ಪಿ.ಆರ್.ರಾಮಯ್ಯ
ತಾಯಿನಾಡು ರಾಮಯ್ಯ
‘ತಾಯಿನಾಡು’ ಪತ್ರಿಕೆಯ ರಾಮಯ್ಯ ಎಂದೇ ಖ್ಯಾತರಾದ ಪಿ. ಆರ್. ರಾಮಯ್ಯನವರ ಬದುಕು ಉದಾತ್ತ ಮೌಲ್ಯಗಳು, ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವದ ಪ್ರತೀಕವಾದದ್ದು.
ಪಿ. ಆರ್. ರಾಮಯ್ಯನವರು 1894ರ ಸೆಪ್ಟೆಂಬರ್ 10ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು. ತಾಯಿ ಸುಬ್ಬುಲಕ್ಷ್ಮಮ್ಮ; ತಂದೆ ಪಾಲಹಳ್ಳಿ ರಾಮಸ್ವಾಮಯ್ಯ. ಇವರದು ಸಂಪ್ರದಾಯಸ್ಥ ಕುಟುಂಬ.
ರಾಮಯ್ಯನವರ ಆರಂಭಿಕ ವಿದ್ಯಾಭ್ಯಾಸ ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ನಡೆಯಿತು. ತಂದೆಯವರೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಕೇವಲ ಎರಡೂವರೆ ರೂಪಾಯಿಗಳನ್ನು ಕೈಯಲ್ಲಿ ಹಿಡಿದು, ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಹಾಗೂ ಸ್ವತಂತ್ರ ಬದುಕನ್ನು ರೂಪಿಸಿಕೊಳ್ಳಲು ಯಾರಿಗೂ ಹೇಳದೆ ಮೈಸೂರಿನಿಂದ ಕಾಶಿಗೆ ಪ್ರಯಾಣ ಬೆಳೆಸಿದರು.
ಅವು ದುಸ್ತರ ದಿನಗಳು. ಹದಿನೆಂಟರ ಯುವಕ ರಾಮಯ್ಯ ಆ ಕಷ್ಟಗಳನ್ನು ದಿಟ್ಟತನದಿಂದ ಎದುರಿಸಿದರು. ಕಾಶಿಯ ಸೆಂಟ್ರಲ್ ಹಿಂದೂ ಕಾಲೇಜಿನಲ್ಲಿ ಎಂಟ್ರೆನ್ಸ್ ಶಿಕ್ಷಣ ಪಡೆದರು. ಬಳಿಕ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಬಿ.ಎಸ್ಸಿ. ಪದವಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಎಂ.ಎಸ್ಸಿ. ಶಿಕ್ಷಣವನ್ನೂ ಮುಂದುವರಿಸಿದರು.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಮಯ್ಯನವರು ಎಂ.ಎಸ್ಸಿ. ಪರೀಕ್ಷೆಯಲ್ಲಿಯೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಅದೇ ವೇಳೆಗೆ ಮಹಾತ್ಮ ಗಾಂಧೀಜಿಯವರ ಅಸಹಕಾರ ಚಳವಳಿಯ ಪ್ರೇರಣೆ ಅವರನ್ನು ತೀವ್ರವಾಗಿ ಪ್ರಭಾವಿಸಿತು. ದೇಶಸೇವೆಯ ಅಂತರಾತ್ಮದ ಕರೆಗೆ ಮಣಿದು ಅವರು ಪರೀಕ್ಷೆಯನ್ನು ಬಹಿಷ್ಕರಿಸಲು ನಿರ್ಧರಿಸಿದರು.
ಸ್ವತಃ ಮದನ ಮೋಹನ ಮಾಳವೀಯರು, “ಪರೀಕ್ಷೆ ಮುಗಿಸಿ ನಂತರ ಹೋಗು” ಎಂದು ಸಲಹೆ ನೀಡಿದರೆನ್ನಲಾಗಿದೆ. ಆದರೆ ರಾಮಯ್ಯನವರ ದೃಢಸಂಕಲ್ಪವನ್ನು ಕಂಡು ಅವರನ್ನು ಆಶೀರ್ವದಿಸಿ ಬೀಳ್ಕೊಟ್ಟರು. ಪ್ರಯಾಣದ ಖರ್ಚಿಗಾಗಿ 50 ರೂಪಾಯಿಗಳನ್ನು ಸಹ ನೀಡಿದರೆಂದು ಹೇಳಲಾಗುತ್ತದೆ.
