ಎನ್.ಆರ್.ನಾಯಕ
ಎನ್.ಆರ್.ನಾಯಕ ನಮನ 🌷🙏🌷
ಶಿಕ್ಷಣ. ಜಾನಪದ, ಸಾಹಿತ್ಯ, ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಹೆಸರಾಗಿದ್ದ ಡಾ. ಎನ್. ಆರ್. ನಾಯಕ ಅವರು ಇಂದು ಈ ಲೋಕವನ್ನಗಲಿದ್ದಾರೆ.
ನಾರಾಯಣ ರಾಮ ನಾಯಕ ಅವರು 1935ರ ಜೂನ್ 28 ರಂದು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ಜನಿಸಿದರು. ತಂದೆ ರಾಮನಾಯಕರು. ತಾಯಿ ದೇವಮ್ಮ. ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ಯ್ರ ಹೋರಾಟದಲ್ಲಿ ತೊಡಗಿಕೊಂಡ ಇವರು ವಿದ್ಯಾಭ್ಯಾಸದಲ್ಲಿ ಉತ್ತಮ ಪರಿಶ್ರಮದಿಂದ ಬಿ.ಎ. ಮತ್ತು ಎಂ.ಎ. ಸಾಧನೆ ಮಾಡಿದರು. 'ಕಾರವಾರ ಜಿಲ್ಲೆಯ ಜನಪದ ಗೀತೆಗಳು' ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಗಳಿಸಿದರು.
ಹೊನ್ನಾವರದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ನಾಯಕರು ನಂತರ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಜಾನಪದ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ನಾಯಕರು ಸುಗ್ಗಿ ಕುಣಿತ, ಗುಮಟೆ ಪಾಂಗು, ಯಕ್ಷಗಾನ ಕಲೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ನಾಯಕರು ತಮ್ಮ ಜಾನಪದ ಪ್ರಕಾಶನವನ್ನು ಆರಂಭಿಸಿದ್ದಲ್ಲದೆ, 1983ರಲ್ಲಿ ‘ಜಾನಪದ ದೀಪಾರಾಧನೆ’ ಎನ್ನುವ ಸಾಂಸ್ಕೃತಿಕ ಚಟುವಟಿಕೆಯನ್ನು ಆರಂಭಿಸಿ ಪ್ರತಿವರ್ಷ ನಡೆಸುತ್ತಿದ್ದರು. ಹೊನ್ನಾವರ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಅರವಿಂದ ಯಕ್ಷಗಾನ ಸಂಘದ ಅಧ್ಯಕ್ಷರಾಗಿ ಹೀಗೆ ಹಲವಾರು ಸ್ಥಾನಗಳನ್ನು ಅಲಂಕರಿಸಿದ್ದರು. ವಿಶ್ವವಿದ್ಯಾಲಯ, ಅಕಾಡೆಮಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಮಿತಿಗಳಲ್ಲಿ ಸದಸ್ಯರಾಗಿದ್ದರು. ಉತ್ತರ ಕನ್ನಡ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ, ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ 27ನೇ ಜಾನಪದ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿದ್ದರು. ಆಕಾಶವಾಣಿಯಲ್ಲಿ ಅನೇಕ ರೂಪಕ, ಭಾಷಣಗಳ ಪ್ರಸಾರ ಮಾಡಿದ್ದರು. ನಾಟಕೋತ್ಸವ, ನಾಟಕ ತರಬೇತಿ ಶಿಬಿರ, ಜಾನಪದ ಕಮ್ಮಟ, ಸೌಹಾರ್ದತಾ ಸಮ್ಮೇಳನಗಳನ್ನು ಏರ್ಪಡಿಸಿ ಹೆಸರಾಗಿದ್ದರು.
ಡಾ. ಎನ್.ಆರ್.ನಾಯಕ ಅವರ ಪ್ರಕಟಿತ ಕೃತಿಗಳಲ್ಲಿ ಗಾಮೊಕ್ಕಲ ಮಹಾಭಾರತ, ಹಾಲಕ್ಕಿ ಒಕ್ಕಲಿಗರು, ವಿಮೋಚನೆ(ನಾಟಕ ಕೃತಿ), ಚಿಂತನ ತರಂಗ, ಕೋಪ ನರಕದ ಬಾಗಿಲು, ಹುತ್ತವ ಬಡಿದರೆ ಹಾವು ಸಾಯಬಲ್ಲದೆ, ನ್ಯಾಯಾನ್ಯಾಯ ವಿವೇಚನೆ, ಬಾನುಲಿ ಅಲೆಗಳು, ಶರಣರ ಬೆಳಕಿನ ಪಥ, ಜಾನಪದ ಜಗಲಿಯಲ್ಲಿ(ಆತ್ಮಕಥನ), ಕಲಿಕೆಯ ಗುಡಿಲಲ್ಲಿ(ಅನುಭವ ಕಥನಗಳು), ಗಂಗೋತ್ರಿ, ಕರ್ನಾಟಕ ಬುಡಕಟ್ಟುಗಳು, ಗುಣ ಗೌರವ, ನಿಲಾಂಜನ, ಸೌಹಾರ್ದ ಸಂಗಮ (ಸಂಪಾದಕತ್ವದ ಕೃತಿಗಳು), ಕಾದು ಅರಳು, ಹಂಸಪಥ, ಕಾಡು ಹಾಡು, ನೂರು ಪದ ನೂರು ಹದ,ಮುರುಡ ಅರಳು, ನಾಡವರ ಸಾಂಸ್ಕೃತಿಕ ಅಧ್ಯಯನ, ಚಂದ್ರಬಿಂಬ ಸಪ್ಪಗೆ, ನನ್ನ ಅನುಭವಕ್ಕೆ ಸಿಕ್ಕಿದ ಜಾನಪದ, ಮಾರ್ಗ ಕಾವ್ಯ ಕಿರಣ, ಕನಸು-ಕವನ, ಅಷ್ಟಾವಂಕ-ಯಶೋಧರ, ಬದುಕು ಮಹಾಕಾವ್ಯ ಮುಂತಾದವು ಸೇರಿವೆ.
