ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೇಳೂರು ಸುದರ್ಶನ



ಬೇಳೂರು ಸುದರ್ಶನ


ಆತ್ಮೀಯರಾದ ಬೇಳೂರು ಸುದರ್ಶನ ಅವರದು ಎತ್ತರದ ಆಕರ್ಷಕ ನಿಲುವು, ಸ್ಪಷ್ಟ ಮಾತುಗಾರಿಕೆ ಮತ್ತು ಅಷ್ಟೇ ಖಚಿತ ಅಭಿಪ್ರಾಯ ಮಂಡನೆ. ಅವರು ತೆಗೆದುಕೊಂಡ ಕೆಲಸಕ್ಕೆ ಅರ್ಪಣಾ ಮನೋಭಾವ ಮತ್ತು ಸರಳ ಸಜ್ಜನಿಕೆಯ ಗುಣಗಳನ್ನು ತುಂಬಿತುಳುಕಿಸಿಕೊಂಡಿದ್ದಾರೆ.  ಕನ್ನಡ ಪತ್ರಿಕಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ಬ್ಲಾಗಿಂಗ್, ಮುಕ್ತಜ್ಞಾನ ಪ್ರಸರಣ, ಬರವಣಿಗೆ, ಇ-ಆಡಳಿತ, ಸಮಾಜ ಸೇವೆ ಹೀಗೆ ವಿವಿದೆಡೆಗಳಲ್ಲಿ ಅವರ ಕೊಡುಗೆಗಳು ಎದ್ದು ಕಾಣುವಂತದ್ದು.

1965ರ ಜುಲೈ 14ರಂದು ಶಿವಮೊಗ್ಗ ಜಿಲ್ಲೆಯ ಬೇಳೂರಿನಲ್ಲಿ ಜನಿಸಿದ  ಸುದರ್ಶನರು  ಚಿಕ್ಕಂದಿನಿಂದಲೇ ತಮ್ಮ ತಾತ ಮತ್ತು ತಂದೆಯವರು ಒಳ್ಳೆಯ ಉದ್ದೇಶಕ್ಕಾಗಿ ಸಮಾಜವನ್ನು ಎದುರು ಹಾಕಿಕೊಳ್ಳಲು ಹೆದರದೆ ತೋರಿದ  ಪ್ರಗತಿಪರ ನಿಲುವುಗಳನ್ನು   ಅಭಿಮಾನಿಸುತ್ತಾ ಬೆಳೆದವರು.  ಬದುಕಿನಲ್ಲಿ ನೆಲೆಗಾಗಿ ಊರೂರೂ ಅಲೆಯ ಬೇಕಾದ ಪರಿಸ್ಥಿತಿಯಲ್ಲಿ ಸಾಗಿದ ಇವರ ವಿದ್ಯಾಭ್ಯಾಸ ವರ್ಷಕ್ಕೊಂದು - ಎರಡು -ಮೂರು ಶಾಲೆಗಳಲ್ಲಿ ಎಂಬಂತೆ ವಿಶಾಲ ಕರ್ನಾಟಕದ ಬಹುತೇಕ ಕಡೆ ನಡೆದಿದೆ.  “ಕಡು ಬಡತನವು ದಟ್ಟ ಅನುಭವಗಳನ್ನು ಒದಗಿಸುತ್ತದೆ!” ಎಂಬ ಅವರ ಮಾತು ಇಲ್ಲಿ ಉಲ್ಲೇಖನೀಯ.  ಇಂಜಿನಿಯರಿಂಗ್ ಡ್ರಾಪೌಟ್ ಎಂಬುದು ಅವರು ತಮ್ಮ ವಿವರದಲ್ಲಿ ನಮೂದಿಸಿರುವ ಉನ್ನತ ಶಿಕ್ಷಣ!  ಆದರೆ,  ಸಂಪರ್ಕ, ಪತ್ರಿಕಾ ಸಂಪಾದನೆ, ಡಿ.ಟಿ.ಪಿ ಇಂದ ಮೊದಲ್ಗೊಂಡು ಮುದ್ರಣ ಮಾಧ್ಯಮದ ಎಲ್ಲ ಸ್ತರಗಳು,  ಟಿ.ವಿ, ಸಾಂಸ್ಥಿಕ ಸಂವಹನ, ಅಂತರ್ಜಾಲ, ಕಂಪ್ಯೂಟರ್, ಮುಕ್ತಜ್ಞಾನ, ಬರವಣಿಗೆ, ರಾಸಾಯನಿಕಗಳು,  ಹೀಗೆ ಅವರು ಕಲಿತ, ಕಲಿಸಿದ, ಅನುಭಾವಿಸಿದ ಕ್ಷೇತ್ರಗಳ ವಿಶ್ವ ಅನಂತವೆನಿಸುವಂತದ್ದು.    

