ಬುಕ್ಕಾಂಬುಧಿ ಕೃಷ್ಣಮೂರ್ತಿ
ಶತಾಯುಷಿ ಬುಕ್ಕಾಂಬುಧಿ ಕೃಷ್ಣಮೂರ್ತಿ
ಬಿ ವಿ ಕೃಷ್ಣಮೂರ್ತಿ - ಕೆ ಬಿ ಮೂರ್ತಿ - ಬುಕ್ಕಾಂಬುಧಿ ಕೃಷ್ಣಮೂರ್ತಿ ಈ ಎಲ್ಲಾ ಹೆಸರು ಒಬ್ಬರದ್ದೇ. ಇವರು ಶ್ರಮಜೀವಿ, ಕ್ರೀಡಾಪಟು, ನಟರು, ಬರಹಗಾರರು, ವ್ಯಾಪಕ ಪ್ರವಾಸಿ, ಈಗ ಶತಾಯುಷ್ಯ ಪೂರೈಸಿ ನೂರೊಂದನೆಯ ವಯಸ್ಸಿನ ತಾರುಣ್ಯಕ್ಕೆ ಕಾಲಿರಿಸಿದ್ದಾರೆ.
ಬುಕ್ಕಾಂಬುಧಿ ಕೃಷ್ಣಮೂರ್ತಿ 1926ರ ಜನವರಿ 8ರಂದು ಜನಿಸಿದರು. ತಂದೆ ವೆಂಕಟರಮಣ ಭಾಗವತರು. ತಾಯಿ ನಂಜಮ್ಮ. ಕೃಷ್ಣಮೂರ್ತಿ ಅವರು 7 ವರ್ಷದವರಿರುವಾಗಲೇ ತಾಯಿ ನಂಜಮ್ಮನವರು ತೀರಿಕೊಂಡರು. ಪ್ರೈಮರಿ ವಿಧ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಮಾಧ್ಯಮಿಕ ಮತ್ತು ಹೈಸ್ಕೂಲು ವಿಧ್ಯಾಭ್ಯಾಸ ಚಿಕ್ಕಮಗಳೂರಿನಲ್ಲಿ ನಡೆಯಿತು. 1943-44 ಅವಧಿಯಲ್ಲಿ ಬೆಂಗಳೂರಿನಲ್ಲಿ ಬೆರಳಚ್ಚು ಮತ್ತು ಶೀಘ್ರಲಿಪಿ ಕಲಿತರು. 1944ರ ವರ್ಷ ಶ್ಯಾನುಭೋಗ ರಂಗಯ್ಯನವರ ಮಗಳು ಚಿನ್ನಮ್ಮ ಅವರನ್ನು ವರಿಸಿದರು.
ಬುಕ್ಕಾಂಬುಧಿ ಕೃಷ್ಣಮೂರ್ತಿ ಅವರು 1945ರಲ್ಲಿ ಕಾಫಿ ಮಂಡಲಿಯಲ್ಲಿ ಕೆಲಸಕ್ಕೆ ಸೇರಿದರು. ಚಿಕ್ಕಮಗಳೂರು, ಬಾಳೆಹೊನ್ನೂರು, ಬೆಂಗಳೂರು ಮುಂತಾದೆಡೆ ಸೇವೆ ಸಲ್ಲಿಸಿ 1984ರಲ್ಲಿ ನಿವೃತ್ತರಾದರು. ಬೆಂಗಳೂರಿನ ಮಹಾಬೋಧಿ ಸೊಸೈಟಿಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು. ಅವರು ಬಿವಿಕೆ ಎಂದೇ ಹೆಸರುವಾಸಿ. ಬಹಳ ಜನ ಸ್ನೇಹಿತರು. ಜೀವನಾನುಭವ ಅಪಾರವಾದದ್ದು. ಅನೇಕರಿಗೆ ದಾರಿ ದೀಪ. ಮಾದರಿ. 1994ರಲ್ಲಿ ಪತ್ನಿ ನಿಧನರಾದ ನಂತರ 1997ರಲ್ಲಿ ಅಮೆರಿಕಕ್ಕೆ ನೆಲೆಸಲು ಬಂದರು. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಬಂಧು - ಬಳಗ, ಸ್ನೇಹಿತರು, ಅಭಿಮಾನಿಗಳ ಹೀಗೆ ಇವರದ್ದು ವ್ಯಾಪಕವಾದ ಜೀವನ. 2019ರಲ್ಲಿ ಇವರಿಗೆ ಕನಕಾಭಿಷೇಕ ನೆರವೇರಿತು.
