ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾಗ್ಯಲಕ್ಷ್ಮಿ ಎಂ ಕೃಷ್ಣ

ಭಾಗ್ಯಲಕ್ಷ್ಮಿ ಎಂ ಕೃಷ್ಣ


ವಿದುಷಿ ಭಾಗ್ಯಲಕ್ಷ್ಮಿ ಎಂ ಕೃಷ್ಣ ಅವರು ತಾಳವಾದ್ಯ ಸಂಗೀತ ಕಲೆಯಲ್ಲಿ ಮಹತ್ಸಾಧಕರಾಗಿದ್ದು, ವಿಶೇಷವಾಗಿ ಮೋರ್ಸಿಂಗ್ ವಾದನದಲ್ಲಿ ಪ್ರಸಿದ್ಧಿ ಗಳಿಸಿದ್ದಾರೆ. 

ಜುಲೈ 22, ಭಾಗ್ಯಲಕ್ಷ್ಮಿ ಅವರ ಜನ್ಮದಿನ. ಇವರು ಬೆಂಗಳೂರಿನವರು.  ಮಹಾರಾಣಿ ಕಾಲೇಜಿನಲ್ಲಿ ಇವರು ಬಿ. ಎಸ್‍ಸಿ ಓದಿದರು.  ಇವರ ತಂದೆ ವಿದ್ವಾನ್ ಎಲ್. ಭೀಮಾಚಾರ್ ಅವರು ಆಕಾಶವಾಣಿಯಲ್ಲಿ ಮೋರ್ಸಿಂಗ್ ವಾದನ ನೀಡಿದ ಪ್ರಥಮರು. ಭೀಮಾಚಾರ್ ಅವರು ತಮ್ಮ ತಂದೆಯವರಾದ ಎಚ್. ಪುಟ್ಟಾಚಾರ್ ಅವರಿಂದ ಮೃದಂಗ ಮತ್ತು ಘಟಂ ವಾದನಗಳನ್ನು ಕಲಿತಿದ್ದರಲ್ಲದೆ ಗಾಯನದಲ್ಲೂ ಸಾಧನೆ ಮಾಡಿದ್ದರು.   ಭಾಗ್ಯಲಕ್ಷ್ಮಿ ಅವರ  ಹಿರಿಯ ಅಣ್ಣ ಬಿ. ಧ್ರುವರಾಜ್ ಮೃದಂಗವಾದಕರಾಗಿ ಮತ್ತು ಎರಡನೆಯ ಅಣ್ಣ ಬಿ. ರಾಜಶೇಖರ್ ಮೋರ್ಸಿಂಗ್ ವಾದಕರಾಗಿ ಹೆಸರಾದವರು.  ತಾಯಿ ಜಯಮ್ಮನವರು ಮನೆಯಲ್ಲಿ ಹಾಡುತ್ತಿದ್ದರು. ಭಾಗ್ಯಲಕ್ಷ್ಮಿಯವರು ತಮ್ಮ ಹತ್ತನೇ ವಯಸ್ಸಿನಿಂದಲೇ ತಮ್ಮ ತಂದೆ ಮತ್ತು ಸಹೋದರರೊಂದಿಗೆ ಸಾಧನೆ ಮಾಡುತ್ತಾ ಬೆಳೆದರು. 

ಆಕಾಶವಾಣಿಯ ಎ ದರ್ಜೆಯ ಕಲಾವಿದೆಯಾಗಿರುವ ಭಾಗ್ಯಲಕ್ಷ್ಮಿ ಅವರು ಮಂಗಳಂಪಲ್ಲಿ ಬಾಲಮುರಳಿಕೃಷ್ಣ, ಸುಧಾ ರಘುನಾಥನ್, ಸಂಜಯ್ ಸುಬ್ರಹ್ಮಣ್ಯನ್,  ಡಾ. ಎಸ್. ಸೌಮ್ಯ ಮುಂತಾದ ಅನೇಕ ಪ್ರಖ್ಯಾತ ಕಲಾವಿದರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ.  ಭಾಗ್ಯಲಕ್ಷ್ಮಿ ಅವರು ವಿದುಷಿ ಸುಕನ್ಯಾ ರಾಮಗೋಪಲ್ Sukkanya Ramgopal ಅವರ ಲಯ ತರಂಗ ವೃಂದದೊಂದಿಗೆ ನಿರಂತರವಾಗಿ ಭಾಗಿಯಾಗಿದ್ದಾರೆ.  ಹೀಗೆ ಅವರು  ಭಾರತದ ವಿವಿಧೆಡೆಗಳಲ್ಲದೆ ವಿಶ್ವವ್ಯಾಪಿಯಾಗಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. 

ಭಾಗ್ಯಲಕ್ಷ್ಮಿ ಎಂ ಕೃಷ್ಣ ಅವರಿಗೆ ಅನೇಕ ಪ್ರಸಿದ್ಧ ಸಂಘ ಸಂಸ್ಥೆಗಳು ಮತ್ತು ವೇದಿಕೆಗಳ ಗೌರವಗಳು ಸಂದಿವೆ. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy Birthday Bhagyalakshmi M Krishna🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!