ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮ. ಗ. ಶೆಟ್ಟಿ

 ಮ. ಗ. ಶೆಟ್ಟಿ


ಮ. ಗ. ಶೆಟ್ಟಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಶೋಷಿತ ಬಡ ಜನಾಂಗಗಳ ಪರವಾದ ಹೋರಾಟಗಾರರಾಗಿ, ಸಂಘಟಕರಾಗಿ, ಬರಹಗಾರರಾಗಿ, ಪ್ರಕಾಶಕರಾಗಿ, ಖಾದಿಗ್ರಾಮೋದ್ಯೋಗದ ಹರಿಕಾರರಾಗಿ, ಸಹಕಾರಿ ಚಳವಳಿಗಾರರಾಗಿ ಸೇವೆ ಸಲ್ಲಿಸಿದವರು. ಅವರು ಅಪ್ಪಟ ಗಾಂಧಿವಾದಿಯಾಗಿ ಸದಾ ಸಮಾಜದ ಒಳಿತಿಗಾಗಿ ಬದುಕು ಸಾಗಿಸಿದವರು. 

ಮ. ಗ. ಶೆಟ್ಟಿಯವರು ಕುಮಟಾ ತಾಲೂಕಿನ ಹೆರವಟ್ಟಾ ಗ್ರಾಮದವರು. ಇವರು ಸ್ವಾತಂತ್ರ್ಯ ಹೋರಾಟದ ಮು೦ಚೂಣಿ ನೆಲವಾಗಿ ಚರಿತ್ರೆಯಲ್ಲಿ ದಾಖಲಾಗಿರುವ ಉತ್ತರಕನ್ನಡ ಜಿಲ್ಲೆಯ ಅ೦ಕೋಲ ತಾಲೂಕಿನ ಅಡಿಗೋಣ ಎ೦ಬ ಪುಟ್ಟ ಗ್ರಾಮದಲ್ಲಿ ಗಣಪಯ್ಯ ಪಾಂಡುರ೦ಗ ಶೆಟ್ಟಿ ಮತ್ತು ಭಾಗೀರಥಿ
ದಂಪತಿಯ ಸುಪುತ್ರರಾಗಿ 1919ರ ಸೆಪ್ಟೆಂಬರ್ 6ರ೦ದು ಜನಿಸಿದರು.

ಮ. ಗ. ಶೆಟ್ಟಿ ಅವರು ತಮ್ಮ ಬಾಲ್ಯದಿ೦ದಲೇ ಜನತೆಯ ಕಷ್ಟಕಾರ್ಪಣ್ಯಗಳನ್ನು ಗಮನಿಸುತ್ತ ಬೆಳೆದರು.   ಮುಂದೆ ಅಂಕೋಲ ನಗರದಲ್ಲಿಯ ಸ್ವಾತಂತ್ರ್ಯ ಪೂರ್ವದ ಏಡ್ವರ್ಡ್ (ಇಂದಿನ ಚೈಹಿಂದ್) ಹೈಸ್ಕೂಲಿನಲ್ಲಿ ಮೆಟ್ರಿಕ್ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಸ್ವಾತಂತ್ರ್ಯ ಹೋರಾಟದ ಕಿಚ್ಚು ಅವರಲ್ಲಿ ಕಾಣಿಸಿಕೊಳ್ಳಲಾರಂಭಿಸಿತು.  ಏಡ್ವರ್ಡ್  ಹೈಸ್ಕೂಲಿನ  ಎದುರಿನಲ್ಲಿಯ ಆಟದ ಮೈದಾನದಲ್ಲಿ ನಿರಂತರವಾಗಿ  ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿ ಕಾರ್ಯಕ್ರಮಗಳು, ಹೋರಾಟ ಹಾಗೂ ಪ್ರತಿಭಟನೆಗಳು ಇವರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದವು. 

ಮ. ಗ. ಶೆಟ್ಟಿ ಅವರು ಜೀವನ ನಿರ್ವಹಣೆಗಾಗಿ ಕೆಲಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ನಂತರ ಕ೦ದಾಯ ಇಲಾಖೆಯಲ್ಲಿ ಶಾನುಭೋಗರಾಗಿ ಶಿರಸಿ, ಕುಮಟಾ, ಸಿದ್ದಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಸೇವೆಯನ್ನು ಸಲ್ಲಿಸಿದರು. ಹೀಗೆ  ಸೇವೆಯನ್ನು ಸಲ್ಲಿಸುತ್ತಿದ್ದ ಸಂದರ್ಭದಲ್ಲಿ,  ತೋಟಗಾರರು ಹಾಗೂ ಕೃಷಿಕರು ಬಿಟಿಷರಿಂದ ಅನುಭವಿಸುತ್ತಿದ್ದ ದೌರ್ಜನ್ಯ ಇವರ ಗಮನಕ್ಕೆ ಬಂತು. ತೆರಿಗೆ ವಸೂಲಿಯ ನೆಪದಲ್ಲಿ ಜನತೆಯ ಆಸಿಪಾಸ್ತಿ ಜಪ್ತಿ, ಮನೆ, ತೋಟಗಳ ಹರಾಜಿನಿಂದ ಕುಟುಂಬಗಳು ಬೀದಿ ಪಾಲಾಗುತ್ತಿದ್ದುದು ಇವರ ಮನಸ್ಸಿಗೆ ವೇದನೆ ತಂದಿತು.  ಹೀಗಾಗಿ ತಮ್ಮ ಶಾನುಭೋಗ ಹುದ್ದೆಯನ್ನು ತ್ಯಜಿಸಿ ಹೊರಬಂದರು.  ಅಂದಿನ ಕರನಿರಾಕರಣೆ ಚಳವಳಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಅವರಿಗೆ ಕೌಜಲಗಿ ಹನುಮಂತರಾವ, ರಾಮಕೃಷ್ಣ ಹೆಗಡೆ ಕಡವೆ ಮುಂತಾದ ಅನೇಕ ಹೋರಾಟಗಾರರ ಸಂಪರ್ಕ ಒದಗಿ ಬಂತು.