ವಿದ್ಯಾರ್ಥಿ ಪರಿಷತ್ತಿನಲ್ಲಿ  ‘ವಿದ್ಯಾರ್ಥಿ ಪಥ’ ಮಾಸಪತ್ರಿಕೆ ನಡೆಸಿದ  ಬೇಳೂರು ಸುದರ್ಶನ  ಅವರು, ಕೊಳೆ ನೀರನ್ನು ವಿವಿಧ ರಾಸಾಯನಿಕ ಮತ್ತು ಭೌತಿಕ ಕ್ರಿಯೆಗಳ ಮೂಲಕ ಶುದ್ಧೀಕರಿಸುವ ತಂತ್ರಜ್ಞನಾಗಿ, ಟಿವಿ ಮಾರುವ ಹುಡುಗನಾಗಿ ಹೀಗೆ ಹಲವು ರೀತಿಯಲ್ಲಿ ಕೆಲಸಮಾಡಿ, 1991ರಲ್ಲಿ ಶಿರಸಿಯಲ್ಲಿ ‘ಧ್ಯೇಯನಿಷ್ಠ ಪತ್ರಕರ್ತ’ ಎಂಬ ಪತ್ರಿಕೆಯಲ್ಲಿ ತಮ್ಮ ಪತ್ರಿಕಾ ವೃತ್ತಿಯನ್ನು ಪ್ರಾರಂಭಿಸಿದರು.  ಅಸೀಮಾ, ಹೊಸ ದಿಗಂತ, ವಿಕ್ರಮ, ಮಿತ್ರಮಾಧ್ಯಮ, ವಿಜಯ ಕರ್ನಾಟಕ ಮುಂತಾದೆಡೆಗಳಲ್ಲಿ ಅವರ ಪತ್ರಿಕಾ ಸಂಪಾದನೆ ವೃತ್ತಿ ನಡೆಯಿತು.  ಟಿವಿ ಚಾನೆಲ್, ಬ್ಯಾಂಕ್ ಮತ್ತು ಕೈಗಾರಿಕಾ  ಉದ್ಯಮಗಳಲ್ಲಿ ಕೂಡಾ ಅವರ ಸೇವೆ ಸಂದಿತು.  

ಕನ್ನಡದ ಅತಿದೊಡ್ಡ ಅಂತರಜಾಲ ಜ್ನಾನಕೋಶವಾದ ‘ಕಣಜ’ದ ಅಭಿವೃದ್ಧಿಯಲ್ಲಿ ಬೇಳೂರು ಸುದರ್ಶನರ  ಪಾತ್ರ  ಪ್ರಮುಖವಾದದ್ದು.   2011ರ ಒಂದೇ  ವರ್ಷದಲ್ಲೇ  ‘ಕಣಜ’ವನ್ನು ಬೃಹತ್ತಾಗಿ ಬೆಳೆಸಿದ್ದು ಒಂದು ರಾಷ್ಟ್ರೀಯ ದಾಖಲೆಯಾಗಿದೆ.  ಕನ್ನಡದಲ್ಲಿ ಬ್ಲಾಗಿಂಗ್ ಆರಂಭಿಸಿದ ಪ್ರಥಮ ಪೀಳಿಗೆಯ ಪತ್ರಕರ್ತರಾದ ಬೇಳೂರು ಸುದರ್ಶನರು  ಅಂತರಜಾಲದಲ್ಲಿ ಕನ್ನಡದಲ್ಲೇ ವ್ಯವಹರಿಸುವ ಅಭಿಯಾನಕ್ಕೆ ಇಂಬುಕೊಟ್ಟ ಪ್ರಮುಖರಲ್ಲೊಬ್ಬರಾಗಿ ಸಹಾ  ಗುರುತಿಸಲ್ಪಡುತ್ತಾರೆ.  ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ  ಇಂಟರ್ನೆಟ್, ಹಾರ್ಡ್ವೇರ್ ಮತ್ತು  ಕಂಪ್ಯೂಟರ್  ವಿಷಯಗಳ ಪುಸ್ತಕ ರಚನೆ, ತಾಂತ್ರಿಕ ಬರವಣಿಗೆ ಪುಸ್ತಕ ರಚನೆ, ಕನ್ನಡ ಪತ್ರಿಕೋದ್ಯಮಕ್ಕಾಗಿ 500ಕ್ಕೂ ಹೆಚು ಯುವ ಪತ್ರಕರ್ತರಿಗೆ  ತರಬೇತಿ, ಹಲವಾರು ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಮಾಧ್ಯಮ ಮತ್ತು ತಂತ್ರಜ್ಞಾನಗಳ ಸಲಹೆಗಾರ ಹೀಗೆ ಅವರ ಕೊಡುಗೆ ಸಂದಿದೆ.  ಭಾರತ ಸರ್ಕಾರದ ಸಕಲ ಭಾರತೀಯ ಭಾಷೆಗಳ ಬೃಹತ್  ಮುಕ್ತಜ್ಞಾನ ಅಂತರಜಾಲ ತಾಣವಾದ ‘ಭಾರತವಾಣಿ’ಯ (bharatvani.in) ಪ್ರಮುಖ ಸಲಹೆಗಾರರಲ್ಲೊಬ್ಬರಾಗಿ ಆರು ವರ್ಷದವರೆಗೆ ಕಾರ್ಯನಿರ್ವಹಿಸಿದ  ಬೇಳೂರು ಅವರು ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

