ಬಿ ಎಸ್ ಸ್ವಾಮಿ
ಸದ್ದಿರದೆ ಸಾಧಿಸಿ ಸುದ್ದಿಯಾಗದೆ ಹೋದ
ಸಾಧಕ ಡಾ.ಬಿ.ಎಸ್.ಸ್ವಾಮಿ 🌷🙏🌷
ಲೇಖಕರು: Sreedhara Murthy
ಕನ್ನಡ ಸಾಹಿತ್ಯದಲ್ಲಿ ಮಹತ್ವದ್ದನ್ನು ಸಾಧಿಸಿದ ಸಾಧಕರೊಬ್ಬರು ತಮ್ಮ 84ನೆಯ ವಯಸ್ಸಿನಲ್ಲಿ (28.02.2026 ರಂದು) ಕಣ್ಮರೆಯಾಗಿದ್ದಾರೆ. ಅವರೇ ಡಾ.ಬಿ.ಎಸ್.ಸ್ವಾಮಿ ಎಂದೇ ಹೆಸರಾಗಿದ್ದ ಬಿ.ಸಿದ್ದಲಿಂಗ ಸ್ವಾಮಿ. ಕಥೆ, ಕವಿತೆ, ಮಹಾಕಾವ್ಯ, ಮಕ್ಕಳ ಸಾಹಿತ್ಯ, ಸಂಶೋಧನೆ, ಜನಪದ, ಪ್ರವಾಸ ಕಥನ, ಜನಪದ ಹೀಗೆ ಎಲ್ಲಾ ಪ್ರಾಕಾರಗಳಲ್ಲಿಯೂ ವ್ಯಾಪಕವಾಗಿ ಬರವಣಿಗೆ ಮಾಡಿದ್ದ ಅವರ ಕೃತಿಗಳ ಸಂಖ್ಯೆ ಹತ್ತಿರ ಮುನ್ನೂರು ಎಂದರೆ ಅವರ ಬರವಣಿಗೆ ಮತ್ತು ಅಧ್ಯಯನದ ನಿರಂತರತೆ ಅರಿವಾಗ ಬಹುದು.
ಡಾ.ಬಿ.ಎಸ್.ಸ್ವಾಮಿಯವರು ಹುಟ್ಟಿದ್ದು 1942ರ ಸೆಪ್ಟಂಬರ್ 8ರಂದು ಕೊಳ್ಳೆಗಾಲ ತಾಲ್ಲೊಕಿನ ಮಧುವನ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಗ್ರಾಮದಲ್ಲಿಯೇ ಪಡೆದು ಮೈಸೂರಿಗೆ ಹೆಚ್ಚಿನ ಶಿಕ್ಷಣಕ್ಕೆ ಬಂದ ಅವರು ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ʼಮಲೆಮಹದೇಶ್ವರ ಒಂದು ಅಧ್ಯಯನʼ ಎಂಬ ವಿಷಯದ ಕುರಿತು ಪಿ.ಎಚ್.ಡಿ.ಪದವಿಯನ್ನು ಪಡೆದರು. ಕೆಲಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಸ್ವಾಮಿ, ಆಕಾಶವಾಣಿಯಲ್ಲಿ ಬಹುಕಾಲ ಸೇವೆ ಸಲ್ಲಿಸಿ ಕಾರ್ಯಕ್ರಮ ನಿರ್ವಾಹಕರಾಗಿ ನಿವೃತ್ತರಾದರು. ತಮ್ಮ ಸೇವೆಯ ಅವಧಿಯಲ್ಲಿ ಅವರು ಜನಪದ ಮತ್ತು ಶರಣ ಸಾಹಿತ್ಯದ ಕುರಿತು ವಿಶಿಷ್ಟವಾದ ದಾಖಲಾತಿಯನ್ನು ಮಾಡಿದರು. ನಿವೃತ್ತಿಯ ನಂತರ ನಿರಂತರ ಅಧ್ಯಯನ ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ʼಕಲಿ ಭಾರತʼ ಎನ್ನುವ ಮಹಾಕಾವ್ಯ ಬರೆದಿದ್ದ ಸ್ವಾಮಿ, ಕನ್ನಡದಲ್ಲಿ ಮಹಾಕಾವ್ಯ ಪರಂಪರೆಯ ಬಗ್ಗೆಯೇ ವಿಶೇಷ ಅಧ್ಯಯನ ನಡೆಸಿದ್ದರು. ʼಮಧುವನʼ ಎಂಬ ಅಭಿನಂದನಾ ಗ್ರಂಥವನ್ನೂ ಅವರಿಗೆ ಸಮರ್ಪಿಸಲಾಗಿತ್ತು.
