ಎಸ್.ವಿ. ನಾರಾಯಣಸ್ವಾಮಿ ರಾವ್
ಎಸ್.ವಿ. ನಾರಾಯಣಸ್ವಾಮಿ ರಾವ್
ಬೆಂಗಳೂರನ್ನು ರಾಮನವಮಿ ಸಂಗೀತೋತ್ಸವಗಳ ರಾಜಧಾನಿಯಾಗಿ ಇಡೀ ವಿಶ್ವವೇ ಗುರುತಿಸುವಂತೆ ಮಾಡಿದವರು ಎಸ್. ವಿ. (ಶಿವಾರಪಟ್ಟಣ ವಾಸುದೇವರಾವ್) ನಾರಾಯಣಸ್ವಾಮಿ ರಾವ್. ಇಂದು ಈ ಮಹಾನುಭಾವರ ಜನ್ಮದಿನದ ಸ್ಮರಣೆಯ ದಿನ.
ಸಂಗೀತೋತ್ಸವಗಳ ಪೈಕಿ ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ರಾಮಸೇವಾ ಮಂಡಲಿಯ ಶ್ರೀ ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವ ಎಲ್ಲೆಡೆ ಪ್ರಸಿದ್ಧ. ಕಲಾವಂತರ ಮನೆಗಳಲ್ಲಿ ಬಿಟ್ಟರೆ ಗುರುಮನೆ, ಅರಮನೆಗಳಲ್ಲೇ ಸುಳಿಯುತ್ತಿದ್ದ ಸಂಗೀತವನ್ನು ಸಮುದಾಯದ ನಡುವೆ ತಂದು ಅರಳಿಸಿದ್ದು ರಾಮನವಮಿಯೇ ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ. ಶ್ರೀರಾಮ ಸೇವಾ ಮಂಡಲಿ ಕಳೆದ 86 ವರ್ಷಗಳಿಂದ ಆ ಕೆಲಸವನ್ನು ಒಬ್ಬ ಸಂಗೀತಗಾರನಿಗಿರುವ ಸ್ವರನಿಷ್ಠೆಯಂತೆ, ಕಲಾತಪಸ್ಸಿನಂತೆ ಮಾಡುತ್ತ ಬಂದಿದೆ. ಈ ಸಂಗೀತೋತ್ಸವದಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ಮಾಡುವುದು ಹಿರಿಯ ಕಲಾವಿದರಿಗೆ ಜನಪ್ರಿಯತೆಯ ಸಂಕೇತವಾದರೆ, ಉದಯೋನ್ಮುಖರಿಗೆ ಅದೇ ಘಟಿಕೋತ್ಸವ. ಅದು ಸಂಗೀತ ರಸಿಕರ ಪಾಲಿಗಿರಲಿ, ಸಂಗೀತಗಾರರ ಪಾಲಿಗೂ ಪ್ರತಿಷ್ಠೆಯ ಉತ್ಸವ.