ಈ ಅವಧಿಯಲ್ಲಿ ರಾಮಯ್ಯನವರು ಕಾಯಾ-ವಾಚಾ-ಮನಸಾ ಗಾಂಧೀಜಿಯವರ ಶಿಷ್ಯರಂತಾದರು. ಸತ್ಯಾಗ್ರಹಕ್ಕೆ ಅಗತ್ಯವೆಂದು ಭಾವಿಸಿದ ಕಠಿಣ ಶಿಸ್ತುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಪ್ರತಿ ಭಾನುವಾರ ಉಪವಾಸ, ಎರಡು ವರ್ಷ ಸಿಹಿ ತಿನ್ನದಿರುವ ಸಂಕಲ್ಪ, ಸಾವಿರಾರು ಬಾರಿ ಗಾಯತ್ರಿ ಮಂತ್ರ ಪಠಣ, ಅನಗತ್ಯವಾಗಿ ಒಂದು ಬಿಡಿಗಾಸನ್ನೂ ಖರ್ಚು ಮಾಡದಿರುವ ನಿಯಮ, ಎರಡು ವರ್ಷಗಳ ಕಾಲ ಪ್ರತಿದಿನ ಕನಿಷ್ಠ ಒಂದು ಗಂಟೆ ಹಿಂದಿ ಭಾಷಾಭ್ಯಾಸ—ಹೀಗೆ ಅನೇಕ ನಿಯಮಗಳು ಅವರ ಬದುಕಿನ ಭಾಗವಾದವು.
ಸ್ವಾತಂತ್ರ್ಯ ಚಳವಳಿ ಮತ್ತು ಸಾರ್ವಜನಿಕ ಸೇವೆ
ಕನ್ನಡ ಭಾಷೆ ವ್ಯಾಪಕವಾಗಿದ್ದ ಮುಂಬೈ-ಕರ್ನಾಟಕದ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಲು ಗಾಂಧೀಜಿಯವರು ರಾಮಯ್ಯನವರನ್ನು ನಿಯೋಜಿಸಿ, ಗಂಗಾಧರರಾವ್ ದೇಶಪಾಂಡೆ ಅವರಿಗೆ ಪರಿಚಯಪತ್ರವೊಂದನ್ನು ನೀಡಿದರು. ಹುಬ್ಬಳ್ಳಿಯಲ್ಲಿಯೂ ಅವರು ಕೆಲಕಾಲ ಕಾಂಗ್ರೆಸ್ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅಲ್ಲಿನ ರಾಷ್ಟ್ರೀಯ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿಯೂ ದುಡಿದರು.
ಡಾ. ಎನ್. ಎಸ್. ಹರ್ಡೀಕರ್ ಅವರ ಉಪನ್ಯಾಸಗಳ ಅಂಶಗಳನ್ನು ಟಿಪ್ಪಣಿ ಮಾಡಿಕೊಂಡು ಲೇಖನಗಳನ್ನು ಸಿದ್ಧಪಡಿಸುತ್ತಿದ್ದರು. ಕಾಶಿ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಅವರಂತೆಯೇ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡು ತರಗತಿಗಳನ್ನು ತೊರೆದಿದ್ದ ವಿದ್ಯಾರ್ಥಿಗಳು ಸೇರಿ ‘ನಾನ್-ಕೋ-ಆಪರೇಟರ್’ ಎಂಬ ಇಂಗ್ಲಿಷ್ ಬೆರಳಚ್ಚು ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಪಿ. ಆರ್. ರಾಮಯ್ಯ ಆ ಪತ್ರಿಕೆಗಾಗಿ ಲೇಖನಗಳನ್ನು ಬರೆದುಕೊಡುತ್ತಿದ್ದರು.
ಈ ವೇಳೆಗೆ ರಾಮಯ್ಯನವರಿಗೆ ವಿವಾಹವಾಗಿತ್ತು. 1920ರ ಜೂನ್ 18ರಂದು ಪಿ. ಆರ್. ಜಯಲಕ್ಷಮ್ಮ ಅವರು ಅವರ ಜೀವನಸಂಗಾತಿಯಾದರು.
