ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಲ್. ಗುಂಡಪ್ಪ

 


ಎಲ್.  ಗುಂಡಪ್ಪ


ಲಿಂಗಣ್ಣಯ್ಯ ಗುಂಡಪ್ಪನವರು ಕಳೆದ ಶತಮಾನದ ಕನ್ನಡದ ಮೇರು ಸಾಹಿತಿಗಳಲ್ಲೊಬ್ಬರು.  ಅವರು ತಮ್ಮ ಭಾಷಾಂತರ, ಗ್ರಂಥಸಂಪಾದನೆ ಮತ್ತು ಮಕ್ಕಳ ಸಾಹಿತ್ಯಗಳಲ್ಲಿ ಬಹಳಷ್ಟು ಕೊಡುಗೆ ನೀಡಿದ ಮಹನೀಯರು. 

ಎಲ್.  ಗುಂಡಪ್ಪ ಅವರು ಹಾಸನ ಜಿಲ್ಲೆಯ ಮತಿಘಟ್ಟ ಎಂಬ ಹಳ್ಳಿಯಲ್ಲಿ 1903ರ ಜನವರಿ 8ರಂದು ಜನಿಸಿದರು.  ತಂದೆ ಲಿಂಗಣ್ಣಯ್ಯ.  ತಾಯಿ ಚನ್ನಮ್ಮ.  ಗುಂಡಪ್ಪನವರು ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಬಿ.ಎಂ.ಶ್ರೀಕಂಠಯ್ಯನವರು ಅವರ ಮಾರ್ಗದರ್ಶಿಗಳೂ ಗುರುಗಳೂ ಆಗಿದ್ದರು.  ಸಂಸ್ಕೃತ, ತಮಿಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಅವರಲ್ಲಿ ಅಪಾರ ಪಾಂಡಿತ್ಯವಿದ್ದು, ಭಾಷಾಂತರದಲ್ಲಿ ಒಲವು ತೋರಿದರು. 

ಗುಂಡಪ್ಪನವರು ಹಲವು ವರ್ಷಗಳವರೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಾಠಹೇಳಿದ ನಂತರ, ಇಂಗ್ಲಿಷ್-ಕನ್ನಡ ನಿಘಂಟು ಯೋಜನೆಯಲ್ಲಿ ಸಹಾಯಕ ಸಂಪಾದಕರಾದರು. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸುತ್ತಿದ್ದ ಕನ್ನಡ-ಕನ್ನಡ ನಿಘಂಟಿನ ಸಂಪಾದಕರಾಗಿಯೂ ಕೆಲಸ ಮಾಡಿದರು.

ಗುಂಡಪ್ಪನವರು ತಮಿಳಿನ ಪ್ರಾಚೀನ ಕೃತಿಗಳಾದ ತಿರುಕ್ಕುರಳ್, ಮಣಿಮೇಖಲೈ, ಶಿಲಪ್ಪದಿಕಾರಂ, ಅವ್ವೆಯಾರ್, ಪೆರಿಯಪುರಾಣಂ, ನಾಲ್ಮಣಿಕಡುಕು, ತಿರುವಾಚಕಂ, ಪೆರುಂಗದೈ ಮತ್ತು ಉಳಗನೀತಿಗಳನ್ನು ಕನ್ನಡಕ್ಕೆ ತಂದರು. ಅಂತೆಯೇ ಕೆಲವು ಕನ್ನಡ ಕೃತಿಗಳನ್ನು ತಮಿಳಿಗೆ

ಅನುವಾದಿಸಿದರು.  ಅವರ ಭಾಷಾಂತರ ಕಾರ್ಯವು, ಪ್ರಾಚೀನ ತಮಿಳಿಗೆ ಸೀಮಿತವಾಗದೆ ಸುಬ್ರಹ್ಮಣ್ಯ ಭಾರತಿಯವರ ಕವಿತೆಗಳ ಕನ್ನಡ ರೂಪವಾದ ‘ಭಾರತಿಯವರ ಕವಿತೆಗಳು’, ಮು. ವರದರಾಜನ್ ಅವರ ‘ತಮಿಳು ಸಾಹಿತ್ಯಚರಿತ್ರೆ’, ಯು. ಸ್ವಾಮಿನಾಥ ಅಯ್ಯರ್ ಅವರ ಆತ್ಮಕಥೆಯಾದ ‘ನನ್ನ ಚರಿತ್ರೆ’, ರಾಜಾಜಿ ಅವರ ಮಹಾಭಾರತ ಮುಂತಾದವು ಅವರು ಆಧುನಿಕ ತಮಿಳಿನಿಂದ ಕನ್ನಡಕ್ಕೆ ತಂದಿರುವ ಕೃತಿಗಳು.

