ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಕಾಶ್ ಕಂಬತ್ತಳ್ಳಿ

 

ಪ್ರಕಾಶ್ ಕಂಬತ್ತಳ್ಳಿ


ಇಂದು ಮಹಾನ್ ಪ್ರಕಾಶನ ಸಂಸ್ಥೆ 'ಅಂಕಿತ ಪುಸ್ತಕ'ದ ರೂವಾರಿಯಾದ ಆತ್ಮೀಯ ಪ್ರಕಾಶ್ ಕಂಬತ್ತಳ್ಳಿ ಅವರ ಜನ್ಮದಿನ ಎಂದು ಹಲವು ಆತ್ಮೀಯರು ತಿಳಿಸಿದ್ದಾರೆ.  ಅವರು ಅಪಾರ ಕನ್ನಡ ಮತ್ತು ಕನ್ನಡ ಸಾಹಿತ್ಯ ಪ್ರೀತಿಯ ಪ್ರಕಾಶಕರಾಗಿ ಮಾತ್ರವಲ್ಲದೆ, ಶಿಕ್ಷಕರಾಗಿ, ನಾಟಕಕಾರರಾಗಿ, ಅನುವಾದಕರಾಗಿ, ಕಥೆಗಾರರಾಗಿ ಮತ್ತು ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. 

ಪ್ರಕಾಶ್‌ ಕಂಬತ್ತಳ್ಳಿ ಅವರು ದಾವಣಗೆರೆಯಲ್ಲಿ ಹುಟ್ಟಿ ಬೆಂಗಳೂರಿಗೆ ಬಂದು ನಾಟಕಶಾಸ್ತ್ರದಲ್ಲಿ ಬಿ.ಎ ಹಾಗೂ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದು, ಶಿಕ್ಷಕರಾಗಿ, ಭಾಷಾಂತರಕಾರರಾಗಿ, ಕಥೆಗಾರರಾಗಿ ಹಾಗೂ ವಿವಿಧ ಸಂಸ್ಥೆಗಳಲ್ಲಿ ಸಂಪಾದಕರಾಗಿ ದುಡಿದರು. ಇವರು ತಮ್ಮ ಪತ್ನಿ ಪ್ರಭಾ ಕಂಬತ್ತಳ್ಳಿ  ಅವರ ಜೊತೆಗೂಡಿ 1995ರ ಆಗಸ್ಟ್ 15ರಂದು ಪ್ರಾರಂಭಿಸಿದ ಅಂಕಿತ ಪುಸ್ತಕ ಪ್ರಕಾಶನ 30 ವರ್ಷಗಳನ್ನು ಪೂರೈಸಿದ್ದು ಇದೇ ತಿಂಗಳು 1000 ಕೃತಿ ಪ್ರಕಟಣೆಯ ಗಡಿಯನ್ನು ತಲುಪಲಿದೆ.
ಈ ಪ್ರಕಾಶನದಿಂದ ಬೆಳಕಿಗೆ ಬಂದ ಹೊಸ ಪ್ರತಿಭಾನ್ವಿತ ಬರಹಗಾರರು ಅಪಾರ. 

