ರಾ.ಸ.ನಂದಕುಮಾರ್
ರಾ.ಸ.ನಂದಕುಮಾರ್
ಸಂಗೀತ ಕಲೋತ್ತುಂಗ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್ ಡಾ. ರಾ.ಸ. ನಂದಕುಮಾರ್ ಅವರು ಕರ್ನಾಟಕ ಸಂಗೀತಲೋಕದ ಸಂಗೀತಗಾರರಾಗಿ ಮತ್ತು ಸಂಗೀತ ವಿದ್ವಾಂಸರಾಗಿ ಪ್ರಖ್ಯಾತರಾಗಿದ್ದಾರೆ.
ಮಧುರವಾದ, ಶ್ರುತಿ ಶುದ್ಧವಾದ ಗಂಭೀರವಾದ ಕಂಠಸಿರಿ ನಂದಕುಮಾರರಿಗೆ ಒಲಿದುಬಂದಿರುವ ದೈವೀದತ್ತವಾದ ಸಂಪತ್ತಾಗಿದೆ.
ನಂದಕುಮಾರ್ ಅವರು 1960ರ ಜೂನ್ 21ರಂದು ಭದ್ರಾವತಿಯಲ್ಲಿ ಜನಿಸಿದರು.
ಇವರು ಹೆಸರಾಂತ ಸಂಗೀತ ಮನೆತನಕ್ಕೆ ಸೇರಿದವರು. ಇವರದು ವಾಗ್ಗೇಯಕಾರರ ವಂಶ. ಭಾರತೀಯ ಕಲೆಗಳಲ್ಲಿನ ಅಸಾಧಾರಣ ವಿದ್ವಾಂಸರಾದ ಪದ್ಮಶ್ರೀ ಪುರಸ್ಕೃತ, ಮಹಾಮಹೋಪಾಧ್ಯಾಯ ಡಾ. ರಾ.ಸತ್ಯನಾರಾಯಣ ಇವರ ತಂದೆ ಮತ್ತು ಗುರು. ನಂದಕುಮಾರ್ ಅವರು ಮೈಸೂರಿನಲ್ಲಿ ನೆಲೆಸಿದ್ದಾರೆ.
ನಂದಕುಮಾರ್ ಅವರು ನಿರಂತರವಾಗಿ ಸಂಗೀತ ಸಾಧನೆಯನ್ನು ಮಾಡಿ ಅದರ ಶಾಸ್ತ್ರ ಮತ್ತು ಪ್ರಯೋಗಗಳಲ್ಲಿ ಪರಿಣತ ಜ್ಞಾನವನ್ನು
ಪಡೆದಿದ್ದಾರೆ. ಮೈಸೂರಿನ ನಾಲ್ವರು ಸಂಗೀತ ಮಹಾರಾಜರ ಮತ್ತು ಮೈಸೂರು ವಾಗ್ಗೇಯಕಾರರ ಕೃತಿಭಂಡಾರವೇ ಇವರಲ್ಲಿದೆ. ಇವರ ಧ್ವನಿಮುದ್ರಿಕೆಗಳು ಹಾಗೂ ಅಂತಾರಾಷ್ಟ್ರೀಯ ಪ್ರಸ್ತುತಿಗಳು ಜನಪ್ರೀತಿಯನ್ನು ಗಳಿಸಿ ವಿಶ್ವಮಾನ್ಯವಾಗಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ, ಕಂಚೀ ಜಗದ್ಗುರು ಪೀಠದಿಂದ ಆಸ್ಥಾನ ವಿದ್ವಾನ್, ಮಂತ್ರಾಲಯದ ಸುಶಮೀಂದ್ರ ಪ್ರಶಸ್ತಿ, ಶಾಸ್ತ್ರಕೌಸ್ತುಭ, ಆರ್ಯಭಟಪ್ರಶಸ್ತಿ, ಸಂಗೀತಕಲಾವಾರಿಧಿ ಇತ್ಯಾದಿ ಅನೇಕ ಪ್ರಶಸ್ತಿಗಳು ನಂದಕುಮಾರರಿಗೆ ಸಂದಿವೆ.
ದೆಹಲಿಯ ಇಂದಿರಾಗಾಂಧಿ ಕಲಾಕೇಂದ್ರದಲ್ಲಿ ಶಾಸ್ತ್ರೋತ್ಸವಗಳು, ಪ್ರಸಿದ್ಧ ಬೌದ್ಧಗುರು ಕಾರ್ಮಪಾ ಮಹೋತ್ಸವಗಳಲ್ಲಿ ಕರ್ನಾಟಕ ಸಂಗೀತ ಕ್ಷೇತ್ರದಲ್ಲೇ ಮೊದಲ ಬಾರಿಗೆ ಬೌದ್ಧ ಚರ್ಯಾಗೀತೆಗಳ ದೋಹೆಗಳ ಗಾಯನ, ಮೈಸೂರು ಮಹಾರಾಜರ ಸಂಸ್ಕರಣ ರಾಷ್ಟ್ರೀಯ ಕಲೋತ್ಸವಗಳು, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಹಲವಾರು ಕಲೋತ್ಸವಗಳು ಮತ್ತು ಕಮ್ಮಟಗಳು, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಫೆಲೋಷಿಪ್, ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾಗಿ ಸೇವೆ, ಜರ್ಮನಿಯ ಪ್ರೀವಿಶ್ವವಿದ್ಯಾಲಯದ ಸೆಮಿನಾರ್, ಇಟಲಿಯ ಅಂತಾರಾಷ್ಟ್ರೀಯ ಸಂಗೀತ ಕಲೋತ್ಸವಗಳು, ಇಟಲಿಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಲಾವೇದಿಕೆಗಳಲ್ಲಿ ಸಂಗೀತ ; ಹೀಗೆ ವಿಶ್ವಮಾನ್ಯವಾದ ಹಲವಾರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಂಘಸಂಸ್ಥೆಗಳಲ್ಲಿ ನಂದಕುಮಾರರು ತಮ್ಮ ಸಂಗೀತ ಗಾಯನ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಭಾರತೀಯ ಶಾಸ್ತ್ರಗಳು ಮತ್ತು ಸಂಗೀತಶಾಸ್ತ್ರಗಳ ವಿಚಾರವಾಗಿ ಹಲವಾರು ವಿದ್ವತ್ಪೂರ್ಣ ಸೆಮಿನಾರ್‌ಗಳನ್ನೂ ನಡೆಸಿಕೊಟ್ಟಿದ್ದಾರೆ. ದೂರದರ್ಶನ ಮತ್ತು ಬಾನುಲಿಯಲ್ಲೂ ಇವರ ಸಂಗೀತ ಹರಿದಿದೆ. ಅಂತರಜಾಲದ ವ್ಯಾಪ್ತಿಯಲ್ಲೂ ಇವರ ಬಹುಜ್ಞಾನಯುಕ್ತ ಪ್ರಸ್ತುತಿಗಳು ಮತ್ತು ಸುಶ್ರಾವ್ಯ ಸಂಗೀತ ಪ್ರವಹಿನಿಗಳು ವಿಶಾಲವ್ಯಾಪ್ತಿಯಲ್ಲಿ ಹರಿದಿವೆ.
ನಂದಕುಮಾರ್ ಅವರು ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಸಮಿತಿ ಸದಸ್ಯತ್ವ, ಪ್ರತಿಷ್ಠಿತ ಕನ್ನಡ ಸಂಸ್ಕೃತಿ ಇಲಾಖೆಯು ನೀಡುವ ಶಾಂತಲಾ, ರಾಜ್ಯ ಸಂಗೀತ ವಿದ್ವಾನ್ ಇತ್ಯಾದಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ. ಪ್ರಜಾವಾಣಿ ದಿನಪತ್ರಿಕೆಗೆ 'ಸ್ವರಾಸನ' ಎಂಬ ಅಂಕಿತನಾಮದಲ್ಲಿ ಕಲಾವಿಮರ್ಷೆಗಳನ್ನು ಬಹುಕಾಲ ನೀಡಿದ್ದಾರೆ. ಇವರು ಹಲವಾರು ಮಹತ್ವದ ಗ್ರಂಥಗಳನ್ನು ಬರೆದ ಶಾಸ್ತ್ರಜ್ಞಾನಿ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಇವರ ಅನೇಕ ಗ್ರಂಥಗಳು ಮೂಡಿವೆ. ಸಂಸ್ಕೃತದಿಂದ ಅಪಾರ ದಿವ್ಯಜ್ಞಾನವನ್ನು ಕನ್ನಡಕ್ಕೆ ತಂದಿದ್ದಾರೆ.
ನಂದಕುಮಾರ್ ಅವರು ಹಂಪೆಯ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದಿದ್ದಾರೆ. ಹಂಪೆಯ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಮತಂಗಮುನಿಯ ಬೃಹದ್ದೇಶೀ ಗ್ರಂಥದ ಪರಿಷ್ಕೃತ ಮರುಮುದ್ರಣ ಗ್ರಂಥದ ಸಂಪಾದಕರಾಗಿಯೂ, ಅದರ ಆಂಗ್ಲಭಾಷಾ ಅನುವಾದಕರಾಗಿಯೂ ಕೆಲಸಮಾಡಿದ್ದಾರೆ.
ನಂದಕುಮಾರರು ಶ್ರೀವಿದ್ಯಾಪರಂಪರೆಯಲ್ಲಿ ದೀಕ್ಷೆಯನ್ನು ಪಡೆದು ಸಹಸ್ರಕ್ಕೂ ಮೀರಿ ಯಾಗಯಜ್ಞಗಳು ಇತ್ಯಾದಿಗಳನ್ನು ನಡೆಸಿ,
ಪ್ರಪಂಚದಾದ್ಯಂತ ನೆಲೆಸಿರುವವರಿಗೆ ಶ್ರೀವಿದ್ಯಾದೀಕ್ಷೆಗಳನ್ನೂ ಸಂಗೀತಪಾಠಗಳನ್ನೂ ಉಪನ್ಯಾಸಗಳನ್ನೂ ನೀಡಿದ್ದಾರೆ. ರಾಷ್ಟ್ರಾದಾದ್ಯಂತ ಹಾಗೂ ವಿಶ್ವದ ಅನೇಕ ಕಡೆಗಳಲ್ಲಿ ಸಂಚರಿಸಿರುವ ನಂದಕುಮಾರ್ ಅವರು ನಮ್ಮ ಕನ್ನಡನೆಲದ ಸಾಂಸ್ಕೃತಿಕ ಮಹಾಪರಂಪರೆಯ ಹಿರಿಮೆಯನ್ನು ಎಲ್ಲೆಡೆ ಎತ್ತಿಹಿಡಿದಿದ್ದಾರೆ.
ಸಂಗೀತಲೋಕದ ಮಹಾನ್ ಸಾಧಕರಾದ ಸರಳ ಸಹೃದಯ ಆತ್ಮೀಯರಾದ ವಿದ್ವಾನ್ ನಂದಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to Senior Exponent in Classical Music Vidwan Dr. R S Nanda Kumar Sir 🌷🙏🌷

ಕಾಮೆಂಟ್‌ಗಳು