ಪತ್ರಿಕೋದ್ಯಮದತ್ತ
ಸ್ವತಂತ್ರ ಪ್ರವೃತ್ತಿಯ ರಾಮಯ್ಯನವರು ತಮ್ಮ ವೃತ್ತಿಯಾಗಿ ಪತ್ರಿಕೋದ್ಯಮವನ್ನು ಆರಿಸಿಕೊಂಡರು. ಮೈಸೂರಿನಲ್ಲಿ ಹೆಚ್ಚಿನ ಅವಕಾಶಗಳಿಲ್ಲದ ಕಾರಣ ಮದ್ರಾಸಿಗೆ ತೆರಳಿದರು. ಅಲ್ಲಿ ಆಂಧ್ರಕೇಸರಿ ಟಿ. ಪ್ರಕಾಶಂ ಅವರ ‘ಸ್ವರಾಜ್ಯ’ ಇಂಗ್ಲಿಷ್ ಪತ್ರಿಕೆಯಲ್ಲಿ ವಿವಿಧ ಬಗೆಯ ವಿಶಿಷ್ಟ ಬರಹಗಳ ಮೂಲಕ ಗಮನ ಸೆಳೆದರು.
ಅವರ ಶ್ರದ್ಧೆ, ಪ್ರಾಮಾಣಿಕ ದುಡಿಮೆ ಮತ್ತು ಪ್ರತಿಭೆ ಟಿ. ಪ್ರಕಾಶಂ ಅವರ ಗಮನಕ್ಕೆ ಬರುವುದು ತಡವಾಗಲಿಲ್ಲ. ರಾಮಯ್ಯನವರಿಗೆ ತಿಂಗಳಿಗೆ 75 ರೂಪಾಯಿ ವೇತನದ ಉಪಸಂಪಾದಕ ಹುದ್ದೆ ದೊರೆಯಿತು.
ಮದ್ರಾಸಿನಲ್ಲಿದ್ದಾಗ ರಾಮಯ್ಯನವರ ಪತ್ರಿಕೋದ್ಯಮದ ಬಹುತೇಕ ಬರಹಗಳು ಇಂಗ್ಲಿಷಿನಲ್ಲಿದ್ದವು. ಆದರೂ ವಿವಿಧ ವಿಷಯಗಳ ಕುರಿತು ಕನ್ನಡದಲ್ಲಿಯೂ ಬರೆಯಬೇಕೆಂಬ ಹಂಬಲ ಅವರಲ್ಲಿತ್ತು. ‘ದೀನವಾಣಿ’ ಎಂಬ ಹೆಸರಿನಲ್ಲಿ ಕೈಬರಹದ ಪತ್ರಿಕಾ ಲೇಖನಗಳನ್ನು ಸಿದ್ಧಪಡಿಸಿ ಬೆಂಗಳೂರಿಗೆ ಕಳುಹಿಸಲಾರಂಭಿಸಿದರು. ಸ್ಥಳೀಯ ಪತ್ರಿಕೆಗಳು ಅವುಗಳನ್ನು ಬಳಸಿಕೊಳ್ಳುತ್ತಿದ್ದವು. ಈ ಬರವಣಿಗೆಯಲ್ಲಿ ಪತ್ನಿ ಪಿ. ಆರ್. ಜಯಲಕ್ಷಮ್ಮ ಅವರೂ ನೆರವಾಗುತ್ತಿದ್ದರು.
ಒಂದು ವರ್ಷದ ನಂತರ ರಾಮಯ್ಯನವರು ‘ಸ್ವರಾಜ್ಯ’ ಪತ್ರಿಕೆಯ ಬೆಂಗಳೂರು ವರದಿಗಾರ ಹಾಗೂ ಪ್ರತಿನಿಧಿಯಾಗಿ ನೇಮಕಗೊಂಡರು. 1926ರ ವೇಳೆಗೆ ಅವರು ಮೈಸೂರಿಗೆ ಬಂದು ನೆಲೆಸಬೇಕಾಯಿತು. ಕೆಲಸದ ಅವಕಾಶಕ್ಕಾಗಿ ಎಂ. ವೆಂಕಟಕೃಷ್ಣಯ್ಯನವರನ್ನು ಸಂಪರ್ಕಿಸಿದರು.
