ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಪರ್ಣಾ ಸೇನ್


 ಅಪರ್ಣಾ ಸೇನ್


ಅಪರ್ಣಾ ಸೇನ್ ಚಲನಚಿತ್ರರಂಗದ ಅಸಾಮಾನ್ಯ ಸಾಧಕಿ.  ಅವರು ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ, ಚಿತ್ರಕಥೆಗಾರ್ತಿ ಮತ್ತು ನಟಿ. ಅವರು ಒಂಬತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಆರು ಫಿಲ್ಮ್‌ಫೇರ್ ಈಸ್ಟ್ ಪ್ರಶಸ್ತಿಗಳು ಮತ್ತು ಹದಿಮೂರು ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳೇ ಅಲ್ಲದೆ,  ನಟಿ ಮತ್ತು ಚಲನಚಿತ್ರ ನಿರ್ಮಾಪಕಿಯಾಗಿ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಕಲಾ ಕ್ಷೇತ್ರದಲ್ಲಿನ ಕೊಡುಗೆಗಾಗಿ, ಅವರಿಗೆ
ಭಾರತ ಸರ್ಕಾರದ  ಪದ್ಮಶ್ರೀ ಗೌರವ ಸಂದಿದೆ. 

ಅಪರ್ಣಾ ಸೇನ್ 1945ರ ಅಕ್ಟೋಬರ್ 25 ರಂದು ಕೋಲ್ಕತ್ತಾದ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಅವರ ಕುಟುಂಬದವರು ಮೂಲತಃ ಈಗಿನ ಬಾಂಗ್ಲಾ ದೇಶದ ಭಾಗವಾಗಿರುವ ಚಿತ್ತಗಾಂಗ್ ಜಿಲ್ಲೆಯ ಕಾಕ್ಸ್ ಬಜಾರ್‌ನಿಂದ ಬಂದವರು. ಅವರ ತಂದೆ ಅನುಭವಿ ವಿಮರ್ಶಕ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದ  ಚಿದಾನಂದ ದಾಸ್‌ಗುಪ್ತ. ಅವರ ತಾಯಿ ಸುಪ್ರಿಯಾ ದಾಸ್‌ಗುಪ್ತ ವೇಷಭೂಷಣ ವಿನ್ಯಾಸಕಿಯಾಗಿದ್ದು, ಪತಿ ಚಿದಾನಂದ ದಾಸಗುಪ್ತ ಅವರ ನಿರ್ದೇಶನದ ಅಮೋದಿನಿ (1994) ಗಾಗಿ 73 ನೇ ವಯಸ್ಸಿನಲ್ಲಿ ಅತ್ಯುತ್ತಮ ವೇಷಭೂಷಣ ವಿನ್ಯಾಸಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದ್ದವರು. ಅಪರ್ಣ ಸೇನ್ ಅವರು ಬಂಗಾಳಿ ಕವಿ ಜಿಬಾನಂದ ದಾಸ್ ಅವರ ಸೋದರ ಸೊಸೆ. ಸೇನ್ ತಮ್ಮ ಬಾಲ್ಯವನ್ನು ಹಜಾರಿಬಾಗ್ ಮತ್ತು ಕೋಲ್ಕತ್ತಾದಲ್ಲಿ ಕಳೆದರು.   ಕೋಲ್ಕತ್ತಾದ ಮಾಡರ್ನ್ ಹೈಸ್ಕೂಲ್ ಫಾರ್ ಗರ್ಲ್ಸ್‌ನಲ್ಲಿ ಶಿಕ್ಷಣವನ್ನು ಪಡೆದ ಅವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಬಿ.ಎ. ಅಧ್ಯಯನ ಮಾಡಿದರು, ಆದರೆ ಪದವಿಯನ್ನು ಪೂರ್ಣಗೊಳಿಸಲಿಲ್ಲ.

