ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೋಭಾ ವೆಂಕಟೇಶ್


 ಶೋಭಾ ವೆಂಕಟೇಶ್


ಶೋಭಾ ವೆಂಕಟೇಶ್ ಅವರು ಹೆಸರಾಂತ ರಂಗ ಕಲಾವಿದೆಯಾಗಿ ಹಾಗೂ ವಿಜಯನಗರ ಬಿಂಬ ಸಂಸ್ಥೆಯ ಅಧ್ಯಕ್ಷರಾಗಿ ರಂಗಭೂಮಿಗೆ ಅಪಾರ ಕೊಡುಗೆ ನೀಡುತ್ತ ಬಂದಿದ್ದಾರೆ.

ಅಕ್ಟೋಬರ್ 9,  ಶೋಭಾ ಅವರ ಜನ್ಮದಿನ.  ತಂದೆ ಆಕಾಶವಾಣಿಯ ಮತ್ತು ರಂಗಲೋಕದ ಮಹಾನ್ ಹೆಸರಾದ ಎ. ಎಸ್.  ಮೂರ್ತಿ. ತಾಯಿ ಕಮಲಾ.   ಇವರ ತಾತ ಕರ್ನಾಟಕದ ಮೊಟ್ಟ ಮೊದಲ ಕಲಾ ಶಾಲೆಯ ಸಂಸ್ಥಾಪಕರಾದ ಅ.ನ. ಸುಬ್ಬರಾಯರು. 

ಶೋಭಾ ನಾಲ್ಕನೇ ತರಗತಿಯಲ್ಲಿರುವಾಗಲೇ ಕುರ್ತುಕೋಟಿಯವರ “ಆ ಮನಿ ” ಮಕ್ಕಳ ನಾಟಕದ ಮೂಲಕ ನಾಟಕರಂಗಕ್ಕೆ ಬಂದರು.  ಮುಂದೆ ತಂದೆಯವರ ಚಿತ್ರಾ ನಾಟಕ ತಂಡದಲ್ಲಿ ನಿರಂತರವಾದ ಬೆಳವಣಿಗೆ ಪಡೆದುಕೊಂಡರು. 

ಶೋಭಾ ವೆಂಕಟೇಶ್ ರಂಗ ತರಬೇತಿ ಮತ್ತು ರಂಗ ಕಾರ್ಯಾಗಾರಳಲ್ಲಿನ ಹೊಸ ಅವಿಷ್ಕಾರಗಳ ಮೂಲಕ ಅಪಾರ ಕೆಲಸ ಮಾಡುತ್ತ ಬಂದಿದ್ದಾರೆ.  ಕೆನರಾ ಬ್ಯಾಂಕ್ ವೃತ್ತಿಯ ಜೊತೆ ರಂಗಾಸಕ್ತಿಯನ್ನು ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದರು.  ಹೀಗೆ ಬಿಂಬ ಸಂಸ್ಥೆ 23 ಯಶಸ್ವಿ ವರ್ಷಗಳನ್ನು ದಾಟಿ ಮುಂದೆ ಸಾಗುತ್ತಿದೆ. 

5000ಕ್ಕೂ ಹೆಚ್ಚು ಉದಯೋನ್ಮುಖ ಕಲಾವಿದರ ಸಂತೋಷದ ಹಳೆಯ ವಿದ್ಯಾರ್ಥಿಗಳೊಂದಿಗೆ, ವಿಜಯನಗರ ಬಿಂಬಾ 15 ಕ್ಕೂ ಹೆಚ್ಚು ಪ್ರಮುಖ ನಿರ್ಮಾಣಗಳನ್ನು ಹೊಂದಿದೆ, ಅವುಗಳಲ್ಲಿ 14 ಪೂರ್ಣ-ಉದ್ದದ ನಾಟಕಗಳು, 5 ಬ್ಯಾಲೆಗಳು ಮತ್ತು 6 ಕಿರು ನಾಟಕಗಳು ಸೇರಿವೆ. ಇದು ಮಕ್ಕಳಿಂದ  (3 - 15 ವರ್ಷಗಳು) ವಯಸ್ಕರಿಗೆ  (16 ವರ್ಷ ಮತ್ತು ಮೇಲ್ಪಟ್ಟವರು) ಅಲ್ಪಾವಧಿಯ ಮತ್ತು ದೀರ್ಘಾವಧಿಯ ರಂಗಭೂಮಿ ಕೋರ್ಸ್‌ಗಳನ್ನು ನಡೆಸುತ್ತಿದೆ.  ಬಡಾವಣಾ ರಂಗಭೂಮಿ, ಯುವಕರ ರಂಗ ಜಗಲಿ, ಕವಿಗೋಷ್ಟಿ, ಪದ ಚಿತ್ತಾರ, ಪುಸ್ತಕ ಪ್ರಕಟಣೆ, ಚಿತ್ರ ಕಥನ (ಚಿತ್ರ ರಚಿಸಿ ಕಥೆ ಕಟ್ಟುವಿಕೆ) ಬೊಂಬೆ ಹಬ್ಬ, ಮೀಡಿಯಾ ಹಬ್ಬ ಹೀಗೆ ಯುವ ಪೀಳಿಗೆಯ ರಂಗಾಸಕ್ತಿಗೆ ಒರೆ ಹಚ್ಚಿ 24 ವರ್ಷಗಳಿಂದ ಸತತ ನಾಟಕ, ನೃತ್ಯ ರೂಪಕ, ಕೋಲಾಟ, ರಾಷ್ಟ್ರಾದ್ಯಂತ ಹಲವು ಸಂಸ್ಥೆಗಳ ಜೊತೆಗೂಡಿ ನಾಟಕೋತ್ಸವ ಆಯೋಜನೆ, ವಸ್ತ್ರ ವಿನ್ಯಾಸ, ನೇಪಥ್ಯದ ದುಡಿಮೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಆಯೋಜಿಸುತ್ತ ಬಂದಿದೆ.