ಬುಕ್ಕಾಂಬುಧಿ ಕೃಷ್ಣಮೂರ್ತಿ ಅವರು ಶಿಕ್ಷಣದಲ್ಲಿ ಕನ್ನಡ ಓದಿದವರಲ್ಲ. ಆದರೆ ಸಾಹಿತ್ಯಾಭಿಮಾನಿ. ಅವರ ಅಚ್ಚುಮೆಚ್ಚಿನ ಸಾಹಿತಿ - ಬೀಚಿ. ತಿ೦ಮನನ್ನು ಚೆನ್ನಾಗಿ ಪರಿಚಯ ಮಾಡಿಕೊಂಡವರು. ಆ ಹಿನ್ನೆಲೆಯಿಂದಾಗಿಯೇ ಅವರು ರಚನೆಗಳಲ್ಲಿ ವಿನೋದ - ಸರಳತೆ - ಸರಸತೆ - ಹಾಸ್ಯ ಒಳಹೊಕ್ಕಿದೆ. ಅವರ ಜೀವನದಲ್ಲಿ ಪಡೆದ ಅನುಭವಗಳನ್ನು ಅವರು ಉದಾಹರಿಸಿರುವುದೂ ಹಾಸ್ಯದ ಪರಿಯಲ್ಲಿಯೇ. ಮಾತಿಗೊಂದು ವಿನೋದ ಪ್ರಸಂಗ ಹೇಳುವ ಪರಿ, ಎಲ್ಲವೂ ಸೊಗಸು.
ಬುಕ್ಕಾಂಬುಧಿ ಕೃಷ್ಣಮೂರ್ತಿ ಅವರು ಅಮೆರಿಕ ದೇಶದಲ್ಲಿ ವಾಸ ಮತ್ತು ವೃತ್ತಿ (1997-2026) ಆರಂಭಿಸಿದಾಗಿಂದ ಬಿಡುವಿನ ವೇಳೆಯಲ್ಲಿ ಬರವಣಿಗೆಯೇ ಅವರ ಹವ್ಯಾಸ. ತಮ್ಮ ಎಪ್ಪತ್ತರ
ವಯಸ್ಸಿನಲಿ ಅಮೇರಿಕದಲ್ಲಿ ಕಂಪ್ಯೂಟರ್ ಕಲಿತರು. ಭಾರತ ಮತ್ತು ವಿಶ್ವದ ಅನೇಕ ಕಡೆ ಪ್ರವಾಸ ಮಾಡಿದರು. ತಾವು ನೋಡಿ ಬಂದ ಊರು ಸ್ಥಳ ಪ್ರವಾಸ ಮಾಡಿದ ಬಗ್ಗೆ ಬರೆಯಲು ಆರಂಭಿಸಿದರು. ಹೀಗೆ ಅವರ ನೆನಪಿನ ಬುತ್ತಿಯಲ್ಲಿನ ಅನೇಕ ವಿಷಯಗಳು ‘ಚಿಕ್ಕಮಗಳೂರು ವೆಂಕಟರಮಣ ಭಾಗವತರು’, ‘ನನ್ನ ವಿದೇಶ ಪ್ರವಾಸ’, ‘ನಮ್ಮೂರಿನ ಕಿರುಪ್ರಸಂಗಗಳ ಮಾಲೆ', 'ನಾನು ನಡೆದುಬಂದ ಹಾದಿ', 'ಬುಕ್ಕಾಂಬುಧಿ ಕನ್ನಡ ಶಬ್ದಕೋಶ', 'ಪ್ರವಾಸಗಳ ಕಂತೆ', 'ನನ್ನ ಒಡನಾಟದ ವ್ಯಕ್ತಿಗಳು', 'Bundle of Travelogues', ಬುಕ್ಕಾಂಬುಧಿ ಕನ್ನಡ-ಇಂಗ್ಲಿಷ್ ಶಬ್ದಕೋಶ', 'ನೆನಪಿಸಿಕೊಂಡ ವಿನೋದ ಪ್ರಸಂಗಗಳು', ‘Remembered Jokes’ ಎಂಬ ಕೃತಿಗಳಲ್ಲಿ ಪ್ರಕಟಗೊಂಡಿವೆ.
ಬುಕ್ಕಾಂಬುಧಿ ಪ್ರಾದೇಶಿಕ ಪದಕೋಶ ಸುಮಾರು 20 ವರ್ಷಗಳ ಕಾಲ ನಿರಂತರವಾಗಿ ಪದಗಳನ್ನು ಜೋಡಿಸಿದ್ದರ ಫಲ. ಅದು ಇಂದಿನ ಇಂಗ್ಲೀಷ್ ಕಲಿತವರಿಗೂ ಅದರ ಓದಿನ ಲಾಭವಾಗಬೇಕೆಂದು ಆ ಪದಗಳ ಅರ್ಥವನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಅಲ್ಲಲ್ಲಿ ಸಚಿತ್ರ ವಿವರಣೆ ಇದೆ. ಈ ಶ್ರಮ ಸಾರ್ಥಕವಾಗಲಿ. ಆ ಪದಗಳ ಅರ್ಥ, ಆ ಕಾಲದ ಆಚರಣೆಗಳು, ವಸ್ತುಗಳ ಚಿತ್ರಗಳು ಎಲ್ಲರ ಗಮನಕ್ಕೆ ಬರಲಿ ಎಂಬುದೇ ಅವರ ಅಭಿಲಾಷೆ.
ಶತಾಯುಷಿಗಳಾದ ಪೂಜ್ಯ ಬುಕ್ಕಾಂಬುಧಿ ಕೃಷ್ಣಮೂರ್ತಿ ಅವರಿಗೆ ಪ್ರಣಾಮಪೂರ್ವಕ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಮಾಹಿತಿ ಕೃಪೆ: ಡಾ. ಬಿ.ವಿ.ರಾಜಾರಾಂ
On birth centenary of Bukkambudhi Krishnamoorthy Sir 🌷🙏🌷

ಕಾಮೆಂಟ್‌ಗಳು