ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು
ಶ್ರೀಮತೆ ರಾಮಾನುಜಾಯ ನಮಃ 🌷🙏🌷
ಪರಮಪೂಜ್ಯ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳ ತಿರುನಕ್ಷತ್ರ ಭಾದ್ರಪದ ಮಾಸ, ಪುಬ್ಬ ನಕ್ಷತ್ರ, ಸಿಂಹ ರಾಶಿ, ಅಂದರೆ ಇಂದು. ಯದುಗಿರಿ ಯತಿರಾಜ ಮಠದ 41ನೇ ಪೀಠಾಧಿಪತಿಗಳಾಗಿರುವ ಸ್ವಾಮಿಗಳು ಜನಿಸಿದ್ದು 25.08. 1949 ರಲ್ಲಿ.
ಮೇಲುಕೋಟೆಯಲ್ಲಿ ಭಗವದ್ರಾಮಾನುಜರಿಂದ ಸ್ಥಾಪಿಸಲ್ಪಟ್ಟ 74 ಸಿಂಹಾಸನಾಧಿಪತಿಗಳಲ್ಲಿ ಬರುವ 'ನಲ್ಲಾನ್ ಚಕ್ರವರ್ತಿ' ವಂಶದಲ್ಲಿ ಜನಿಸಿದವರು, ಅಲ್ಲದೆ 'ಐಶಾಮಿ' ಎನ್ನುವುದು ಇವರ ಕುಟುಂಬದವರ ಮುದ್ರೆ. ಸಾಮಾಜಿಕ ಕಳಕಳಿಯಿದ್ದ ಆದ್ಯ ಕುಟುಂಬ ಸ್ವಾಮಿಗಳದ್ದು ಎನ್ನುವುದಕ್ಕೆ ಸಾಕ್ಷಿ ಇವರ ಮುತ್ತಾತನವರು 100 ವರ್ಷದ ಹಿಂದೆ ಕಟ್ಟಿರುವ ಐಶಾಮಿ ಮಂಟಪ ಮೇಲುಕೋಟೆಯಲ್ಲಿ ಇನ್ನೂ ಉಳಿದಿರುವುದು. ಇವರ ತಾತನವರು ಮೈಸೂರಿನ ಅರಮನೆಗೆ ಕೃಷ್ಣ ಜಯಂತಿಯ ದಿನ ದೇವಸ್ಥಾನದಿಂದ ಪ್ರಸಾದವನ್ನು ತಲುಪಿಸುತ್ತಿದ್ದರಂತೆ.
ಸ್ವಾಮಿಯವರ ತಂದೆಯವರು ಮೇಲುಕೋಟೆಯ ಸಂಸ್ಕೃತ ಪಾಠಶಾಲೆಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ wren & martin ವ್ಯಾಕರಣ ಪುಸ್ತಕವನ್ನು ಪುಟದ ಸಂಖ್ಯೆಯೊಡನೆ ನೆನಪಿಟ್ಟುಕೊಂಡಿದ್ದ ಮಹನೀಯರು. ಸ್ವಾಮಿಗಳು ತಮ್ಮ ಊರಿನ ಹಿರಿಯ ಚೇತನರ ಬಗ್ಗೆ ಹೇಳುತ್ತಾ, ಅವರಿಂದ ತಾವು ಕಲಿತ ಜೀವನದ ಪಾಠ ಮೌಲ್ಯಗಳನ್ನು ತಮ್ಮ 'ಸುಜನ ಜೀವನ' ಗ್ರಂಥದಲ್ಲಿ ವಿಸ್ತಾರವಾಗಿ ಸ್ಮರಿಸಿದ್ದಾರೆ.
