ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಪತಿ ತಂತ್ರಿ


 ಶ್ರೀಪತಿ ತಂತ್ರಿ 


ಡಾ.  ಪಾದೂರು ಶ್ರೀಪತಿ ತಂತ್ರಿ ಅವರು ವಿದ್ವಾಂಸರು, ಪ್ರಾಧ್ಯಾಪಕರು, ಶಿಕ್ಷಣ ತಜ್ಞರು, ಸಾಹಿತಿ, ಸಮಾಜ ಶಾಸ್ತ್ರಜ್ಞರು ಹೀಗೆ ಬಹುಮುಖಿ.

ಶ್ರೀಪತಿ ತಂತ್ರಿ ಅವರು 1939ರ ಜುಲೈ 31ರಂದು ಜನಿಸಿದರು.  ಮೂಲತಃ ಇವರು ಉಡುಪಿಯವರು. ಉಡುಪಿಯಲ್ಲಿ ಶಾಲಾ ವಿದ್ಯಾಭ್ಯಾಸದ ನಂತರ ಪುಣೆಯಲ್ಲಿ ಸಮಾಜ ಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಗಳಿಸಿದರು. ಮಂಗಳೂರು ವಿಶ್ವವಿದ್ಯಾಲಯದಿಂದ ಇವರಿಗೆ ಡಿ.ಲಿಟ್ ಗೌರವ ಸಂದಿದೆ.

ಶ್ರೀಪತಿ ತಂತ್ರಿ  ಅವರು ಕುಂದಾಪುರ ಭಂಡಾರ್‌ಕಾರ್ ಕಾಲೇಜು, ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ, ಶಿರ್ವದ ಎಂಎಸ್‌ಆರ್‌ಎಸ್‌ ಕಾಲೇಜು ಮತ್ತು ಮಣಿಪಾಲದ ಮಾಧವ ಪೈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಮಣಿಪಾಲ ಕೆಎಂಸಿಯಲ್ಲಿಯೂ ಉಪನ್ಯಾಸಕರಾಗಿದ್ದರು. ಮಂಗಳೂರು, ಮೈಸೂರು ವಿ.ವಿ. ಸೆನೆಟ್ ಸದಸ್ಯರಾಗಿ, ಮಂಗಳೂರು ವಿ.ವಿ. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರಾಗಿ, ವಿ.ವಿ. ಅನುದಾನ ಆಯೋಗದ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು. ಮಂಗಳೂರು ವಿವಿ ಸ್ಥಾಪನೆಯಲ್ಲೂ ಅವರು ಅಪಾರ ಶ್ರಮಿಸಿದ್ದರು. 

ಮಹಾಭಾರತದ ಪಾತ್ರಗಳನ್ನು ಅತ್ಯಂತ ಪಾಂಡಿತ್ಯಪೂರ್ಣವಾಗಿ ವಿಶ್ಲೇಷಿಸಿದ ಇರಾವತಿ ಕರ್ವೆ ಅವರ ಕೃತಿಯನ್ನು ಯುಗಾಂತ ಶೀರ್ಷಿಕೆಯಡಿ ಅನುವಾದಿಸಿ ಕನ್ನಡಕ್ಕೆ ಒಂದು ಶಾಸ್ತ್ರೀಯ ಕೃತಿ ನೀಡಿದ ಕೀರ್ತಿ ಪ್ರೊ. ಶ್ರೀಪತಿ ತಂತ್ರಿ  ಅವರಿಗೆ ಸಲ್ಲುತ್ತದೆ. ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಭಾರತೀಯ ದರ್ಶನ ಪ್ರಕಾರಗಳು, ವಾಸ್ತು, ಆಗಮ, ವಿಗ್ರಹಶಾಸ್ತ್ರ, ಜಾಗತಿಕ ಧರ್ಮಗಳ ತುಲನಾತ್ಮಕ ವಿಮರ್ಶೆ, ಉನ್ನತ ಶಿಕ್ಷಣ ಹೀಗೆ ಅನೇಕ ವಿಷಯಗಳ ಬಗೆಗೆ 200ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಸೃಷ್ಟಿ ಪ್ರಳಯ ಮರುಸೃಷ್ಟಿ, ಸನೂತನ ಧರ್ಮದರ್ಶನ, ಭಾರತೀಯ ದರ್ಶನಗಳ ಇತಿಹಾಸ ಒಂದು ಮಾನವಶಾಸ್ತ್ರೀಯ ವಿಮರ್ಶೆ ಸೇರಿದಂತೆ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. 

ಶ್ರೀಪತಿ ತಂತ್ರಿ ಅವರಿಗೆ ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದ ಅನೇಕ ಗೌರವಗಳು ಸಂದಿವೆ.  ಇವರ 80ನೇ ಹುಟ್ಟುಹಬ್ಬದ ಸಂದರ್ಭದಲ್ಲಿ "ಸಂತೃಪ್ತ - ಸುಜೀವನಾನುಭವಿ - 80 ಸಂವತ್ಸರಗಳ ಚಾಂದ್ರಿಯಾಣದ ಸುಯಾತ್ರಿ ಪ್ರೊ. ಪಾದೂರು ಶ್ರೀಪತಿ ತಂತ್ರಿ" ಬದುಕು ಬರಹ ವಿಚಾರಗೋಷ್ಠಿ, ಅಭಿನಂದನೆಗಳು ಜರುಗಿದವು. 

ಪೂಜ್ಯ ಪ್ರೊ. ಶ್ರೀಪತಿ ತಂತ್ರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು

On the birthday of Great scholar, Educationist, Socialigist and writer Dr. Sripati Tantri Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