ಕನ್ನಡ ಪತ್ರಿಕೋದ್ಯಮದ ವೃದ್ಧ ಪಿತಾಮಹರೆಂದೇ ಖ್ಯಾತರಾಗಿದ್ದ ಎಂ. ವೆಂಕಟಕೃಷ್ಣಯ್ಯನವರು ಅಂದಿನ ತರುಣ ಪತ್ರಿಕೋದ್ಯಮಿಗಳಿಗೆ ದೊಡ್ಡ ಆಸರೆಯಾಗಿದ್ದರು. ‘ಸಾಧ್ವಿ’, ‘ಸಂಪದಭ್ಯುದಯ’, ‘ಪೌರ’, ‘ವೃತ್ತಾಂತ ಚಿಂತಾಮಣಿ’ ಮುಂತಾದ ಕನ್ನಡ ಪತ್ರಿಕೆಗಳನ್ನೂ, ‘ಮೈಸೂರ್ ಪೇಟ್ರಿಯಟ್’, ‘ವೆಲ್ತ್ ಆಫ್ ಮೈಸೂರ್’, ‘ಮೈಸೂರ್ ಹೆರಾಲ್ಡ್’ ಮುಂತಾದ ಇಂಗ್ಲಿಷ್ ಪತ್ರಿಕೆಗಳನ್ನೂ ಅವರು ನಡೆಸುತ್ತಿದ್ದರು.
‘ತಾತಯ್ಯ’ ಎಂದು ಪ್ರಸಿದ್ಧರಾಗಿದ್ದ ಎಂ. ವೆಂಕಟಕೃಷ್ಣಯ್ಯನವರು ಕನ್ನಡ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದ ಪ್ರಮುಖರಲ್ಲಿ ಒಬ್ಬರು. ಶಿಸ್ತು, ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ತಮ್ಮ ಬದುಕು ಹಾಗೂ ಬರಹ ಎರಡರಲ್ಲೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಅವರ ವ್ಯಕ್ತಿತ್ವ ರಾಮಯ್ಯನವರ ಮೇಲೆ ಅಪಾರ ಪ್ರಭಾವ ಬೀರಿತು.
ವೆಂಕಟಕೃಷ್ಣಯ್ಯನವರು ರಾಮಯ್ಯನವರಿಗೆ ಪ್ರೋತ್ಸಾಹ ನೀಡಿ ತಮ್ಮ ಕಚೇರಿಯಲ್ಲೇ ಕೆಲಸ ಮಾಡುವಂತೆ ಅವಕಾಶ ಕಲ್ಪಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಈ ಅವಧಿಯಲ್ಲಿ ರಾಮಯ್ಯನವರು ‘ಸಾಧ್ವಿ’, ‘ಸಂಪದಭ್ಯುದಯ’, ‘ವೆಲ್ತ್ ಆಫ್ ಮೈಸೂರ್’ ಮತ್ತು ‘ಮೈಸೂರ್ ಪೇಟ್ರಿಯಟ್’ ಪತ್ರಿಕೆಗಳಿಗಾಗಿ ದುಡಿದರು. ಉಪಸಂಪಾದಕ ಹಾಗೂ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.
‘ತಾಯಿನಾಡು’ ಉದಯ
ಪಿ. ಆರ್. ರಾಮಯ್ಯನವರು ‘ತಾಯಿನಾಡು’ ಪತ್ರಿಕೆಯನ್ನು 1927ರ ಸೆಪ್ಟೆಂಬರ್ 12ರಂದು ಆರಂಭಿಸಿದರು. ಗಣೇಶ ಹಬ್ಬದ ದಿನ ಮೈಸೂರಿನಲ್ಲಿ ಕನ್ನಡ ವಾರಪತ್ರಿಕೆಯಾಗಿ ‘ತಾಯಿನಾಡು’ ಜನ್ಮತಾಳಿತು.
ಅಗರಂ ರಂಗಯ್ಯನವರ ‘ಶ್ರೀರಾಮ ಪ್ರೆಸ್’ನಲ್ಲಿ ಪತ್ರಿಕೆಯನ್ನು ಮುದ್ರಿಸಲಾಗುತ್ತಿತ್ತು. ಆರಂಭದಲ್ಲಿ ಅದು ಎರಡೇ ಪುಟಗಳ ಪತ್ರಿಕೆಯಾಗಿತ್ತು. ಬೆಲೆ ಒಂದು ಕಾಸು—ಎಲ್ಲರೂ ಕೊಂಡು ಓದಲಿ ಎಂಬುದು ಆಶಯ. ನಂತರ ಅರ್ಧ ಕ್ವಾರ್ಟೋ ಆಕಾರದಲ್ಲಿ ನಾಲ್ಕು ಪುಟಗಳಾಗಿ ಹೊರಬಂತು. ಬಿಡಿ ಪ್ರತಿಯ ಬೆಲೆ ಮೂರು ಕಾಸು; ವಾರ್ಷಿಕ ಚಂದಾ ಎರಡು ರೂಪಾಯಿ. ಅಂಚೆಯ ಮೂಲಕ ಒಟ್ಟಿಗೆ ಐದು ಪತ್ರಿಕೆಗಳನ್ನು ತರಿಸಿಕೊಂಡರೆ ಒಂದು ಪತ್ರಿಕೆ ಉಚಿತವಾಗಿ ನೀಡಲಾಗುತ್ತಿತ್ತು.