'ಅಭಿನವ ರಾಮಾನುಜ'ರೆಂದೇ ಖ್ಯಾತಿವೆತ್ತಿರುವ ಸ್ವಾಮಿಗಳು ತಮ್ಮ ಪೂರ್ವಾಶ್ರಮದಲ್ಲಿ ಬಾಲ್ಯದ ದಿನಗಳಲ್ಲಿ ಆಟಕ್ಕಾಗಿ, ಶ್ರೀನಿವಾಸನ ವಿಗ್ರಹಕ್ಕೆ ಉತ್ಸವಾದಿಗಳನ್ನು ಮಾಡಿ ಸಂತೋಷಿಸುತ್ತಿದ್ದರಂತೆ. ಬೆಟ್ಟದ ನರಸಿಂಹನ ಕೈಂಕರ್ಯಕ್ಕೆ ಲೆಕ್ಕವಿಲ್ಲದಷ್ಟು ಬಾರಿ ನೀರು ಹೊತ್ತೊಯ್ಯುವ ಕೈಂಕರ್ಯ ಮಾಡಿರುವರಂತೆ. ಪ್ರೌಢಶಾಲೆಯಲ್ಲಿ ಸ್ವಾಮಿಗಳು ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ, ಎಲ್ಲ ಹಂತದಲ್ಲೂ ಅವರೇ ವಿಜಯಿಯಾಗುತ್ತಿದ್ದರು. ಮನೆಯಲ್ಲಿ ಪ್ರತಿಯೊಬ್ಬರ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ಇದಕ್ಕೆಲ್ಲ ಪ್ರೇರಣೆ ಆಯಿತು ಎನ್ನುತ್ತಾರೆ ಸ್ವಾಮಿಗಳು.
ಸ್ವಾಮಿಗಳಿಗೆ ಸಂಗೀತದ ಬಗೆಗಿನ ಒಲವು ಜಗಜನಿತ. ಮೈಸೂರಿನಲ್ಲಿ ಅವರು ವ್ಯಾಸಂಗ ಮಾಡುತ್ತಿದ್ದಾಗ ಬಿಡಾರಂ ಕೃಷ್ಣಪ್ಪನವರ ಶ್ರೀ ಸೀತಾರಾಮ ಮಂದಿರದಿಂದ ಮೊದಲಾಗಿ, ಇಂದಿಗೂ ಶ್ರೀಮಠದಲ್ಲಿ ಸ್ವಾಮಿಗಳು ಎಲ್ಲ ರೀತಿಯ ಸಂಗೀತ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಿಯೇ ಮಾಡುತ್ತಾರೆ. ಉತ್ತರ ಭಾರತದ ಸನ್ಯಾಸಿಯೊಬ್ಬರು ಮೈಸೂರಿಗೆ ಬಂದಾಗ ಇವರನ್ನು ನೋಡಿ 'ನಿನ್ನ ದಾರಿ ಬೇರೆ ಇರುತ್ತದೆ' ಎಂದು ಆಶೀರ್ವದಿಸಿದ್ದನ್ನು ಸ್ವಾಮಿಗಳು ನೆನೆಯುತ್ತಾರೆ.
ಸ್ವಾಮಿಗಳು ರಾಷ್ಟ್ರೋತ್ಥಾನ ಪರಿಷತ್ತಿನ ಮೂಲಕ 1969ರಲ್ಲಿ ಮಹಾತ್ಮಗಾಂಧಿಯವರ ಬಗ್ಗೆ ' ಬಾಪು' ಸ್ಮರಣ ಸಂಚಿಕೆಯ ಸಂಪಾದಕರಾಗಿ ಸೈ ಎನಿಸಿಕೊಂಡು, ಅಲ್ಲೇ 'ತಿರು ಸ್ವಾಮಿ'ಗಳಾಗಿ ನಾಮಾಂಕಿತರಾಗಿ, ಮೊದಲ ಜವಾಬ್ದಾರಿಯಾಗಿ 'ರಾಷ್ಟ್ರೋತ್ಥಾನ ಸಂಶೋಧನ ವೇದಿ' ಎಂಬ ಗ್ರಂಥಾಲಯವನ್ನು ಸಂಯೋಜಿಸಿದರು. ಇದಕ್ಕಾಗಿ ಆಗಿನ ಕಾಲಕ್ಕೇ ಸುಮಾರು 6000 ಪುಸ್ತಕಗಳನ್ನು ಸಂಗ್ರಹಿಸಿದರು. ಇಂದು ಅದು ಬೃಹತ್ತಾಗಿ ಬೆಳೆದಿದೆ. ಮಕ್ಕಳ ಕೈಗೆ ಸರಸ್ವತಿ ದೊರೆತ ಸುಲಭ ಪುಸ್ತಕವೆಂದರೆ ಸ್ವಾಮಿಗಳಿಂದ ನಾಮಾಂಕಿತವಾದ 'ಭಾರತ ಭಾರತ ಪುಸ್ತಕ ಸಂಪದ'. ನಮ್ಮ ದೇಶದ ಋಷಿ ಮುನಿಗಳು, ಸ್ವತಂತ್ರ ಸಂಗ್ರಾಮದ ಮಹನೀಯರು, ದೇಶದ ಸಂಸ್ಕಾರ ಸಂಸ್ಕೃತಿಗಳನ್ನು ಸುಲಭ ಭಾಷೆಯಲ್ಲಿ ಪರಿಚಯಿಸುವ ಪುಸ್ತಕಮಾಲೆ ಈ ಪುಟ್ಟ ಹೊತ್ತಿಗೆಗಳಲ್ಲಿದೆ. ತಮ್ಮ ಓಡಾಟಕ್ಕೆ ಬೇಕಿದ್ದ ವಾಹನದ ಬಾಕ್ಸ್ ಮೇಲೆ 'ರಾಮದೂತ' ಎಂದು ಬರೆಸಿದ್ದುದು, ಅಂದೇ ಅವರು ಆಂಜನೇಯನ ಅನುಗ್ರಹಕ್ಕೆ ಪಾತ್ರರಾಗಿದ್ದುದರ ಸಾಕ್ಷಿ.
