ಅರವಿಂದ ಮಾಲಗತ್ತಿ
ಅರವಿಂದ ಮಾಲಗತ್ತಿ
ಡಾ.ಅರವಿಂದ ಮಾಲಗತ್ತಿ ಅವರು ಬಹುಮುಖಿ ಬರಹಗಾರರಾಗಿ, ಸಂಶೋಧಕರಾಗಿ, ಶಿಕ್ಷಣತಜ್ಞರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ.
ಡಾ.ಅರವಿಂದ ಮಾಲಗತ್ತಿ ಅವರು 1956ರ ಆಗಸ್ಟ್ 1 ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ತಂದೆ ಯಲ್ಲಪ್ಪ. ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿಯವರೆಗೂ ವ್ಯಾಸಂಗ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ 'ಉತ್ತರ ಕರ್ನಾಟಕದ ಜನಪದ ಆಟಗಳು' ಮಹಾಪ್ರಬಂಧಕ್ಕೆ ಪಿಎಚ್.ಡಿ. ಗಳಿಸಿದರು.
ಅರವಿಂದ ಮಾಲಗತ್ತಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಮುಂದೆ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಹಾಗೂ ಹಲವು ವಿಭಾಗಗಳ ನಿರ್ದೇಶಕರಾಗಿ
ಕಾರ್ಯನಿರ್ವಹಿಸಿದ್ದಾರೆ.
ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಡಾ. ಅರವಿಂದ ಮಾಲಗತ್ತಿ ಅವರು ಕಾದಂಬರಿ, ಕಥೆ, ನಾಟಕ, ಸಂಶೋಧನೆ, ಸಂಪಾದನೆ, ಆತ್ಮಕಥೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಜಾನಪದ. ಗಾಯಕರಾಗಿ ಹಾಡಿ, ನಟರಾಗಿ ಅಪರೂಪಕ್ಕೆ ನಟಿಸಿದ್ದೂ ಇದೆ.
ಅರವಿಂದ ಮಾಲಗತ್ತಿ ಅವರ ಪ್ರಕಟಿತ ಕೃತಿಗಳಲ್ಲಿ ಮೂಕನಿಗೆ ಬಾಯಿ ಬಂದಾಗ, ಕಪ್ಪು ಕಾವ್ಯ, ಮೂರನೇ ಕಣ್ಣು, ನಾದ ನಿನಾದ, ಅನೀಲ ಆರಾಧನಾ (ಸಂಯುಕ್ತ ಕಾವ್ಯ), ಸಿಲಿಕಾನ್ ಸಿಟಿ ಮತ್ತು ಕೋಗಿಲೆ, ಚಂಡಾಲ ಸ್ವರ್ಗಾರೋಹಣಂ, ಆಯ್ದಕವಿತೆಗಳು, ವಿಶ್ವತೋಮುಖ, ಹೂ ಬಲುಭಾರ, ಸಹಸ್ರಾಕ್ಷಿ, ಮಾ ಕಾವ್ಯ (ಕಾವ್ಯ ಸಮಗ್ರ), ರೂ ನಿಷೇಧ ಚಕ್ರಕಾವ್ಯ ಮುಂತಾದ ಕಾವ್ಯ ಸಂಕಲನಗಳಿವೆ.
