ಎನ್. ಎ. ನಿಕ್ಕಂ
ಎನ್. ಎ. ನಿಕ್ಕಂ
ನಾರಾಯಣರಾವ್ ಅಪ್ಪೂರಾವ್ ನಿಕ್ಕಂ ತತ್ತ್ವಶಾಸ್ತ್ರಜ್ಞರಾಗಿ ಮತ್ತು ಪ್ರಾಧ್ಯಾಪಕರಾಗಿ ಪ್ರಸಿದ್ಧರು.
ನಿಕ್ಕಂ ಅವರು 1903ರ ಮೇ 5ರಂದು, ಮಂಡ್ಯ ಜಿಲ್ಲೆಯ, ಮದ್ದೂರು ತಾಲ್ಲೂಕಿನ, ಕೆಸ್ತೂರು ಗ್ರಾಮದಲ್ಲಿ ಜನಿಸಿದರು. ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರದಲ್ಲಿ ಬಿ.ಎ. ಪದವೀಧರರಾದರು. ಅವರು ವಿವಾಹವಾದ್ದು 1929ರಲ್ಲಿ. ತತ್ತ್ವಶಾಸ್ತ್ರದಲ್ಲಿನ ಎಂ.ಎ. ವ್ಯಾಸಂಗದಲ್ಲಿ ಬಾಬಾ ಸ್ಮಾರಕ ಸುವರ್ಣಪದಕವನ್ನು ಪಡೆದರು (1930). ಅದೇ ವರ್ಷ ಮೈಸೂರು ಸಂಸ್ಥಾನದ ದಾಮೋದರ್ ದಾಸ್ ವಿದೇಶಿ ವಿದ್ಯಾರ್ಥಿ ವೇತನ ಪಡೆದು ಉಚ್ಚ ಶಿಕ್ಷಣ ಪಡೆಯಲು ಕೇಂಬ್ರಿಡ್ಜಿನ ಸೇಂಟ್ ಜಾನ್ ಕಾಲೇಜಿಗೆ ತೆರಳಿ ತತ್ತ್ವಶಾಸ್ತ್ರದ ಪ್ರೌಢಪರೀಕ್ಷೆಯಲ್ಲಿ ಉತ್ತೀರ್ಣರಾದರು.
ನಿಕ್ಕಂ ಅವರ ಶಿಕ್ಷಣವೃತ್ತಿ ಚಾಮರಾಜನಗರದಲ್ಲಿ ಶಾಲಾ ಮಕ್ಕಳಿಗೆ ಬೋಧಿಸುವುದರೊಂದಿಗೆ ಪ್ರಾರಂಭಗೊಂಡಿತು. ತರುವಾಯ ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ಉಪಾಧ್ಯಾಯರಾದರು. ಕಾಲೇಜಿನಲ್ಲಿ ಮೊದಲ ನೌಕರಿ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ದೊರೆಯಿತು. ಆರುವರ್ಷಗಳ ಅನಂತರ ಬೆಂಗಳೂರು ಮಹಾರಾಣಿ ಕಾಲೇಜಿನ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಹಾಗೂ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡರು (1944-55). ಆ ವೇಳೆಯಲ್ಲಿ ಫುಲ್‍ಬ್ರೈಟ್ ಮತ್ತು ಫೋರ್ಡ್ ಫೌಂಡೇಶನ್ ವ್ಯಾಸಂಗವೇತನ ಪಡೆದು 1952-53ರಲ್ಲಿ ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ಸೆಲಿಮನ್ ಕಾಲೇಜಿನ ಪಂಡಿತ ಸಭೆಯ ಸಹಸದಸ್ಯರಾಗಿದ್ದರು.
ನಿಕ್ಕಂ ಅವರು 1955ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರೂ ಪ್ರಾಧ್ಯಾಪಕರೂ ಆದರು. ಭಾರತೀಯ ಧರ್ಮಶಾಸ್ತ್ರ ಹಾಗೂ ದರ್ಶನಗಳ ಬಗ್ಗೆ ನಿಕ್ಕಂ ಅವರ ಪಾಂಡಿತ್ಯ, ಪಾಶ್ಚಾತ್ಯ ದಾರ್ಶನಿಕರ ಗಮನವನ್ನೂ ಸೆಳೆಯಿತು. ನಿಕ್ಕಂ 12 ವರ್ಷಗಳ ಕಾಲ (1949-61) ಭಾರತೀಯ ದಾರ್ಶನಿಕ ಪರಿಷತ್ತಿನ ಕಾರ್ಯದರ್ಶಿಯಾಗಿದ್ದು, ಯುನೆಸ್ಕೊ ಸಂಸ್ಥೆಯ ಯೋಜನೆಯ ಪ್ರಕಾರ ಎರಡು ಚಕ್ರಗೋಷ್ಠಿಗಳನ್ನು ಏರ್ಪಡಿಸಿದರು. ಈ ಪರಿಷತ್ತಿನ ದೆಹಲಿ ಅಧಿವೇಶನಕ್ಕೆ (1965) ನಿಕ್ಕಂ ಅಧ್ಯಕ್ಷರಾಗಿ ನೇಮಕಗೊಂಡರು. ಅಂತರರಾಷ್ಟ್ರೀಯ ದಾರ್ಶನಿಕ ಸಂಸ್ಥೆಯ ಚುನಾಯಿತ ಸದಸ್ಯರಾಗಿ ಅಥೆನ್ಸ್, ವಾರ್ಸಾ, ಪ್ಯಾರಿಸ್, ಸಾಂತಾ ಬಾರ್ಬರಾ, ಮೈಸೂರು, ಆ್ಯಮ್ಸಟರಡ್ಯಾಂ, ಹೈಡೆಲ್‍ಬರ್ಗ್, ಆಕ್ಸ್ ಫರ್ಡ್ ಮತ್ತು ಕೇಂಬ್ರಿಜ್ ನಗರಗಳಲ್ಲಿ ನಡೆದ ಸಮ್ಮೇಳನಗಳಲ್ಲಿ ಭಾಗವಹಿಸಿದರು. 