ಮಹಾನ್ ಛಾಯಾಗ್ರಾಹಕರಾದ ಬ್ರಿಯಾನ್ ಬ್ರೇಕ್ ಅವರು 1960 ರ ಮಾನ್ಸೂನ್ ಸರಣಿಗಾಗಿ ತೆಗೆದ ಅಪರ್ಣಾ ಸೇನ್ ಅವರ ಛಾಯಾಚಿತ್ರ ಜನಪ್ರಿಯ 'ಲೈಫ್‌'ನ ಮುಖಪುಟದಲ್ಲಿ ಕಾಣಿಸಿಕೊಂಡಿತು.  ಹೀಗೆ ಕಲಾಲೋಕವನ್ನು ಪ್ರವೇಶಿಸಿದ ಅವರು, 1961 ರಲ್ಲಿ ಸತ್ಯಜಿತ್ ರೇ ನಿರ್ದೇಶಿಸಿದ ತೀನ್ ಕನ್ಯಾ ಚಿತ್ರದ ಸಮಾಪ್ತಿ ಭಾಗದಲ್ಲಿ ಮೃಣ್ಮೋಯಿ ಪಾತ್ರವನ್ನು ನಿರ್ವಹಿಸುವ ಮೂಲಕ, ತಮ್ಮ 16 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಜನ ಅರಣ್ಯ ಮತ್ತು ಪಿಕೂ ಸೇರಿದಂತೆ ಸತ್ಯಜಿತ್ ರೇ ಅವರು ನಿರ್ಮಿಸಿದ ನಾಲ್ಕು ಚಿತ್ರಗಳಲ್ಲಿ ಕಾಣಿಸಿಕೊಂಡರು.  ಅಪರ್ಣಾ ಸೇನ್ ಅವರು 1965 ರಲ್ಲಿ ಮೃಣಾಲ್ ಸೇನ್ ಅವರ 'ಆಕಾಶ್ ಕುಸುಮ್‌'ನಲ್ಲಿ ನಟಿಸಿದರು.  ಮುಂದೆ ಅಪರ್ಣಾ ಸೇನ್ ಅವರು ಬಂಗಾಳಿ ಚಲನಚಿತ್ರೋದ್ಯಮದ ಪ್ರಮುಖ ಭಾಗವಾಗಿದ್ದು, ಬಸಂತ ಬಿಲಾಪ್ (1973) ಮತ್ತು ಮೇಮ್‌ಸಾಹೇಬ್ (1972) ಅಂತಹ ಜನಪ್ರಿಯ ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಪರ್ಣಾ ಸೇನ್ ಇಮಾನ್ ಧರಮ್ (1977), ಏಕ್ ದಿನ್ ಅಚಾನಕ್ (1989), ಮತ್ತು ಘಾತ್ (2000) ಅಂತಹ ಹಿಂದಿ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.

2009 ರಲ್ಲಿ, ಅಪರ್ಣಾ ಸೇನ್ ಅವರು ಶರ್ಮಿಳಾ ಟ್ಯಾಗೋರ್ ಮತ್ತು ರಾಹುಲ್ ಬೋಸ್ ಅವರೊಂದಿಗೆ ಅನ್ನಿರುದ್ಧ್ ರಾಯ್-ಚೌಧರಿ ಅವರ ಬಂಗಾಳಿ ಚಲನಚಿತ್ರ 'ಅಂತಹೀನ್' ನಲ್ಲಿ ಕಾಣಿಸಿಕೊಂಡರು. ಈ ಚಿತ್ರವು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. 2019 ರಲ್ಲಿ, ಸೇನ್ ಬೋಹೋಮಾನ್ ಮತ್ತು ಬಸು ಪೋರಿಬಾರ್ ಸೇರಿದಂತೆ ಪ್ರಮುಖ ಬಂಗಾಳಿ ಚಲನಚಿತ್ರಗಳಲ್ಲಿ ನಟಿಸಿದರು.

