ಮೀರಾ ರಾಜಾರಾಮ್
ಮೀರಾ ರಾಜಾರಾಮ್
ಡಾ. ಮೀರಾ ರಾಜಾರಾಮ್ ಪ್ರಾಣೇಶ್ ಅವರು ಸಂಗೀತ ಕಲಾವಿದರಾಗಿ, ಸಂಗೀತಜ್ಞರಾಗಿ, ಸಂಶೋಧಕರಾಗಿ ಮತ್ತು ಗುರುವಾಗಿ ಹೆಸರಾಗಿದ್ದಾರೆ.
ಅಕ್ಟೋಬರ್ 14, ಮೀರಾ ಅವರ ಜನ್ಮದಿನ. ಇವರು ತಮ್ಮ 7 ನೇ ವಯಸ್ಸಿನಲ್ಲಿ ವಿದ್ವಾನ್ ಎಲ್. ಶೇಷಗಿರಿ ರಾವ್ ಅವರಿಂದ ವೀಣೆ ಕಲಿಯಲು ಪ್ರಾರಂಭಿಸಿದರು. ನಂತರ ವಿದುಷಿ ಸುಧಾ ವಿ. ಮೂರ್ತಿ ಮತ್ತು ವಿದುಷಿ ರೋಹಿಣಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಗಾಯನ ಸಂಗೀತದಲ್ಲಿ ಸಾಧನೆಯನ್ನು ಮಾಡಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಪಡೆದ ನಂತರ ಕರ್ನಾಟಕ ಸಂಗೀತದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ವಿದ್ವಾನ್ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಮತ್ತು ಪ್ರೊ. ರಾಜಲಕ್ಷ್ಮಿ ತಿರುನಾರಾಯಣನ್ ಅವರ ಮಾರ್ಗದರ್ಶನದಲ್ಲಿ 'ದಿ ಸ್ಪ್ಲೆಂಡರ್ ಆಫ್ ಡಾ. ಎಲ್. ಮುತ್ತಯ್ಯ ಭಾಗವತರ್' ಎಂಬ ಸಂಶೋಧನಾ ಪ್ರಬಂಧಕ್ಕೆ ಎಂ.ಫಿಲ್ ಪದವಿ ಗಳಿಸಿದರು. ಶ್ರೀ ಬಿ.ವಿ.ಕೆ. ಶಾಸ್ತ್ರಿ ಮತ್ತು ಡಾ. ಬಿ.ಎಂ. ಜಯಶ್ರೀ ಅವರ ಮಾರ್ಗದರ್ಶನದಲ್ಲಿ ಒಡೆಯರ್ ರಾಜವಂಶದ (ಕ್ರಿ.ಶ. 1638-1947) ಸಂಗೀತ ಸಂಯೋಜಕರ ಕುರಿತ ಸಂಶೋಧನಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಗಳಿಸಿದರು. ಇವರು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ಸಂಶೋಧನಾ ಫೆಲೋಶಿಪ್ ಪಡೆದು ಡಾ. ಆರ್. ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ತಮ್ಮ ಯೋಜನೆಯನ್ನು ಪೂರ್ಣಗೊಳಿಸಿದರು.
ಮೀರಾ ರಾಜಾರಾಮ್ ಅವರು ತಮ್ಮ ಸಂಗೀತ ಕಚೇರಿಗಳಿಗಾಗಿ ವ್ಯಾಪಕವಾಗಿ ಹೆಸರಾಗಿದ್ದಾರೆ. ಸಂಗೀತದ ಶೈಕ್ಷಣಿಕ/ಸಂಶೋಧನಾ ಭಾಗದಲ್ಲಿ ತೀವ್ರ ಆಸಕ್ತಿ ಹೊಂದಿರುವ ಇವರು ಅನೇಕ ವಿದ್ವತ್ಪೂರ್ಣ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಪ್ರಸ್ತುತ, ಅವರು ವನಮಾಲಾ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್‌ನಲ್ಲಿ ಕರ್ನಾಟಕ ಗಾಯನಕ್ಕಾಗಿ ತರಗತಿಗಳನ್ನು ನಡೆಸುತ್ತಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಜೈನ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಪ್ರದರ್ಶನ ಕಲೆಗಳ ವಿಭಾಗದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಗೀತಶಾಸ್ತ್ರವನ್ನು ಕಲಿಸುತ್ತಿದ್ದಾರೆ. ಮೀರಾ ಅವರು ಎಂ.ಫಿಲ್ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಯುಜಿಸಿ ಅನುಮೋದಿತ ಮಾರ್ಗದರ್ಶಿಯೂ ಆಗಿದ್ದು, ಇವರ ಮಾರ್ಗದರ್ಶನದಲ್ಲಿ ಅನೇಕರು ಎಂಫಿಲ್ ಮತ್ತು ಪಿಎಚ್.ಡಿ. ಗಳಿಸಿದ್ದಾರೆ. ಭಕ್ತಿಯಾನ ಮತ್ತು ಶ್ರೀ ಚಕ್ರ ದರ್ಶನ ಚಿತ್ರಕಥೆ ಬರೆಯುವಲ್ಲಿ ಮತ್ತು ನಿರ್ದೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದ್ದಾರೆ.
