ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಧವ ಗಾಡ್ಗೀಳ್

ಮಹಾನ್ ಪರಿಸರ ಸಂರಕ್ಷಕ ಮಾಧವ ಗಾಡ್ಗೀಳ್  ನಮನ


ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ನಿರಂತರ ಶ್ರಮಿಸಿದ ಡಾ.  ಮಾಧವ ಗಾಡ್ಗೀಳ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ.  ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮಾಧವ ಗಾಡ್ಗೀಳ್  ಅವರು 1942ರ ಮೇ 24ರಂದು ಪುಣೆಯಲ್ಲಿ ಜನಿಸಿದರು. ತಾಯಿ ಪ್ರಮೀಳಾ. ತಂದೆ ಧನಂಜಯ ರಾಮಚಂದ್ರ ಗಾಡ್ಗೀಳ್ ಅವರು ಕೇಂಬ್ರಿಡ್ಜ್ ವಿದ್ವಾಂಸರು, ಅರ್ಥ ಶಾಸ್ತ್ರಜ್ಞರು, ಗೋಖಲೆ ಇನ್ಸ್ಟಿಟ್ಯೂಟಿನ ನಿರ್ದೇಶಕರೂ, ಗಾಡ್ಗೀಲ್ ಫಾರ್ಮುಲಾ ಗ್ರಂಥಜ್ಞರೂ ಆಗಿದ್ದವರು. ಮಾಧವ ಗಾಡ್ಗೀಳ್ ಅವರು ಪುಣೆಯ ಫರ್ಗೂಸನ್  ವಿಶ್ವವಿದ್ಯಾಲಯದಿಂದ ಜೀವಶಾಸ್ತ್ರದಲ್ಲಿ ಪದವಿ ಹಾಗೂ ಮುಂಬೈ ವಿಶ್ವವಿದ್ಯಾಲಯದಿಂದ 1965ರಲ್ಲಿ ಪ್ರಾಣಿಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದರು. ಹಾರ್ವರ್ಡ್ ವಿಶ್ವವಿದ್ಯಾಲಯದಿಂದ 1969ರಲ್ಲಿ ಪ್ರೊ. ವಿಲಿಯಮ್ ಬೊಸರ್ಟ್ ಅವರ ಮಾರ್ಗದರ್ಶನದಲ್ಲಿ "mathematical ecology and fish behavior" ಸಂಶೋಧನೆಗಾಗಿ ಪಿಎಚ್.ಡಿ ಗಳಿಸಿದರು. 
ಹಾರ್ವರ್ಡ್ನಲ್ಲಿ ಹೆಚ್ಚಿನ ಸಂಶೋಧನೆಗಾಗಿ ಐಬಿಎಮ್ ಸಂಸ್ಥೆಯ ಫೆಲೊಷಿಪ್ ಗಳಿಸಿ ಹಾರ್ವರ್ಡ್ ಕಂಪ್ಯೂಟಿಂಗ್ನಲ್ಲಿ ರಿಸರ್ಚ್ ಫೆಲೊ ಆಗಿ ಮತ್ತು ಜೀವಶಾಸ್ತ್ರ ಅಧ್ಯಾಪನ ನಡೆಸಿ ಎರಡು ವರ್ಷಗಳ ನಂತರ 1971ರಲ್ಲಿ ಭಾರತಕ್ಕೆ ಹಿಂದಿರುಗಿದರು. 

1971-73 ಅವಧಿಯಲ್ಲಿ ಪುಣೆಯ ಅಗರ್ಕರ್ ರಿಸರ್ಚ್ ಇನ್ಸ್ಟಿಟ್ಯೂಟಿನಲ್ಲಿ ಸೈಂಟಿಫಿಕ್ ಆಫೀಸರ್ ಆಗಿದ್ದರು. 1973 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿ 2004 ವರ್ಷದಲ್ಲಿ ಅಲ್ಲಿನ ಚೇರ್ಮನ್ ವರೆಗಿನ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದರು. ತಮ್ಮ ಈ ಸೇವಾ ಅವಧಿಯಲ್ಲಿ the Centre of Theoretical Studies and the Centre for Ecological Studies ಎಂಬ ಎರಡು ಪ್ರಮುಖ ಸಂಶೋಧನಾ ಕೇಂದ್ರಗಳ ಸ್ಥಾಪನೆಗೆ ಕಾರಣರಾದರು. ಸ್ಟಾನ್ಫೋರ್ಡ್, ಕ್ಯಾಲಿಫೋರ್ನಿಯಾ, ಬರ್ಕ್ಲಿ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. 2004ರ ನಿವೃತ್ತಿಯ ನಂತರ ಪುಣೆಯಲ್ಲಿ ಹಿಂದೆ ತಾವಿದ್ದ ಅಗರ್ಕರ್ ರಿಸರ್ಚ್ ಇನ್ಸ್ಟಿಟ್ಯೂಟಿನಲ್ಲಿ ಹಾಗೂ ಗೋವಾ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. 