ಅಪರ್ಣಾ ಸೇನ್ ಅವರು ಜೆನ್ನಿಫರ್ ಕೆಂಡಾಲ್ ಅಭಿನಯದ '36 ಚೌರಿಂಗೀ ಲೇನ್'(1981) ಚಿತ್ರದ ಮೂಲಕ ಬರಹಗಾರ್ತಿ-ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡಿದರು. ಶಶಿ ಕಪೂರ್ ನಿರ್ಮಿಸಿದ ಈ ಚಿತ್ರವು ಅಪಾರ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದು,  ಅಪರ್ಣಾ ಅವರಿಗೆ ಅತ್ಯುತ್ತಮ ನಿರ್ದೇಶನಕ್ಕಾಗಿ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. 2009 ರಲ್ಲಿ, ಸೇನ್ 'ಇತಿ ಮೃಣಾಲಿನಿ’  ಚಿತ್ರವನ್ನು ನಿರ್ದೇಶಿಸಿ ನಟಿಸಿದರು. 2013 ರಲ್ಲಿ ಬಂದ ಅವರ ಚಲನಚಿತ್ರ 'ಗೋಯ್ನರ್ ಬಕ್ಷೋ' (ದಿ ಜ್ಯುವೆಲ್ಲರಿ ಬಾಕ್ಸ್), ಮೂರು ತಲೆಮಾರುಗಳ ಮಹಿಳೆಯರು ಮತ್ತು ಆಭರಣಗಳ ಪೆಟ್ಟಿಗೆಯೊಂದಿಗಿನ ಅವರ ಸಂಬಂಧವನ್ನು ಚಿತ್ರಿಸುತ್ತದೆ. ಇದು ತುಂಬಿದ  ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು. ನಂತರ, 2015 ರಲ್ಲಿ, ಅವರು ಚಿತ್ರಕತೆ ಬರೆದು ನಿರ್ದೇಶಿಸಿದ ಇಂಗ್ಲಿಷ್ ಚಲನಚಿತ್ರವಾದ ‘ಅರ್ಶಿನಗರ್’ ಬಿಡುಗಡೆಯಾಯಿತು.

2017 ರಲ್ಲಿ, ಸೇನ್ ಬರೆದು ನಿರ್ದೇಶಿಸಿದ ಇಂಗ್ಲಿಷ್ ಚಲನಚಿತ್ರ 'ಸೋನಾಟಾ' ಬಿಡುಗಡೆಯಾಯಿತು. ಮಹೇಶ್ ಎಲ್ಕುಂಚ್ವರ್ ಅವರ ನಾಟಕದಿಂದ ರೂಪಾಂತರಗೊಂಡ ಈ ಚಿತ್ರವು ಅಪರ್ಣಾ ಸೇನ್, ಶಬಾನಾ ಅಜ್ಮಿ ಮತ್ತು ಲಿಲ್ಲೆಟ್ ದುಬೆ ನಿರ್ವಹಿಸಿದ ಮೂವರು ಮಧ್ಯವಯಸ್ಕ ಅವಿವಾಹಿತ ಸ್ನೇಹಿತರ ಜೀವನವನ್ನು ಒಳಗೊಂಡಿದೆ. 2021 ರಲ್ಲಿ, ಅವರು ತಮ್ಮ ಮಗಳು ಕೊಂಕಣ ಸೇನ್ ಶರ್ಮಾ ಮತ್ತು ಅರ್ಜುನ್ ರಾಂಪಾಲ್ ನಟಿಸಿದ ತಮ್ಮ 3 ನೇ ಹಿಂದಿ ಚಿತ್ರ 'ದಿ ರೇಪಿಸ್ಟ್'  ಅನ್ನು ನಿರ್ದೇಶಿಸಿದರು. ಫಸ್ಟ್‌ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ, "ಅತ್ಯಾಚಾರಿಗಳನ್ನು ಸೃಷ್ಟಿಸಲು ಸಮಾಜ ಎಷ್ಟು ಕಾರಣವಾಗಿದೆ ಎಂಬುದನ್ನು ಕಾಣುವಂತೆ ಮಾಡುವ ಚಿತ್ರಕತೆಯಿದು" ಎಂದು ಹೇಳಿದ್ದಾರೆ. ಅಕ್ಟೋಬರ್ 2021 ರಲ್ಲಿ ನಡೆದ 26 ನೇ ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರವು ಕಿಮ್ ಜಿಸಿಯೋಕ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

ಮಹಾನ್ ಸಾಧಕಿ ಅಪರ್ಣಾ ಸೇನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of Great film Director and actress Aparna Sen 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