ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ.ಬಿ ಗಣಪತಿ


 ಕೆ.ಬಿ ಗಣಪತಿ ನಿಧನ


ಮೈಸೂರಿನ ಪತ್ರಿಕಾಲೋಕದ ಪ್ರಸಿದ್ಧ ಹಿರಿಯರಾದ ಡಾ.ಕೆ.ಬಿ ಗಣಪತಿ ಅವರ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.‌ ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಬದುಕಿನ ಕಡೆಯ ದಿನದವರೆಗೂ ಪತ್ರಿಕಾಲಯದಲ್ಲಿ ಸಕ್ರಿಯರಾಗಿದ್ದರು. 

ಕೆಬಿಜೆ ಎಂದು ಖ್ಯಾತಿ ಪಡೆದಿದ್ದ ಗಣಪತಿ ಅವರು ಮೂಲತಃ ಕೊಡಗಿನವರು. ಪತ್ರಿಕೋದ್ಯಮಕ್ಕೆ ಬರುವ ಮುನ್ನ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದ ನಂತರ ಮುಂಬೈಗೆ ತೆರಳಿ ಅಲ್ಲಿಯ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಮುಂಬೈನಲ್ಲಿ ಪ್ರಿ-ಪ್ರೆಸ್ ಜರ್ನಲ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಬಳಿಕ ಮೈಸೂರಿಗೆ ಬಂದು ಪತ್ರಿಕೆಗಳನ್ನು ಆರಂಭಿಸಿದ್ದು ಇತಿಹಾಸ. 

ಕೆಬಿ ಗಣಪತಿ ಅವರು ತಮ್ಮ ಒಡೆತನದ ಕನ್ನಡದ ʻಮೈಸೂರು ಮಿತ್ರʼ ಹಾಗೂ ಇಂಗ್ಲೀಷ್‌ನ ಸ್ಟಾರ್ ಆಫ್ ಮೈಸೂರು (Star of Mysore) ಪತ್ರಿಕೆಗಳ ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ ದೊಡ್ಡ ಓದುಗ ವರ್ಗವನ್ನು ಸೃಷ್ಟಿಸಿದ್ದರು. ನಾನು ಮೈಸೂರಿನ ಸುದ್ದಿ ಅಂತರಜಾಲದಲ್ಲಿ ಹುಡುಕುವಾಗ Star of Mysore ಕೊಡುತ್ತಿದ್ದ ಮಾಹಿತಿ ಅಪರಿಮಿತ.
ನೂರಾರು ಪತ್ರಕರ್ತರನ್ನ ಈ ನಾಡಿಗೆ ಕೊಡುಗೆ ನೀಡಿದ ಹಿರಿಮೆ ಗಣಪತಿ ಅವರದ್ದು.

ಗಣಪತಿ ಅವರು ತಮ್ಮ ಅಂಕಣ ಬರಹಗಳ ಮೂಲಕ ಪತ್ರಕರ್ತರ ಸಾಮಾಜಿಕ ಬದ್ಧತೆಯನ್ನ ಸಮಾಜಕ್ಕೆ ತೋರಿಸಿದವರು. ಸುಮಾರು 50 ವರ್ಷಗಳ ನಿರಂತರ ಪತ್ರಿಕೋದ್ಯಮದಲ್ಲಿ ಮೈಲಿಗಲ್ಲಿನಂತಹ ನೂರಾರು ಸಾಧನೆಗಳನ್ನು ಗಣಪತಿ ಅವರು ಮಾಡಿದ್ದಾರೆ.

ಗಣಪತಿ ಅವರು ಮೈಸೂರಿನಲ್ಲಿ ಸಂಜೆಯ ದಿನಪತ್ರಿಕೆ ‘ಸ್ಟಾರ್ ಆಫ್ ಮೈಸೂರು’ ಪತ್ರಿಕೆಯನ್ನು 1978ರಲ್ಲಿ ಆರಂಭಿಸಿದರು. ಇದು ಇಂಗ್ಲಿಷ್ ಪತ್ರಕರ್ತರಾಗುವ ಯುವಕರ ಪಾಲಿಗೆ ಅಕ್ಷರಶಃ ಕಾಲೇಜ್ ಆಗಿತ್ತು. ಇದರ ಜೊತೆಗೆ 1980ರಲ್ಲಿ ‘ಮೈಸೂರು ಮಿತ್ರ’ ದಿನಪತ್ರಿಕೆ ಆರಂಭಿಸಿದರು. ಕೆಬಿಜೆ ಅವರು ಬರೆಯುತ್ತಿದ್ದ ʻಛೂಮಂತ್ರ', 'ಅಬ್ರಕಡಬ್ರʼ ಅಂಕಣಗಳು ಪ್ರಸಿದ್ಧವಾಗಿದ್ದವು.

ಆದರ್ಶವಾದಿ ಕಾದಂಬರಿ, ಅಮೆರಿಕ- ಆ್ಯನ್ ಏರಿಯಾ ಆಫ್ ಲೈಟ್ ಪ್ರವಾಸ ಕಥನ, ದಿ ಕ್ರಾಸ್ ಆ್ಯಂಡ್ ದಿ ಕೂರ್ಗ್‌ ಇಂಗ್ಲಿಷ್ ಕಾದಂಬರಿ, ಸ್ಟಾರ್ ಆಫ್ ಮೈಸೂರು- ಸ್ಟಾರ್ ‌ಆಫ್ ಎ ಯೂನಿಕ್ ಇವನಿಂಗ್ ಇಂಗ್ಲಿಷ್ ನ್ಯೂಸ್ ಪೇಪರ್, ಸ್ವಾಡ್೯ ಆಫ್ ಶಿವಾಜಿ ಜೀವನಚರಿತ್ರೆ ಮುಂತಾದವು ಗಣಪತಿ ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ.

ಮೈಸೂರಿನ ಸಾಂಸ್ಕೃತಿಕ ವಲಯದಲ್ಲಿ ಶೋಭಯಮಾನರಾಗಿದ್ದ ಗಣಪತಿ ಅವರು ಭಾರತೀಯ ವಿದ್ಯಾಭವನದ ಮೈಸೂರು ವಿಭಾಗದ ನಿರ್ದೇಶಕರಾಗಿಯೂ ಸಕ್ರಿಯರಾಗಿದ್ದರು. ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಸಲ್ಲಿಸಿತ್ತು. ಅಗಲಿದ ಮಹಾನ್ ಚೇತನಕ್ಕೆ ನಮನ🌷🙏🌷

Respects to departed soul Great Journalist Dr. K.B. Ganapathi Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