ಮ. ಗ. ಶೆಟ್ಟಿಯವರು ಅಂದಿನ ಹೋರಾಟದ ಹಿನ್ನೆಲೆಯಲ್ಲಿ  ಜನಜಾಗೃತಿಯನ್ನು ಉಂಟುಮಾಡಲು ಶ್ರಮಿಸಿದರು. ಬ್ರಿಟಿಷರ ವಿರುದ್ಧ ಕರಪತ್ರಗಳನ್ನು ಹೊರತಂದರು ಮತ್ತು ಲೇಖನಗಳನ್ನು ಪ್ರಕಟಿಸಿದರು.  ಹೀಗೆ ಹೋರಾಟಗಾರರಾಗಿ ಬೆಳೆದ ಮ.ಗ. ಶೆಟ್ಟಿ ಅವರು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕೃಷಿ ಕಾರ್ಮಿಕರು, ಬಡ ರೈತರು ಸೇರಿದಂತೆ ಅಸಹಾಯಕರ ಪರ ಅನೇಕ ಹೋರಾಟಗಳನ್ನು ರೂಪಿಸಿದ್ದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿಯೂ ಪ್ರಮುಖರಾಗಿ ಪಾಲ್ಗೊಂಡಿದ್ದರು. ನೆರೆಯ ಗೋವಾ ರಾಜ್ಯದಲ್ಲಿಯ ಗಣಿ ಕಾರ್ಮಿಕರ ವಸತಿಗಾಗಿಯೂ ಹೋರಾಟವನ್ನು ನಡೆಸಿದ್ದರು. ಹೊರನಾಡಿನಲ್ಲಿ ಕನ್ನಡ ಶಾಲೆಗಳ ಸ್ಥಾಪನೆಗೆ ಕಾರಣರಾದರು. ನಾನಾ ಕಡೆಗಳಲ್ಲಿ ನಾಡಹಬ್ಬ ಮತ್ತು ವಸಂತೋತ್ಸವಗಳನ್ನು ಆಚರಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯ ಪ್ರಚಾರದ
ಕೆಲಸವನ್ನು ಕೈಗೊಂಡರು.

ಮ. ಗ. ಶೆಟ್ಟಿಯವರು ಉತ್ತರಕನ್ನಡ ಜಿಲ್ಲೆಯ ಮಗ ಎಂದು ಜನತೆಯಿಂದ ಕರೆಸಿಕೊಂಡಿದ್ದರೂ ಅವರ ಕಾರ್ಯಕ್ಷೇತ್ರ ಅಲ್ಲಿಗೆ ಮಾತ್ರಾ ಸೀಮಿತವಾಗಿರಲಿಲ್ಲ. ಅವರು ತಮ್ಮ ಹೋರಾಟ ಹಾಗೂ ಕಾರ್ಯ ಚಟುವಟಿಕೆಗಳ ಮೂಲಕ ನಾಡಿನಾದ್ಯಂತ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದರು.  ಮಹಾತ್ಮ ಗಾಂಧೀಜಿಯವರ ತತ್ವ ಹಾಗೂ ಸಿದ್ಧಾಂತಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸದಾ ಖಾದಿಧಾರಿಯಾಗಿ ಬಾಳಿದರು. ಮುಂಜಾನೆ ಎದ್ದು ಹೊರಟರೆ ಯಾವುದೇ ವಾಹನವನ್ನವಲಂಬಿಸದೆ ನಡಿಗೆಯಲ್ಲೇ ಸಾಗುತ್ತಿದ್ದರು. ಪಾದಚಾರಿಯಾಗಿ ದೂರ ದೂರದ ಹಳ್ಳಿಗಳಿಗೆ ತೆರಳುತ್ತಿದ್ದರು. ಅಲ್ಲಿ ಜನತೆಯ ಸಂಕಷ್ಟಗಳನ್ನು ಆಲಿಸಿ, ಪರಿಹಾರವನ್ನು ಸೂಚಿಸುತ್ತಿದ್ದರು. ಅಗತ್ಯವಾದರೆ ಹೋರಾಟವನ್ನು ರೂಪಿಸಿ ಆಡಳಿತಶಾಹಿಯ ವಿರುದ್ಧ ಧ್ವನಿಯನ್ನು ಎತ್ತುತ್ತಿದ್ದರು. ಅವರಿಗೆ ಭಾಷಣ ಮಾಡಲು ಕಟ್ಟೆ ಅಥವಾ ಯಾವುದೇ ವೇದಿಕೆಯ ಅವಶ್ಯಕತೆಯೇ ಇರಲಿಲ್ಲ. ಹಳ್ಳಿಯ ಮನೆಯಂಗಳದಲ್ಲಿಯೇ ಕುಳಿತು ಸಂಘಟನೆಯಲ್ಲಿ ತೊಡಗುತ್ತಿದ್ದರು. 

