ಪ್ರಕಾಶ ಖಾಡೆ
ಪ್ರಕಾಶ ಖಾಡೆ
ಡಾ.ಪ್ರಕಾಶ ಖಾಡೆ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಕೃಷಿ ಮಾಡುತ್ತ ಬಂದಿದ್ದಾರೆ.
ಪ್ರಕಾಶ ಗಣಪತಿ ಖಾಡೆ ಅವರು 1965ರ ಜೂನ್ 10ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಜನಿಸಿದರು. ತಂದೆ ಗಣಪತಿ ಖಾಡೆ. ತಾಯಿ ಗಂಗೂಬಾಯಿ.
ಪ್ರಕಾಶ ಖಾಡೆ ಅವರು.ಕನ್ನಡ ಅಧ್ಯಾಪಕರಾಗಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಪ್ರಕಾಶ್ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ 1986 ರಲ್ಲಿ 'ಗೀತಚಿಗಿತ' ಸಂಪಾದಿತ ಕವನ ಪ್ರಕಟಿಸಿದ್ದರು. ಈ ಪಯಣ ಮುಂದೆ ಕಾವ್ಯ, ಕಥೆ, ನಾಟಕ, ಜೀವನಚರಿತ್ರೆ, ಸಂಶೋಧನೆ, ಸಂಪಾದನೆ, ಜಾನಪದ ಹಾಗೂ ವಿಮರ್ಶೆಗಳು ಸೇರಿದಂತೆ 50ಕ್ಕೂ ಹೆಚ್ಚು ಕೃತಿಗಳಲ್ಲಿ ವ್ಯಾಪಿಸಿದೆ.
ಪ್ರೀತಿ ಬಟ್ಟಲು, ಕೃಷ್ಣಾತೀರದ ಜನಪದ ಒಗಟುಗಳು, ನೆಲಮೂಲ ಸಂಸ್ಕೃತಿ, ಜಾನಪದ ಲೋಕ, ಜನಪದ ಕೋಗಿಲೆ ಚಲವಾದಿ ಗೌರಮ್ಮ, ಮೌನ ಓದಿನ ಬೆಡಗು, ಜಾನಪದ ಹೆಬ್ಬಾಗಿಲು, ಸಾಹಿತ್ಯ ಸಂಗತಿ, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ, ಶಾಂತಿ ಬೀಜಗಳ ಜತನ, ಕೊರೊನಾ ಕಾಲದ ಕವಿತೆಗಳು, ಬೇಂದ್ರೆ ಕಾವ್ಯದ ದೇಸಿಯತೆ, ಬಾಗಲಕೋಟೆ ಹೋಳಿ, ಕಾವ್ಯ ನಾದದ ಧ್ಯಾನ, ಚೆಲುವಿ ಚಂದ್ರಿ, ಬಾಳುಕುನ ಪುರಾಣ ಕಥಾ ಸಂಕಲನ ಮುಂತಾದವು ಪ್ರಕಾಶ ಖಾಡೆ ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಇವರ ಹಲವಾರು ಕಾರ್ಯಕ್ರಮಗಳು ಪ್ರಸಾರವಾಗಿವೆ.
@ಪ್ರಕಾಶ ಖಾಡೆ ಅವರು ಬೆಂಗಳೂರಿನಲ್ಲಿ ಜೂನ್ 2023 ರಲ್ಲಿ ಜರುಗಿದ ರಾಜ್ಯ ಮಟ್ಟದ ಮೇಘಮೈತ್ರಿ 6 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ವಿಜಯಪುದಲ್ಲಿ ಡಿಸೆಂಬರ್ 2024 ರಲ್ಲಿ ಜರುಗಿದ ರಾಜ್ಯಮಟ್ಟದ ಪುಸ್ತಕ ಪರಿಷತ್ತು ಸಮ್ಮೇಳನಾಧ್ಯಕ್ಷರಾಗಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ಮೈಸೂರು ದಸರಾ ಕವಿಗೋಷ್ಟಿ, ಚಾಲುಕ್ಯ ಉತ್ಸವ, ನವರಸಪುರ ಉತ್ಸವ, ಹಂಪಿ ಉತ್ಪವ, ಕಿತ್ತೂರು ಉತ್ಸವ ಮೊದಲಾದ ಉತ್ಸವಗಳ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಕಥೆ, ಕವಿತೆ, ವಿಮರ್ಶೆ ಮತ್ತು ಅನೇಕ ಲೇಖನಗಳು ಪ್ರಕಟವಾಗಿವೆ. ಸಾಮಾಜಿಕ.ಜಾಲತಾಣಗಳಲ್ಲಿ ಇವರ ನೂರಾರು ಉಪನ್ಯಾಸಗಳು ಪ್ರಸಾರವಾಗಿವೆ. ಇವರ ಬರಹಗಳು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಗಳ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿವೆ.
ಪ್ರಕಾಶ್ ಅವರು ಕೊವಿಡ್-19 ಕೊರೊನಾ ಕಾಲ ಘಟ್ಟದ ಲಾಕ್ ಡೌನ್ ವೇಳೆಯಲ್ಲಿ "ದೇಸಿ.ಕನ್ನಡದ ಅನನ್ಯತೆ' ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಐವತ್ತಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದರು. "ಬೆಳಕಾಯಿತು ಬಾಗಲಕೋಟೆ” ಹೆಸರಿನಲ್ಲಿ ಫೇಸ್‌ಬುಕ್ ಲೈವ್‌ದಲ್ಲಿ ನಾಡಿನ ವಿದ್ದಾಂಸರಿಂದ ಅವಿಭಜಿತ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸಾಧಕರನ್ನು ಕುರಿತು 143 ಹೆಚ್ಚು ಸರಣಿ ಉಪನ್ಯಾಸಗಳನ್ನು ಪ್ರಸಾರ ಮಾಡಿದ್ದರು. ಇವರ "ಕೂಡಿ ಕಟ್ಟಿದ ಕನ್ನಡ, ಒಲುಮೆ ಹಾಡಿಗೆ” ಗೀತೆಗಳು ಯುಟ್ಯೂಬ್ ಮೂಲಕ ಪಸರಣಗೊಂಡಿವೆ.
ಪ್ರಕಾಶ ಖಾಡೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ, ಸಿಂದಗಿಯ ಕಡಣಿ ಮತ್ತು ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ, ಬೀಳಗಿ ಸಮೀರವಾಡಿ ಆಜೂರ ಪ್ರತಿಷ್ಠಾನ ಪ್ರಶಸ್ತಿ, ಅರಕೇರಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ, ಹರಿಹರಶ್ರೀ ಸಾಹಿತ್ಯ ಪ್ರಶಸ್ತಿ, ವಿಜಯಪುರ ಪುಸ್ತಕ ಪರಿಷತ್ತು ಪ್ರಶಸ್ತಿ, ಮುಂಬಯಿಯ ಮೊಗವೀರ ಕಥಾ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
ಪ್ರಕಾಶ ಖಾಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Dr. Prakash Khade 🌷🌷🌷

ಕಾಮೆಂಟ್‌ಗಳು