ಶ್ರೀವತ್ಸ ಬಲ್ಲಾಳ
ಶ್ರೀವತ್ಸ ಬಲ್ಲಾಳ
ತೇಜಸ್ವಿ ವ್ಯಕ್ತಿತ್ವದ ಶ್ರೀವತ್ಸ ಬಲ್ಲಾಳ ಅಮೆರಿಕದಲ್ಲಿ ನೆಲೆಸಿರುವ ಕನ್ನಡದ ನೆಲದ, ಕನ್ನಡಪ್ರೀತಿಯ ಮನದ ತಂತ್ರಜ್ಞ, ಉದ್ಯಮಿ, ಬರಹಗಾರ, ಕಲಾಸಕ್ತ ಮತ್ತು ಕನ್ನಡಪರ ಕಾರ್ಯಕರ್ತರು. ನಿಮಗೆ ಮಹಾನ್ ದಿಗ್ದರ್ಶಕ ಜಿ. ವಿ. ಅಯ್ಯರ್ ಅವರ ಪ್ರಸಿದ್ಧ ಮಧ್ಬಾಚಾರ್ಯ ಚಿತ್ರ ನೆನಪಿರಬಹುದು.
ಅದರಲ್ಲಿ ಬಾಲ ಮಧ್ವನಾಗಿ ಅತ್ಯುತ್ಕೃಷ್ಟ ಪಾತ್ರ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಬಾಲನಟ ಪ್ರಶಸ್ತಿ ಪಡೆದಿದ್ದವರು ಇವರೇ!
ಶ್ರೀವತ್ಸ ಬಲ್ಲಾಳ ಅವರು ಹುಟ್ಟು ಹಬ್ಬ ಜೂನ್ 13ರಂದು. ಇವರು ಹುಟ್ಟಿದ್ದು ಬಳ್ಳಾರಿಯಲ್ಲಿ. ತಂದೆ ಮುರಳೀಧರ ಬಲ್ಲಾಳ, ಸಿಂಡಿಕೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದವರು. ತಾಯಿ ಜಾಹ್ನವಿ ಬಲ್ಲಾಳ, ಗೃಹಿಣಿ. ಕೆಲಕಾಲ ಬಳ್ಳಾರಿಯಲ್ಲಿ ಇದ್ದ ಹೊರತು ಇವರು ಬೆಳೆದದ್ದು ಉಡುಪಿಯ ಅಂಬಲಪಾಡಿಯಲ್ಲಿ.
ಸಾಹಿತಿಗಳ, ಬರಹಗಾರರ ಮನೆತನದಲ್ಲಿಯೇ ಹುಟ್ಟಿ ಬೆಳೆದ ಶ್ರೀವತ್ಸ ಬಲ್ಲಾಳರಿಗೆ ಕನ್ನಡ ಸಾಹಿತ್ಯ ಮತ್ತು ಪರಂಪರೆಯ ಒಲವು ಮೂಡಿದ್ದು ಬಾಲ್ಯದಲ್ಲಿ ತನ್ನ ಅಜ್ಜ ರಾಮದಾಸ ಬಲ್ಲಾಳರ ಮನೆಯಲ್ಲಿ ಬೆಳೆಯುತ್ತಿದ್ದಾಗ. ಪ್ರಖಾಂಡ ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದ ಇವರ ಅಜ್ಜ ಮಾಡುತ್ತಿದ್ದ ಕನ್ನಡ ವ್ಯಾಕರಣ ಪಾಠಗಳನ್ನು ಕೇಳುತ್ತಾ, ಅವರ ಬಾಯಿಂದ ಬರುತ್ತಿದ್ದ ಪುರಾಣ ಕಥೆಗಳನ್ನು ಆಲಿಸಿಕೊಂಡು ಅವನ್ನು ಬರೆಯುತ್ತಾ ಬೆಳೆದ ಶ್ರೀವತ್ಸ ಬಲ್ಲಾಳರಿಗೆ ಇಪ್ಪತ್ತೈದು ವರುಷಗಳ ಅಮೆರಿಕಾ ವಾಸದ ಬಳಿಕವೂ ಕನ್ನಡದ ಕಂಪು ಇನ್ನಷ್ಟೂ ಗಾಢವಾಗುತ್ತಿರುವುದು ಕಾಕತಾಳೀಯವಲ್ಲ. ಹವ್ಯಾಸಿ ಬರಹಗಾರರೂ, ಸಾಹಿತ್ಯ ಮತ್ತು ಕಲಾಸಕ್ತರೂ ಆಗಿರುವ ಶ್ರೀವತ್ಸ ಬಲ್ಲಾಳ ಅವರು ಅಮೆರಿಕಾದ ಹಲವಾರು ಕನ್ನಡ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಭಾಷೆಯ ಸೊಬಗನ್ನು ಇಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
1979ನೇ ಇಸವಿಯಲ್ಲಿ ತನ್ನ ಏಳನೇ ವಯಸ್ಸಿನಲ್ಲಿಯೇ ರಾಜ್ಯಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ಪುರಂದರ ದಾಸರಾಗಿ ಮೂರನೇ ಬಹುಮಾನ ಗಿಟ್ಟಿಸಿಕೊಂಡ ಶ್ರೀವತ್ಸ ಆ ಎಳೆ ವಯಸ್ಸಿನಲ್ಲಿಯೇ ವೇದಿಕೆಯ ಅಂಜಿಕೆಯಿಲ್ಲದೆ ಮುಂದೆ ಅನೇಕ ಪಾತ್ರಗಳನ್ನು ನಿರ್ವಹಿಸುವ ಅವಕಾಶ ಪಡೆದರು. ಮಹಾಭಾರತದ ಉತ್ತರಕುಮಾರನಾಗಿಯೇ ಆಗಲೀ, ರಾಮಾಯಣದ ಲಕ್ಷ್ಮಣನೇ ಆಗಲಿ ಅಥವಾ ಭಕ್ತ ಪ್ರಹ್ಲಾದನ ಪಾತ್ರವೇ ಇರಲಿ ಶ್ರೀವತ್ಸ ಅಭಿನಯಿಸಿದ ಪಾತ್ರಗಳನ್ನು ಇಂದಿಗೂ ಅವರ ಆಪ್ತರು, ಬಳಗದವರು ಅಷ್ಟೇ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಅಷ್ಟೊಂದು ಭಾವುಕತೆ ಮತ್ತು ನೈಜತೆ ಇರುತ್ತಿತ್ತು ಅವರು ಅಭಿನಯಿಸುತ್ತಿದ್ದ ಪಾತ್ರಗಳಲ್ಲಿ. ಈ ಎಲ್ಲಾ ಅನುಭವಗಳೇ ಮುಂದೆ ಜಿ. ವಿ. ಅಯ್ಯರ್ ನಿರ್ದೇಶಿಸಿದ ಮಧ್ವಾಚಾರ್ಯ ಚಲನಚಿತ್ರದಲ್ಲಿ ಶ್ರೀವತ್ಸ ವಾಸುದೇವನಾಗಿ, ಬಾಲ ಮಧ್ವನಾಗಿ ನಟಿಸುವ ಅವಕಾಶಕ್ಕೆ ದಾರಿಮಾಡಿಕೊಟ್ಟದ್ದು. ಆ ಪಾತ್ರಕ್ಕೆ ಆಯ್ಕೆಯಾಗಲು ಮುಖ್ಯ ಕಾರಣರಾಗಿದ್ದವರು ನಮ್ಮ ದೇಶ ಕಂಡ ಅಪೂರ್ವ ವಾಗ್ಮಿ, ಸಾಹಿತಿ, ಪ್ರವಚನಕಾರರಾದ ಬನ್ನಂಜೆ ಗೋವಿಂದಾಚಾರ್ಯರು. ಚಲನಚಿತ್ರ ರಂಗದ ಘಟಾನುಘಟಿಗಳು ಸೇರಿ ಅಭಿನಯಿಸಿದ ಕನ್ನಡ ವರ್ಣಚಿತ್ರದಲ್ಲಿನ ತನ್ನ ಪಾತ್ರಕ್ಕೆ ಶ್ರೀವತ್ಸ 1986-87ನೇ ಸಾಲಿನ ಅತ್ತ್ಯುತ್ತಮ ಬಾಲನಟ ರಾಜ್ಯ ಪ್ರಶಸ್ತಿಗೆ ಅರ್ಹರಾದರು. ಆ ಸಾಲಿನಲ್ಲಿ ತಬರನ ಕಥೆ ಚಿತ್ರದಲ್ಲಿನ ತಬರನ ಪಾತ್ರಕ್ಕೆ ಚಾರುಹಾಸನ್ ಅತ್ತ್ಯುತ್ತಮ ನಟನೆಂದೂ, ಅರುಣರಾಗ ಚಿತ್ರದ ಅಭಿನಯಕ್ಕೆ ಗೀತಾ ಅತ್ತ್ಯುತ್ತಮ ನಟಿಯೆಂದೂ ನೇಮಕಗೊಂಡಾಗ ಶ್ರೀವತ್ಸ ಕನ್ನಡದ ಖ್ಯಾತ ನಟ-ನಟಿಯರೊಂದಿಗೆ ವೇದಿಕೆಯನ್ನು ಹಂಚಿಕೊಂಡದ್ದು ಒಂದು ವಿಶಿಷ್ಟ ಕ್ಷಣ. ಮಧ್ವಾಚಾರ್ಯದ ಚಿತ್ರೀಕರಣದ ಅನುಭವ ತನ್ನ ಬಾಲ್ಯದ ದಿಕ್ಕನ್ನೇ ಸಂಪೂರ್ಣವಾಗಿ ಧನಾತ್ಮಕವಾದ ರೀತಿಯಲ್ಲಿ ಬದಲಾಯಿಸಿತು ಎಂದು ತಿಳಿಯುವ ಶ್ರೀವತ್ಸ ಇಂದಿಗೂ ಎಲ್ಲೇ ಹೋದರೂ ತನ್ನನ್ನು ಬಾಲಮಧ್ವನೆಂದೇ ಗುರುತಿಸುತ್ತಾರೆ ಮತ್ತು ಅದು ತನಗೆ ಒಂದು ಹೆಮ್ಮೆಯ ವಿಷಯವೇ ಎಂದು ಮುಕ್ತವಾಗಿಯೇ ಹೇಳುತ್ತಾರೆ. ಜಿ. ವಿ. ಅಯ್ಯರ್ ಅವರ ಮಾತಿನಲ್ಲಿಯೇ ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅವರ ಆರಂಭದ ದಿನಗಳು, ಅನಂತ್ ನಾಗ್ ಅವರ ಹಂಸಗೀತೆಯಲ್ಲಿನ ಪಾತ್ರದ ನಿರ್ವಹಣೆ ಹೀಗೆ ಅನೇಕ ಸುಪ್ರಸಿದ್ದ ಕಲಾವಿದರ ಅಭಿನಯದ ಬಗ್ಗೆ ಕೇಳಿ ವಿಸ್ಮಯಗೊಳ್ಳುತ್ತಿದ್ದ ಶ್ರೀವತ್ಸ, ಆ ಅನುಭವವೇ ಇಂದಿಗೂ ಕನ್ನಡ ಭಾಷೆಯ ಬಗ್ಗೆ ನಿರಂತರ ಒಲವು ಮತ್ತು ಆಸಕ್ತಿಯನ್ನು ಮುಂದುವರೆಸಿಕೊಂಡು ಹೋಗಲು ಸಿಕ್ಕಿದ ಪ್ರೇರಣೆ ಎಂದು ಭಾವಿಸಿಕೊಂಡಿದ್ದಾರೆ.
