ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂತೋಷ್ ಬಾಗಿಲಗದ್ದೆ

ಸಂತೋಷ್ ಬಾಗಿಲಗದ್ದೆ


ಸಂತೋಷ್ ಬಾಗಿಲಗದ್ದೆ ಸಾಧನೆ ಮಾಡಿರುವ ಪತ್ರಕರ್ತ, ಬರಹಗಾರ... ಇವೆಲ್ಲಕ್ಕೂ ಮಿಗಿಲಾಗಿ, ಕನಸುಗಳನ್ನು ಕಾಣುವುದು ಮಾತ್ರವಲ್ಲದೆ, ಅವನ್ನು ಸುಮ್ಮನೆ ಹಗಲು ಕನಸುಗಳಾಗಿ ಒಣಗಲು ಬಿಡದೆ,  ಛಲ, ಶ್ರದ್ಧೆ, ದುಡಿಮೆಗಳಿಂದ ನನಸಾಗಿಸುವತ್ತ ಹೋರಾಟದ ಬದುಕು ನಡೆಸಿದ ವಿಶಿಷ್ಟ ಸಾಹಸಿ. 

ಜೂನ್ 16, ಸಂತೋಷ್ ಅವರ ಜನ್ಮದಿನ.  ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪುಟ್ಟ ಊರು ಕೊಗ್ರೆ ಒಡಲಿನಲ್ಲಿರುವ ಬಾಗಿಲಗದ್ದೆ ಇವರ ಊರು. ಶೃಂಗೇರಿಯನ್ನು ಇವರು ತಮ್ಮ ಬದುಕಿನ ಶಾಶ್ವತ ಲ್ಯಾಂಡ್ ಮಾರ್ಕ್ ಎಂದು ಆಪ್ತವಾಗಿ ಕಂಡುಕೊಂಡಿದ್ದಾರೆ. ಶೃಂಗೇರಿಯ ಭಾರತೀ ಬೀದಿಯಲ್ಲಿ ಹಪ್ಪಳ ಮಾರುತ್ತಾ, ಓದಿನ ಮಧ್ಯೆಯೇ ಕಾಫಿ ಪುಡಿ ಅಂಗಡಿಯಲ್ಲಿ ಪ್ಯಾಕೆಟ್ಟು ಕಟ್ಟುತ್ತಾ, ಗಾರೆ ಕಲೆಸುತ್ತಾ, ಲಾಡ್ಜಿನಲ್ಲಿ ರೂಂಬಾಯ್ ಆಗಿದ್ದಾಗ ಯಾರೋ ಮಲಗೆದ್ದ ಹಾಸಿಗೆಯ ಸುಕ್ಕುಗಳನ್ನ ಸರಿಪಡಿಸುತ್ತಲಿದ್ದಾಗ ಕೂಡ,  ತಾವು ಸಾಕಿಕೊಂಡಿದ್ದ ಅಕ್ಷರ ಲೋಕದ ಕನಸುಗಳೆಲ್ಲವನ್ನೂ  ಒಂದೊಂದಾಗಿ ನನಸಾಗುತ್ತ ಬೆಳೆದವರು ಈತ. 