1928ರ ವೇಳೆಗೆ ಪತ್ರಿಕೆಗೆ ಸುಮಾರು 400–500 ಚಂದಾದಾರರಿದ್ದರು. ನಂತರ ಅದನ್ನು ವಾರಕ್ಕೆ ಎರಡು ಬಾರಿ ಹೊರಡಿಸಲಾರಂಭಿಸಲಾಯಿತು.
1928ರ ಜುಲೈ 30ರಂದು ಬೆಂಗಳೂರಿನಲ್ಲಿ ನಡೆದ ಗಣೇಶನ ಗಲಭೆಯ ಸಂದರ್ಭದಲ್ಲಿ, ಪಿ. ಆರ್. ರಾಮಯ್ಯನವರು ತಮ್ಮ ಪತ್ರಿಕೆಯಲ್ಲಿ ಬರೆದ ಲೇಖನವೊಂದು ಉಗ್ರವಾಗಿತ್ತೆಂಬ ಆರೋಪದ ಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟರು ಸೆಕ್ಷನ್ 144ರ ಅಡಿಯಲ್ಲಿ ‘ತಾಯಿನಾಡು’ ಪತ್ರಿಕೆಯ ಪ್ರಕಟಣೆಗೆ 14 ದಿನಗಳ ತಡೆಆಜ್ಞೆ ವಿಧಿಸಿದರು.
ರಾಮಯ್ಯನವರು ಕೂಡಲೇ ತಮಗೆ ಅನುಮತಿ ದೊರೆತಿದ್ದ ಮತ್ತೊಂದು ಪತ್ರಿಕೆಯಾದ ‘ನ್ಯೂ ಲೈಫ್’ ಅನ್ನು ಹೊರಡಿಸಿ ಈ ಆದೇಶವನ್ನು ಖಂಡಿಸಿದರು. ಹೀಗಾಗಿ ‘ತಾಯಿನಾಡು’ ತಡೆಯುವ ಉದ್ದೇಶ ಸಫಲವಾಗಲಿಲ್ಲ. ಹದಿನಾಲ್ಕು ದಿನಗಳ ನಂತರ ‘ತಾಯಿನಾಡು’ ಮತ್ತೆ ಪ್ರಕಟವಾಗತೊಡಗಿತು. ಈ ಬಾರಿ ಅದು ಮತ್ತಷ್ಟು ವಿಸ್ತರಿಸಿ ದಿನಪತ್ರಿಕೆಯಾಯಿತು.
1929ರ ಏಪ್ರಿಲ್ನಿಂದ ‘ತಾಯಿನಾಡು’ ಬೆಂಗಳೂರಿನಿಂದ ಪ್ರಕಟವಾಗಲಾರಂಭಿಸಿತು.
ಪಿ. ಆರ್. ರಾಮಯ್ಯನವರಿಗೆ ಆಗಿದ್ದ ದೊಡ್ಡ ಬಲವೆಂದರೆ ಅವರ ಕುಟುಂಬ. ತಮ್ಮಂದಿರಾದ ಆರ್. ಎಸ್. ನಾರಾಯಣ್, ಪಿ. ಆರ್. ವೆಂಕಟೇಶ್, ಪಿ. ಆರ್. ಶ್ರೀನಿವಾಸನ್, ಪಿ. ಆರ್. ಗೋವಿಂದ ಹಾಗೂ ಮಗ ಪಿ. ಆರ್. ಬ್ರಹ್ಮಾನಂದ—ಮುಂದೆ ಖ್ಯಾತ ಅರ್ಥಶಾಸ್ತ್ರಜ್ಞರಾದ ಡಾ. ಪಿ. ಆರ್. ಬ್ರಹ್ಮಾನಂದ—ಪತ್ರಿಕೆಯನ್ನು ಹೊರತರುವ ಕಾರ್ಯದಲ್ಲಿ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದರು.
