ಅಬ್ದುಲ್ ಕರೀಂ ಖಾನ್
ಉಸ್ತಾದ್ ಅಬ್ದುಲ್ ಕರೀಂ ಖಾನ್
On the birth anniversary of Kirana Gharana fame Ustad Abdul Karim Khan🌷🙏🌷
ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರು ಸಂಗೀತಲೋಕದ ಮಹಾನ್ ಸಾಧಕರಾಗಿ ಪ್ರಸಿದ್ಧರು. ಇವರು ತಮ್ಮ ಸೋದರಬಂಧು ಅಬ್ದುಲ್ ವಾಹಿದ್ ಖಾನ್ ಅವರೊಂದಿಗೆ ಕಿರಾಣಾ ಘರಾಣಾದ ಪ್ರವರ್ತಕರಾಗಿ ಹೆಸರಾಗಿದ್ದಾರೆ.
ಅಬ್ದುಲ್ ಕರೀಂ ಖಾನ್ ಅವರು 1873ರ ನವೆಂಬರ್ 11ರಂದು ಉತ್ತರಪ್ರದೇಶದ ಶಾಮ್ಲಿ ಪಟ್ಟಣಕ್ಕೆ ಸೇರಿದ ಕಿರಾಣಾ ಎಂಬಲ್ಲಿ ಜನಿಸಿದರು. ಈ ವಂಶದಲ್ಲಿನ ಘರಾಣೆಯಲ್ಲಿ
ಉಸ್ತಾದ್ ಗುಲಾಂ ಅಲಿ ಮತ್ತು ಗುಲಾಂ ಮೌಲಾ ಅತ್ಯಂತ ಪ್ರಸಿದ್ಧರು. ಇವರ ತಂದೆ ಕಾಲೇ ಖಾನ್ ಅವರು ಗುಲಾಂ ಅಲಿಯವರ ಮೊಮ್ಮಗ. ಕರೀಂ ಖಾನರು ತಮ್ಮ ಸಂಗೀತ ವಿಧ್ಯಾಭ್ಯಾಸವನ್ನು ಚಿಕ್ಕಪ್ಪ ನಾನ್ಹೇ ಖಾನ್ ಮತ್ತು ತಂದೆಯವರ ಬಳಿ ಪ್ರಾರಂಭಿಸಿದರು. ಇವರು ಹಾಡು ಗಾರಿಕೆಯಲ್ಲದೇ ಸಾರಂಗೀ, ವೀಣೆ, ಸಿತಾರ್ ಮತ್ತು ತಬಲಾ ವಾದನಗಳಲ್ಲಿಯೂ ಪರಿಣಿತರಾಗಿದ್ದರು.
ಕರೀಮ್ ಖಾನ್ ಹಾಗು ಅವರ ಸೋದರ ಅಬ್ದುಲ್ ಹಕ್ ಇವರೀರ್ವರೂ ಬರೋಡಾದ ಮಹಾರಾಜರ ಆಸ್ಥಾನ ಗಾಯಕರಾಗಿದ್ದರು. ಅಲ್ಲಿ ಕರೀಮ್ ಖಾನರಿಗೆ ಸರದಾರ ಮಾರುತಿರಾವ ಮಾನೆಯವರ ಪುತ್ರಿ ತಾರಾಬಾಯಿಯೊಂದಿಗೆ ಪರಿಚಯವಾಗಿ ಪ್ರೇಮ ಬೆಳೆಯಿತು. ಇವರೀರ್ವರೂ ಮದುವೆಯಾಗಲು ಬಯಸಿದಾಗ ಬರೋಡೆಯ ಮಹಾರಾಜರು ಈ ಪ್ರೇಮಿಗಳನ್ನು ಬರೋಡೆಯಿಂದ ಹೊರಹಾಕಿದರು. ಕರೀಮ್ ಖಾನ್ ಹಾಗು ತಾರಾಬಾಯಿ ಮುಂಬಯಿಗೆ ಬಂದು ನೆಲೆಸಿದರು. ಮುಂದೆ 1922ರಲ್ಲಿ ತಾರಾಬಾಯಿ ಅಬ್ದುಲ್ ಕರೀಮ್ ಖಾನರನ್ನು ತ್ಯಜಿಸಿದರು. ಅದು ಖಾನ್ ಅವರ ಸಂಗೀತ ಪಯಣದಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ಭಕ್ತಿ ಪರವಶತೆಯನ್ನು ತಂದಿತು ಎನ್ನಲಾಗಿದೆ.