ಡಾ. ಮೀರಾ ಅವರ ಡಾಕ್ಟರೇಟ್ ಪ್ರಬಂಧವು "ಒಡೆಯರ್ ರಾಜವಂಶದ ಅವಧಿಯಲ್ಲಿ ಸಂಗೀತ ಸಂಯೋಜಕರು" ಎಂಬ ಕೃತಿಯಾಗಿ ಪ್ರಕಟಗೊಂಡಿದೆ. "ಹರಿಕೇಶನಲ್ಲೂರ್ ಡಾ. ಎಲ್. ಮುತ್ತಯ್ಯ ಭಾಗವತರ್- ಎ ಬಯಾಗ್ರಫಿ" ಎಂಬ ಕೃತಿ ಸಹ ಪ್ರಕಟಿಸಿದ್ದಾರೆ . ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸಂಗೀತ ಮತ್ತು ಸಂಗೀತ ಸಾಧಕರ ಕುರಿತಾಗಿ ಅನೇಕ ಪ್ರಕಟಣೆಗಳನ್ನು ಮಾಡಿದ್ದಾರೆ. ಅನೇಕ ಸಾಕ್ಷಚಿತ್ರಗಳು, ದೃಶ್ಯ - ಶ್ರವ್ಯ ಮಾಧ್ಯಮಗಳ ತಯಾರಿಕೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.
ಮೀರಾ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಮತ್ತು ಅಕಾಡೆಮಿಯ ಪ್ರಕಟಣೆಯಾದ 'ನಾದ ನೃತ್ಯ’ದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ಗಾನಕಲಾ ಪರಿಷತ್ತಿನ ಜಂಟಿ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹಲವು ರಾಜ್ಯ ಮಟ್ಟದ ಸಂಗೀತ ಸಮ್ಮೇಳನಗಳ ಆಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನವದೆಹಲಿಯ 'ಇಗ್ನೋ'ದ ತಜ್ಞರ ಕೋರ್ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಮೀರಾ ರಾಜಾರಾಮ್ ಅವರ ಹೆಸರಾಂತ ಸಂಯೋಜನೆಗಳಲ್ಲಿ ಶ್ರೀಮನ್ನಾರಾಯಣನ ಕುರಿತಾದ 'ಭಕ್ತಿಯಾನ', ಅಪರೂಪದ ಜತಿ ಸ್ವರಗಳು ಮತ್ತು ಸ್ವರಜತಿಗಳನ್ನು ಒಳಗೊಂಡ 'ಸ್ವರ ಮಾಧುರಿ' ಮುಂತಾದವು ಸೇರಿವೆ.
ಶಂಕರ ಚಾನೆಲ್‌ನಲ್ಲಿ ಕರ್ನಾಟಕ ಸಂಗೀತ ಸಂಯೋಜನೆಗಳಲ್ಲಿ ಯಂತ್ರ- ಮಂತ್ರ- ತಂತ್ರ ಕುರಿತಾದ ಚರ್ಚೆಯಲ್ಲಿಯೂ ಪಾಲ್ಗೊಂಡಿದ್ದಾರೆ.
ಮೀರಾ ರಾಜಾರಾಮ್ ಅವರಿಗೆ ಅಂತರರಾಷ್ಟ್ರೀಯ ಸಂಗೀತ ಮತ್ತು ಕಲಾ ಸಂಘದಲ್ಲಿ ಜಯ ಚಾಮರಾಜ ಒಡೆಯರ್ ಅವರ ಸಹೋದರಿ ರಾಣಿ ವಿಜಯಾದೇವಿ ಅವರಿಂದ ಸನ್ಮಾನ; ವೀಣಾ ಶಾಮಣ್ಣ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಮೈಸೂರಿನಲ್ಲಿ ತಂಜಾವೂರಿನ ರಾಜಕುಮಾರ ಹಿಸ್ ಹೈನೆಸ್ ಶಿವಾಜಿ ರಾಜಾ ಟಿ. ಭೋಸ್ಲೆ ಅವರಿಂದ ಸನ್ಮಾನ; ಬೆಂಗಳೂರಿನ ಅನನ್ಯ ಜಿಎಂಎಲ್ ಸಾಂಸ್ಕೃತಿಕ ಅಕಾಡೆಮಿಯಿಂದ ಶಾಸ್ತ್ರ ಕೌಸ್ತುಭ ಪ್ರಶಸ್ತಿ; ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್ತಿನ 5ನೇ ವಾರ್ಷಿಕ ಸಂಗೀತ ಸಮ್ಮೇಳನದಲ್ಲಿ ಗಾನಕಲಾ ಸುವರ್ಣ ಪ್ರಶಸ್ತಿ; ಸ್ವರ-ಲಿಪಿ ಪ್ರತಿಷ್ಠಾನದಿಂದ ಬೆಂಗಳೂರು ಗಾಯನ ಸಮಾಜ ಸ್ಥಾಪಿಸಿರುವ ಸ್ವರ ಭೂಷಣಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಸಾಧಕರಾದ ಡಾ. ಮೀರಾ ರಾಜಾರಾಮ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to Musician Dr. Meera Rajaram 🌷🙏🌷

ಕಾಮೆಂಟ್‌ಗಳು