ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪದ್ಮಿನಿ ನಾಗರಾಜು

 ಪದ್ಮಿನಿ ನಾಗರಾಜು

ಡಾ.ಪದ್ಮಿನಿ ನಾಗರಾಜು ಅವರು ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಬರಹಗಾರ್ತಿಯಾಗಿ,  ಸಂಘಟನೆಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿದವರಾಗಿ ಹೆಸರಾಗಿದ್ದಾರೆ.

ಜೂನ್ 15, ಪದ್ಮಿನಿ ಅವರ ಜನ್ಮದಿನ.  ಇವರು ಮೂಲತಃ ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಗಂಗಾವತಿ, ಚಿಕ್ಕಮಗಳೂರು ಮತ್ತು ಮೈಸೂರಿನಲ್ಲಿ ಇವರ  ವಿದ್ಯಾಭ್ಯಾಸ ನಡೆಯಿತು. ಮೈಸೂರು ವಿಶ್ವವಿದ್ಯಾಲಯದಿಂದ  ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌.ಡಿ ಸಾಧನೆ ಮಾಡಿದರು. 

ಡಾ.ಪದ್ಮಿನಿ ನಾಗರಾಜು ಅವರು ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು.

ಡಾ. ಪದ್ಮಿನಿ ನಾಗರಾಜು ಅವರು ಕೆಲಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.  ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಸಮುದಾಯ ಸಮಿತಿಯ ನಾಮನಿರ್ದೇಶಕ ಸದಸ್ಯರಾಗಿ  ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಸದಸ್ಯರಾಗಿ ಅವರ ಸೇವೆ ಸಂದಿದೆ. 

ಪದ್ಮಿನಿ ನಾಗರಾಜು ಅವರ ಬಹುಮುಖಿ ಬರಹಗಳು ಎಲ್ಲ ಪ್ರಮುಖ ಮಾಧ್ಯಮಗಳಲ್ಲಿ ಹರಿದುಬಂದಿವೆ.

ಪದ್ಮಿನಿ ನಾಗರಾಜು ಅವರ ಪ್ರಕಟಿತ ಕೃತಿಗಳಲ್ಲಿ 'ಗೆಳತಿಯಾಗುವುದೆಂದರೆ'ˌ 'ಪುರಾವೆ ನೀಡಬೇಕಿಲ್ಲ',  'ಕ್ಷಮಿಸು ಗೊಮ್ಮಟನಂತೆ' ಕವಿತಾ ಸಂಕಲನಗಳು; 'ಸಮಾಧಿ ಮೇಲಿನ ಹೂ' ˌ 'ಉರಿವ ಬೆಂಕಿಗೆ ಮೈಯೆಲ್ಲಾ ಬಾಯಿ', 'ಸಮುದ್ರ ತೆರೆಯ ಸರಿಸಿ' ಕಥಾ ಸಂಕಲನಗಳು; 'ಅವ್ವ' (ಲಂಕೇಶರ ಆತ್ಮಚರಿತ್ರೆಯನ್ನು ಆಧರಿಸಿದ ನಾಟಕ): 'ಕೋಣೆಯಾಚೆಗಿನ ಆಕಾಶ' ವಿಮರ್ಶಾ ಲೇಖನಗಳು; 'ಎದೆಗೆ ಬೆಂಕಿ ಬಿದ್ದಾಗಿನ ಬೆಳಕು', 'ಅನಾವರಣ' ಚಿಂತನ ಕೃತಿಗಳು; 'ಅರಿವಿನ ಮಾರ್ಗದ ಸೋಪಾನಗಳು - ಅನುಪ್ರೇಕ್ಷೆಗಳು' (ಸಂಶೋಧನೆ); ಕೃಷ್ಣಮೂರ್ತಿ ಕವತ್ತಾರು (ವ್ಯಕ್ತಿಚಿತ್ರ); ಸಮತ್ವ (ಪ್ರಬಂಧ ಸಂಕಲನ); ‘ಅವನಿ', 'ಶ್ರೇಯೋಭದ್ರ', 'ಧವಳ' (ಸಂಪಾದನೆ), 'ಕಸಾಯಪಾಹುಡ' (ಹಿಂದಿಯಿಂದ ಕನ್ನಡಕ್ಕೆ ಅನುವಾದ) ಮುಂತಾದವು ಸೇರಿವೆ.

ಪದ್ಮಿನಿ ನಾಗರಾಜು ಅವರಿಗೆ 'ಸಮಾಧಿ ಮೇಲಿನ ಹೂ' ಕಥೆಗೆ ಕರ್ನಾಟಕ ಲೇಖಕಿಯರ ಸಂಘದಿಂದ 'ಉಮಾದೇವಿ ದತ್ತಿನಿಧಿ ಪ್ರಶಸ್ತಿ', ಅದೇ ಹೆಸರಿನ ಕಥಾಸಂಕಲನಕ್ಕೆ 'ಇನ್‌ಫೋಸಿಸ್ ಸುಧಾಮೂರ್ತಿ ದತ್ತಿನಿಧಿ ಪ್ರಶಸ್ತಿ', ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ 'ಉರಿವ ಬೆಂಕಿಗೆ ಮೈಯಲ್ಲ ಬಾಯಿ' ಕಥಾ ಸಂಕಲನಕ್ಕೆ 'ಅವ್ವ' ಪ್ರಶಸ್ತಿ, 'ಸಮುದ್ರ ತೆರೆಯ ಸರಿಸಿ' ಕಥಾ ಸಂಕಲನಕ್ಕೆ ಬೆರಗು ಪ್ರಕಾಶನದ ಪ್ರೊ. ಎಚ್ ಟಿ ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿ; 'ರಂಗಶಿಲ್ಪಿ' ಪ್ರಶಸ್ತಿ, ‘ಕಲಾಭಾರತಿ' ಪ್ರಶಸ್ತಿ, 'ದಕ್ಷಕ್ ಮಹಿಳೆ' ಪ್ರಶಸ್ತಿ, 'ಬ್ರಾಹ್ಮಿಶ್ರೀ' ಪ್ರಶಸ್ತಿ, ಕಸಾಪ ಕೊಡಮಾಡುವ 2020ನೇ ಸಾಲಿನ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ,  2026ನೇ ಸಾಲಿನ ‘ಆದರ್ಶ ಜೈನ ಸಮಾಜ ರತ್ನ ಪ್ರಶಸ್ತಿ’ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಪದ್ಮಿನಿ ನಾಗರಾಜು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Padmini Nagaraju 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!