ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರವಿಂದ ಜಿ. ಜೋಷಿ

ಅರವಿಂದ ಜಿ ಜೋಷಿ
ಲೇಖಕಿ: ಮೀನಾಕ್ಷಿ ಪ್ರಕಾಶ್

ನೀವು ಸುಧಾ, ಬೋಧಿವೃಕ್ಷ, ವಿಶ್ವವಾಣಿ, ಮಯೂರ, ಕರ್ಮವೀರ ಮುಂತಾದ ಪತ್ರಿಕೆಗಳ ಓದುಗರಾಗಿದ್ದರೆ ಅರವಿಂದ ಜಿ. ಜೋಷಿ ಅನ್ನುವ ಹೆಸರನ್ನು ಪ್ರತಿದಿನವೋ ಅಥವಾ ವಾರದಲ್ಲಿ ನಾಲ್ಕು ದಿನವೋ ನೋಡಿಯೇ ಇರುತ್ತೀರಿ. ಅದಿಲ್ಲದಿದ್ದರೆ ಫೇಸ್‌ಬುಕ್‌ಗೇನಾದರೂ ಬಂದರೆ ಅಲ್ಲಿ ಕಥಾ ಅರಮನೆ, ಸೌಹಾರ್ದ, ಕಥಾಗುಚ್ಛ  ಈ ಸಾಹಿತ್ಯಿಕ ಗುಂಪುಗಳಲ್ಲಿ ಯಾವಾಗಲೂ ಬರವಣಿಗೆಯಲ್ಲಿ ತೊಡಗಿರುತ್ತಾರೆ. ಇದಲ್ಲದೆ ಬಿಜಾಪುರದ ಪತ್ರಿಕೆ ತುಮಕೂರಿನ ಪತ್ರಿಕೆಗಳಲ್ಲೂ ಇವರ ಹೆಸರು ರಾರಾಜಿಸುತ್ತಲೇ ಇರುತ್ತದೆ. 

ಮನುಷ್ಯನು ಉಲ್ಲಾಸದಿಂದಿರಬೇಕಾದರೆ ಹವ್ಯಾಸವೊಂದು ಅವನ ಜೊತೆಗಂಟಿಕೊಂಡಿರಲೇಬೇಕು. ಹಾಗೆ ಕಾಲೇಜು ದಿನಗಳಿಂದಲೂ ಶ್ರೀಯುತ ಜೋಷಿಯವರ ಜೊತೆಗೆ  ಬರೆಯುವ ಹವ್ಯಾಸ ಎಡೆಬಿಡದೆ  ಜೊತೆಯಲ್ಲೇ ಸಾಗಿಬರುತ್ತಿದೆ. ಹಾಗಾಗಿಯೇ ಇವರ ಪುಟ್ಟಕತೆಗಳು, ಲೇಖನಗಳು, ಕವನಗಳು, ಮಕ್ಕಳ ಕತೆಗಳು, ಹಾಸ್ಯ ಬರಹಗಳು ನೀತಿಬೋಧೆಯ ಮಾತುಗಳು ಓದಲು ಸಿಗುತ್ತವೆ.

ಅರವಿಂದ ಜೋಷಿ ಅವರು ಜನಿಸಿದ್ದು 1948ರ ನವೆಂಬರ್ 9ರಂದು. ಮೂಲತಃ ಬಿಜಾಪುರ ಜಿಲ್ಲೆಯವರಾದ ಜೋಷಿಯವರು,  ಕರ್ನಾಟಕ ವಿಶ್ವವಿದ್ಯಾನಿಲಯದಿಂದ ವಾಣಿಜ್ಯ ಪದವಿ ಪಡೆದುಕೊಂಡು,  ಲೋಕ ಶಿಕ್ಷಣ ಇಲಾಖೆಯಲ್ಲಿ ಮೂವತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಇಪ್ಪತ್ತು ವರ್ಷಗಳಾಯಿತು.