ಇವೆಲ್ಲದರ ಜೊತೆಗೆ ಶೋಭಾ ಅವರು ಕೊಳಗೇರಿಯ ಹಾಗೂ ಅನಾಥಾಶ್ರಮದ ಮಕ್ಕಳಿಗೂ ಉಚಿತ ಕಾರ್ಯಾಗಾರ,ರಂಗ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜದ ಕೆಳವರ್ಗಕ್ಕೂ ತಮ್ಮಿಂದಾದ ಸಹಾಯ, ಕಾಣಿಕೆಯನ್ನು ನೀಡುತ್ತ ಬಂದಿದ್ದಾರೆ.

ಶೋಭಾ ಅವರು ಥೇಮಾ ಹಾಗೂ ರಂಗಚಿತ್ತಾರ ಸಾಂಸ್ಕೃತಿಕ ಸಂಘದ ಟ್ರಸ್ಟೀ ಯಾಗಿ ರಂಗ ಪ್ರಯೋಗ ಶಾಲೆಯ ಪ್ರಮುಖ ಸಲಹೆಗಾರರಾಗಿ, ವೃತ್ತಿ ನಿಮಿತ್ತ ದಿಲ್ಲಿಯಲ್ಲಿದ್ದಾಗ ಸಮಾನ ಮನಸ್ಕರ ಜೊತೆಗೂಡಿ ಕನ್ನಡ ಚೇತನವೆಂಬ ಕನ್ನಡ ಸಂಘದ ಹುಟ್ಟಿಗೆ ಕಾರಣರಾಗಿದ್ದಾರೆ.  
ಹಲವಾರು ಹಾಸ್ಯ ಹಾಗೂ ಗಂಭೀರ ನಾಟಕಗಳಿಗೆ ಶ್ರೀನಿವಾಸ ಮೂರ್ತಿಯವರ ಮಾರ್ಗದರ್ಶನದಲ್ಲಿ ಬೊಂಬೆಯಾಟದ ರೂಪ ನೀಡಿ ಪಪ್ಪೆಟ್ ಲ್ಯಾಂಡ್ ಎಂಬ ಬೊಂಬೆಯಾಟದ ರೆಪರ್ಟರಿ ಹುಟ್ಟಲು ಕಾರಣರಾಗಿದ್ದಾರೆ. ಜಿಗಿ ಬೊಂಬೆಯಾಟ ಎಂಬ ಪ್ರಥಮ ಕಿರುತೆರೆಯ ಬೊಂಬೆಯಾಟದ ಧಾರವಾಹಿಯ ಮೂಲಕ ಹೊಸ ಕಲೆಯನ್ನು ಲೋಕಕ್ಕೆ ಪರಿಚಯಿಸಿದ್ದಾರೆ.

ಶೋಭಾ ಅವರ ಪತಿ ವೆಂಕಟೇಶ್ ಅವರು ಕೆನರಾ ಬ್ಯಾಂಕಿನ  ಮುಖ್ಯ ಪ್ರಬಂಧಕರಾಗಿದ್ದರೂ ಪತ್ನಿಯ ಈ ಎಲ್ಲಾ ಸಾಧನೆಗೆ ಬೆಂಬಲವಾಗಿದ್ದಾರೆ.  

ಬಿಂಬ ಸಂಸ್ಥೆ ಹಾಗೂ ಶೋಭಾ  ಅವರ ಸಾಧನೆಗೆ ಬಹಳಷ್ಟು ಪ್ರಶಸ್ತಿ ಸನ್ಮಾನಗಳು ಸಂದಿದ್ದು ಅವುಗಳಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಮಕ್ಕಳ ಕಣ್ಮಣಿ ಆರ್ ಕಲ್ಯಾಣಮ್ಮ ಪ್ರಶಸ್ತಿ, ನಾಯಿಕಾ ಉತ್ತಮ ಅಂಟ್ರಪ್ರಾನರ್ ಶಿಪ್ ಪ್ರಶಸ್ತಿ, ಮಲಬಾರ್ ವಿಶ್ವರಂಗ ಪುರಸ್ಕಾರ – 2023 ಮುಂತಾದವು ಸೇರಿವೆ. 

ಶೋಭಾ ವೆಂಕಟೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday to our Great Theatre Personality Shobha Venkatesh Madam 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