‘ತಾಯಿನಾಡು’ ಕ್ರಮೇಣ ಉತ್ತಮ ವರದಿಗಾರರನ್ನೂ ತನ್ನತ್ತ ಸೆಳೆಯತೊಡಗಿತು. ವಿವಿಧ ಕಡೆಗಳಿಂದ ಸುದ್ದಿಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಿತ್ತು. 1930ರ ದಶಕದಲ್ಲಿ ಪತ್ರಿಕೆ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿತು.
1932ರಲ್ಲಿ ರಾಮಯ್ಯನವರು ಸ್ವಂತ ಮುದ್ರಣಾಲಯವನ್ನು ಸ್ಥಾಪಿಸಿದರು. ಮೈಸೂರಿನಿಂದ ಹಳೆಯ ಸಿಲಿಂಡರ್ ಯಂತ್ರವೊಂದನ್ನು ಖರೀದಿಸಿ ತರಲಾಯಿತು. ಜಾಹೀರಾತುಗಳು ಹೆಚ್ಚಾಗಿ ದೊರೆಯತೊಡಗಿದವು. ಓದುಗರ ಸಂಖ್ಯೆಯೂ ಹೆಚ್ಚಿತು; ಹಣಕಾಸಿನ ಪರಿಸ್ಥಿತಿಯೂ ಸುಧಾರಿಸಿತು.
ಜನಪ್ರಿಯತೆಯ ಉತ್ತುಂಗ
1939ರಲ್ಲಿ ಎರಡನೇ ಮಹಾಯುದ್ಧ ಆರಂಭವಾಯಿತು. ಯುದ್ಧದ ಸುದ್ದಿಗಳನ್ನು ತಿಳಿದುಕೊಳ್ಳಲು ಜನರು ತುದಿಗಾಲಲ್ಲಿ ನಿಂತಿದ್ದ ಕಾಲವದು. ಪತ್ರಿಕೆಗಳ ಬೇಡಿಕೆ ಹೆಚ್ಚಿತು; ಸುದ್ದಿಪತ್ರಿಕೆಗಳು ಬಿಸಿ ದೋಸೆಯಂತೆ ಮಾರಾಟವಾಗತೊಡಗಿದವು.
ಆದರೆ ‘ತಾಯಿನಾಡು’ ಸುದ್ದಿಯ ವಾಸ್ತವಿಕತೆಯನ್ನು ಕಾಪಾಡಿಕೊಳ್ಳುವುದಕ್ಕೆ ವಿಶೇಷ ಗಮನ ನೀಡಿತು. ಉತ್ಪ್ರೇಕ್ಷಿತ ಸುದ್ದಿಗಳಿಗೆ ಅವಕಾಶ ನೀಡಲಿಲ್ಲ. ಈ ನಿಲುವಿನಿಂದ ಪತ್ರಿಕೆ ಜನತೆ ಹಾಗೂ ಸರ್ಕಾರದ ವಿಶ್ವಾಸಕ್ಕೂ ಪಾತ್ರವಾಯಿತು. ಪತ್ರಿಕೆ ಉತ್ತುಂಗದಲ್ಲಿದ್ದಾಗ ಅದರ ಪ್ರಸಾರ ಸಂಖ್ಯೆ ಸುಮಾರು 25ರಿಂದ 30 ಸಾವಿರದವರೆಗೆ ತಲುಪಿತ್ತೆಂದು ತಿಳಿದುಬರುತ್ತದೆ.
