ಮಾಲತಿ ಮುದಕವಿ
ಮಾಲತಿ ಮುದಕವಿ
ಮಾಲತಿ ಮುದಕವಿ ಅವರು ಕನ್ನಡದ ಹೆಸರಾಂತ ಬರಹಗಾರ್ತಿ. ಅವರ ಬಹುಮುಖಿ ಸೃಜನಶೀಲ ಬರಹಗಳು ಮತ್ತು ಅನುವಾದಗಳು ನಿರಂತರವಾಗಿ ಕನ್ನಡ ಸಾಹಿತ್ಯವಲಯದಲ್ಲಿ ಕಂಗೊಳಿಸುತ್ತ ಬಂದಿವೆ.
ಏಪ್ರಿಲ್ 10, ಮಾಲತಿ ಮುದಕವಿ ಅವರ ಜನ್ಮದಿನ. ಇವರು ಧಾರವಾಡದವರು. ಎಂ.ಎ., ಬಿ.ಎಡ್ ವ್ಯಾಸಂಗ ನಡೆಸಿದ ಇವರು ಇಪ್ಪತ್ತೆರಡು ವರ್ಷಗಳ ಕಾಲ ವಿಜಯಪುರದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿದ್ದವರು.
ಮಾಲತಿ ಅವರ ಬಹುಮುಖಿ ಬರಹಗಳು ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಿಂದ ಮೊದಲ್ಗೊಂಡು ಇಂದಿನ ಅಂತರಜಾಲ ಹಾಗೂ ಸಾಮೂಹಿಕ ಜಾಲತಾಣಗಳವರೆಗೆ ವ್ಯಾಪಿಸಿವೆ
ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ; ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ; ಆಕಾಶವಾಣಿಯಲ್ಲಿ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ; ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಪುರಸ್ಕಾರ; ಲೇಖಿಕಾ ಸಾಹಿತ್ಯ ವೇದಿಕೆಯಿಂದ 'ಜೀವನ ಸಂಧ್ಯಾರಾಗ' ಕಥಾಸಂಕಲನಕ್ಕೆ 2020ರ ಸಾಹಿತ್ಯ ಪ್ರಶಸ್ತಿ ಹಾಗೂ ಹಾಗೂ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ; ಪ್ರತಿಲಿಪಿ ಕಥಾ ಸ್ಪರ್ಧೆಯಲ್ಲಿ ಮೂರು ಬಾರಿ ಬಹುಮಾನ; ಪ್ರಿಯಾಂಕಾ ಪತ್ರಿಕೆಯು ಪ್ರತಿ ವರ್ಷ ಏರ್ಪಡಿಸುವ ಬೆನಕ ಅನುವಾದಿತ ಕಥಾಸ್ಪರ್ಧೆಯಲ್ಲಿ ಮೂರು ಬಾರಿ ಮೊದಲ, ಎರಡು ಬಾರಿ ದ್ವಿತೀಯ, ಒಂದು ಬಾರಿ ತೃತೀಯ ಹಾಗೂ ಸಮಾಧಾನಕರ ಬಹುಮಾನ ಹೀಗೆ ಮಾಲತಿ ಮುದಕವಿ ಅವರು ಗಳಿಸಿದ ಬಹುಮಾನ, ಗೌರವಗಳು ಅಪಾರ.
ಮಾಲತಿ ಮುದಕವಿ ಅವರ ಸ್ವರಚಿತ ಪ್ರಕಟಿತ ಕೃತಿಗಳಲ್ಲಿ ಫಾಸಿಗೆ ಸಾಕ್ಷಿ (ಕಾದಂಬರಿ); ಚಿತ್ತ ಚಿತ್ತಾರ, ಗಂಧವತೀ ಪೃಥ್ವಿ, ಜೀವನ ಸಂಧ್ಯಾ ರಾಗ, ಪ್ರೇಮ ಸಾಫಲ್ಯ, ಕಾರ್ಪೋರೇಟ್ ಜಗತ್ತಿನ ನೋವು ನಲಿವುಗಳು (ಕಥಾಸಂಕಲನಗಳು); ಮಾನಿನಿಯ ಮನದಳಲು (ವ್ಯಕ್ತಿಚಿತ್ರಣ), ಹಾಸ್ಯ ರಂಗೋಲಿ (ಹಾಸ್ಯ ಸಂಕಲನ); ನಿತ್ಯ ಜೀವನದಲ್ಲಿ ಭಗವದ್ಗೀತೆ; ಇದುವೇ ಜೀವನ (ಪ್ರಬಂಧಗಳು) ಹಾಗೂ ಎರಡು ಸಂಭಾವನಾ ಗ್ರಂಥಗಳಾದ ಶುಭದಾ ಮತ್ತು ನೆನಪಿನ ಭಾವತರಂಗ ಮಂದಾಕಿನಿ ಸೇರಿವೆ.
ಮಾಲತಿ ಮುದಕವಿ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿರುವ ಕೃತಿಗಳಲ್ಲಿ: ಮೇನಕಾ (ಕಾದಂಬರಿ); ಓ...(ಕಾದಂಬರಿ), ರಾಮರಾಜ್ಯ (ಕಾದಂಬರಿ), ಮತ್ತೆ ಮತ್ತೆ ಹೊಸತು ಜನ್ಮ (ಕಾದಂಬರಿ); ಆದ್ಯ ಶ್ರೀ ಶಂಕರಾಚಾರ್ಯರು (ಶ್ರೀ ಶಂಕರಾಚಾರ್ಯರ ಜೀವನ ವೃತ್ತಾಂತ); ಮಹಾನ ಸಮ್ರಾಟ ಅಶೋಕ, ಸಿಕಂದರ್ ಎಂಬ ಅಪರೂಪದ ಯೋಧ, ಶ್ಯಾಮನ ಅವ್ವ, ಆಯ್ದ ಹತ್ತು ಕಥೆಗಳು (ಕಥಾ ಸಂಕಲನ); ಜೆ ಕೃಷ್ಣಮೂರ್ತಿ ಹೆಸರಿನ ರಹಸ್ಯ ಮುಂತಾದವು ಸೇರಿವೆ.
ಮಾಲತಿ ಮುದಕವಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Malati Mudakavi 🌷🙏🌷

ಕಾಮೆಂಟ್‌ಗಳು