ರವೀಂದ್ರ ಭಟ್ಟ
ರವೀಂದ್ರ ಭಟ್ಟ
ಕನ್ನಡ ಪತ್ರಿಕೋದ್ಯಮದಲ್ಲಿ ರವೀಂದ್ರ ಭಟ್ಟ ಅವರದು ದೊಡ್ಡ ಹೆಸರು.
ರವೀಂದ್ರ ಭಟ್ಟ ಅವರು 1967ರ ಜುಲೈ 7ರಂದು ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಐನಕೈ ಇವರ ಹುಟ್ಟೂರು. ತಂದೆ ದಿ.ಗಜಾನನ ಭಟ್ಟ. ತಾಯಿ ಮೀನಾಕ್ಷಿ ಭಟ್ಟ. ರವೀಂದ್ರ ಭಟ್ಟರು ಶಿರಸಿಯ ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್‍ಸಿ ಓದಿ ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ. ಪದವಿ ಗಳಿಸಿದರು.
ರವೀಂದ್ರ ಭಟ್ಟ ಅವರು 1990ರಲ್ಲಿ ಸಂಯುಕ್ತ ಕರ್ನಾಟಕದಲ್ಲಿ ವೃತ್ತಿ ಆರಂಭಿಸಿದರು. ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿ 1995ರಲ್ಲಿ ಪ್ರಜಾವಾಣಿಗೆ ಬಂದರು. ಪ್ರಜಾವಾಣಿಯಲ್ಲಿ ನಿರ್ವಹಿಸಿದ ವಿವಿಧ ಜವಾಬ್ದಾರಿಗಳಲ್ಲಿ ದಾವಣಗೆರೆ, ಮೈಸೂರುಗಳಲ್ಲಿ ಕಾರ್ಯನಿರ್ವಹಣೆ, ಹಾಗೂ ಮೈಸೂರ್ ಬ್ಯೂರೋದ ಮುಖ್ಯಸ್ಥರಾಗಿ ಸಲ್ಲಿಸಿದ ಜವಾಬ್ದಾರಿಗಳು ಸೇರಿವೆ. ಪ್ರಸಕ್ತ ರವೀಂದ್ರ ಭಟ್ಟರು ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ.
ತನಿಖಾ ಪತ್ರಿಕೋದ್ಯದಲ್ಲಿ ರವೀಂದ್ರ ಭಟ್ಟರು ನಿರ್ವಹಿಸಿದ ಪಾತ್ರಗಳು ಮಹತ್ವದ್ದು. ಅವುಗಳಲ್ಲಿ ಕೆಲವನ್ನು ಹೇಳುವುದಾದರೆ ಕೆಪಿಸಿ ಹಗರಣವನ್ನು ಸರಮಾಲೆಯಾಗಿ ಪ್ರಕಟಿಸಿದ್ದು ದಾಖಲೆ ಎನಿಸಿದೆ. ಜೊತೆಗೆ ವಿಶ್ವವಿದ್ಯಾನಿಲಯಗಳ ಕರ್ಮಕಾಂಡದ ಕುರಿತು ಕೂಡಾ ಇವರು ಸರಮಾಲೆಯಾಗಿ ಬರೆದದ್ದು ದಾಖಲೆಯಾಗಿದೆ.
ರವೀಂದ್ರ ಭಟ್ಟರ 'ಅನುಸಂಧಾನ' ಅಂತಹ ಶೀರ್ಷಿಕೆಯುಳ್ಳ ಅಂಕಣಗಳು ಅನೇಕ ರೀತಿಯ ರಾಜಕೀಯ, ಸಾಮಾಜಿಕ, ಕೌಟುಂಬಿಕ ಮೌಲ್ಯಗಳ ಕುರಿತಾದ ಆಪ್ತ ವಿಶ್ಲೇಷಣಗಳಂತಿದ್ದು ಮನಮುಟ್ಟುವಂತದ್ದಾಗಿವೆ.
ರವೀಂದ್ರ ಭಟ್ಟ ಅವರ ಪ್ರಕಟಿತ ಹತ್ತಕ್ಕೂ ಹೆಚ್ಚು ಕೃತಿಗಳಲ್ಲಿ ಇವರೇ ಬರಮಾಡಿಕೊಂಡ ಬರ, ಹೆಜ್ಜೇನು (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ಬದುಕು ಮರದ ಮೇಲೆ, ಮೂರನೇ ಕಿವಿ, ಸಂಪನ್ನರು, ಅಕ್ಷಯ ನೇತ್ರ, ಮೈಸೂರೆಂಬ ಬೆರಗು, ಸಹಸ್ರಪದಿ, ಇಂಥವರೂ ಇದ್ದಾರೆ ಜಗದೊಳಗೆ, ಜನಕಂಜಿ ನಡೆಯದವರ ಸಂತೆ, ಬರೆಯದ ಕೃತಿಗಳು (ಮಾಧ್ಯಮದ ಅನುಭವಗಳು) ಮುಂತಾದವು ಸೇರಿವೆ.
ರವೀಂದ್ರ ಭಟ್ಟ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಮಹಾತ್ಮಾಗಾಂಧಿ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ನಾರಾಯಣಸ್ವಾಮಿ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ, ಬೆಂಗಳೂರಿನ ಸಿಡಿಎಲ್ ಸಂಸ್ಥೆ ನೀಡುವ ಚರಕ ಪ್ರಶಸ್ತಿ, ಎಚ್.ಎಸ್.ಕೆ. ಪ್ರತಿಷ್ಠಾನದ ಎಚ್.ಎಸ್.ಕೆ. ಪ್ರಶಸ್ತಿ, ರೋಟರಿ ಸಿಲಿಕಾನ್ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಕೆಂಪೇಗೌಡ ಪ್ರಶಸ್ತಿ, ಡಾ. ಶಾಂತಾರಾಧಾಕೃಷ್ಣ ಎಂಡೋಮೆಂಟ್ ಪ್ರಶಸ್ತಿ, ಕರ್ನಾಟಕ ಅಕ್ಷರ ಪ್ರಶಸ್ತಿ, ಎಚ್.ಕೆ.ವೀರಣ್ಣ ಗೌಡ ಪತ್ರಿಕೋದ್ಯಮ ಪ್ರಶಸ್ತಿ. ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ. ಪಾ.ವೆಂ.ಆಚಾರ್ಯ ಮಾಧ್ಯಮ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ರವೀಂದ್ರ ಭಟ್ಟ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ🌷🙏🌷
Happy birthday Ravindra Bhat Sir 🌷🙏🌷

ಕಾಮೆಂಟ್‌ಗಳು