ರಾಮನವಮಿ ಸಂಗೀತೋತ್ಸವವನ್ನು ಆ ತಾರಸ್ಥಾಯಿಗೆ ಕೊಂಡೊಯ್ದ ಎಸ್.ವಿ. ನಾರಾಯಣಸ್ವಾಮಿ ರಾವ್ ಅವರಿಗೆ ಸಂಗೀತವೇ ಧರ್ಮವಾಗಿತ್ತು. ನಾರಾಯಣಸ್ವಾಮಿ ರಾವ್ ಅವರು 1924ರ ಡಿಸೆಂಬರ್ 21ರಂದು ಜನಿಸಿದರು. ಇನ್ನೂ 14ನೇ ವಯಸ್ಸಿನಲ್ಲಿ ಅವರು ಚಾಮರಾಜಪೇಟೆಯ ಗೆಳೆಯರೊಡನೆ ಕೂಡಿಕೊಂಡು 1939 ರಲ್ಲಿ ಶ್ರೀ ರಾಮಸೇವಾ ಮಂಡಲಿಯನ್ನು ಕಟ್ಟಿದರು. ನಂತರ ತ್ಯಾಗರಾಜರಿಗೆ ಸಂಗೀತವೇ ರಾಮಭಕ್ತಿ ಇದ್ದ ಹಾಗೆ, ಅವರಿಗೆ ಸಂಗೀತೋತ್ಸವ ನಡೆಸುವುದೇ ರಾಮಭಕ್ತಿ. ಇಡೀ ಬದುಕನ್ನೇ ಮಂಡಲಿಗೆ ಮೀಸಲಾಗಿಟ್ಟ ನಾರಾಯಣಸ್ವಾಮಿ ರಾವ್ ಅವರು ಬೆಂಗಳೂರಿನ ಜನರಲ್ಲಿ ಸಂಗೀತ ಸಂಸ್ಕೃತಿ ಮತ್ತಷ್ಟು ಪಸರಿಸಲು ಕೊಟ್ಟ ಕೊಡುಗೆಗೆ ಎಂಥವರೂ, ‘ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು’ ಎಂದು ನಮಿಸಬೇಕು.
ಆರಂಭದಲ್ಲೇ ನಾರಾಯಣಸ್ವಾಮಿ ರಾವ್ ಅವರಿಗೆ ಬೆಂಬಲ ಕೊಟ್ಟ ಟಿ. ಚೌಡಯ್ಯನವರು ಬನ್ನಿ, ನಾನೇ ನಿಮಗೆ ಪಿಟೀಲು ಪಕ್ಕವಾದ್ಯ ನುಡಿಸುತ್ತೇನೆ ಎಂದಾಗ, ಟಿ.ಆರ್. ಮಹಾಲಿಂಗಂ ಅವರಂಥ ಇನ್ನಿತರ ಸ್ಥಳೀಯ ಪ್ರಚಂಡರೂ ಕರೆದಾಗ, ದಕ್ಷಿಣ ಭಾರತದ ಸಿದ್ಧಪ್ರಸಿದ್ಧ ಕಲಾವಿದರೆಲ್ಲ ಇದರತ್ತ ಆಕರ್ಷಿತರಾದರು. ಶ್ರೀ ರಾಮಸೇವಾ ಮಂಡಲಿಯ ರಾಮನವಮಿ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳದೆ ತಮ್ಮ ವರ್ಷದ ಸಂಗೀತ ಸಂಚಾರ ಮುಗಿಯುವುದಿಲ್ಲ ಎಂದು ತಮಿಳುನಾಡಿನ ಕಲಾವಿದರು ಭಾವಿಸುವಂತೆ ಮಾಡಿದ್ದೇ ಒಂದು ಹೆಗ್ಗಳಿಕೆ. ದ್ವಾರಂ ವೆಂಕಟಸ್ವಾಮಿ ನಾಯ್ಡು, ಜಿ.ಎನ್. ಬಾಲಸುಬ್ರಹ್ಮಣ್ಯಂ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಂಬೈ ವೈದ್ಯನಾಥ ಭಾಗವತರ್, ಮಧುರೈ ಮಣಿ ಅಯ್ಯರ್, ಪಾಲ್ಘಾಟ್ ಮಣಿ ಅಯ್ಯರ್, ಎಂ.ಡಿ. ರಾಮನಾಥನ್, ಎಂ.ಕೆ. ತ್ಯಾಗರಾಜ ಭಾಗವತರ್, ಪಟ್ಟಮ್ಮಾಳ್, ವಸಂತಕೋಕಿಲ, ಅವರ ಮಗಳು ಎಂ. ಎಲ್. ವಸಂತಕುಮಾರಿ ಮೊದಲಾದ ಕಲಾವಿದರ ಸಂಗೀತ ಕೇಳಿದ್ದು ಬೆಂಗಳೂರಿನ ಸೌಭಾಗ್ಯವಾಯಿತು. ಇನ್ನು ವೇದಿಕೆಯ ಮೇಲೆ ನಕ್ಷತ್ರವಲ್ಲ- ಒಂದು ನಕ್ಷತ್ರ ಪುಂಜದ ಹಾಗೆ ಮಿನುಗುತ್ತಿದ್ದ ಎಂ.ಎಸ್. ಸುಬ್ಬುಲಕ್ಷ್ಮಿ ಕಣ್ಗಂ ಮನಕ್ಕಂ ಸೊಗಯಿಸಿ ಕೇಳುವ ಸಂಗೀತ ಮಾತ್ರವಲ್ಲ, ನೋಡುವ ಸಂಗೀತವೂ ಇದೆ ಎಂದು ಶ್ರುತಪಡಿಸಿದರು!