'ಮುಗಿಯದ ಕಥೆಗಳು' ಇವರ ಕಥಾ ಸಂಕಲನ. 'ಕಾರ್ಯ' ಇವರ ಕಾದಂಬರಿ. ಇವರ ನಾಟಕಗಳಲ್ಲಿ ಮಸ್ತಕಾಭಿಷೇಕ, ಸಮುದ್ರದೊಳಗಣ ಉಪ್ಪು, ಮಚುಬದ ಮುಖ, ಹೊಸ ಬ್ರಾಹ್ಮಣ ಸನ್ಯಾಸಿ ಸೇರಿವೆ. 'ಚೀನಾದ ಧರಣಿಯಲ್ಲಿ' ಪ್ರವಾಸ ಕಥನ. 'ಗೌರ್ಮೆಂಟ್ ಬ್ರಾಹ್ಮಣ' ಇವರ ಆತ್ಮಕಥನ. ಈ ಕೃತಿ ಚಲನಚಿತ್ರವಾಗಿದೆ. ಇವರ ಸಂಶೋಧನಾತ್ಮಕ ವಿಮರ್ಶೆಗಳಲ್ಲಿ 'ಕನ್ನಡ ಸಾಹಿತ್ಯ ಮತ್ತು ದಲಿತಯುಗ', ದಲಿತ ಪ್ರಜ್ಞೆ', 'ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ', 'ಸಾಂಸ್ಕೃತಿಕ ದಂಗೆ', 'ಬೆಂಕಿ ಬೆಳದಿಂಗಳು', 'ದಲಿತ ಸಾಹಿತ್ಯ ಪ್ರವೇಶಿಕೆ', 'ಅಂತರ್ಜಾತಿಯ ವಿವಾಹ ಎಷ್ಟು ಪ್ರಗತಿಪರ', ಪೂನಾಪ್ಯಾಕ್ಟ್ ಮತ್ತು ದಲಿತರೆತ್ತ ಸಾಗಬೇಕು', 'ಭೀಮ ನಡೆಯಬೇಕು', 'ಸಾಹಿತ್ಯ ಸಾಕ್ಷಿ, ದಲಿತ ಸಾಹಿತ್ಯ ಪರ್ವ', 'ದಲಿತ ಸಾಹಿತ್ಯ', 'ಸಾಹಿತ್ಯ ಕಾರಣ', 'ದಲಿತ ಮಾರ್ಗ', 'ಮೌಢ್ಯ ನಿಷೇಧದ ಗುದ್ದಾಟಗಳು', 'ಚುಟುಕು ಚಿಂತನ', 'ದಲಿತ ಸಾಹಿತ್ಯ ಯಾನ' ಮುಂತಾದವು ಸೇರಿವೆ. ಇವರ ಜಾನಪದ ಕೃತಿಗಳಲ್ಲಿ ಆಣೀ ಪೀಣಿ, ಜಾನಪದ ವ್ಯಾಸಂಗ, ಜಾನಪದ ಶೋಧ, ತುಳುವರ ಆಟಿಕಳಂಜ ಅಂತರ್ ದೃಷ್ಟಿಯ ಸಂಶೋಧನೆ, ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ, ಪುರಾಣ ಜಾನಪದ ಮತ್ತು ದೇಶಿವಾದ ಸೇರಿವೆ. 'ಕೊರಗ ಜನಾಂಗ ಒಂದು ವಿಶ್ಲೇಷಣಾತ್ಮಕ ಅಧ್ಯಯನ -೧೯೯೧' ಇವರ ಸಹಬರವಣಿಗೆಯಲ್ಲಿ ಮೂಡಿದೆ. ವಯಸ್ಕರ ಶಿಕ್ಷಣ ಸಮಿತಿಗಾಗಿ ಜನಪದ ಆಟಗಳು (೧೯೯೩), ತಾಳಿಕೋಟೆ ದ್ಯಾಮವ್ವ (೧೯೯೫) ರಚಿಸಿದ್ದಾರೆ. ಇವರ ಸಂಪಾದಿತ ಕೃತಿಗಳಲ್ಲಿ ನಾಲ್ಕು ದಲಿತೀಯ ಕಾದಂಬರಿಗಳು, ಅಂಬೇಡ್ಕರ್ ವಿಚಾರಧಾರೆ, ಅಂಬೇಡ್ಕರ್ ವಾದ-ಸಂವಾದ, ಗೋಮಾಳದಿಂದ ಗಂಗೋತ್ರಿಗೆ, ದಲಿತ ಸಾಹಿತ್ಯ ನೆಲೆ-ಹಿನ್ನೆಲೆ, ಕನ್ನಡ ಗ್ರಂಥೋದ್ಯಮ, ಜಾನಪದ ಸೈದ್ಧಾಂತಿಕ ಪ್ರಜ್ಞೆ ಮತ್ತು ದೇಶಿವಾದ, ಜಾನಪದ ಮೂಲತತ್ವ್ತಗಳು, ಕಾದಂಬರಿಗಳ ವಿಮರ್ಶೆ, ಮಲೆಯ ಮಹದೇಶ್ವರ ಹಾಗೂ ಸಹ ಸಂಪಾದನೆಗಳಲ್ಲಿ ಸಮಾವೇಶ, ಬೇವು ಬೆಲ್ಲ ಇವೆ. ವಿಶ್ವಕೋಶ ಹಾಗೂ ಬೃಹತ್ ಗ್ರಂಥಗಳ ಪ್ರಧಾನ ಸಂಪಾದಕರಾಗಿ ಸಹಾ ಕೆಲಸ ಮಾಡಿದ್ದಾರೆ.