1976ರಲ್ಲಿ ಕರ್ನಾಟಕ ಸರ್ಕಾರವು ಬೆತ್ತದ ವನಸಂಪತ್ತನ್ನು ಕಾಪಾಡಿಕೊಳ್ಳಲು ಗಾಡ್ಗೀಳ್ ಅವರ ಶಿಫಾರಸ್ಸನ್ನು ಕೇಳಿತು. ಅವರ ವರಧಿಯ ಆಧಾರದ ಮೇರೆಗೆ ಅರಣ್ಯ ಆಧಾರವುಳ್ಳ ಕೈಗಾರಿಕೆಗಳಿಗೆ ಸಬ್ಸಿಡಿ ನಿಯಂತ್ರಣದ ಬಗ್ಗೆ ಗಮನ ಹರಿಸಲಾಯಿತು. 1986 - 1990 ಅವಧಿಯಲ್ಲಿ ಅವರು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಅವರು ನೀಲಗಿರಿಯಲ್ಲಿ ಪ್ರಥಮ ಬಯೋಸ್ಪಿಯರ್ ರಿಸರ್ವ್ ಸ್ಥಾಪನೆಗೆ ಕಾರಣರಾದರು.  ಇದಕ್ಕಾಗಿ ಅವರು ಪಶ್ಚಿಮ ಘಟ್ಟದ ಮೂರು ರಾಜ್ಯಗಳ ಕಾಡುಗಳಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿ, ಅಲ್ಲಿನ ಆದಿವಾಸಿಗಳು ಮತ್ತು ಅರಣ್ಯವಾಸಿಗಳೊಂದಿಗೆ ವಾಸಿಸಿ ಪರಿಸರ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ್ದರು.1998-2002 ಅವಧಿಯಲ್ಲಿ ಯುನೈಟೆಡ್ ನೇಷನ್ಸ್ ಅಂಗಸ್ಥೆಯಾದ  Science and Technology Advisory Panel of Global Environment Facility ಚೇರ್ಮನ್ ಹುದ್ದೆಯನ್ನು ಅಲಂಕರಿಸಿದ್ದರು. ಪರಿಸರ ಸಂಬಂಧಿ ಶಿಕ್ಷಣ ಸಲಹೆಗಾಗಿ National Council of Educational Research and Training. ಸದಸ್ಯರಾಗಿದ್ದರು. National Tiger Conservation Authority ಸದಸ್ಯರಾಗಿದ್ದರು. ಶಿಕ್ಷಣದಲ್ಲಿ ಪರಿಸರ ಸಂರಕ್ಷಣೆ ವಿಚಾರಗಳ ಅಳವಡಿಕೆಗಾಗಿ Environmental Education Curriculumat School level ಸಮಿತಿಯ ಚೇರ್ಮನ್ ಆಗಿದ್ದರು. 2010ರಲ್ಲಿ ಭಾರತ ಸರ್ಕಾರ ಆಯೋಜಿಸಿದ ಪಶ್ಜಿಮಘಟ್ಟ ಸಂರಕ್ಷಣೆಗಾಗಿನ Western Ghats Ecology Expert Panel (WGEEP) ಸಮಿತಿಯ ಚೇರ್ಮನ್ ಆಗಿ ಆಯ್ಕೆಯಾಗಿದ್ದರು. ಈ ಸಮಿತಿಯು ಪಶ್ಚಿಮ ಘಟ್ಟಗಳ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಶಿಫಾರಸು ಮಾಡಿತ್ತು. ಈ ವರದಿಯು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ತೀವ್ರ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಗೆ ಕಾರಣವಾಗಿತ್ತು.

ಮಾಧವ ಗಾಡ್ಗೀಳ್‌ ಅವರಿಗೆ ಪರಿಸರ ವಿಜ್ಞಾನ ಮತ್ತು ಸಮುದಾಯ ಆಧಾರಿತ ಸಂರಕ್ಷಣೆಗೆ ನೀಡಿದ ಜೀವಮಾನದ ಕೊಡುಗೆಗಾಗಿ ವಿಶ್ವಸಂಸ್ಥೆಯು 2024ರಲ್ಲಿ 'ಚಾಂಪಿಯನ್ಸ್ ಆಫ್ ದಿ ಅರ್ಥ್' ಪ್ರಶಸ್ತಿ ನೀಡಿ ಗೌರವಿಸಿತ್ತು. ಇದು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿ. ಭಾರತ ಸರ್ಕಾರದ ಪದ್ಮಶ್ರೀ ಮತ್ತು ಪದ್ಮಭೂಷಣ,  ವಾಲ್ವೋ ಎನ್ವೈರನ್ಮೆಂಟ್ ಪ್ರೈಜ್, ಟೈಲರ್ ಪ್ರೈಜ್ ಫಾರ್ ಎನ್ವೈರನ್ಮೆಂಟಲ್ ಅಚೀವ್ಮೆಂಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

ಮಾಧವ ಗಾಡ್ಗೀಳ್ ಅವರು 2026 ಜನವರಿ 7ರಂದು ನಿಧನರಾದರು.  ಅಗಲಿದ ಮಹಾನ್ ಚೇತನಕ್ಕೆ ನಮನ.

Respects to departed soul Great Environmentalist Dr. Madhav Gadgil 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