ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋವಿಂದರಾವ್


 ಜಿ. ಕೆ. ಗೋವಿಂದರಾವ್


ಪ್ರೊ. ಜಿ. ಕೆ. ಗೋವಿಂದರಾವ್ ಅವರು ಸಾಹಿತಿಗಳಾಗಿ, ಪ್ರಾಧ್ಯಾಪಕರಾಗಿ, ರಂಗಕರ್ಮಿಗಳಾಗಿ, ಚಲನಚಿತ್ರಗಳಲ್ಲಿನ ಪಾತ್ರಧಾರಿಗಳಾಗಿ ಮತ್ತು ಚಿಂತಕರಾಗಿ ಹೆಸರಾಗಿದ್ದವರು.

ಜಿ.ಕೆ. ಗೋವಿಂದ ರಾವ್ 1937ರ ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರು. ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಅವರು ಮತ್ತು ಎಚ್. ಎಸ್. ವೆಂಕಟೇಶಮೂರ್ತಿ ಅವರು ಒಂದೇ ಅಧ್ಯಾಪಕರ ಕೊಟಡಿಯಲ್ಲಿ ಇರುವುದನ್ನು ಹಲವು ಬಾರಿ ನೋಡಿದ್ದೆ.  ನೇರ, ಸುಸ್ಪಷ್ಟ, ಸಮಾಜವಾದದ, ನಿರ್ಭಿಡತೆಯ ಅಭಿಪ್ರಾಯ ಧ್ವನಿ ಅವರದಾಗಿತ್ತು.

ಜಿ.ಕೆ. ಗೋವಿಂದ ರಾವ್ ಅವರಿಗೆ ಸಾಹಿತ್ಯವಲ್ಲದೆ ರಂಗಭೂಮಿ, ಸಿನಿಮಾರಂಗ ಮತ್ತು ಕಿರುತೆರೆಯ ಕಲಾಲೋಕದೊಂದಿಗೆ ಒಡನಾಟ ಇತ್ತು.  ಸಮಕಾಲೀನ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವನ್ನು ಪ್ರಕಟಿಸುವುದು ಅವರಿಗೆ ಸದಾ ಆದ್ಯತೆಯ ವಿಷಯವಾಗಿತ್ತು. 

ಪುಟ್ಟಣ್ಣ ಕಣಗಾಲರ ಕಥಾ ಸಂಗಮದ 'ಹಂಗು', ಕಾಲೇಜು ರಂಗ, ಗ್ರಹಣ, ಕಾನೂರು ಹೆಗ್ಗಡತಿ, ಡಾ.ಕೃಷ್ಣ, ಭಾರತ್ 2000, ಬಂಧನ, ಮಿಥಿಲೆಯ ಸೀತೆಯರು, ರೇ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.  ಮಾಲ್ಗುಡಿ ಡೇಸ್, ಮಹಾಪರ್ವ ಮುಂತಾದ ಕಿರುತೆರೆಯ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು.

ಜಿ.ಕೆ. ಗೋವಿಂದ ರಾವ್ ಅವರ ಕೃತಿಗಳಲ್ಲಿ ಈಶ್ವರ ಅಲ್ಲಾ  ಎಂಬ ಕಿರುಕಾದಂಬರಿ, ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು), ಆಲಯ ಬಯಲು ಮುಂತಾದವು ಸೇರಿವೆ.

ಜಿ.ಕೆ. ಗೋವಿಂದ ರಾವ್ ಅವರು 2021ರ ಅಕ್ಟೋಬರ್ 15ರಂದು ನಿಧನರಾದರು.  ಅವರ ಕಣ್ಣುಗಳನ್ನು ಅವರ ಇಚ್ಛೆಯಂತೆ ದಾನಮಾಡಲಾಯಿತು.

On Remembrance Day Prof. G. K. Govinda Rao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