ಲಕ್ಷ್ಮೀ ನಾಗರಾಜ್
ಲಕ್ಷ್ಮೀ ನಾಗರಾಜ್
ವಿದುಷಿ ಲಕ್ಷ್ಮೀ ನಾಗರಾಜ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತಗಳೆರಡರಲ್ಲೂ ಪರಿಣಿತರಾಗಿದ್ದು, ಶಾಸ್ತ್ರೀಯ ಸಂಗೀತ಼, ಸುಗಮ ಸಂಗೀತ, ಹಿನ್ನೆಲೆ ಗಾಯನ ಹೀಗೆ ಬಹುಮುಖಿಯಾಗಿ ಸಾಧನೆ ಮಾಡುತ್ತಿದ್ದಾರೆ. ಇವರ ಸಹೋದರಿ ಇಂದೂ ನಾಗರಾಜ್ ಅವರೂ ಪ್ರಸಿದ್ಧ ಬಹುಮುಖಿ ಸಾಧಕಿಯಾಗಿದ್ದು, ಈ ಸಹೋದರಿಯರು ಚಿಲಕುಂದ ಸಹೋದರಿಯೆಂದು ಸಂಗೀತ ಕಾರ್ಯಕ್ರಮಗಳಿಗೂ ಹೆಸರಾಗಿದ್ದಾರೆ. ಇವರ ಸಹೋದರ ಕೇಶವ ದತ್ ಅವರೂ ಎಂಬಿಎ ಸಾಧನೆಯೊಂದಿಗೆ ಮೃದಂಗ ವಿದ್ವಾನ್ ಆಗಿದ್ದಾರೆ.
ಮೇ 4, ಲಕ್ಷ್ಮೀ ಅವರ ಜನ್ಮದಿನ. ಇವರ ಮೂಲ ಊರು ಹುಣಸೂರು ತಾಲ್ಲೂಕಿನ ಚಿಲಕುಂದ. ಇವರದ್ದು ಸಂಗೀತ ಪರಂಪರೆಯುಳ್ಳ ಕುಟುಂಬ. ತಂದೆ ವಿದ್ವಾನ್ ನಾಗರಾಜ್ ಅವರು ಕೊಳಲು ವಾದಕರಗಿ, ಗಾಯನ ವಿದ್ವಾಂಸರಾಗಿ, ಸಂಗೀತ ಗುರುವಾಗಿ ಮತ್ತು ಕಾಲೇಜಿನಲ್ಲಿ ನಿವೃತ್ತ ಇಂಗ್ಲಿಷ್ ಬೋಧಕರಾಗಿ ಹೆಸರಾದವರು. ತಾಯಿ ಎಚ್ ಎಸ್ ರಾಧಾ ಅವರು ಉತ್ತಮ ಗಾಯಕಿಯಾಗಿದ್ದು ತಮ್ಮ ಮದುವೆಯ ನಂತರ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಗೀತ ವಿದ್ವತ್ ಸಾಧನೆಗಳನ್ನು ಮಾಡಿರುವ ಸುಶ್ರಾವ್ಯ ಗಾಯಕಿ. ಲಕ್ಷ್ಮೀ ಅವರ ಮುತ್ತಜ್ಜ ಸಿ ಟಿ ಶ್ರೀನಿವಾಸಮೂರ್ತಿ ಅವರು ಮೈಸೂರಿನಲ್ಕಿ ಸಂಸ್ಕೃತ ಕಲಿಯುವಾಗ ಅವರ ಸಹಪಾಠಿ ಆಗಿದ್ದ ವೇದಬ್ರಹ್ಮ ವೆಂಕಟ ನಾರಾಯಣ ಉಡುಪ ಶಾಸ್ರ್ತಿಗಳು ಸಕಲ ವಿದ್ಯಾ ಪಾರಂಗತರಾಗಿದ್ದು ಮಾತ್ರವಲ್ಲದೆ ವಯಲಿನ್ ವಾದನ ಮತ್ತು ಸಂಗೀತ ವಿದ್ವಾಂಸರೂ ಆಗಿದ್ದು, ಇವರ ತಂದೆಯ ಮನೆಯವರಿಗೆಲ್ಲ ಸಂಗೀತ ಕಲಿಸಿದವರು.
ಲಕ್ಷ್ಮೀ ಇನ್ನೂ ಎರಡೂವರೆ ವರ್ಷವಾಗಿದ್ದಾಗಲೇ ಅವರ ಅಜ್ಜಿ ತೊಡೆಯ ಮೇಲೆ ಕೂರಿಸಿಕೊಂಡು ಸಂಗೀತ ಸ್ವರ ಪ್ರಸ್ತಾರ ಹೇಳಿಕೊಡುತ್ತಿದ್ದರಂತೆ. ಮುಂದೆ ತಂದೆಯವರಿಂದ ಕಟ್ಟುನಿಟ್ಟಾದ ಶಿಸ್ತಿನ ಸಂಗೀತ ಪಾಠ ನಿರಂತರವಾಗಿ ಸಾಗಿತು. ಲಕ್ಷ್ಮೀ ಅವರು 7ನೇ ವಯಸ್ಸಿನಲ್ಲಿದ್ದಾಗಲೇ ಪಂಚರತ್ನ ಕೃತಿಗಳ ಗಾಯನ ಮತ್ತು 9ನೇ ವಯಸ್ಸಿನಲ್ಲಿರುವಾಗ ನವಗ್ರಹ ಕೃತಿಗಳಂತಹ ಕ್ಲಿಷ್ಟ ಗಾಯನವೂ ಸಿದ್ಧಿಸಿತ್ತು.