ಅರವಿಂದ ಮಾಲಗತ್ತಿ ಅವರ ಕೆಲವು ಕೃತಿಗಳು ಹಾಗೂ ಬಿಡಿ ಬರಹಗಳು ಇಂಗ್ಲಿಷ್, ಹಿಂದಿ, ಮಲೆಯಾಳಂ, ಮರಾಠಿ, ತಮಿಳು, ಬೆಂಗಾಲಿ ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ.
ಅರವಿಂದ ಮಾಲಗತ್ತಿ ಅವರಿಗೆ ಮೂಕನಿಗೆ ಬಾಯಿ ಬಂದಾಗ ಕವನ ಸಂಕಲನಕ್ಕೆ ದೇವರಾಜ್ ಬಹದ್ದೂರ್ ಪ್ರಶಸ್ತಿ, ಕಪ್ಪುಕಾವ್ಯ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ನರಸಿಂಹಯ್ಯ ಪುರಸ್ಕಾರ, ಗೌರ್ಮೆಂಟ್ ಬ್ರಾಹ್ಮಣ ಆತ್ಮಕಥನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀ ಕೃಷ್ಣ ಆಲನಹಳ್ಳಿ ಪ್ರಶಸ್ತಿ, ಸಂಕ್ರಮಣ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಕರ್ನಾಟಕ ಜಾನಪದ ಟ್ರಸ್ಟ್ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಸಮಗ್ರ ಸಾಹಿತ್ಯಕ್ಕೆ, ಜಿ.ಶಂ.ಪ ಜಾನಪದ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಅರವಿಂದ ಮಾಲಗತ್ತಿ ಅವರು ಈ ಕೆಳಕಂಡ ಘೋಷಿತ ಪ್ರಶಸ್ತಿಗಳನ್ನು ಸ್ವೀಕರಿಸಿಲ್ಲ: ಹಿಂದಿ ಮಾರ್ತಾಂಡ್ ಪ್ರಶಸ್ತಿ -೨೦೦೪, ಭಾರತೀಯ ಪರಿಷದ್ ಪ್ರಮಾಣ್ ಅಲಹಬಾದ್; ಇಂಟರ್ ನ್ಯಾಷನಲ್ ಲೀಡರ್ಶಿಫ್ ಅವಾರ್ಡ್ - ೧೯೯೮ - ಅಮೆರಿಕನ್ ಬಯಾಗ್ರಫಿಕಲ್ ಇನ್ಷ್ಟಿಟ್ಯೂಟ್ ಯು.ಎಸ್.ಎ; ಶಿಕ್ಷಣ ರತ್ನ ಪ್ರಶಸ್ತಿ - ೨೦೦೭ -ನವದೆಹಲಿ, ಇಂಡಿಯಾ - ಇಂಟರ್ ನ್ಯಾಷನಲ್ ಫ್ರೆಂಡ್ ಶಿಫ್ ಸೊಸೈಟಿ; ರಾಷ್ಟ್ರೀಯ ಗೌರವ ಪ್ರಶಸ್ತಿ - ೨೦೦೯ -ನವದೆಹಲಿ, ಇಂಡಿಯಾ - ಇಂಟರ್ ನ್ಯಾಷನಲ್ ಫ್ರೆಂಡ್ ಶಿಫ್ ಸೊಸೈಟಿ; ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ ಪ್ರಶಸ್ತಿ - ೨೦೦೯ - ನವದೆಹಲಿ, ಇಂಟರ್ ನ್ಯಾಷನಲ್ ಪಬ್ಲಿಷಿಂಗ್ ಹೌಸ್; ಟ್ವೆಂಟಿಟೆನ್ ನ್ಯಾಷನಲ್ ಅಕಾಡೆಮಿ ಅವಾರ್ಡ್ ಫಾರ್ ಲಿಟರೇಚರ್ - ೨೦೧೦ ಅಕಾಡೆಮಿ ಆಫ್ ಬೆಂಗಾಲಿ ಪೊಯೆಟ್ರಿ.
ಡಾ. ಅರವಿಂದ ಮಾಲಗತ್ತಿ ಅವರು ವಿಶ್ವವಿದ್ಯಾಲಯದ ಮತ್ತು ಶಿಕ್ಷಣ ಕ್ಷೇತ್ರದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಮಹಾನ್ ಸಾಹಿತಿ ಡಾ. ಅರವಿಂದ ಮಾಲಗತ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of our Great writer Prof. Aravind Malagatti Sir 🌷🙏🌷
ಕಾಮೆಂಟ್‌ಗಳು