ದೇಶದ ತುರ್ತುಪರಿಸ್ಥಿತಿಯ ವೇಳೆ ತಾವು ಬಂಧನಕ್ಕೊಳಗಾಗುವ ಸಂದರ್ಭವಿದ್ದಾಗ, ಮಂಕಿ ಕ್ಯಾಪ್ ತೊಟ್ಟು, ಎಲ್ಲೆಲ್ಲೋ ಯಾರ್ಯಾರ ಮನೆಯಲ್ಲೋ ಉಳಿಯುತ್ತಿದ್ದುದು, ಮಾರು ವೇಷದಲ್ಲಿ ಪೊಲೀಸರು ತಮ್ಮನ್ನು ಹುಡುಕಿ ಮನೆಗೆ ಬಂದಾಗ, ಮನೆಯವರು ತಮ್ಮನ್ನು ಕಾಪಾಡುತ್ತಿದ್ದ ರೀತಿ, ಇದೆಲ್ಲವನ್ನೂ virtual tour ನಂತೆ ಸ್ವಾಮಿಗಳು ವಿವರಿಸುತ್ತಾರೆ. 15 ವರ್ಷಗಳ ಕಾಲ ಆರ್.ಎಸ್.ಎಸ್.ನ ಪೂರ್ಣಾವಧಿ ಕಾರ್ಯಕರ್ತರಾಗಿ ಸ್ವಾಮಿಗಳು ಸಾಹಿತ್ಯವಲಯದಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ.
ಸ್ವಾಮಿಗಳ ಸಮಾಜಮುಖಿ ಕಾರ್ಯಕ್ರಮಗಳ ದೊಡ್ಡ ಪಟ್ಟಿಯಲ್ಲಿ ಕೆಲವೆಂದರೆ ಅನ್ಯೋನ್ಯ ಗ್ರಾಮೋದಯ ಟ್ರಸ್ಟ್, ದೀಪಜ್ಯೋತಿ, ದೀನಸೇವಾ, ರಾಮಾನುಜ ಸೇವಾ ಟ್ರಸ್ಟ್, ವೈಕುಂಠ ಯಾತ್ರೆ hearse van, ಸುಶ್ರುತ ಬ್ಲಡ್ ಬ್ಯಾಂಕ್, ಆದರ್ಶ ಸಂಸ್ಥೆ.
1600ಕ್ಕೂ ಹೆಚ್ಚು 'ರಾಮಾನುಜ ಸ್ಪರ್ಶ ಪಾದುಕಾ ಉತ್ಸವ'ವನ್ನು ನಡೆಸಲು ಸಾಧ್ಯವಾಗಿದ್ದು ಆಚಾರ್ಯ ರಾಮಾನುಜರ ಅನುಗ್ರಹದಿಂದ ಮಾತ್ರ ಎನ್ನುವುದು ಸ್ವಾಮಿಗಳ ಪ್ರಬಲ ನಂಬಿಕೆಯಾಗಿದೆ. ಭಗವದ್ರಾಮಾನುಜರು ಕರ್ನಾಟಕಕ್ಕೆ ಆಗಮಿಸಿ 900ವರ್ಷಗಳಾದ ದಿವ್ಯ ಸಂದರ್ಭದಲ್ಲಿ, 'ರಾಮಾನುಜ ಜ್ಯೋತಿ ರಥಯಾತ್ರೆ'ಯನ್ನು ಸ್ವಾಮಿಗಳು ಏರ್ಪಡಿಸಿದರು. ಟೆಂಪಲ್ ಕ್ಲೀನಿಂಗ್, ಡಿವೈನ್ ಟೂರ್, ಅಯ್ಯಂಗಾರ್ ಫುಡ್ ಫೆಸ್ಟಿವಲ್, ಇವು ಸ್ವಾಮಿಗಳು ಆಯೋಜಿಸಿರುವ, ಕಾಲಕ್ಕೆ ತಕ್ಕನಾದ ಮನೋರಂಜನ ಯುಕ್ತವಾದ ಧಾರ್ಮಿಕ ಕಾರ್ಯಕ್ರಮಗಳ ಉದಾಹರಣೆಗಳು.