ರಾಷ್ಟ್ರೀಯ ಪತ್ರಿಕೆಯಾಗಿ ರೂಪುಗೊಂಡಿದ್ದ ‘ತಾಯಿನಾಡು’, ಪಿ. ಆರ್. ರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಚಟುವಟಿಕೆಗಳ ಸುದ್ದಿಗಳಿಗೆ ಪ್ರಮುಖ ಸ್ಥಾನ ನೀಡುತ್ತಿತ್ತು. ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರದ ರಚನೆಗಾಗಿ ಮೈಸೂರು ಕಾಂಗ್ರೆಸ್ ನಡೆಸುತ್ತಿದ್ದ ಹೋರಾಟವನ್ನು ವಿವರವಾಗಿ ಜನತೆಗೆ ತಲುಪಿಸುತ್ತಿತ್ತು.ಇದರಿಂದ ಅಂದಿನ ದಿವಾನರಾಗಿದ್ದ ಸರ್ ಮಿರ್ಜಾ ಎಂ. ಇಸ್ಮಾಯಿಲ್ ಅವರಿಗೆ ತೀವ್ರ ಅಸಮಾಧಾನ ಉಂಟಾಯಿತೆಂದು ಹೇಳಲಾಗುತ್ತದೆ. ಕೆಲಕಾಲ ಪತ್ರಿಕೆಗೆ ಸರ್ಕಾರದ ಜಾಹೀರಾತುಗಳನ್ನು ನಿಲ್ಲಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ‘ತಾಯಿನಾಡು’ ತರಿಸಬಾರದೆಂದೂ ಆದೇಶ ಹೊರಡಿಸಲಾಯಿತು. ಆದರೂ ಪತ್ರಿಕೆ ಜನರ ವಿಶ್ವಾಸವನ್ನು ಗಳಿಸಿಕೊಂಡು ಈ ಅಡಚಣೆಗಳನ್ನು ಎದುರಿಸಿ ನಿಂತಿತು.
ಜಿಲ್ಲಾ ಕೇಂದ್ರಗಳು ಹಾಗೂ ಇತರ ಪ್ರದೇಶಗಳಲ್ಲಿ ವಾರ್ತಾದಾರರನ್ನು ನೇಮಿಸಿ, ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳ ಸುದ್ದಿಗೂ ಪತ್ರಿಕೆ ಮಹತ್ವ ನೀಡುತ್ತಿತ್ತು. ದೆಹಲಿಯ ಶಾಸನಸಭೆಯಿಂದಲೂ ತನ್ನದೇ ವರದಿಗಾರನ ಮೂಲಕ ಸುದ್ದಿಗಳನ್ನು ತರಿಸಿಕೊಳ್ಳುತ್ತಿತ್ತು.
‘ನಗರ ಸಂಚಾರಿಯ ಡೈರಿ’, ಕೆಲವೇ ಪದಗಳಲ್ಲಿ ಮುತ್ತಿನಂಥ ಮಾರ್ಗದರ್ಶನ ನೀಡುತ್ತಿದ್ದ ‘ಅಮೃತವಾಣಿ’, ‘ಓದುಗರ ಪತ್ರಗಳು’ ಮುಂತಾದ ಅಂಕಣಗಳು, ಕ್ರೀಡೆ ವಿಶೇಷಗಳು ಜನಪ್ರಿಯವಾಗಿದ್ದವು. ಹೀಗೆ ‘ತಾಯಿನಾಡು’ ಕನ್ನಡ ದಿನಪತ್ರಿಕೋದ್ಯಮದ ಪ್ರಮುಖ ಮಾದರಿಯಾಗಿ ಬೆಳೆದು ಅಂದಿನ ಜನಮನವನ್ನು ಸೂರೆಗೊಂಡಿತು. ನಂತರ ಬಂದ ಅನೇಕ ಪತ್ರಿಕೆಗಳಿಗೆ ಮಾರ್ಗದರ್ಶಕವಾಗಿಯೂ ಪರಿಣಮಿಸಿತು.
ರಾಮಯ್ಯನವರ ಹೋರಾಟ ಸದಾ ಪರಿಶುದ್ಧ ಆಶಯಗಳೊಂದಿಗೆ ಕೂಡಿತ್ತು. ಬಿ. ಜಿ. ಹಾರ್ನಿಮನ್, ಎಸ್. ಎ. ಬ್ರೆಲ್ವಿ, ಸಿ. ವೈ. ಚಿಂತಾಮಣಿ, ಕಸ್ತೂರಿ ರಂಗ ಅಯ್ಯಂಗಾರ್ ಮುಂತಾದ ಮಹತ್ವದ ಸಂಪಾದಕರ ಪರಂಪರೆಯಲ್ಲಿ ಗುರುತಿಸಬಹುದಾದ ಪತ್ರಕರ್ತರಾಗಿದ್ದರು ಪಿ. ಆರ್. ರಾಮಯ್ಯ.