ಮ. ಗ. ಶೆಟ್ಟಿಯವರ ಬದುಕು ಕೇವಲ ಹೋರಾಟಕ್ಕಷ್ಟೆ ಸೀಮಿತವಾಗಿರಲಿಲ್ಲ. ಅವರು ಪತ್ರಕರ್ತರಾಗಿ, ಸಾಹಿತಿಗಳಾಗಿ ಮಹತ್ವದ ಸೇವೆಯನ್ನು ಸಲ್ಲಿಸಿದರು. ಆ ಕಾಲದ ಪ್ರಮುಖ ವಾರಪತ್ರಿಕೆಯಾದ 'ನಾಗರಿಕ ಪತ್ರಿಕೆ'ಯ ಸಂಪಾದಕರಾಗಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ದಿಟ್ಟ ಪತ್ರಕರ್ತರಾಗಿ ಹೆಸರಾಗಿದ್ದರು. ಸಾಹಿತಿಯಾಗಿ ಕಥೆ, ಕಾದಂಬರಿ ಹೀಗೆ ಅನೇಕ ಪ್ರಕಾರಗಳಲ್ಲಿ ಬರೆದಿದ್ದರು.  ಲೇಖಕರ ಸಂಘವನ್ನು ಸ್ಥಾಪಿಸಿ ಪರ್ಣಕುಟಿ ಪ್ರಕಾಶನದ ಮೂಲಕ 53ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದರು. ಹಿರಿಯ ಸಾಹಿತಿಗಳಾದ ಗೌರೀಶ ಕಾಯ್ಕಿಣಿ, ದ. ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ. ಸೂರ್ಯನಾಥ ಕಾಮತ್ ಮುಂತಾದ ಅನೇಕ ಗಣ್ಯರೊಡನೆ ಆಪ್ತ ಒಡನಾಟವನ್ನು ಹೊಂದಿದ್ದರು.

ಮ. ಗ. ಶೆಟ್ಟಿ ಅವರು ಬೆಂಗಳೂರಿನ ಬಿ. ಎನ್‌. ಗುಪ್ತ ಸ್ಮಾರಕ ಗ್ರಂಥಮಾಲೆಯ ಸಂಚಾಲಕರಾಗಿ, ಮುಂಬಯಿ ವೈಶ್ಯ ಸಂಘದ ಉಪಾಧ್ಯಕ್ಷರಾಗಿ, ಮಡಗಾಂವ ಗೋಮಾಂತಕ ಗ್ರಾಮೋದ್ಯೋಗ ಸಮಿತಿಯ ಸಂಸ್ಥಾಪಕರಾಗಿ, ಕರ್ನಾಟಕ ಖಾದಿ ಮತ್ತು  ಗ್ರಾಮೋದ್ಯೋಗ ಅಭಿವೃದ್ಧಿ ಮಂಡಲಿಯಲ್ಲಿ ಅಧಿಕಾರಿಯಾಗಿ, ಬೆ೦ಗಳೂರಿನ ನಾರ್ಥ್ ಕೆನರಾ  ಅಸೋಸಿಯೇಶನ್ನಿನ ಸಂಚಾಲಕರಾಗಿ ಹೀಗೆ ಅನೇಕ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿದರು. ಅನೇಕ ಕಡೆಗಳಲ್ಲಿ ಗ್ರಾಮ ಸೇವಾಸಮಿತಿಗಳ ಸ್ಥಾಪನೆ ಹಾಗೂ ಖಾದಿ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಕಾರಣರಾದರು.

ಮ.ಗ. ಶೆಟ್ಟಿ ಅವರಿಗೆ 1980 ರಲ್ಲಿ ಸಮಾಜ ಸೇವೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.

ಮ.ಗ.ಶೆಟ್ಟಿ ಅವರು 1997 ವರ್ಷದ ಏಪ್ರಿಲ್ 22ರಂದು ಈ ಲೋಕವನ್ನಗಲಿದರು. ಆ ಮಹಾನ್ ಚೇತನಕ್ಕೆ ನಮನ 🌷🙏🌷

ಕೃತಜ್ಞತೆಗಳು:Swarna Jayaprakash 🌷🙏🌷

In memory of Great Freedom fighter, Gandhian, writer and activist Ma. Ga. Shetty 🌷🙏🌷 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