ಕರ್ನಾಟಕ ಸಂಗೀತದ ಮೂರು ತಲೆಮಾರುಗಳ ಕಲಾವಿದರ ಪ್ರತಿಭೆಯನ್ನು ಮಂಡಲಿಯ ರಾಮನವಮಿ ಸಂಗೀತೋತ್ಸವ ಆರಾಧಿಸಿದೆ. ಆರ್.ಕೆ. ಶ್ರೀಕಂಠನ್, ಎಸ್. ಬಾಲಚಂದರ್, ಬಾಲಮುರಳಿಕೃಷ್ಣ, ಯಾಮನಿ ಶಂಕರಶಾಸ್ತ್ರಿ, ಮಹಾರಾಜಪುರಂ ಅಪ್ಪ ಮಕ್ಕಳು, ಕುನ್ನಕುಡಿ ವೈದ್ಯನಾಥನ್, ಎನ್. ರಮಣಿ, ಎಂ.ಎಸ್. ಗೋಪಾಲಕೃಷ್ಣನ್, ಏಸುದಾಸ್, ಕದ್ರಿ ಗೋಪಾಲನಾಥ್, ಎ.ಕೆ.ಸಿ. ನಟರಾಜನ್, ರವಿಕಿರಣ್, ಯು. ಶ್ರೀನಿವಾಸ್, ನಾಗಮಣಿ ಶ್ರೀನಾಥ್, ಸುಮಾ ಸುಧೀಂದ್ರ, ಸುಧಾ ರಘುನಾಥನ್, ಎಂ.ಎಸ್. ಶೀಲಾ - ಮಂಡಲಿಯ ವೇದಿಕೆಯಲ್ಲಿ ಹಾಡಿದ, ನುಡಿಸಿದ ಕಲಾವಿದರ ಹೆಸರುಗಳನ್ನು ಬರೆಯುತ್ತ ಹೋದರೆ ಅದು ಕರ್ನಾಟಕ ಸಂಗೀತದ ಎಲ್ಲ ಕಲಾವಿದರ ಪಟ್ಟಿಯೇ ಆಗುತ್ತದೆ. ಇವರಲ್ಲಿ ಅನೇಕರು 4 ದಶಕಗಳಿಗೂ ಹೆಚ್ಚು ಕಾಲದಿಂದ ಸತತವಾಗಿ ಇಲ್ಲಿ ಕಛೇರಿ ಮಾಡಿದ್ದಾರೆಂಬುದೇ ಒಂದು ವಿಶೇಷ.
ಕರ್ನಾಟಕ ಸಂಗೀತವಷ್ಟೇ ಅಲ್ಲ, ಹಿಂದೂಸ್ತಾನಿ ಸಂಗೀತವೂ ರಾಮೋತ್ಸವದ ಭಾಗವಾಗಿದೆ. ಬಡೇ ಗುಲಾಂ ಅಲಿ ಖಾನ್, ಬಿಸ್ಮಿಲ್ಲಾ ಖಾನ್, ಅಲ್ಲಾ ರಖಾ, ರವಿಶಂಕರ್ ಅವರಿಂದ ಹಿಡಿದು ಯಾರು ಇಲ್ಲಿಗೆ ಬಂದಿಲ್ಲ! ದೇಶದ ಯಾವ ಮುಸ್ಲಿಂ ಕಲಾವಿದ ಇಲ್ಲಿಗೆ ಬಂದು ರಾಮನಿಗೆ ಸಂಗೀತ ಸೇವೆ ಸಲ್ಲಿಸಿಲ್ಲ?