ನನ್ನನ್ನು ಆಕಾಶವಾಣಿಗೆ ಪರಿಚಯಿಸಿದವರು ಸಿ.ಎನ್.ರಾಮಚಂದ್ರ ಅವರಾದರೆ, ಬೆಳೆಸಿದವರು ಬಿ.ಎಸ್.ಸ್ವಾಮಿಯವರು, ಹೀಗಾಗಿ ಅವರ ಕುರಿತು ವಿಶೇಷ ಕೃತಜ್ಞತೆ ನನಗಿದೆ. ಚಿಂತನ, ಕಥೆ, ಕವಿತೆ, ಸಂದರ್ಶನ, ವಿಮರ್ಶೆ ಹೀಗೆ ಆಕಾಶವಾಣಿಯ ಹಲವು ಕಾರ್ಯಕ್ರಮಗಳಲ್ಲಿ ಸ್ವಾಮಿ ನನ್ನನ್ನು ತೊಡಗಿಸಿದ್ದರು. ನಾಟಕವನ್ನೇ ಬರೆಯದ ನನ್ನಿಂದ ಹದಿಮೂರು ಬಾನುಲಿ ನಾಟಕವನ್ನು ಬರೆಸಿದ ಪವಾಡವನ್ನು ಅವರು ಮಾಡಿದ್ದರು. ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಚಿ.ಉದಯಶಂಕರ್ ಮತ್ತು ಜಿ.ಕೆ.ವೆಂಕಟೇಶ್ ಅವರ ಸಂದರ್ಶನಕ್ಕೆ ಕಾರಣರಾದವರು ಸ್ವಾಮಿಯವರೇ. ಈ ಸಂದರ್ಶನಗಳೇ ಮುಂದೆ ಅವರಿಬ್ಬರ ಜೊತೆಗೆ ನಿಕಟ ಒಡನಾಟ ಬೆಳೆಯಲು ಕಾರಣವಾಯಿತು ಎನ್ನುವುದನ್ನು ನಾನಿಲ್ಲಿ ಸ್ಮರಿಸಲೇ ಬೇಕು. ʼಮಲ್ಲಿಗೆ ಮಾಸ ಪತ್ರಿಕೆʼಗೆ ನನ್ನ ಕೋರಿಕೆಯ ಮೇಲೆ ಜನಪದ ಕಲೆಗಳ ಕುರಿತು ವಿಶಿಷ್ಟ ಮಾಲಿಕೆಯನ್ನು ಅವರು ರಚಿಸಿ ಕೊಟ್ಟಿದ್ದರು. ಅವರ ʼಕಲಿ ಭಾರತʼ ಮಹಾಕಾವ್ಯ ಬಿಡುಗಡೆಯ ಸಂದರ್ಭದಲ್ಲಿ ಕೃತಿಯ ಕುರಿತು ಮಾತನಾಡುವ ಅವಕಾಶವನ್ನು ನನಗೆ ಕಲ್ಪಿಸಿದ್ದರು. ಮಹತ್ವದ ಪ್ರಕಾಶಕರೂ ಆಗಿದ್ದ ಸ್ವಾಮಿಯವರು ನನ್ನ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ನನ್ನ ಏಕೈಕ ಕಥಾ ಸಂಕಲನ ʼಪ್ರೊ.ಎಂ.ಟಿ.ವಿ.ಪ್ರಣಯ ಪ್ರಸಂಗʼ ಕೂಡ ಸೇರಿದೆ. ಶರಣರ ಜೀವನ ಚಿತ್ರ ಮಾಲಿಕೆಯಲ್ಲಿ ನನ್ನಿಂದ ನಾಲ್ವರು ಶರಣರ ಕುರಿತು ಕೃತಿಗಳನ್ನು ಬರೆಸಿದರು. ಅವರಿಂದ ಪರಿಚಿತರಾದ ಮಹನೀಯರು ಅನೇಕರು.
ಮೆಲುಮಾತಿನ, ವಿನಯ ಸಂಪನ್ನ, ಅಧ್ಯಯನಶೀಲ ಸ್ವಾಮಿಯವರು ಇನ್ನು ನೆನಪು ಮಾತ್ರ. ಅವರು ಕನ್ನಡ ಸಾಹಿತ್ಯಕ್ಕೆ ಕೊಟ್ಟಿದ್ದು ಅಪಾರ, ಕನ್ನಡ ಸಾಹಿತ್ಯ ಅವರ ಕುರಿತು ಚಿಂತಿಸಿದ್ದು ವಿರಳ. ಈ ಕುರಿತು ಇತ್ತೀಚೆಗಷ್ಟೇ ಮಾತನಾಡಿ ಕೊಂಡಿದ್ದವು. ಅಷ್ಟರಲ್ಲಿ ಸಜ್ಜನ ಸ್ವಾಮಿ ಹೊರಟೇ ಬಿಟ್ಟಿದ್ದಾರೆ.
ನಮನಗಳು ಸರ್.. ಸಾಂಸ್ಕೃತಿಕ ಲೋಕದಲ್ಲಿ ನೀವು ನನ್ನನ್ನು ಬೆಳೆಸಿದ ರೀತಿಯನ್ನು ಎಂದೆಂದಿಗೂ ಸ್ಮರಿಸುವೆ.
ಕೃತಜ್ಞತೆ: ಲೇಖಕರಾದ ಡಾ. ಎನ್.ಎಸ್.ಶ್ರೀಧರ ಮೂರ್ತಿ ಅವರಿಗೆ

ಕಾಮೆಂಟ್‌ಗಳು