ಅಪರ್ಣಾ
ಅಪರ್ಣಾ
ಅಚ್ಚಕನ್ನಡದ ಭವ್ಯ ನಗೆಮೊಗದ ನಿರೂಪಕಿ, ರಂಗಭೂಮಿ-ಕಿರುತೆರೆ-ಚಲನಚಿತ್ರಗಳ ಕಲಾವಿದೆ, ಆಪ್ತ ಸ್ನೇಹಜೀವಿಯಾಗಿ, ಸರಳ ಸುಂದರ ವ್ಯಕ್ತಿತ್ವದವರಾಗಿ ಎಲ್ಲರಿಗೂ ಪ್ರಿಯರಾಗಿದ್ದ ಅಪರ್ಣಾ ಅವರ ಜನ್ಮದಿನದ ನೆನಪಿನ ದಿನವಿದು. ಅವರು ಜನಿಸಿದ್ದು 1965ರ ಅಕ್ಟೋಬರ್ 17ರಂದು.
1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ 'ಮಸಣದ ಹೂವು' ಚಿತ್ರದಿಂದ ಬೆಳಕಿಗೆ ಬಂದ ಅಪರ್ಣಾ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದರು. ನಿರೂಪಕಿಯಾಗಂತೂ ಕನ್ನಡಿಗರೆಲ್ಲರ ಮನೆ ಮನದ ಮಾತಾಗಿದ್ದರು.
ಅಪರ್ಣಾ 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಅನೇಕ ಕಾರ್ಯಕ್ರಮಗಳನ್ನು ನಿರೂಪಿಸಿದರು. ನಂತರ ಭಾರತ ಸರ್ಕಾರದ ವಿವಿಧ ಕಾರ್ಯಕ್ರಮದ ನಿರೂಪಣೆ, ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. ಅಪರ್ಣಾ ಹಲವಾರು ನಾಟಕಗಳಲ್ಲೂ ನಟಿಸಿದ್ದರು.
2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದ ಅಪರ್ಣಾ ರಿಯಾಲಿಟಿ ಶೋಗಳಲ್ಲೂ ಇದ್ದರು. ಸೃಜನ್ ಲೋಕೇಶ್ ನೇತೃತ್ವದ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ವರಲಕ್ಷ್ಮಿಯಾಗಿ ಹಾಸ್ಯ ನಟನೆಯಲ್ಲೂ ಗೆದ್ದಿದ್ದರು.
ಬಹುಮುಖಿ ಪ್ರತಿಭೆಯ ಅಪರ್ಣಾ 'ಕನ್ನಡಪ್ರಭ' ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಮೂಲಕ ಓದುಗರಿಗೂ ಹತ್ತಿರವಾಗಿದ್ದರು.
ಮಲ್ಲೇಶ್ವರದಲ್ಲಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಹಜವಾಗಿ ನಗೆಮೊಗದಿಂದ ಓಡಿಯಾಡುತ್ತಿದ್ದ ಅಪರ್ಣಾ ಸದಾ ನನ್ನ ನೆನಪಲ್ಲಿರುವವರು.
ಅಪರ್ಣಾ ಬಗ್ಗೆ ಬರೆಯಬೇಕು ಎಂದು ಬಹಳ ದಿನಗಳಿಂದ ಆಶಿಸಿದರೂ ಬರೆದಿರಲಿಲ್ಲ. ಅವರ ಬಗ್ಗೆ ನಾನು ಮೊದಲು ಬರೆದದ್ದು 2024ರ ಜುಲೈ 11ರಂದು ಅವರು ಈ ಲೋಕವನ್ನಗಲಿದ ದಿನ. ಹೀಗೆ ಬರೆಯುವ ದಿನ ಬರುತ್ತದೆ ಎಂದು ಖಂಡಿತ ಎಣಿಸಿರಲಿಲ್ಲ.
ಮಿಸ್ ಯು ಅಪರ್ಣಾ... ಕನ್ನಡದ ಹುಡುಗಿ ಕಳೆದು ಹೋದಾಗ ಇಂಗ್ಲಿಷ್ ಪದ ಬಳಕೆ ಅಪರ್ಣಾಗೆ ಒಪ್ಪಿಗೆಯಗುತ್ತಿರಲಿಲ್ಲ! ಏನು ಮಾಡೋದು ಅಪರ್ಣಾ ನಿಮ್ಮನ್ನು ನಾವು ಕಳೆದುಕೊಂಡಿದ್ದೇವೆ. 🥲🥲🥲
On the birth anniversary of Great Television Presenter, Television and Cinema Artiste Aparna🌷🙏🌷
ಒ
ಕಾಮೆಂಟ್‌ಗಳು