ಕನ್ನಡ ಚಳವಳಿಯನ್ನು ರೂಪಿಸಿದ ಅನಕೃ ಅವರು, ಅದರ ಅಂಗವಾಗಿ ಹಿಂದೊಮ್ಮೆ ಈ ರಾಮನವಮಿ ಸಂಗೀತೋತ್ಸವದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕಛೇರಿಯ ನಡುವೆ ಕನ್ನಡನಾಡಿನ ಕಲಾವಿದರಿಗೆ, ಕನ್ನಡದ ಹಾಡುಗಳಿಗೆ ಪ್ರಾಶಸ್ತ್ಯ ಕೊಡಬೇಕು ಎಂದು ಕನ್ನಡದ ಕಹಳೆ ಮೊಳಗಿಸಿದ್ದರು. ಆದರೂ ನಮಗೆ ಒಳ್ಳೆಯ ಸಂಗೀತ ಮಾತ್ರ ಬೇಕು ಕಲಾವಿದರ ಊರುಕೇರಿ ಮತ್ತು ಅವರಾಡುವ ಭಾಷೆ ಅಲ್ಲ ಎಂದು ಸಂಗೀತ ಪ್ರೇಮಿಗಳು ಅದನ್ನು ಅಪಸ್ವರದಂತೆ ಮರೆತುಬಿಟ್ಟರು.
ದೇವರು, ಧರ್ಮ, ಭಾಷೆಯ ಗಡಿಗಳನ್ನು ಮೀರಿ ಹತ್ತಾರು ಸಾವಿರ ಮಂದಿ ಒಂದೇ ಚಪ್ಪರದಡಿ ಕುಳಿತು ಸಂಗೀತವನ್ನು ಸವಿಯುವ ಅವಕಾಶವನ್ನು ಕಳೆದ 9 ದಶಕಗಳಿಂದ ಶ್ರೀ ರಾಮಸೇವಾ ಮಂಡಲಿ ನಮ್ಮ ಹೆಮ್ಮೆ. ಇದನ್ನು ದೊರಕಿಸಿಕೊಟ್ಟ ಎಸ್.ವಿ. ನಾರಾಯಣಸ್ವಾಮಿ ರಾವ್ ಅವರು ನಮಗೆಲ್ಲ ಚಿರಸ್ಮರಣೀಯರು.
ಎಸ್.ವಿ. ನಾರಾಯಣಸ್ವಾಮಿ ರಾವ್ ಅವರು 2000 ದ ಜನವರಿ 5ರಂದು ಈ ಲೋಕವನ್ನಗಲಿದರು. ಚಾಮರಾಜಪೇಟೆಯ 2ನೇ ಅಡ್ಡರಸ್ತೆಗೆ ಅವರ ಹೆಸರನ್ನಿಡಲಾಗಿದೆ.
ಲೇಖನ ಆಧಾರ: ರಾಮಸೇವಾಮಂಡಳಿ 75ನೇ ವರ್ಷದ ಸಂದರ್ಭದಲ್ಲಿ ಆರ್. ಪೂರ್ಣಿಮಾ Poornima Rajarao ಅವರು ಪ್ರಜಾವಾಣಿಯಲ್ಲಿ ಬರೆದ ಲೇಖನ.
On the birth anniversary of Great name in Ramanavami Music Traditon S. V. Narayanaswamy Rao 🌷🙏🌷

ಕಾಮೆಂಟ್‌ಗಳು