ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿದಂಬರರಾವ್ ಜಂಬೆ

ಚಿದಂಬರರಾವ್ ಜಂಬೆ

ಚಿದಂಬರರಾವ್ ಜಂಬೆ ಅವರು ಕನ್ನಡ ನಾಡಿನ ಮಹಾನ್ ರಂಗಕರ್ಮಿ. ಕರ್ನಾಟಕದ ರಂಗಶಿಕ್ಷಣ ಕೇಂದ್ರಗಳಿಗೆ ಮಾದರಿ ಎನ್ನಬಹುದಾದ ಕಲಿಕೆಯ ಶಿಸ್ತು ರೂಪಿಸಿದವರೆಂದು ಅವರು ನಾಡಿನಾದ್ಯಂತ ಗೌರವಾನ್ವಿತರು.  

ಚಿದಂಬರರಾವ್ ಜಂಬೆ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದವರು. ಅವರು ಜನಿಸಿದ್ದು 1949ರ ಜನವರಿ 3ರಂದು.  ಅವರು  ಕೆಳದಿ, ಸಾಗರಗಳಲ್ಲಿ ಓದಿದರು.  ಒಂದು ವರ್ಷ ಉಡುಪಿಯ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ತರಬೇತಿ ಪಡೆದರು. ಬದುಕು ರೂಪಿಸಿಕೊಳ್ಳಲು ಬೆಂಗಳೂರಿಗೆ ಬಂದ ಅವರು ಕೆಲಕಾಲ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಸಹ ಕೆಲಸ ಮಾಡಿದ್ದರು. 

ಅಪಾರ ರಂಗಭೂಮಿ ತುಡಿತವುಳ್ಳ ಚಿದಂಬರರಾವ್ ಜಂಬೆ ಅವರು 80ರ ದಶಕದ ಆರಂಭದಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದರು.  ಅಲ್ಲಿ ಶಿಕ್ಷಣ ಪೂರೈಸಿದ ನಂತರ ಹೆಗ್ಗೋಡಿನ ನೀನಾಸಂ ರಂಗಶಿಕ್ಷಣದ ಕೇಂದ್ರದ ಪ್ರಾಂಶುಪಾಲರಾಗಿ ತಮ್ಮ ರಂಗ ಕಾಯಕವನ್ನು ಆರಂಭಿಸಿದರು.

ಮೈಸೂರಿನ ರಂಗಾಯಣದ ನಿರ್ದೇಶಕರಾಗಿ, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥರಾಗಿ, ಸಾಣೆಹಳ್ಳಿಯ ರಂಗ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿರುವ ಜಂಬೆ ಅವರು ಕರ್ನಾಟಕವಲ್ಲದೆ ಹೊರ ರಾಜ್ಯಗಳಲ್ಲೂ ರಂಗ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. 

‘ಚೆರ್ರಿ ಹಣ್ಣಿನ ತೋಟ’, ‘ಚಾಣಕ್ಯ ಪ್ರಪಂಚ’, ‘ಪುಂಟಿಲ’, ‘ಆ ಊರು-ಈ ಊರು’, ‘ಅಥೆನ್ಸಿನ ಅರ್ಥವಂತ’, ‘ಲೋಕ ಶಾಕುಂತಲ’, ‘ತಲೆದಂಡ’ ಹೀಗೆ 100ಕ್ಕೂ ಹೆಚ್ಚು ನಾಟಕಗಳನ್ನು ಜಂಬೆ ನಿರ್ದೇಶಿಸಿದ್ದಾರೆ. ಸಂಸ್ಕೃತ ನಾಟಕಗಳಲ್ಲದೆ, ಪಾಶ್ಚಿಮಾತ್ಯ, ಆಧುನಿಕ ರಂಗಭೂಮಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು ಚಿದಂಬರರಾವ್ ಜಂಬೆ ಅವರ ಹೆಗ್ಗಳಿಕೆ. 

ನೀನಾಸಂನ ಜನಸ್ಪಂದನ ಯೋಜನೆಯಡಿ ಮಂಚಿಕೇರಿಯಲ್ಲಿ ಸಿದ್ದಿ ಜನಾಂಗದವರಿಗಾಗಿ ಜಂಬೆ ‘ಕಪ್ಪು ಜನ, ಕೆಂಪು ನೆರಳು’ ಎಂಬ ನಾಟಕವನ್ನು ನಿರ್ದೇಶಿಸುವ ಮೂಲಕ ರಂಗಭೂಮಿ ಹಿನ್ನೆಲೆ, ತರಬೇತಿ ಇಲ್ಲದವರನ್ನೂ ರಂಗದ ಮೇಲೆ ತರಬಹುದು ಎಂಬುದನ್ನು ಜಂಬೆ ತೋರಿಸಿಕೊಟ್ಟವರು. ಈ ನಾಟಕದ ನಂತರ ಸಿದ್ದಿ ಜನಾಂಗದ ಹಲವರು ರಂಗಶಿಕ್ಷಣದಲ್ಲಿ ತೊಡಗಿಕೊಳ್ಳಲು ದಾರಿಯಾಯಿತು ಎಂಬುದು ಗಮನಾರ್ಹ.

ಕನ್ನಡ ರಂಗಭೂಮಿಯಲ್ಲಿ ಸಹಜ ಸತ್ತ್ವಶಾಲಿ ನಾಟಕಗಳನ್ನು ಪರಿಣಾಮಕಾರಿಯಾಗಿ ರಂಗಕ್ಕೆ ಅಳವಡಿಸಿದ ಶ್ರೇಯಸ್ಸು ಜಂಬೆಯವರಿಗೆ ಸಲ್ಲುತ್ತದೆ. ನಾಟಕದ ವಸ್ತುವಿನ ವಿಷಯಕ್ಕೆ ಬದ್ಧರಾಗಿದ್ದುಕೊಂಡೇ ಕೃತಿಯನ್ನು ವಿನ್ಯಾಸಗೊಳಿಸಿ ವಸ್ತು, ಪಾತ್ರ ಚಿತ್ರಣವನ್ನು ಸಮಕಾಲೀನಗೊಳಿಸುವ ಕಲೆ ಜಂಬೆಯವರಿಗೆ ಕರಗತವಾಗಿದೆ ಎಂಬುದು ಪ್ರಸಿದ್ಧ ರಂಗತಜ್ಞರ ಅಭಿಮತ. 

ರಂಗಕರ್ಮಿ ಚಿದಂಬರರಾವ್ ಜಂಬೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅವರಿಗೆ ಅನೇಕ ಗೌರವಗಳು ಸಂದಿವೆ.

ಪೂಜ್ಯ ಹಿರಿಯರಾದ ಚಿದಂಬರರಾವ್ ಜಂಬೆ ಅವರಿಗೆ ಎರಡು ದಿನ ತಡವಾಗಿ ಹುಟ್ಟುಹಬ್ಬದ ಶುಭಹಾರೈಕೆಗಳು.  ನಮಸ್ಕಾರ. 🌷🙏🌷

birthday wishes to Chidambara Rao Jambe Sir 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