ಪ. ಸ. ಕುಮಾರ್
ಪ. ಸ. ಕುಮಾರ್
ಪ. ಸ. ಕುಮಾರ್ ಎಂದು ಪ್ರಖ್ಯಾತರಾದ ಪಿ. ಸಂಪತ್ ಕುಮಾರ್ ನಾಡು ಕಂಡ ಮಹತ್ವದ ಕಲಾವಿದರು. ಕನ್ನಡ ಸಾಹಿತ್ಯ ಲೋಕದ ಅಪೂರ್ವ ಕೃತಿಗಳಿಗೆ, ಕಥೆ, ಕಾವ್ಯಗಳಿಗೆ ಅವರು ನೀಡಿರುವ ಕಥಾ ಚಿತ್ರಗಳು ಆ ವಸ್ತುಗಳಿಗೆ ಸಮರ್ಪಕತೆ ಒದಗಿಸಿರುವುದು ಮಾತ್ರವಲ್ಲದೆ, ಅವರ ಕಲಾಭಿವ್ಯಕ್ತಿ ಆ ಸಾಹಿತ್ಯ ವಸ್ತುಗಳ ಅಭಿವ್ಯಕ್ತಿ ವ್ಯಾಪ್ತಿಯನ್ನೇ ವಿಸ್ತರಿಸಿದಂತಿರುತ್ತದೆ ಎಂಬುದು ಕಲೆ ಮತ್ತು ಸಾಹಿತ್ಯ ವಿದ್ವಾಂಸರುಗಳ ಅಭಿಪ್ರಾಯ. ಪ. ಸ. ಕುಮಾರ್ ಅವರು ಪ್ರಸಕ್ತ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ.
ಪ. ಸ. ಕುಮಾರ್ ಅವರು 1949ರ ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ಜನಿಸಿದರು.
ಪ. ಸ. ಕುಮಾರ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ. ಎ. ಪದವಿ ಪಡೆದಿದ್ದಲ್ಲದೆ, ತಮಗಿದ್ದ ಕಲಾ ಆಸಕ್ತಿಯಿಂದ, ಮಹಾನ್ ಕಲಾವಿದ ಆರ್. ಎಮ್. ಹಡಪದ್ ಅವರ ನೇರ ಶಿಷ್ಯತ್ವ ಪಡೆದರು. ಹಡಪದರು ಸ್ಥಾಪಿಸಿದ್ದ ಕೆನ್ ಕಲಾಶಾಲೆ ಕಲಾವೈಭೋಗದಲ್ಲಿ ಮೇಳೈಸಿದ್ದ ದಿನಗಳಲ್ಲಿ ಅಲ್ಲಿನ ಕಲಾ ಡಿಪ್ಲೋಮಾ ಗಳಿಸಿದರು.
ಪ. ಸ. ಕುಮಾರ್ ಅವರು ರಾಜ್ಯ ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ಸಮೂಹ ಕಲಾ ಪ್ರದರ್ಶನಗಳು, ಕಲಾ ಶಿಬಿರಗಳಲ್ಲಿ ಪಾಲ್ಗೊಂಡಿರುವುದಲ್ಲದೆ, ರಾಜ್ಯದಲ್ಲಿ ಜರುಗುವ ಅನೇಕ ಮಹತ್ವದ ಕಲಾಶಿಬಿರಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿ ಸೇರಿದಂತೆ ದೇಶದ ಮಹತ್ವದ ಕಲಾ ಪ್ರದರ್ಶನಗಳಲ್ಲಿ ಅವರ ಕಲಾಕೃತಿಗಳು ಮೆಚ್ಚುಗೆಗೆ ಪಾತ್ರವಾಗಿವೆ.
ಪ. ಸ. ಕುಮಾರ್ ಅವರು, ಕಲಾಸಕ್ತರು ಮತ್ತು ಕಲಾ ವಿದ್ಯಾರ್ಥಿಗಳಿಗಾಗಿ ಅನೇಕ ಕಲಾ ಉಪನ್ಯಾಸಗಳು, ಪ್ರಾತ್ಯಕ್ಷಿಕೆಗಳು ಮತ್ತು ಮಾರ್ಗದರ್ಶಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. 'ಕಲಾ ಯಾತ್ರೆ'ಯ ಸ್ಥಾಪಕ ಸದಸ್ಯರಾಗಿ, 'ಕಲಾಮೇಳ'ದ ಕಾರ್ಯದರ್ಶಿಗಳಾಗಿ ಮತ್ತು ಖಜಾಂಚಿಗಳಾಗಿ ಅವರ ಸೇವೆ ಸಂದಿದೆ.
'ಪ್ರಜಾಮತ’ದಲ್ಲಿ ಚಿತ್ರಕಥಾಕಾರರಾಗಿ ವೃತ್ತಿ ನಿರ್ವಹಿಸಿದ ಪ ಸ ಕುಮಾರ್ ಅವರು, 'ತುಷಾರ' ಮಾಸಿಕದಲ್ಲಿ ಕಾರ್ಯನಿರ್ವಹಿಸಿ ಮುಂದೆ 'ಕನ್ನಡ ಪ್ರಭ'ದ ಪ್ರಧಾನ ಕಲಾವಿದರಾಗಿ ಕಾರ್ಯನಿರ್ವಹಿಸಿದರು. ಅನೇಕ ಕವಿತೆಗಳಿಗೆ ಮತ್ತು ಕಥಾನಕಗಳಿಗೆ ಅವರು ರಚಿಸಿದ ಚಿತ್ರಗಳು, ಕಲೆ ಮತ್ತು ಸಾಹಿತ್ಯಲೋಕದಲ್ಲಿ ಬೆರಗು ಹುಟ್ಟಿಸಿ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.