ಗುಂಡಪ್ಪನವರು ಲಿಯೋ ಟಾಲ್ ಸ್ಟಾಯ್ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವು ಇಂದಿಗೂ ಜನಪ್ರಿಯವಾಗಿವೆ. ಆರ್.ಎಲ್. ಸ್ಟೆಫೆನ್ ಸನ್ ಅವರ ಕಾದಂಬರಿಯಾದ ‘ಡಾಕ್ಟರ್ ಜೆಕಿಲ್ ಅಂಡ್ ಮಿಸ್ಟರ್ ಹೈಡ್’ ಅನ್ನು ಗುಂಡಪ್ಪನವರು ‘ನರರಾಕ್ಷಸ’ ಎಂಬ ಹೆಸರಿನಲ್ಲಿ ಕನ್ನಡಿಸಿದ್ದಾರೆ. ಹಾಗೆಯೇ ಮ್ಯಾಥ್ಯೂ ಅರ್ನಾಲ್ಡನ ಕಥನಕವನವಾದ ‘ಸೊಹ್ರಾಬ್ ಅಂಡ್ ರುಸ್ತುಂ’ ಅನ್ನು ಕೂಡ ಅನುವಾದಿಸಿದ್ದಾರೆ. ಸಂಸ್ಕೃತದ ನಾಟಕಕಾರನಾದ ಭಾಸನ ‘ಸ್ವಪ್ನ ವಾಸವದತ್ತಾ’ ಸೇರಿದಂತೆ ಒಂಬತ್ತು ನಾಟಕಗಳು ಗುಂಡಪ್ಪನವರಿಂದ ಕನ್ನಡಕ್ಕೆ ಬಂದಿವೆ. ಅವರು, ಭಾಷಾಂತರದ ತಾತ್ವಿಕತೆಯನ್ನು ಕುರಿತ ‘ಕನ್ನಡಿ ಸೇವೆ’ ಎಂಬ ಪುಸ್ತಕವನ್ನೂ ಬರೆದಿದ್ದಾರೆ.  ಗುಂಡಪ್ಪನವರ 'ಆದಿಪುರಾಣ ಸಂಗ್ರಹ’(1954) ಪಂಪನ ಅಭಿಜಾತ ಕೃತಿಯಾದ ‘ಆದಿಪುರಾಣ’ದ ಸಂಗ್ರಹಿತ ಆವೃತ್ತಿ. ಪುಸ್ತಕದ ಕೊನೆಯಲ್ಲಿ ಉಪಯುಕ್ತವಾದ ಶಬ್ದಕೋಶವೂ ಇದೆ.

ಗುಂಡಪ್ಪನವರು ಸ್ವತಃ ಸೃಜನಶೀಲ ಲೇಖಕರೂ ಆಗಿದ್ದರು. ಅವರು ಮಕ್ಕಳಿಗೆಂದು ಬರೆದ ಕೆಲವು ಕವಿತೆಗಳು ಇಂದಿಗೂ ಪಠ್ಯಪುಸ್ತಕಗಳಲ್ಲಿ ಮತ್ತು ಸಂಕಲನಗಳಲ್ಲಿ ಕಾಣಿಸಿಕೊಳ್ಳುತ್ತವೆ. ‘ಚಟಾಕಿ ಮತ್ತು ಇತರ ಕನಗಳು’ ಎನ್ನುವುದು ಇಂತಹ ಕವಿತೆಗಳ ಸಂಕಲನ. ‘ಪಂಪ ಪರಿಚಯ, ‘ಥಾಮಸ್ ಆಲ್ವಾ ಎಡಿಸನ್’, ‘ಫ್ಲಾರೆನ್ಸ್ ನೈಟಿಂಗೇಲ್, ಮತ್ತು ‘ಕನ್ನಡ ವ್ಯಾಕರಣ ಪಾಠಗಳು’ ಅವರ ಇತರ ಸ್ವತಂತ್ರ ಕೃತಿಗಳಲ್ಲಿ ಸೇರಿವೆ.

ಗುಂಡಪ್ಪನವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಬಹುಮಾನ ಮುಂತಾದ ಹಲವು ಗೌರವಗಳು ಸಂದಿದ್ದವು.

ಗುಂಡಪ್ಪನವರ ಪ್ರಸಿದ್ಧ ಮಕ್ಕಳ ಪದ್ಯವೊಂದು ಇಲ್ಲಿದೆ

“ಚಟಾಕಿ”

ಅಪ್ಪನ ಜೇಬಿನ ದುಡ್ಡುಗಳೆಲ್ಲ

ಚಟಪಟಗುಟ್ಟುತ ಸಿಡಿಯುವುವು.

ಒಪ್ಪದ ನೀತಿಯ ಮಾತುಗಳೆಲ್ಲ

ತಟ್ಟನೆ ದಾರಿಯು ಹಿಡಿಯುವುವು.


ಬಗೆಬಗೆ ಬಣ್ಣದ ಹೂಗಳ ರೂಪದಿ

ಹಾರುತ ಬುಸು ಬುಸು ಗುಟ್ಟುವುವು.

ಉರಿಯನು ಸುರಿಸುತ, ಮೊರೆಯುತ ತಿರುಗುತ

ಸಸರನೆಲ್ಲೆಡೆ ಹರಿಯುವುವು

ಸರುವರ ಕಿವಿಗಳ ಕೊರೆಯುವುವು.