ಅಬ್ದುಲ್ ಕರೀಮ್ ಖಾನರು ಮೈಸೂರು ಸಂಸ್ಥಾನದ ಒಡೆಯರಿಂದ ದೊರೆಯುತ್ತಿದ್ದ ಆಹ್ವಾನದ ಮೇರೆಗೆ ಮೇಲಿಂದ ಮೇಲೆ ಮೈಸೂರಿಗೆ ಬರುತ್ತಿದ್ದರು. ಮೈಸೂರು ಒಡೆಯರು ಅವರಿಗೆ ಸಂಗೀತರತ್ನ ಬಿರುದನ್ನು ನೀಡಿದ್ದರು. ಖಾನ್ ಸಾಹೇಬರು ತ್ಯಾಗರಾಜರ ಎರಡು ಕೀರ್ತನೆಗಳನ್ನೂ ಸಹ ಹಾಡಿದ್ದಾರಂತೆ.
ಅಬ್ದುಲ್ ಕರೀಮ್ ಖಾನರು ಧಾರವಾಡ ಹಾಗು ಹುಬ್ಬಳ್ಳಿಗೆ ಬಂದಾಗ ಗಂಗೂಬಾಯಿ ಹಾನಗಲ್ ಅವರ ತಾಯಿ ಅಂಬಾಬಾಯಿಯವರನ್ನು ಭೇಟಿಯಾಗಿ ಅವರ ಹಾಡುಗಾರಿಕೆಯನ್ನು ಕೇಳುತ್ತಿದ್ದರು. ಹುಬ್ಬಳ್ಳಿಯಲ್ಲಿನ ಸಿದ್ಧಾರೂಡ ಮಠಕ್ಕೆ ತಪ್ಪದೆ ಭೆಟ್ಟಿಕೊಟ್ಟು ಅಲ್ಲಿ ಹಾಡುತ್ತಿದ್ದರು. ಅಲ್ಲಿ ಒಂದು ದಿನ ಗ್ವಾಲಿಯರ ಘರಾನಾದ ರೆಹಮತ್ ಖಾನ್ ಅವರ ಸಂಗೀತ ಕೇಳಿದ ಖಾನ್ ಸಾಹೇಬರು ಬೆರಗಾಗಿ ಹೋದರು. ಅವರಂತೆ ತಾನೂ ಹಾಡಬೇಕು, ತನ್ನ ಧ್ವನಿ ಕೂಡಾ ಹಾಗಾಗಬೇಕು ಎಂದು ಶ್ರದ್ದೆಯಿಂದ ಪ್ರಯತ್ನಿಸಿ, ಕೊನೆಗೂ ಅದನ್ನು ಸಾಧಿಸಿದರು.
ಕುಂದಗೋಳದ ಸವಾಯಿ ಗಂಧರ್ವರು ಖಾನ್ ಸಾಹೇಬರ ಸುಪ್ರಸಿದ್ಧ ಶಿಷ್ಯರು. 1913 ರಲ್ಲಿ ಖಾನ್ ಸಾಹೇಬರು ಪುಣೆಯಲ್ಲಿ ಆರ್ಯ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು. ಜೊತೆಗೆ ಮಿರಜದಲ್ಲಿ ಸಹ ಶಿಕ್ಷಣ ನೀಡುತ್ತಿದ್ದರು.
ಖಾನಸಾಹೆಬರು 1937ರ ಅಕ್ಟೋಬರ್ 27ರಂದು ಪಾಂಡಿಚೇರಿಗೆ ಪಯಣಿಸುತ್ತಿದ್ದ ಸಂದರ್ಭದಲ್ಲಿ ನಿಧನರಾದರು.
1941 ರಲ್ಲಿ ಸವಾಯಿ ಗಂಧರ್ವರ ಶಿಷ್ಯೆಯಾದ ಕೃಷ್ಣಾಬಾಯಿಯವರು ಹುಬ್ಬಳ್ಳಿಯಲ್ಲಿ ಖಾನಸಾಹೇಬರ ಸ್ಮೃತಿದಿನ ಆಚರಿಸಲಾರಂಭಿಸಿದರು. ಅವರ ಶಿಷ್ಯವರ್ಗದ ಹಾಗು ಸಂಗೀತಪ್ರೇಮಿಗಳ ಸಹಕಾರದಿಂದ ಈ ಕಾರ್ಯಕ್ರಮ ಇನ್ನೂ ಮುಂದುವರೆಯುತ್ತಿದೆ.

ಕಾಮೆಂಟ್‌ಗಳು