ವಿಜಯಲಕ್ಷ್ಮಿ ಸತ್ಯಮೂರ್ತಿ
ವಿಜಯಲಕ್ಷ್ಮಿ ಸತ್ಯಮೂರ್ತಿ
ವಿಜಯಲಕ್ಷ್ಮಿ ಸತ್ಯಮೂರ್ತಿ ಅವರು ಬರಹಗಾರ್ತಿ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಚಟುವಟಿಕೆಗಳಲ್ಲಿ ಸಕ್ರಿಯರು.
ನವೆಂಬರ್ 13 ವಿಜಯಲಕ್ಷ್ಮಿ ಅವರ ಜನ್ಮದಿನ. ಇವರು ಬೆಂಗಳೂರಿನವರು. ತಂದೆ ಶ್ರೀನಿವಾಸ ಮೂರ್ತಿ. ತಾಯಿ ಯಶೋದ. ಪತಿ ಸತ್ಯಮೂರ್ತಿ. ಚಾಮರಾಜಪೇಟೆಯ ಸುತ್ತಮುತ್ತಲಿನ ವಿದ್ಯಾಸಂಸ್ಥೆಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು.
ವಿಜಯಲಕ್ಷ್ಮಿ ಅವರು ಬಹುಮುಖಿಯಾದ ಬರಹಗಳಿಂದ ಸಾಹಿತ್ಯಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 'ಗಂಧದೋಕುಳಿ', 'ಸಾಗರವ ಗೆದ್ದವಳು', 'ಪ್ರೀತಿಯ ಪಂಚಗವ್ಯ', 'ಅಮೃತಧಾರೆ', 'ಭ್ರಮರ ಬಂಧು' (ಸಮಗ್ರ ಕವಿತೆಗಳು) ಇವರ ಕವನ ಸಂಕಲನಗಳು. 'ನವಮಿ', 'ಪಂಚಮಿ', 'ಪಾರಿಜಾತದ ನೆರಳು' ಇವರ ಕಥಾ ಸಂಕಲನಗಳು. 'ಅಮೂಲ್ಯ', 'ಮಳೆಯಲ್ಲಿ ಬಂದ ಅಪ್ಸರೆ', 'ವ್ಯೂಹ', 'ಧರಿತ್ರಿ' ಹಾಗೂ 'ಮೌನದಿಬ್ಬಿನಿ' ಕಾದಂಬರಿಗಳು. 'ಸಂವೇದನೆ' ಲೇಖನಗಳ ಸಂಗ್ರಹ. ‘ವಿಜಯಪಥ' ಆತ್ಮಚರಿತ್ರೆ.
ವಿಜಯಲಕ್ಷ್ಮಿ ಅವರ 'ನವಮಿ' ಕಥಾಸಂಕಲನ ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನ ಎರಡನೇ ಸೆಮಿಸ್ಟರ್ ಡಿಗ್ರಿ ತರಗತಿಗೆ ಪಠ್ಯವಾಗಿತ್ತು. ಬಸವ ವಿಭೂಷಣ ಪ್ರಶಸ್ತಿ, ಬಸವ ರತ್ನ ಪ್ರಶಸ್ತಿ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಕೆ ಎಸ್ ನ ಕಾವ್ಯ ಪುರಸ್ಕಾರ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿವೆ. ಅನೇಕ ವೇದಿಕೆಗಳಲ್ಲಿ ತಮ್ಮ ಕಾವ್ಯವಾಚನ ಮತ್ತು ಅಭಿಪ್ರಾಯಗಳ ಮಂಡನೆ ಮಾಡುತ್ತ ಬಂದಿದ್ದಾರೆ.
ವಿಜಯಲಕ್ಷ್ಮಿ 'ಋತುಗಾನ'ಎಂಬ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸಕ್ತ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಸಾಹಿತಿ ಪ್ರತಿನಿಧಿ ಆಗಿದ್ದಾರೆ.
ವಿಜಯಲಕ್ಷ್ಮಿ ಸತ್ಯಮೂರ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Vijayalakshmi 🌷🌷🌷

ಕಾಮೆಂಟ್‌ಗಳು