800ಕ್ಕೂ ಹೆಚ್ಚಿನ  ಪತ್ರಿಕಾ ಲೇಖನಗಳು,  ‘ಉರಿಯ ಸಿರಿ’ ಜೈವಿಕ ಇಂಧನ ಕುರಿತಾದ ಕೃತಿ, ‘ವರ್ತಮಾನ ಬಿಸಿಲು’ ಕವನ ಸಂಕಲನ, ರಾಸಾಯನಿಕಗಳ ಕುರಿತಾದ ‘ನಾನೇಕೆ ವಿಷಮಯವಾಗಬೇಕು’, ಅನುವಾದಗಳಾದ ‘ರಜನೀಕಾಂತ್’ ಒಂದು ಖಚಿತ ಜೀವನಚರಿತ್ರೆ, ಜೆ.ಡಿ. ದೇಶಮುಖರ ಭಾಷಣಗಳು, ‘ಹುಲ್ಲಿನ ಸಾರು’ ಚೀನೀ ಲೇಖಕನ ಆತ್ಮಕಥೆ, ‘ಹಿಮದೊಡಲ ತಳಮಳ’ ಟಿಬೆಟಿಯನ್ ಭಿಕ್ಷುವಿನ ಸೆರೆಮನೆಯ ಕಥನ, ‘ಸ್ಕಲ್ ಮಂತ್ರ’ ಚೀನೀ ಟಿಬೆಟನ್ ರೋಚಕ ಕಾದಂಬರಿ, ಸರಸ್ವತೀ ನದಿಯಿಂದ ಸಿಂಧೂ ಲಿಪಿಯವರೆಗೆ ಮುಂತಾದವು ಬೇಳೂರು ಸುದರ್ಶನರ ಲೇಖನಿಯಿಂದ ಮೂಡಿಬಂದಂತಹ ಇತರ ಕೃತಿಗಳು.  ‘ಉರಿಯ ಸಿರಿ’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ವಿಜ್ಞಾನ ಲೇಖಕ ಪುರಸ್ಕಾರ ಸಂದಿದೆ.  ಈ ಹಿಂದೆ ಇವರಿಗೆ ಬಾವೂರಾವ್ ದೇವರಸ್ ಟ್ರಸ್ಟಿನ ‘ರಾಷ್ಟ್ರೀಯ ಯುವ ಬರಹಗಾರ ಪುರಸ್ಕಾರ’ವೂ ಸಂದಿತ್ತು.   'ಮಾಹಿತಿ ಯುಗದಲ್ಲಿ ದೇಸಿ ಚಿಂತನೆ' ಎಂಬುದು  ಅವರ ಮತ್ತೊಂದು ಕೃತಿ.

ಬಿಡುವಿಲ್ಲದ ವೃತ್ತಿ, ಹವ್ಯಾಸಗಳ ನಡುವೆ ಸಮಾಜಸೇವೆಯಲ್ಲೂ ತಮ್ಮನ್ನು  ತೊಡಗಿಸಿಕೊಂಡಿರುವ  ಬೇಳೂರು ಸುದರ್ಶನರು  ತಮ್ಮ ‘ಮಿತ್ರ ಮಾಧ್ಯಮ’ ಟ್ರಸ್ಟ್ ಮೂಲಕ ಅನೇಕ ಜನಪರ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ.  ಹೀಗೆ ಸದಾಕ್ರಿಯಾಶೀಲರಾಗಿದ್ದರೂ ಹಸನ್ಮುಖಿ ಆತ್ಮೀಯ ವ್ಯಕ್ತಿತ್ವದ ಬೇಳೂರು ಸುದರ್ಶನರಿಗೆ  ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  

On the birth day of our multi talented, ever active Belur Sudarshan Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