, ಕೃಪಾಲ್ ಅವರ ಜನ್ಮದಿನ.
ಕಳೆದ 4 ದಶಕಗಳಿಗೂ ಹೆಚ್ಚು ಕಾಲದಿಂದ ಆರ್ಥಿಕ ಬರೆವಣಿಗೆಯಲ್ಲಿ ಹೆಸರಾಗಿರುವ ಕೃಪಾಲ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ದಾವಣಗೆರೆಯ ನಗರವಾಣಿ, ಜನತಾವಾಣಿ ಪತ್ರಿಕೆಗಳಲ್ಲಿ ಅಂದಿನ ರಾಷ್ಟ್ರೀಯ ಉಳಿತಾಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಲೇಖನಗಳನ್ನು ಮೂಡಿಸಿದ್ದರು. ಮುಂದೆ ಕೃಪಾಲ್ ಅವರು ಎಂಬತ್ತರ ದಶಕದಲ್ಲಿ ಷೇರು ಬ್ರೋಕಿಂಗ್ ವೃತ್ತಿ ಪ್ರವೇಶಿಸಿದರು. ಇವರ ಆರಂಭಿಕ ಲೇಖನಗಳಿಗೆ 'ಕನ್ನಡ ಪ್ರಭ' ವೇದಿಕೆ ಒದಗಿಸಿತು. ಷೇರುಪೇಟೆಯ ಲೇಖನಗಳನ್ನು ಕನ್ನಡ ಪತ್ರಿಕೆಗಳಲ್ಲಿ ಬರೆಯುವ ವೃತ್ತಿಪರರಲ್ಲಿ ಮೊದಲಿಗರೆಂಬ ಹೆಗ್ಗಳಿಕೆಗೆ ಪಾತ್ರರಾದವರು.
1996 ರಲ್ಲಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಕೃಪಾಲ್ ಅವರ ಲೇಖನಗಳಾದ 'ಷೇರು ವರ್ಗಾವಣೆಯ ಫಜೀತಿ', ' ಷೇರುದಾರರಿಗೆ ಪೆಟ್ಟಿನ ಮೇಲೆ ಪೆಟ್ಟು', 1997 ರ 'ಸೋಮವಾರದ ಪೇಟೆ ಅವಾಂತರ: ಯಾರು ಹೊಣೆ' ಇವು ಓದುಗರ ಅಪಾರ ಒಲವಿಗೆ ಪಾತ್ರವಾದವು. ಮಂದೆ ಇವರ ಷೇರುಪೇಟೆ ಅಂಕಣವು 'ಷೇರು ನೋಟ' ಎಂಬ ನಾಮಾಂಕಿತದಲ್ಲಿ ಪ್ರತಿ ಸೋಮವಾರ ಪ್ರಕಟವಾಗಲಾರಂಭಿಸಿತು. 'ಉಷಾ ಕಿರಣ' ಪತ್ರಿಕೆಯು ಕೃಪಾಲ್ ಅವರ 'ಷೇರುಪೇಟೆ ನಿತ್ಯ ನೋಟ' ಎಂಬ ದಿನ ನಿತ್ಯದ ಅಂಕಣ ಹಾಗೂ 'ಷೇರು ಕುಶಲೋಪರಿ' ಎಂಬ ಪ್ರಶ್ನೋತ್ತರ ಅಂಕಣವನ್ನು ಪ್ರಕಟಿಸಿತು. ಮುಂದೆ 'ಪ್ರಜಾವಾಣಿ' ಯಲ್ಲಿ ಕೃಪಾಲ್ ಅವರ 'ಷೇರು ಸಮಾಚಾರ' ಅಂಕಣ ಆರಂಭವಾಯಿತು. ಈ ಪತ್ರಿಕೆಗಳೊಂದಿಗೆ ಸುಧಾ ವಾರಪತ್ರಿಕೆಯು ಪ್ರಶ್ನೋತ್ತರ ಅಂಕಣವನ್ನು ಸಹ ಪ್ರಕಟಿಸಿತು. 'ತರಂಗ' ವಾರಪತ್ರಿಕೆಗೆ 2007 ರಲ್ಲಿ ಮುಖಪುಟ ಲೇಖನ ಬರೆದುಕೊಡುವ ಅವಕಾಶ ಕೊಟ್ಟಿದ್ದಲ್ಲದೆ, ಹಲವು ಇತರೆ ಅಂಕಣಗಳನ್ನು ಬರೆಯಲು ಇವರಿಗೆ ಅವಕಾಶ ಮಾಡಿಕೊಟ್ಟಿತು. ಉದಯವಾಣಿಯಲ್ಲೂ ಷೇರುಪೇಟೆ ಕುಸಿತಕಂಡಾಗ ವಿಶೇಷ ಪುರವಣಿ ಲೇಖನ ಪ್ರಕಟಿಸಿತು. ಹೀಗೇ ಮುಂದೆ ಸಾಗಿದ ಕೃಪಾಲ್ ಅವರ ಷೇರುಪೇಟೆ ಬರಹಗಳು ಕನ್ನಡದ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಿಗೂ ಪಸರಿಸಿದೆ.