1958ರಲ್ಲಿ ವೆನಿಸ್ ಪಟ್ಟಣದಲ್ಲಿ ನಡೆದ ಎಂಟನೆಯ ಅಂತರರಾಷ್ಟ್ರೀಯ ಒಕ್ಕೂಟದ ಆಡಳಿತ ಸಮಿತಿಯ ಸದಸ್ಯರಾಗಿ ಎರಡು ಬಾರಿ ಚುನಾಯಿತರಾದರು. ಯುನೆಸ್ಕೊ ಸದಸ್ಯರಾಷ್ಟ್ರಗಳಲ್ಲಿ ತತ್ತ್ವಶಾಸ್ತ್ರ, ಶಿಕ್ಷಣದ ಪರಿಶೀಲನೆ ಮತ್ತು ಮಾನವ ಹಕ್ಕುಗಳ ಸಂಬಂಧವಾದ ಪತ್ರಗಳ ಆಧಾರಗ್ರಂಥ ತಯಾರಿಕೆ ಕುರಿತಂತೆ ಯುನೆಸ್ಕೊ ಏರ್ಪಡಿಸಿದ ಉಪ ಆಯೋಗಗಳಲ್ಲಿ ಸದಸ್ಯರಾಗಿದ್ದರು. ಅಮೆರಿಕದ ದಾರ್ಶನಿಕ ಸಂಘ, ಇಂಗ್ಲೆಂಡಿನ ಅರಿಸ್ಟಾಟಲ್ ಪಂಥದ ಸಂಘ, ನ್ಯೂಯಾರ್ಕಿನ ನೀತಿಶಾಸ್ತ್ರ ಸಂಘ, ಭಾರತದ ಪಿ.ಇ.ಎನ್.ಸಂಘ, ಬೆಂಗಳೂರಿನ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಅಮೆರಿಕದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿದ್ದರು.
1960ರಲ್ಲಿ ನಿಕ್ಕಂ ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡರು. ನಿಕ್ಕಂ ಉತ್ತಮ ಚಿಂತಕರಾಗಿದ್ದರು. ಭಾರತ ಸಂಸ್ಕೃತಿಯ ಕೆಲವು ಕಲ್ಪನೆಗಳು, ಶುದ್ಧ ಪ್ರಜ್ಞೆಯ ಬಗ್ಗೆ ಕಾಂಟನ ವಿಮರ್ಶೆಗೆ ಒಂದು ಪ್ರಸ್ತಾವನೆ, ಬುದ್ಧಿ ಅರಿವು ಮತ್ತು ಸಹಜ ಪ್ರಜ್ಞೆ, ಉಪನಿಷತ್ತಿನ ಬೋಧಕರು, ರಮಣ ಮಹರ್ಷಿ-ಅಧ್ಯಾತ್ಮ ಯೋಗದ ಒಂದು ಅಧ್ಯಯನ, ಹತ್ತು ಪ್ರಧಾನ ಉಪನಿಷತ್ತುಗಳು, ಗಾಂಧಿಯವರ ಧರ್ಮ ಸಾಕ್ಷಾತ್ಕಾರ ಮುಂತಾದವು ನಿಕ್ಕಂ ಅವರ ಗ್ರಂಥಗಳಲ್ಲಿ ಸೇರಿವೆ. ತಮ್ಮ ಜೀವನದ ಕೊನೆಯ ಕಾಲದಲ್ಲಿ ಪತಂಜಲಿಯ ಯೋಗಸೂತ್ರಗಳ ಮೂರು ಅಧ್ಯಾಯಗಳನ್ನು ರಚಿಸಿದ್ದರು. ಹಲವಾರು ದಾರ್ಶನಿಕ ಸಂಸ್ಥೆಗಳ ಹಾಗೂ ದಾರ್ಶನಿಕ ಸಮ್ಮೇಳನಗಳ ಪ್ರಕಟಣೆಗಳಿಗೆ ಸಂಪಾದಕರಾಗಿದ್ದರು. ಅಂತರರಾಷ್ಟ್ರೀಯ ದಾರ್ಶನಿಕ ಸಂಸ್ಥೆಯವರು ಶಾಂತಿಸಾಧನೆಗೆ ಮಾನವ ಕುಲದ ಮೇಲೆ ಪ್ರಭಾವ ಬೀರಿದ ಗ್ರಂಥಗಳು ಎಂಬ ಮಾಲಿಕೆಯಲ್ಲಿ ಪ್ರಕಟಿಸಿದ ಅಶೋಕನ ಧರ್ಮ ಶಾಸನಗಳು (ಶಿಕಾಗೊ ವಿಶ್ವವಿದ್ಯಾನಿಲಯ, 1959) ಎಂಬ ಗ್ರಂಥಕ್ಕೆ ಇವರು ಸಂಪಾದಕರಾಗಿದ್ದರು.
ಪ್ರೊ. ನಿಕ್ಕಂ ಅವರು 1974ರಲ್ಲಿ ನಿಧನರಾದರು.
On the birth anniversary of great scholar Prof. N. A. Nilkkam
ಕಾಮೆಂಟ್‌ಗಳು