ಜೋಷಿ ಅವರು ಸುಮಾರು ಹತ್ತು ವರ್ಷಗಳಿಂದ ಮಯೂರದ ಬುತ್ತಿಚಿಗುರು ಮತ್ತು ಅಂಗೈಯ್ಯಲ್ಲಿ ಅರಮನೆಯ ಖಾಯಂ ಹಾಸ್ಯ ಬರಹಗಾರರಾಗಿದ್ದಾರೆ. ಬಿಜಾಪುರ ಸಂದರ್ಶನ ಪತ್ರಿಕೆಯಲ್ಲಿ ಇವರ ಸುಮಾರು ಐವತ್ತಕ್ಕೂ ಹೆಚ್ಚು ಕವನಗಳು ಪ್ರಕಟವಾಗಿವೆ. ಇವರೇ ಬರೆದ 'ಪೂರ್ಣವಿರಾಮ' ಎಂಬ ಕಥೆ ಕಿರುಚಿತ್ರವಾಗಿ ಪ್ರೇಕ್ಷಕರನ್ನು ರಂಜಿಸಿದೆಯೆನ್ನುವುದು ಅದನ್ನು ಬರೆದ ಶ್ರೀಯುತರಿಗೂ  ವೀಕ್ಷಕರಿಗೂ ಖುಷಿಯ ವಿಚಾರವಾಗಿದೆ.  ಕಥಾ ಅರಮನೆಯವರು ಇವರ ಬರವಣಿಗೆಯ ಶೈಲಿಯನ್ನು ಮೆಚ್ಚಿ, 2022ರಲ್ಲಿ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ‘ಉತ್ತಮ ಕಥೆಗಾರ’ ಎಂಬ ಬಿರುದು ನೀಡಿ ಸನ್ಮಾನಿಸಿದ್ದಾರೆ. 

ಪುಸ್ತಕವನ್ನು ಅಂದರೆ ಸಂಕಲನವನ್ನು ತರಲೇಬೇಕೆಂಬ ಹಪಹಪಿಯೇನೂ ಇರದ ಜೋಷಿಯವರು, ಈಗೊಂದು ಮಕ್ಕಳ ಕಥಾಸಂಕಲನ ತರುವ ಆಕಾಂಕ್ಷೆ ಹೊತ್ತಿದ್ದಾರೆ. ಈವರೆಗೆ ಸುಮಾರು ನೂರೈವತ್ತು ಮಕ್ಕಳ ಕತೆಗಳನ್ನು ಬರೆದಿರುವ ಜೋಷಿಯವರಿಗೆ ದ.ರಾ. ಬೇಂದ್ರೆಯವರೆಂದರೆ ಅಚ್ಚುಮೆಚ್ಚು. ಮಗ ಸೊಸೆ ಮೊಮ್ಮಕ್ಕಳೊಂದಿಗೆ ಪತ್ನಿ ಶ್ರೀಮತಿ ಲೀಲಾವತಿಯವರೊಡಗೂಡಿ ಸಂತಸದ ಜೀವನ ನಡೆಸುತ್ತಿರುವ ಜೋಷಿಯವರು ಅವರ ಮತ್ತು ನಮ್ಮೆಲ್ಲರ ಮೆಚ್ಚಿನ ಬೇಂದ್ರೆಯಜ್ಜನ ಮಾತಿನಂತೆ

"ಹುಸಿನಗುತ ಬಂದೇವ ನಸು ನಗುತ ಬಾಳೋಣ

ತುಸು ನಗುತ ತೆರಳೋಣ

ಬಡ ನೂರು ವರುಷಾನ ಹರುಷಾದಿ ಕಳೆಯೋಣ

ಯಾಕಾರೆ ಕೆರಳೋಣ!"

ಎನ್ನುವ ಹಾಗೆಯೇ  ಸೌಮ್ಯ ಸ್ವಭಾವಿ, ಮಿತ ಭಾಷಿ, ಜ್ಞಾನವಂತರು, ಸರಳಜೀವಿಗಳು.. 

ಎಪ್ಪತ್ತೇಳರ ಹರೆಯದ ಜೋಷಿಯವರನ್ನು ದೇವರು ಆರೋಗ್ಯವಾಗಿ ಸಂತೋಷದಿಂದ ನಗುನಗುತ್ತಿರುವಂತೆ ಹರಸಲಿ ಎಂಬುದೇ ನಮ್ಮ ಸದಾಶಯ.

                                  

ಕೃತಜ್ಞತೆ: ಲೇಖಕಿ Meenakshi Prakash 🌷🙏🌷

Writer Aravind Joshi Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