'ಅಂಕಿತ ಪುಸ್ತಕ' ಮಳಿಗೆಗೆ ಹೋಗಿ ಹಸನ್ಮುಖಿ  ಪ್ರಕಾಶ್ ಕಂಬತ್ತಳಿ - ಪ್ರಭಾ ಕಂಬತ್ತಳಿ ದಂಪತಿಯ ಅಕ್ಕರೆಯ ನೆಲೆಯಲ್ಲಿ ಪುಸ್ತಕಗಳನ್ನು ನೋಡಿ,  ಕೊಂಡು ಬರುವುದು ಉಲ್ಲಾಸ ತರುವ ಸಂಗತಿ.  ಕನ್ನಡದ ಕುರಿತಾಗಿ ಅಪಾರ ಕಾಳಜಿ ಉಳ್ಳವರಾಗಿ, ಬರಹಗಾರರಾಗಿ, ಸಹಸ್ರಾರು ಉತ್ತಮ ಪುಸ್ತಕಗಳನ್ನು ಪ್ರಕಟಿಸಿದವರಾಗಿ ಇವರು ನೀಡಿರುವ ಕೊಡುಗೆ ಅಪಾರ.  ತಮ್ಮದೇ ಪ್ರಕಾಶನದ್ದು ಮಾತ್ರವಲ್ಲದೆ ಇತರ ಎಲ್ಲ ಪ್ರಕಾಶನದ ಪುಸ್ತಕಗಳೂ ಇಲ್ಲಿ ಲಭ್ಯ.  ಉತ್ತಮ ಪ್ರಕಾಶನದ ಅಭಿರುಚಿಯುಳ್ಳ ಇವರಿಗೆ ಇತರ ಪ್ರಕಾಶಕರು ತಮ್ಮ ಪ್ರತಿಸ್ಫರ್ದಿಗಳೆಂಬ ಭಾವವೇ ಇಲ್ಲ.  ಪ್ರತಿ ವರ್ಷ ಉತ್ತಮ ಪ್ರಕಾಶನ ಸಂಸ್ಥೆಗಳಿಗೆ 'ಕಸಾಪ'ದಲ್ಲಿ ದತ್ತಿ ಇರಿಸಿ ಪ್ರಶಸ್ತಿ ಇತ್ತು ಗೌರವಿಸುತ್ತ ಬಂದಿದ್ದಾರೆ.  ಅಂಕಿತ ಪುಸ್ತಕದ ಪ್ರತಿ ಪುಸ್ತಕ ಬಿಡುಗಡೆ ಸಮಾರಂಭವೂ ಆಪ್ತ ನೆಲೆಯ ಹಬ್ಬದ ವಾತಾವರಣ ನೀಡುತ್ತವೆ 

ಪ್ರಕಾಶ್ ಕಂಬತ್ತಳ್ಳಿ ಅವರ ಪ್ರಕಟಿತ ಕೃತಿಗಳಲ್ಲಿ "ರಂಗ ವಿಹಾರ" (ರಂಗ ಸಮೀಕ್ಷೆ), "ಅನ್ವೇಷಕರು ಮತ್ತು ಇತರ ನಾಟಕಗಳು", "ಕಂಪ್ಯೂಟರ್ ಸೇವಕ ಮತ್ತು ಇತರ ನಾಟಕಗಳು", "ಆರದಿರಲಿ ಬೆಳಕು" ನಾಟಕ, "ಮನಸ್ಸಿಗೆಷ್ಟು ಮುಖಗಳು ನಾಟಕ",  ಮಕ್ಕಳಿಗಾಗಿ ಮತ್ತೆ ಹೇಳಿದ "ನಸಿರುದ್ದೀನನ ಕತೆಗಳು" ಮುಂತಾದವು ಸೇರಿವೆ.

2019 ರಲ್ಲಿ ಸಂದ 'ಪುಸ್ತಕ ಸಂಸ್ಕೃತಿ' ಪ್ರಶಸ್ತಿಯೂ ಸೇರಿದಂತೆ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಹಲವು ಗೌರವಗಳು ಸಂದಿವೆ.  ಅವರು ತಮಗಾಗಿ ಗೌರವಗಳನ್ನು ನಿರೀಕ್ಷಿಸದೆ, ಎಲ್ಲರನ್ನೂ ಗೌರವಿಸುವ ಅಪರಿಮಿತ ಸಹೃದಯಿ.

ಆತ್ಮೀಯ ಕನ್ನಡ ಸಾಹಿತ್ಯಪ್ರಿಯ ಪೋಷಕ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ‍ ಶುಭಹಾರೈಕೆಗಳು. 

Happy birthday Ankita Pustaka Prakash Kambattalli  Sir 🌷🙏🌷




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