ಪಲ್ಲವಿ ಇಡೂರ್
ಪಲ್ಲವಿ ಇಡೂರ್
ಪಲ್ಲವಿ ಇಡೂರ್ ಅವರು ಬರಹಗಾರ್ತಿ, ರಾಜಕೀಯ ವಿಶ್ಲೇಷಣಗಾರ್ತಿ, ಸಮಾಜಮುಖಿ ಕಾರ್ಯಕರ್ತೆ, ಪೌಷ್ಟಿಕ ಆಹಾರತಜ್ಞೆ, ಯೋಗ ಮತ್ತು ದೈಹಿಕ-ಮಾನಸಿಕ ಸದೃಢತೆಗಳ ಮಾರ್ಗದರ್ಶಕಿ ಹೀಗೆ ಬಹುಮುಖಿ ಪ್ರತಿಭಾಶಾಲಿನಿ.
ಆಗಸ್ಟ್ 12, ಪಲ್ಲವಿ ಅವರ ಜನ್ಮದಿನ. ಇವರು ಮೂಲತಃ ಕುಂದಾಪುರ ತಾಲ್ಲೂಕಿನ ಉಪ್ಪುಂದದವರು. ಶಿಕ್ಷಕ ದಂಪತಿಯ ಸುಪುತ್ರಿಯಾದ ಇವರು ಓದಿದ್ದು, ತಂದೆ ತಾಯಿ ಕೆಲಸ ಮಾಡುತ್ತಿದ್ದ ಸರಕಾರಿ ಶಾಲೆಯಲ್ಲಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಂಗಳೂರಿನಲ್ಲಿ ಹಾಸ್ಟೆಲ್ ಜೀವನಕ್ಕೆ ಬಂದಾಗ ಇವರಿಗೆ ಸಂಗಾತಿಯಾಗಿದ್ದು ಪುಸ್ತಕ ಮತ್ತು ಸಂಗೀತ. ಇವರು ಓದಿದ್ದು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಎಂಜಿನಿಯರಿಂಗ್. ಆನಂತರ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಡಿಪ್ಲೋಮಾ ಪಡೆದರು.
ಕೆಲವು ವರ್ಷ ಪ್ರತಿಷ್ಠಿತ ಐಟಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಿದ ಪಲ್ಲವಿ ಅವರು ಮುಂದೆ ಸ್ವಯಂ ಉದ್ಯೋಗ ನಿರ್ವಹಿಸ ತೊಡಗಿದರು. ಓದಿನ ಪ್ರೀತಿಯ ಜೊತೆ ಜೊತೆಗೆ, ಪ್ರಸಿದ್ಧ ನಿಯತಕಾಲಿಕಗಳಲ್ಲಿ, ಅಂತರಜಾಲ ಹಾಗಃ ಸಾಮಾಜಿಕ ಜಾಲ ತಾಣಗಳಲ್ಲಿ ಸಂವಹನಕಾರರಾದರು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತಾದ ವಿಶ್ಲೇಷಣೆ ಮತ್ತು ಚರ್ಚೆಗಳಲ್ಲಿ ಸಹಾ ಇವರು ಎದ್ದು ಕಾಣುತ್ತ ಬಂದಿದ್ದಾರೆ.
ಪಲ್ಲವಿ ಅವರ 'ಜೊಲಾಂಟಾ' ಎಂಬ ಇರೇನಾ ಸ್ಲೆಂಡರ್ ಜೀವನಕಥನ ಕೃತಿ ಅನೇಕ ಮರುಮುದ್ರಣಗಳನ್ನು ಗಳಿಸಿ ಹೆಸರಾಗಿದೆ. 'ಆಗಸ್ಟ್ ಮಾಸದ ರಾಜಕೀಯ ಕಥನ' ಇವರ ಮತ್ತೊಂದು ಕೃತಿ.
ಆಹಾರ ಪೌಷ್ಟಿಕತೆಯ ತಜ್ಞರಾಗಿ, ಸಮಾಜಮುಖಿಯಾಗಿ, ಯೋಗ ಹಾಗೂ ದೇಹ-ಮನಸ್ಸುಗಳ ಸದೃಢತೆಯ ಕುರಿತಾಗಿಯೂ ಮಾಧ್ಯಮಗಳಲ್ಲಿ ಇವರ ಬಹುಮುಖಿ ಪ್ರಸ್ತುತಿಗಳಿವೆ.
ಆತ್ಮೀಯರಾದ ಸಹೃದಯಿ ಸಾಧಕಿ ಪಲ್ಲವಿ ಇಡೂರ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
Happy birthday Pallavi Idoor 🌷🌷🌷

ಕಾಮೆಂಟ್‌ಗಳು