ಷೇರು ಮಾರುಕಟ್ಟೆಯ ಆಳ ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಬರಹಗಾರರಲ್ಲಿ ಕೃಪಾಲ್ ಒಬ್ಬರು. ಇದು ಕನ್ನಡ ಭಾಷೆಗೆ ದಕ್ಕಿರುವ ಲಾಭವೂ ಹೌದು. ಕೃಪಾಲ್ ಅವರು ನಾಡಿನ ಎಲ್ಲ ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತರಾಗಿರುವುದಷ್ಟೇ ಅಲ್ಲದೆ, ಜನಪ್ರಿಯ ಕಿರುತೆರೆಯ ವಾಹಿನಿಗಳೂ ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇತ್ತೀಚಿನ ಹಲವು ವರ್ಷಗಳಿಂದ 'ಕ್ಲಬ್ ಹೌಸ್' ಜಾಲ ಮಾಧ್ಯಮದ ಮೂಲಕ ರಾತ್ರಿ 9.30 ಕ್ಕೆ ಮಾರುಕಟ್ಟೆಯ ದಿವಸಗಳಲ್ಲಿ ನಡೆಸಿಕೊಡುವ "ಷೇರುಪೇಟೆ ವಿಚಾರ ಮಂಟಪ" - ಸಾಕ್ಷರತೆಯ ಕಡೆಗೆ ಎಂಬ ಕಾರ್ಯಕ್ರಮ ಸಾಕಷ್ಟು ಒಳ್ಳೆಯ ಕಾರ್ಯಕ್ರಮವಾಗಿ ಜನಪ್ರಿಯಗೊಂಡಿದೆ. ಇದರಿಂದ ಬಹಳಷ್ಟು ಮಂದಿ ಷೇರುಪೇಟೆಯ ಒಳ ಸೂಕ್ಷ್ಮ ಗಳನ್ನು ಅರಿತುಕೊಂಡಿದ್ದಾರೆ.
ಷೇರು ಹೂಡಿಕೆ ಕಲಿ ತಿಳಿ ನಲಿ, ಷೇರು ಜಗತ್ತು, ಷೇರು ಜಗತ್ತಿನ ಸುತ್ತ, ಷೇರು ಸಂಪತ್ತು, ಷೇರು ಸಂಜೀವಿನಿ ಮುಂತಾದ ಪ್ರಸಿದ್ಧ ಕೃತಿಗಳು ಕೆ ಜಿ ಕೃಪಾಲ್ ಅವರ ಬರೆವಣಿಗೆಯಿಂದ ಹೊರಹೊಮ್ಮಿವೆ.
ಕೃಪಾಲ್ ಅಂತಹವರ ಬರೆವಣಿಗೆಯಿಂದ ಹಣಹೂಡಿಕೆ ಮಾಡುವವರಿಗೆ ಸಂದಿರುವ ವ್ಯಾವಹಾರಿಕ ಜ್ಞಾನದ ಜೊತೆಗೆ, ಕನ್ನಡ ಭಾಷೆಗೆ ಆರ್ಥಿಕ ವ್ಯವಹಾರಗಳ ಕುರಿತಾದ ದೊಡ್ಡ ನಿಧಿಯೂ ಸಂದಿರುವುದು ಕೂಡ ಮಹತ್ವದ್ದು.
ಕೃಪಾಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Krupal G Kangondhi 🌷🙏🌷
ಕಾಮೆಂಟ್‌ಗಳು