ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವನಮಾಲಾ ವಿಶ್ವನಾಥ


 ವನಮಾಲಾ ವಿಶ್ವನಾಥ


ಡಾ. ವನಮಾಲಾ ವಿಶ್ವನಾಥ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿನ ವಿದ್ವತ್ಪೂರ್ಣ ಕಾರ್ಯಗಳಿಗಾಗಿ ಹಾಗೂ ಅನುವಾದ ಕ್ಷೇತ್ರದಲ್ಲಿನ ಮಹತ್ತರ ಕೊಡುಗೆಗಳಿಗಾಗಿ ಹೆಸರಾಗಿದ್ದಾರೆ.    ಅವರು ಆಕಾಶವಾಣಿ ನಾಟಕ ಕಲಾವಿದರಾಗಿ ಮತ್ತು ದೂರದರ್ಶನದಲ್ಲಿ ವಾರ್ತಾವಾಚಕರಾಗಿ ಜನಸಾಮಾನ್ಯರಿಗೂ ಪರಿಚಿತರಾದವರು.

ಸ್ವತಂತ್ರ ವಿದ್ವಾಂಸರಾದ ಡಾ. ವನಮಾಲಾ ವಿಶ್ವನಾಥ ಅವರು ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ, ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಶಿಕ್ಷಣ ಶಾಲೆಯಂತಹ ಪ್ರಮುಖ ಸಂಸ್ಥೆಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯವನ್ನು ಕಲಿಸಿದ್ದಾರೆ. ಅವರು ದ್ವಿಭಾಷಾ ವಿದ್ವಾಂಸರಾಗಿದ್ದು, ಭಾಷೆ, ಸಾಹಿತ್ಯ, ಬೋಧನೆ ಮತ್ತು ಅನುವಾದದ ವಿಷಯಗಳ ಕುರಿತು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಕನ್ನಡ ಸಂಸ್ಕೃತಿಯ ವಿವಿಧ ಅಂಶಗಳೊಂದಿಗೆ ಆಳವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ವನಮಾಲಾ ವಿಶ್ವನಾಥ ಅವರು  ಆಕಾಶವಾಣಿಯಲ್ಲಿ ನಾಟಕ ಕಲಾವಿದೆಯಾಗಿದ್ದರು. ಅವರು 1984-94ರವರೆಗೆ ದೂರದರ್ಶನದಲ್ಲಿ ಕನ್ನಡ ವಾರ್ತಾವಾಚಕಿಯಾಗಿ ಹೆಸರಾಗಿದ್ದರು.

ವನಮಾಲಾ ವಿಶ್ವನಾಥ ಅವರು ಅನುವಾದ ಕ್ಷೇತ್ರದಲ್ಲಿ ಭಾರತೀಯ ಸಾಹಿತ್ಯವನ್ನು ಉತ್ತೇಜಿಸುವ ಉಪಕ್ರಮವಾದ ಬೆಂಗಳೂರಿನ ಕಥಾ ಪ್ರಾದೇಶಿಕ ಶೈಕ್ಷಣಿಕ ಕೇಂದ್ರದ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಅವರು ನವದೆಹಲಿಯ ಸಾಹಿತ್ಯ ಅಕಾಡೆಮಿಯ ಅನುವಾದ ಕೇಂದ್ರದ ಗೌರವ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದರು. ಅವರು ರಾಷ್ಟ್ರೀಯ ಅನುವಾದ ಮಿಷನ್‌ನ ಸದಸ್ಯರಾಗಿಯೂ  ಸೇವೆ ಸಲ್ಲಿಸಿದ್ದರು.