ಲಕ್ಷ್ಮೀ ನಾಗರಾಜ್ ಅವರು ಮೈಸೂರಿನಲ್ಲಿ ಬಿಎಸ್ಸಿ ಓದಿದರು. ಮುಂದೆ ಅವರು ಪಂಡಿತ್ ಪರಮೇಶ್ವರ ಹೆಗಡೆ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ನಿಷ್ಠೆಯಿಂದ ಸಾಧನೆ ಮಾಡಿದ್ದಾರೆ. ಲಕ್ಷ್ಮೀ ನಾಗರಾಜ್ ಅವರು ವಿವಾಹವಾಗಿದ್ದು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಲಕ್ಷ್ಮೀ ನಾಗರಾಜ್ ಅವರು 7 ವರ್ಷವಿದ್ದಾಗ, 5 ವರ್ಷವಿದ್ದ ತಮ್ಮ ತಂಗಿ ಇಂದೂ ನಾಗರಾಜ್ ಜೊತೆ ವೇದಿಕೆಯ ಮೇಲೆ ಮೊದಲು ಹಾಡಿದರು. ಮುಂದೆ ಮೇಲೆ ಹೇಳಿದಂತೆ ಈ ಜೋಡಿ ಚಿಲಕುಂದ ಸಹೋದರಿಯರಾಗಿ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿದ್ದಾರೆ.
ಲಕ್ಷ್ಮೀ ಅವರು ಮೊದಲು ಚಂದನ ವಾಹಿನಿಯಲ್ಲಿ 'ನಿತ್ಯೋತ್ಸವ' ಎಂಬ ಭಾವಗೀತೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮುಂದೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಾರಥ್ಯದಲ್ಲಿ ನಡೆಯುತ್ತಿದ್ದ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ವಿಜಯಿಯಾದರು. ಈ ಸ್ಪರ್ಧೆಗಳ ಪ್ರತಿ ಹಂತದಲ್ಲೂ ಇವರ ಗಾಯನ ಕನ್ನಡಿಗರ ಮನೆ ಮಾತಾಯಿತು. ಅಂತಿಮ ಸುತ್ತಿನಲ್ಲಿ ಹೇಮಾವತಿ ಚಿತ್ರದ ಎಸ್ ಜಾನಕಿಯವರ ಪ್ರಸಿದ್ಧ ಗೀತೆ "ಶಿವ ಶಿವ ಎನ್ನದ ನಾಲಿಗೆ ಏಕೆ" ಪ್ರಸ್ತುತ ಪಡಿಸಿದ ರೀತಿ ಇಂದಿಗೂ ಜನಪ್ರಿಯ. ಸುದೀರ್ಘ ಅವಧಿಯ Confident star singer reality showನಲ್ಲಿಯ ಇವರ ಸಾಧನೆಯೂ ಜನಪ್ರಿಯವಾಗಿದ್ದು ಇವರ ಧ್ವನಿಯಲ್ಲಿನ "ನಾದಮಯ ಈ ಲೋಕವೆಲ್ಲ" ಪ್ರಸ್ತುತಿಯೂ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಲಕ್ಷ್ಮೀ ನಾಗರಾಜ್ ಅವರ ಗಾಯನದ 'ಆಪ್ತರಕ್ಷಕ' ಚಿತ್ರದಲ್ಲಿನ 'ಓಂಕಾರ ಅಭಿನಯ ವೇದ' ಅಪಾರ ಜನಪ್ರಿಯ. ಸಿಂಹಾದ್ರಿ, ತಾರೆ, ಮನಸಾರೆ, ಮೀರಾ ಮಾಧವ ರಾಘವ ಹೀಗೆ ಅವರು ಅನೇಕ ಚಿತ್ರಗಳಲ್ಲಿ ಹಾಡಿದ್ದಾರೆ. ಪಿ ಬಿ ಶ್ರೀನಿವಾಸ್, ಎಸ್ ಪಿ ಬಾಲಸುಬ್ರಹ್ಮಣ್ಯಂ ಅಂತಹ ಮಹಾನ್ ಕಲಾವಿದರೊಂದಿಗೆ ಕಾರ್ಯಕ್ತಮಗಳಲ್ಲಿ ಹಾಡಿದ್ದಾರೆ. Zee ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಮೆಂಟಾರ್ ಆಗಿ ಶೋಭಿಸಿದ್ದಾರೆ. ಎಲ್ಲ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
ಲಕ್ಷ್ಮೀ ನಾಗರಾಜ್ ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Lakshmi Nagaraj 🌷🌷🌷
ಕಾಮೆಂಟ್‌ಗಳು