ಮೂಗಿನ ಸೆಲೆಗಳನೊಡೆಯುವುವು;

ಸಾರವ ತೆರೆಯುತ ಕಡೆಯಲಿ ಕಪ್ಪಗೆ

ನೆಲದಲಿ ದೊಪ್ಪನೆ ಕೆಡೆಯುವುವು.

ಅಜ್ಜನ ಮಡಿಯನು ತೊಡೆಯುವುವು,

ಅಪ್ಪನ ಜೇಬುಗಳೊಡೆಯುವುವು.

ಸಿಡಿಯುವುವು, ಸಿಡಿಯುವುವು.


ಹರಿಯಿತು ಹರ್ಷವು ದೇಶದಿ

ದೀಪಾವಳಿ ಹಬ್ಬವು ತಾ ಬರುತಿರಲು.

ಹೊರಲಾರದೆ ಸಾಹಸದಿ ಚಟಾಕಿಯ

ಹೊರೆಗಳ ಮೆಲ್ಲನೆ ತರುತಿರಲು,

ಸಿಡಿವ ಚಟಾಕಿಯ ತರುತಿರಲು.


ಹುಡುಗರು ನಲಿಯುತ ಕುಣಿಕುಣಿದಾಡುತ

ಹಿಡಿತು ಚಟಾಕಿಯ ಸುಡುತಿಹರು.

ಸಿಡಿದು ಚಟಾಕಿಯು ಮೇಲಕೆ ಹಾರಲು

ನಿಲ್ಲದೆ ಚಪ್ಪಳೆ ತಟ್ಟುವರು.

ಸಡಗರಗೊಳ್ಳುತ ದೂರದಿ ನೋಡುತ

ಲಲನೆಯರೆಲ್ಲರು ನಗುತಿಹರು.

ಲಲನೆಯರೆಲ್ಲರು ನಗುತಿಹರು.

ಸಿಡಿಯೆ ಚಟಾಕಿಯು ನಗುತಿಹರು.


ಮದ್ದಿನ ದೇವಿಯ ಮುದ್ದಿನ ಮಕ್ಕಳು

ಗದ್ದಲ ಮಾಡುತ ಬರುತಿಹರು.

ಮುದ್ದಿನ ಮಕ್ಕಳ ನಿದ್ದೆಯನೋಡಿಸಿ

ನಗಿಸುತ ಕುಣಿಸುತ ಬರುತಿಹರು

ಚಟಪಟಗುಟ್ಟಿ ಚಟಾಕಿಯು ಮುಂಗಡೆ

ಠೀವಿಯ ತೋರುತ ಬರುತಿರಲು,


ಪೆಟ್ಟಿಗೆ ಚಟ್ಟನೆ ಸಿಡಿವ ಪಟಾಸಿನ

ಬಳಗವು ಹಿಂಬಾಲಿಸುತಿರಲು.

ಅರಳನು ಹುರಿಯುವ ಪರಿಯಲಿ ಮೊರೆಯುತ

ಬಲು ಚಿನಕುರುಳಿಗಳೈತರಲು.


ಸರಸರ ಗರಗರ ಶಬ್ದದಿ ಮೊರೆಯುತ

ತಿರುಗುವ ಬಾಣಗಳೈತರಲು,

ಬೆಳಕನು ಬೀರಿ ಮತಾಪಿನ ಸಾಲ್ಗಲು

ಪಂಜನು ಹಿಡಿಯುತ ಬರುತಿರಲು,

ಹೊಳೆಯುವ ಹೂಗಳ ಮಳೆಯನು ಸುರಿಸುತ

ಹೂವಿನ ಬಾಣಗಳೈತರಲು

ಒಡೆಯ ಚಟಾಕಿಯು ಬರುತಿರಲು.

ಕಡು ಹಿತದಿಂದಲಿ ಬರುತಿರಲು,

ಹರಿಯಿತು ಹರ್ಷದ ಹೊನಲು

ಚಟಾಕಿಯ ಮೊಳಗದು ಹತ್ತಿರ ಬರುತಿರಲು,

ದೀಪಾವಳಿ ತಾ ಬರುತಿರಲು.


ಅಪ್ಪನ ಜೇಬಿನ ದುಡ್ಡುಗಳೆಲ್ಲ

ಚಟಪಟಗುಟ್ಟುತ ಸಿಡಿಯುವುವು.

ಹಾರುತ ಬುಸು ಬುಸುಗುಟ್ಟುವುವು,

ಉರಿಯನು ಸುರಿಸುತ ಮೊರೆಯುವುವು,

ಸರಸರನೆಲ್ಲೆಡೆ ಹರಿಯುವುವು,

ಒಪ್ಪದ ನೀತಿಯ ಮಾತುಗಳೆಲ್ಲ

ತಟ್ಟನೆ ದಾರಿಯ ಹಿಡಿಯುವುವು.

*** *** 

ಆಕರ ಕೃತಿ- ಚಟಾಕಿ -೧೯೪೬


ಗುಂಡಪ್ಪ ಅವರು 1986ರಲ್ಲಿ ಈ ಲೋಕವನ್ನಗಲಿದರು.


On the birth anniversary of Great Scholar L. Gundappa 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