ಪ್ರೊಫೆಸರ್ ವನಮಾಲಾ ವಿಶ್ವನಾಥ ಅವರು ಸಾರಾ ಅಬೂಬಕರ್, ಲಂಕೇಶ್, ವೈದೇಹಿ ಅನಂತಮೂರ್ತಿ, ಕುವೆಂಪು ಅವರಂತಹ @ಬರಹಗಾರರ ಮಹತ್ವದ ಕೃತಿಗಳನ್ನು ಅನುವಾದಿಸಿ ವಿಶ್ವದಗಲಕ್ಕೆ ಕನ್ನಡ ಕೃತಿಗಳನ್ನು ಪರಿಚಯಿಸಿದ್ದಾರೆ. ಅವರು (ಹ್ಯಾನ್ಸ್ ಸ್ಜೋಸ್ಟ್ರೋಮ್ ಅವರೊಂದಿಗೆ) ಸಂಸ್ಕಾರವನ್ನು ಸ್ವೀಡಿಷ್ ಭಾಷೆಗೆ ಅನುವಾದಿಸಿದ್ದಾರೆ.  ಟೋರ್ಗ್ನಿ ಲಿಂಡ್‌ಗ್ರೆನ್ ಅವರ ಸ್ವೀಡಿಷ್ ಕಾದಂಬರಿ 'ದಿ ವೇ ಆಫ್ ದಿ ಸರ್ಪೆಂಟ್' ಅನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. (ಸಾಹಿತ್ಯ ಅಕಾಡೆಮಿ, 2002).  ಇವರು 12 ನೇ ಶತಮಾನದ ವೀರಶೈವ ಚಳವಳಿಯ ಮಹಿಳಾ ಸಂತ ಕವಿಗಳ ಕಾವ್ಯ ಸೇರಿದಂತೆ ಪೂರ್ವ-ಆಧುನಿಕ ಮತ್ತು ಆಧುನಿಕ ಕನ್ನಡ ಸಾಹಿತ್ಯದಿಂದ ಹಲವಾರು ಶಾಸ್ತ್ರೀಯ ಪಠ್ಯಗಳನ್ನು ಅನುವಾದಿಸಿದ್ದಾರೆ (ವಚನ, ಬಸವ ಸಮಿತಿ. 2012). ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ ಸರಣಿಯಲ್ಲಿ ಮಧ್ಯಕಾಲೀನ ಕನ್ನಡ ಕಾವ್ಯಾತ್ಮಕ ಕ್ಲಾಸಿಕ್‌ನ ಅವರ ಅನುವಾದವಾದ ದಿ ಲೈಫ್ ಆಫ್ ಹರಿಶ್ಚಂದ್ರ (ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 2017), ಒಂದು ಹೆಗ್ಗುರುತೆನಿಸುವಂತಹ ಪ್ರಕಟಣೆಯಾಗಿದೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ (2019) ಪ್ರಕಟಿಸಿದ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ 'ಇಂದಿರಾ ಬಾಯಿ' (1899) ಅನ್ನು ಡಾ ವನಮಾಲಾ ವಿಶ್ವನಾಥ ಅವರು (ಶಿವರಾಮ ಪಡಿಕ್ಕಲ್ ಅವರೊಂದಿಗೆ) ಅನುವಾದಿಸಿರುವುದು ಜಾಗತಿಕ ಓದುಗರಿಗೆ ಕನ್ನಡದ ಸಾಹಿತ್ಯ ಸಂಪತ್ತನ್ನು ಪ್ರಸ್ತುತಪಡಿಸುವಲ್ಲಿ ಮೂಡಿಸಿರುವ ಮತ್ತೊಂದು ಮೈಲಿಗಲ್ಲು. ಈ ಕೃತಿಯು ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ 2020 ರಲ್ಲಿ ಅತ್ಯುತ್ತಮ ಅನುವಾದ ಪ್ರಶಸ್ತಿಯನ್ನು ಪಡೆದುಕೊಂಡಿದೆ

ಪ್ರೊಫೆಸರ್ ವಿಶ್ವನಾಥ ಅವರು ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ (ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್) ಗಾಗಿ 10 ನೇ ಶತಮಾನದ ಕನ್ನಡ ಗದ್ಯ ಕೃತಿಯಾದ ವಡ್ಡಾರಾಧನೆಯ ಕುರಿತಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕನ್ನಡದ ಮಹಾನ್ ಬೃಹತ್ ಕಾದಂಬರಿಯಾದ  ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು'  ಕೃತಿಯ ಇಂಗ್ಲಿಷ್ ಅನುವಾದವನ್ನು ಮಾಡಿದ್ದು ಅದನ್ನು ಪ್ರಸಿದ್ಧ ಪೆಂಗ್ವಿನ್ ರಾಂಡಮ್ ಹೌಸ್ ಪ್ರಕಟಿಸಿದೆ.  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿರುವ  ಲಕ್ಷ್ಮಿಶ ತೋಳ್ಪಾಡಿ ಅವರ ಪ್ರಬಂಧ ಸಂಗ್ರಹವಾದ 'ಭಾರತಯಾತ್ರೆ' ಕೃತಿಯ ವನಮಾಲಾ ವಿಶ್ವನಾಥ ಅವರ ಅನುವಾದವನ್ನು ಸಹಾ  ಪೆಂಗ್ವಿನ್ ಪ್ರಕಟಿಸಲಿದೆ.

ವನಮಾಲಾ ವಿಶ್ವನಾಥ್ ಅವರಿಗೆ ಭಾರತೀಯ ವಿದ್ಯಾಭವನ ನೀಡುವ ಜಾಕಿಯಾ ಶಂಕರ್ ಪಾಠಕ್ ಪ್ರಶಸ್ತಿ,  ಕನ್ನಡ ಸಾಹಿತ್ಯ ಪರಿಷತ್ತಿನ ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

Happy birthday Vanamala Viswanath 🌷🙏🌷

Thank you Sandhya S Kumar 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