ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಮಿಳ್ ಸೆಲ್ವಿ


ಅಸಾಮಾನ್ಯ ಕನ್ನಡ ನಿಷ್ಠೆಯ ತಮಿಳ್ ಸೆಲ್ವಿ


ಡಾ. ತಮಿಳ್ ಸೆಲ್ವಿ ತಮಿಳು-ಕನ್ನಡದ ನಡುವಣ ಸಾಂಸ್ಕೃತಿಕ ಕೊಂಡಿ. 

ಏಪ್ರಿಲ್ 13 ತಮಿಳ್ ಸೆಲ್ವಿ ಅವರ ಜನ್ಮದಿನ. ಅವರು ಪ್ರಸ್ತುತ ಮದ್ರಾಸು ವಿಶ್ವ ವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥೆ. ಅವರು ಹುಟ್ಟಿದ್ದು ತಮಿಳು ನಾಡಿನಲ್ಲಿ. ಬೆಳೆದು ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಈಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಮೂರು ಸುವರ್ಣ ಪದಕಗಳೊಂದಿಗೆ ಕನ್ನಡದ ಎಂ.ಎ ಪದವೀಧರೆ. ಕನ್ನಡ ಶಾಸನಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು ಡಾ. ಹಂಪನಾ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಗಂಗರ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಸಂದಿದೆ. 

ಸೆಲ್ವಿ ಅವರಲ್ಲಿ ಬಾಲ್ಯದಿಂದಲೂ ಶಿಕ್ಷಕಿ ಆಗಬೇಕೆಂದು ಮೂಡಿದ ತುಡಿತಕ್ಕೆ ಕನ್ನಡದ ಭಾಷಾಭಿಮಾನ ಸಹಕರಿಸಿತು. ಸೆಲ್ವಿ  ಅವರು ಹೊರನಾಡ ಕನ್ನಡಿಗರಿಗೆ ಇರುವ ಕನ್ನಡ  ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ಸ್ಥಾನದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ತಮಿಳು ನಾಡನ್ನು ಪ್ರತಿನಿಧಿಸಿದ್ದಾರೆ.‍ ದೇಶದ ವಿವಿದೆಡೆಗಳಲ್ಲಿ ಅಲ್ಲದೆ ಸಿಂಗಪೂರ್, ಮಲೇಶ್ಯಾ, ಬ್ಯಾಂಕಾಕ್ ಮತ್ತು ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಅನೇಕ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.‍ ಕನ್ನಡ ಕಾವ್ಯಭಾಗಗಳನ್ನು ಕಂಠಪಾಠ ಮಾಡಿ ಹೇಳುವುದು ಇವರಿಗಿರುವ ಹಲವು ಪ್ರತಿಭೆಗಳಲ್ಲಿ ಎದ್ದು ಕಾಣುವಂತದ್ದು. 

ಸೆಲ್ವಿ ಅವರು ಕನ್ನಡದಿಂದ ತಮಿಳು ಭಾಷೆಗೆ, ಮತ್ತು ತಮಿಳು ಭಾಷೆಯಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ. ದ್ರಾವಿಡ ಮೂಲದ 'ಕನ್ನಡ-ತಮಿಳು' ಎಂಬ ಸಂಶೋಧನಾ ಕೃತಿ ಹೊರತಂದಿದ್ದಾರೆ.‍ ತಮಿಳು ಕನ್ನಡ ಸಾಹಿತ್ಯದ ಸಂಬಂಧ (ತಮಿಳಿನಲ್ಲಿ-ಸಂಶೋಧನೆ), ಚೋಳ-ಪಲ್ಲವ-ಶಿಲ್ಪಕಲೆ, ಅಶೋಕ ಮಿತ್ರನ್ ಕಥೆಗಳು (ಭಾಷಾಂತರ), ಸಂಕ್ರಾಂತಿ (ಭಾಷಾಂತರ), ಅತ್ತಿಮಬ್ಬೆ (ಸಂಶೋಧನೆ), ಶ್ರೀಲಂಕಾದ ತಮಿಳು ಕವಿತೆಗಳು, 6, 7, 8  ಮತ್ತು 10ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳ ಸಂಪಾದನೆ, ನಾನು ಅವನಲ್ಲ ಅವಳು (ಅನುವಾದ) ಮುಂತಾದವು ಇವರ ಕೃತಿಗಳಲ್ಲಿ ಸೇರಿವೆ. ವೀರಪ್ಪ ಮೊಯ್ಲಿ ಅವರ ಮಹಾನ್ವೇಷಣಂ ಮಹಾಕಾವ್ಯದ ಕೆಲವು ಭಾಗವನ್ನು ತಮಿಳಿಗೆ ಈಗಾಗಲೇ ಅನುವಾದಿಸಿದ್ದಾರೆ. 

ತಮಿಳ್ ಸೆಲ್ವಿ ಅವರಿಗೆ ‘ನಾನು ಅವನಲ್ಲ.. ಅವಳು...’ ಎಂಬ ಅನುವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗಳು ಸಂದಿವೆ.  ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಬಹುಮಾನ ಹಾಗೂ ಕಾಂತಾವರ ಕನ್ನಡ ಸಂಘವು ನೀಡುವ ಕರ್ನಾಟಕ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ 'ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ' ಮುಂತಾದ ಗೌರವಗಳೂ ಸಂದಿವೆ. ಅವರಿಗೆ 2021ರ ವರ್ಷದಲ್ಲಿ ತಮಿಳು ನಾಡು ಸರ್ಕಾರವೂ ಶ್ರೇಷ್ಠ ಅನುವಾದಕರೆಂಬ ದೊಡ್ಡ ಪ್ರಶಸ್ತಿ ನೀಡಿ ಗೌರವಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನನ್ನ ಒಡನಾಟವಿದ್ದ ದಿನಗಳಲ್ಲಿ ನಾನು ಕಂಡಂತೆ, ಅವರಿಗಿದ್ದ ಹೊರನಾಡಿನ ಕನ್ನಡ ಪ್ರಾತಿನಿಧಿತ್ವವನ್ನು ಕನ್ನಡದ ನಿಷ್ಠೆಗಾಗಿ ಬಳಸಿದ ಅಪರೂಪದ ಸರಳ ಸಹೃದಯಿ ಪ್ರತಿಭಾನ್ವಿತ ಪ್ರಾಜ್ಞೆ.  ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Tamil Selvi 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