ಮುಂದೆ ತಮ್ಮದೇ ಆದ 'ಸ್ನೇಹ ಸ್ಟುಡಿಯೋಸ್' ಸ್ಥಾಪಿಸಿ ಸ್ವತಂತ್ರ ವೃತ್ತಿ ಕಲಾವಿದರಾಗಿರುವ ಪ ಸ ಕುಮಾರ್, ಕರ್ನಾಟಕದ ಎಲ್ಲ ಪ್ರಮುಖ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಚಿತ್ರರಚನೆ ಮಾಡಿದ್ದಾರೆ. ಕನ್ನಡದ ಅನೇಕ ಮಹತ್ವದ ಸಾಹಿತಿಗಳ ಕೃತಿಗಳಿಗೆ ಅವರು ಕಲಾವಿನ್ಯಾಸ ಮಾಡಿದ್ದಾರೆ.
ಪ ಸ ಕುಮಾರ್ ಅವರು ಆರ್ ಎಮ್ ಹಡಪದ ಕುರಿತು ಮತ್ತು ಪ್ರಸಿದ್ಧ ಲ್ಯಾಂಡ್‍ಸ್ಕೇಪ್ ಕಲಾವಿದ ಎಂ. ಎಸ್. ಚಂದ್ರಶೇಖರ್ ಕುರಿತು ಸೇರಿದಂತೆ ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಪ ಸ ಕುಮಾರ್ ಅವರು ಸಾಹಿತ್ಯದ ಅತ್ಯುತ್ತಮ ಓದುಗರು. ಹಾಗಾಗಿಯೇ ಅವರು ಇಲ್ಲಸ್ಟ್ರೇಷನ್ಗಳು ವೈಶಿಷ್ಟ್ಯಪೂರ್ಣವಾಗಿರುತ್ತವೆ ಎಂಬುದು ಸಾಹಿತ್ಯಲೋಕದಲ್ಲಿ ಪ್ರಸಿದ್ಧವಾಗಿರುವ ಮಾತು. "ಕಥೆ, ಕವನಗಳಿಗೆ ಚಿತ್ರ ಬರೆಯುವಾಗ ಕಲಾವಿದರಲ್ಲಿ ಸಾಹಿತ್ಯದ ಪ್ರೀತಿ ಇರಬೇಕು. ಕೃತಿಯ ಆಳಕ್ಕೆ ಇಳಿಯಬೇಕು ಅದನ್ನು ಸ್ಪರ್ಶಿಸಬೇಕು. ಒಳ್ಳೆಯ ಚಿತ್ರವನ್ನು ಮನಸ್ಸಿನಲ್ಲಿ ಧ್ಯಾನಿಸಬೇಕಿರುತ್ತದೆ. ಕೃತಿಯೊಡನೆ ಜಟಾಪಟಿ ಮಾಡಬೇಕು. ಕವನಕ್ಕೆ, ಕವಿಗೆ ನ್ಯಾಯ ಸಲ್ಲಿಸಬೇಕು. ಇವೆಲ್ಲವೂ ಕಲಾವಿದನಿಗೆ ಒಂದು ಸವಾಲು” ಎನ್ನುತ್ತಾರೆ ಪ. ಸ. ಕುಮಾರ್. ಸ್ವಯಂ ಪ ಸ ಕುಮಾರ್ ಅವರೇ ಅನೇಕ ಕಥೆ, ಕವನಗಳನ್ನು ಬರೆದಿದ್ದಾರೆ. ಕಲಾ ವಿಮರ್ಶೆ ಬರೆಯುವ ಅವರು ಕೆಲವು ಕಿರುತೆರೆಯ ಧಾರಾವಾಹಿಗಳಲ್ಲಿ ಅಭಿನಯವನ್ನೂ ಮಾಡಿದ್ದಾರೆ. ತಮ್ಮ ಎರಡು ಕೈಗಳಲ್ಲಿಯೂ ಚಿತ್ರ ಮೂಡಿಸುವ ಕಲೆ ಅವರಿಗೆ ಸಿದ್ದಿಸಿದೆ.
ಪ ಸ ಕುಮಾರ್ ಅವರು ಕರ್ನಾಟಕ ಲಲಿತ ಕಲಾ ಅಕಾಡಮಿ, ಪ್ರೆಸ್ ಕ್ಲಬ್ ಸಾಂಸ್ಕೃತಿಕ ಸಮಿತಿ, ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮುಂತಾದವುಗಳ ಸಕ್ರಿಯ ಸದಸ್ಯರಾಗಿ ಮತ್ತು ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಸಕ್ತ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ.
ಪ ಸ ಕುಮಾರ್ ಅವರಿಗೆ ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಕಲಾಧ್ಯಾನ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಪಿ. ಆರ್. ತಿಪ್ಪೇಸ್ವಾಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ನಾಡಿನ ಹೆಮ್ಮೆಯ ಕಲಾವಿದರಾದ ಪ ಸ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of our great artiste P Sampath Kumar Sir

ಕಾಮೆಂಟ್‌ಗಳು