ಬದುಕನ್ನರಸಿ ಬೆಂಗಳೂರಿಗೆ ಬಂದ ಸಂತೋಷ್ ಬಾಗಿಲಗದ್ದೆ ಅವರ  ಮೈಮನಸುಗಳನ್ನು ಆವರಿಸಿಕೊಂಡಿದ್ದು ಪತ್ರಕರ್ತನಾಗಬೇಕೆಂಬ ಬಯಕೆ. ಆದರೆ ಹೊಟ್ಟೆಪಾಡಿಗಾಗಿ ಅವರು ಮೊದಲು ಕೆಲಸ ಮಾಡಿದ್ದು ಬೇಕರಿಯೊಂದರಲ್ಲಿ. ಆ ಕ್ಷಣದಲ್ಲಿಯೂ ಇವರ ಎದೆಯೊಳಗೆ ಅದಮ್ಯ ಅಕ್ಷರ ಪ್ರೀತಿಯಿತ್ತು. ಈ ಅಕ್ಷರ ಪ್ರೀತಿಯಲ್ಲೇ ಒಂದು ದಿನ ಬೇಕರಿಯಿಂದ ಓಡಿ ಹೋಗಬೇಕೆಂದೆನಿಸಿ, ಅದೇ ಕೊಳೆ ದಿರಸಿನಲ್ಲಿ,  ರವಿ ಬೆಳಗೆರೆಯವರ ಮುಂದೆ ಬಂದು ನಿಂತರು. ಆ ಮೂಲಕ 'ಹಾಯ್ ಬೆಂಗಳೂರ್’! ವಾರಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದರು. ಆ ಬಳಿಕ 'ಸಂಜೆ ನುಡಿ’, 'ಅಗ್ನಿ’, 'ಗೌರಿ ಲಂಕೇಶ್’ ವಾರ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ, ವರದಿಗಾರರಾಗಿ ವೃತ್ತಿ ಮಾಡಿದರು.  ಮುಂದೆ 'ಶೋಧ’ ಪತ್ರಿಕೆ ಆರಂಭಿಸಿ ಸಂಪಾದಕರಾದರು. ಶೋಧನ್ಯೂಸ್. ಕಾಮ್ ಮತ್ತು ಸಿನಿಶೋಧ.ಕಾಮ್ ಮುಂತಾದ ಸಂಸ್ಥೆಗಳನ್ನು ಪ್ರಧಾನ ಸಂಪಾದಕರಾಗಿ ನಿರ್ವಹಿಸುತ್ತಿದ್ದಾರೆ.

ಇವರೊಳಗೆ ಕವಿಯೂ ಜೀವಂತನಿದ್ದಾನೆ.  

ಈ ಬದುಕಿನ ಬೊಗಸೆ ತುಂಬಾ
ಬರೀ ನಿನ್ನದೇ ಕನಸಿತ್ತು 
ಕಡೆಗೂ ಉಳಿದದ್ದು ಕಂಪಿಸುವ
ಬೋಳು ಬೆರಳುಗಳು ಮತ್ತು
ಅದರ ನಡುವಲ್ಲಿ ಕೆಂಪುಗಣ್ಣಿನ ಸಿಗರೇಟು!

ತನ್ನ ಕನಸುಗಳನ್ನು ನನಸು ಮಾಡುತ್ತಾ   'ಭಾವಯಾನ' ಎಂಬ ಬದುಕಿನಲೆಗಳ ಮೇಲೆ ಸಾಗಿರುವ ಸಂತೋಷ್  ಬಾಗಿಲಗದ್ದೆ ಅವರ ಕೃತಿಗಳಲ್ಲಿ ಕಾವ್ಯಗಳಾದ  'ನೀನೇ ಉಸಿರು ನನ್ನೊಲವೆ' ಮತ್ತು 'ನಿನ್ನ ಧ್ಯಾನಕೆ ದಣಿವಿಲ್ಲ' ಹಾಗೂ ಕಾದಂಬರಿಯಾದ 'ಅವಳು ಅಘನಾಶಿನಿ' ಬೊಗಸೆ ಪ್ರೀತಿಗಾಗಿ ಬದುಕು ಕಾಡಿದೆ.... ಮುಂತಾದವು ಸೇರಿವೆ.

"ಸೋಲಿನ ಪಾತಾಳ ತಲುಪಿದಾಗಲೂ ಮತ್ಯಾವುದೋ ಗೆಲುವಿನ ಏಣಿಗಾಗಿ ತಡಕಾಡುವ ಶತ ಹುಂಬತನವೂ ಇದೆ. ಸದ್ಯ ಇವುಗಳೇ ನನ್ನ ಚಿರ, ಚರ, ನಿರಂತರ ಆಸ್ತಿಗಳು!" ಎನ್ನುತ್ತಾರೆ ಸಂತೋಷ್.  ಅವರ ಸಂತೋಷ ಸದಾ ಇರಲಿ. ಅವರ ಪತ್ರಿಕೋದ್ಯಮ ಕಾಯಕ ನಾಡಿಗೆ ಹೆಚ್ಚಿನ ಬೆಳಕು ತರಲಿ.  ಈ ಉತ್ಸಾಹಿ ಸಾಹಸಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. 

Happy birthday Santhosh Bagilagadde 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!