ನಾಯಕರ ‘ಕೂಸಾಯ್ತು ನಮ್ಮ ಕೊಮರಾಗೆ’ (1983), ಗಾಮೊಕ್ಕಲ ಮಹಾಭಾರತ (1992), ಸುಗ್ಗಿ ಹಬ್ಬ(1999) ಕೃತಿಗಳಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿಗಳು ಸಂದಿದ್ದವು. ಇವರ ‘ಹೇಳ್ತೇವೋ ಗುಮ್ಟೆ ಪದನಾವಾ’, 'ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು’, ‘ಜೇಂಗೊಡ’, ‘ಕನ್ನಡ ಬಯಲಾಟ ಪರಂಪರೆ’ ಕೃತಿಗಳು ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕಗಳಾಗಿ ಮನ್ನಣೆ ಪಡೆದಿವೆ.
ನಾಯಕರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ’(1993), ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ(2003), ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ, ದೆಹಲಿಯ ಕರ್ನಾಟಕ ಸಂಘದಿಂದ ಪ್ರಶಸ್ತಿ, ಗೊರುಚ ಪ್ರಶಸ್ತಿ, ವಿ.ಸಿ.ಸನ್ಮಾನ, ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿಯಿಂದ ಜಿ. ನಾರಾಯಣ ಅಡಿಗ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ದೀಪಾರಾಧನೆ ಮತ್ತು ಕಲಶ ನಾಯಕರಿಗೆ ಸಂದ ಅಭಿನಂದನಾ ಗ್ರಂಥಗಳು. ಅವರ ಬದುಕು ಬರಹ ಕುರಿತ ಎಂ.ಫಿಲ್. ಪ್ರಬಂಧ ಪ್ರಕಟವಾಗಿವೆ.
ಜಾನಪದ ಪ್ರಕಾರದಲ್ಲಿ ಅನೇಕ ಗ್ರಂಥಗಳನ್ನು ರಚಿಸಿ ಪ್ರಕಟಿಸಿರುವುದೇ ಅಲ್ಲದೆ ಹಿಂದುಳಿದ ಬುಡಕಟ್ಟು ಜನಾಂಗಗಳ ಸಾಹಿತ್ಯಕಲೆ ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನಾತ್ಮಕ ಗ್ರಂಥಗಳನ್ನು ಸಹ ರಚಿಸಿದ್ದರು. ಪತ್ರಿಕೆಗಳಲ್ಲಿ ಸಂಸ್ಕೃತಿ ಕುರಿತು ನೂರಾರು ಲೇಖನಗಳು ಪ್ರಕಟವಾಗಿದ್ದವು. ನಾಯಕ ಅವರು ಸಂಪಾದಿಸಿ ಪ್ರಕಟಿಸಿರುವ ಹಲವಾರು ಜಾನಪದ ಕತೆ, ಕಾವ್ಯ, ಸಂಸ್ಕೃತಿ ಚಿತ್ರಗಳು ಕನ್ನಡಕ್ಕೆ ಮಹತ್ತರ ಕೊಡುಗೆಯಾಗಿದೆ. ಜಾನಪದ ಶಿಬಿರ, ವಿಚಾರ ಸಂಕಿರಣ, ಕಲಾ ಮೇಳಗಳ ಸಂಘಟಕರಾಗಿ, ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಪ್ರವರ್ತಕರಾಗಿ ಇವರು ಮಾಡಿದ ಸೇವೆ ಅಪಾರವಾದದ್ದು.
ಡಾ. ಎನ್.ಆರ್.ನಾಯಕ ಅವರು 2025ನೇ ಸೆಪ್ಟೆಂಬರ್ 14ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ.
Respects to departed soul Great Scholar Dr. N. R. Nayak 🌷🙏🌷

ಕಾಮೆಂಟ್‌ಗಳು