ಶಾಲಾ-ಕಾಲೇಜು ಶಿಕ್ಷಣ ಪೂರೈಸಿದ ಬಳಿಕ 1996ನೇ ವರ್ಷದಲ್ಲಿ ಬೆಂಗಳೂರಿಗೆ ಮಾಹಿತಿ ತಂತ್ರಜ್ಞಾನದ ವೃತ್ತಿಯನ್ನರಸಿ ಬಂದ ಶ್ರೀವತ್ಸ ಹಿಂದಿರುಗಿ ನೋಡಲಿಲ್ಲ. ಕಠಿಣ ಪರಿಶ್ರಮದ ಹುದ್ದೆಯ ಜವಾಬ್ದಾರಿಯ ನಡುವೆಯೂ ತನ್ನ ಸಾಹಿತ್ಯ ಮತ್ತು ಕಲಾಸಕ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದ ಶ್ರೀವತ್ಸ ಸುಮಾರು 2000ನೇ ಇಸವಿಯ ಕೊನೆಯ ಭಾಗದಲ್ಲಿ ಅಮೆರಿಕಾಕ್ಕೆ ವಲಸೆ ಬಂದು ತಂತ್ರಜ್ಞಾನದ ಕಂಪೆನಿಗಳ ಪಟ್ಟಿಯಲ್ಲಿ ಜಗತ್ತಿನ ಮೊದಲ ನೂರು ಅಥವಾ ಮೊದಲ ಐದುನೂರು ಕಂಪೆನಿಗಳಲ್ಲಿ ವಿವಿಧ ಉನ್ನತ ಜವಾಬ್ದಾರಿಯುಳ್ಳ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಇಂದು ತಮ್ಮದೇ ಒಂದು ತಂತ್ರಜ್ಞಾನ ಕಂಪೆನಿಯನ್ನು ಹುಟ್ಟುಹಾಕಿ ಮುಖ್ಯ ತಾಂತ್ರಿಕ ನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಇವರು ನಡೆಸುವ ಸಾಹಿತ್ಯ ಕೃಷಿಯಲ್ಲಿ ಬರವಣಿಗೆ, ಓದು, ಭಾಷಾಂತರದಂಥ ಕೆಲಸಗಳು ಸೇರಿಕೊಂಡಿವೆ. ಜಗತ್ತು ಕೋವಿಡ್ ಸಂಕಷ್ಟವನ್ನೆದುರಿಸುತ್ತಿದ್ದಾಗ ಸುಮಾರು ಆರರಿಂದ-ಏಳು ತಿಂಗಳ ಕಾಲ ಹಾಕಿದ ಪರಿಶ್ರಮದಿಂದ ಬನ್ನಂಜೆ ಗೋವಿಂದಾಚಾರ್ಯರ "ಸಂಗ್ರಹ ಭಾಗವತ" ಎನ್ನುವ ಕನ್ನಡ ಪ್ರವಚನಮಾಲಿಕೆಯನ್ನು ಸಂಪೂರ್ಣವಾಗಿ ಇಂಗ್ಲಿಷಿಗೆ ಅನುವಾದಿಸಿ ಬರೆದಿದ್ದಾರೆ. ನಿರರ್ಗಳವಾಗಿ ಪ್ರವಚನ ನೀಡುವ ಬನ್ನಂಜೆಯವರಂಥ ಪ್ರವಚನಕಾರರ ಮಾತುಗಳನ್ನು ಆಲಿಸುತ್ತಾ ಅದರ ಸಂಪೂರ್ಣ ಸಾರವನ್ನು ಸ್ವಲ್ಪವೂ ಅರ್ಥ ದೋಷವಿರದಂತೆ ಇಂಗ್ಲಿಷಿಗೆ ಭಾವಾನುವಾದ ಮಾಡುವ ಅತ್ಯಂತ ಕ್ಲಿಷ್ಟಕರವಾದ ಸಾಹಸವನ್ನು ಯಶಸ್ವಿಯಾಗಿ ನಡೆಸಿದ್ದೂ ಕೂಡ ಇವರಿಗೆ ಸಿಕ್ಕ ಒಂದು ಹಿತ ಅನುಭವ ಮತ್ತು ಅಪೂರ್ವ ಅವಕಾಶ. ಅದೇ ಸಮಯದಲ್ಲಿ ಬಹುಶಃ ಜಗತ್ತಿನಲ್ಲಿಯೇ ಮೊಟ್ಟಮೊದಲೆಂದು ಹೇಳಬಹುದಾದ, ಒಂದೇ ವೇದಿಕೆಯಲ್ಲಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಆಯ್ದ ಭಾಗಗಳನ್ನು, ಕನ್ನಡ, ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮೂವರು ವಿಶಿಷ್ಟ ಸಾಹಿತಿಗಳಿಂದ ಪ್ರಸ್ತುತಪಡಿಸುವಂತೆ ಒಂದು ಚಿಂತನ-ಮಂಥನ ಎನ್ನುವ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿ ಆಯೋಜಿಸಿದ್ದೂ ಇವರ ವಿಭಿನ್ನ ಸಾಹಿತ್ಯಾಸಕ್ತಿಗೆ ಹಿಡಿದ ಕೈಗನ್ನಡಿ.
ಬಹುಮಖಿ ಪ್ರತಿಭಾನ್ವಿತ ಕನ್ನಡಪ್ರೇಮಿ ಆತ್ಮೀಯ ಶ್ರೀವತ್ಸ ಬಲ್ಲಾಳರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to multifaceted affectionate Shrivathsa Ballal 🌷🌷🌷
ಕಾಮೆಂಟ್‌ಗಳು