ಇಸ್ಕಾನ್ ನ ಭಕ್ತಿವೇದಾಂತ ದರ್ಶನ ಎಂಬ ಮಾಸಪತ್ರಿಕೆಯ ಸಂಪಾದಕರಾಗಿ, 'ಶ್ರೀಕೃಷ್ಣಕಲಾಕ್ಷೇತ್ರ' ಎನ್ನುವ ಸಾಂಸ್ಕೃತಿಕ ವೇದಿಕೆಯನ್ನು ಪ್ರಾರಂಭಿಸಿ, ಹರಿದಾಸರ ಸಂಕೀರ್ತನೆಗಳನ್ನು ಪ್ರಚಾರ ಪಡಿಸಿದ ಕೀರ್ತಿ ಸ್ವಾಮಿಗಳಿಗೆ ಸಲ್ಲುತ್ತದೆ.
2014ರಿಂದ ಶ್ರೀ ಯತಿರಾಜ ಮಠದ ಪೀಠಾಧಿಪತಿಗಳಾಗಿರುವ ಸ್ವಾಮಿಗಳನ್ನು ಭಕ್ತರು ಹಾಡಿ ಹೊಗಳಿದರೆ ಅವರು ಹೇಳುವುದು 'ಹರೇ ಶ್ರೀನಿವಾಸ', 'ಸರ್ವಂ ಕೃಷ್ಣಾರ್ಪಣಂ', 'ಶ್ರೀಮತೆ ರಾಮಾನುಜಾಯ ನಮಃ' ಎಂದು ಮಾತ್ರ. ರಾಮಾನುಜ ಪರಂಪರೆಯ ಕೀರ್ತಿಶೃಂಗವಾಗಿ ಬೆಳಗುತ್ತಿರುವ ಪೂಜ್ಯ ಸ್ವಾಮಿಗಳನ್ನು ನೋಡಿದ ಕೂಡಲೇ ಅವರು ಬಂದವರನ್ನು 'ಬನ್ನಿ' ಎಂದು ಹಸನ್ಮುಖಿಯಾಗಿ ದಿವ್ಯಚೈತನ್ಯದಿಂದ ಕೂಡಿ ಕರೆಯುತ್ತಾರೆ. ಶ್ರೀಮಠದಲ್ಲಿ ತಮ್ಮ ಸುಖ ದುಃಖಗಳನ್ನು ಹೊತ್ತೊಯ್ಯುವ ಭಕ್ತರಿಗೆ ಆಗಲೇ ಅರ್ಧ ಭಾರ ಕಳೆದು ಹೋಗುವುದರಲ್ಲಿ ಸಂದೇಹವಿಲ್ಲ.
ಮಠದ ಪೀಠಾಧಿಪತಿಗಳಾದರೂ, ಯಾವುದೇ ಭಯವಿಲ್ಲದೆ, ಬದಲಾಗಿ ಭಕ್ತಿಯಿಂದ ಅವರನ್ನು ನಮಸ್ಕರಿಸಿ ಇನ್ನೂ ಹಲವಾರು ಚೇತನರು ಸಂತೋಷಿಸಲು ಎಂದು ಆಶಿಸುತ್ತಾ, ಈ ಲೇಖನವನ್ನು ಸ್ವಾಮಿಗಳ ಆಡಿದವರೆಗಳಿಗೆ ಸಮರ್ಪಿಸುತ್ತೇನೆ .🙏🙏
ಕೃತಜ್ಞತೆ: ಲೇಖಕಿ ಸೌಮ್ಯಾ ರಾಮಮೋಹನ್ ಅವರಿಗೆ 😇
Photo: At Yathiraja Mutt, Malleswaram on 19.8.2025 by Tiru Sridhara
On the birthday celebration of Sri Sri Yadugiri Yathiraja Jeeyar Swami
- Sowmya RamMohan
ಕಾಮೆಂಟ್‌ಗಳು