ಸ್ವಾತಂತ್ರ್ಯಾನಂತರ
1947ರ ಆಗಸ್ಟ್ನಲ್ಲಿ ಭಾರತ ಸ್ವತಂತ್ರವಾದಾಗ ರಾಮಯ್ಯನವರಿಗೆ ಅಪಾರ ಸಂತೋಷವಾಯಿತು. ಜನತೆ, ರಾಷ್ಟ್ರನಾಯಕರು ಮತ್ತು ರಾಷ್ಟ್ರೀಯ ಪತ್ರಿಕೆಗಳ ದೀರ್ಘಕಾಲದ ಶ್ರಮ ಸಾರ್ಥಕವಾಯಿತೆಂಬ ಧನ್ಯತಾ ಭಾವ ಅವರಲ್ಲಿತ್ತು.
ಸ್ವಾತಂತ್ರ್ಯಾನಂತರದ ಹೊಸ ಪರಿಸ್ಥಿತಿಗೂ ಅವರು ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಸಾರ್ವಜನಿಕ ಜೀವನದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ನೆಲೆಗೊಳ್ಳಬೇಕು ಎಂಬ ಆಶಯ ಹೊಂದಿದ್ದರು. ಸ್ವತಂತ್ರ ಭಾರತ ಎದುರಿಸಬೇಕಾದ ಹೊಸ ಸವಾಲುಗಳ ಕುರಿತು ಅವರು ಸಾಕಷ್ಟು ಬರೆದರು.
1955ರ ವೇಳೆಗೆ, ಬಹುಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ‘ತಾಯಿನಾಡು’ ಹಣಕಾಸು, ತಾಂತ್ರಿಕ ಬದಲಾವಣೆಗಳು ಹಾಗೂ ಹೊಸ ಪತ್ರಿಕೆಗಳ ತೀವ್ರ ಸ್ಪರ್ಧೆಯಿಂದ ಹಲವು ಸವಾಲುಗಳನ್ನು ಎದುರಿಸತೊಡಗಿತು.
“ಪತ್ರಿಕೆ ಬೇರೆಯವರ ಮಡಿಲಲ್ಲಾದರೂ ಚೆನ್ನಾಗಿ ಬಾಳಿ ಬದುಕಲಿ” ಎಂಬ ಆಶಯದಿಂದ ಅದರ ಮಾಲೀಕರಾಗಿದ್ದ ಪಿ. ಆರ್. ರಾಮಯ್ಯ ಪತ್ರಿಕೆಯನ್ನು ಮಾರಲು ನಿರ್ಧರಿಸಿದರು.
ಜೊತೆಗೆ ‘ತಾಯಿನಾಡು’ ಪತ್ರಿಕೆಯನ್ನು ಆರಂಭಿಸಿದಾಗ ಅವರಿಗಿದ್ದ ಪ್ರಮುಖ ಉದ್ದೇಶಗಳಾದ ಭಾರತದ ಸ್ವಾತಂತ್ರ್ಯ ಸಾಧನೆ ಮತ್ತು ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆ—ಇವೆರಡೂ ಸಾಕಾರಗೊಂಡಿದ್ದವು ಎಂಬ ತೃಪ್ತಿಯೂ ಅವರಲ್ಲಿತ್ತು.
ಪಿ. ಆರ್. ರಾಮಯ್ಯನವರು ಪತ್ರಿಕೆಯನ್ನು ಉದ್ಯಮಿ ಕೆ. ಎಂ. ಎಸ್. ರಾಮಯ್ಯನವರಿಗೆ ಮಾರಿ, ಉಳಿದಿದ್ದ ಸಾಲಗಳನ್ನು ತೀರಿಸಿ, 1957ರ ಜನವರಿಯಲ್ಲಿ ಸಕ್ರಿಯ ಪತ್ರಿಕಾ ಜೀವನದಿಂದ ನಿವೃತ್ತರಾದರು.
ಸುಮಾರು ಮೂವತ್ತು ವರ್ಷಗಳ ಕಾಲ ಒಂದು ಪ್ರಮುಖ ಪತ್ರಿಕೆಯನ್ನು ಕಟ್ಟಿ ಬೆಳೆಸಿ, ಅದರ ನೋವು-ನಲಿವುಗಳನ್ನೆಲ್ಲ ಅನುಭವಿಸಿದ ನಂತರ ಅವರು ಅದರಿಂದ ದೂರವಾದರು.
ಸಣ್ಣದಾಗಿ ಆರಂಭವಾದ ‘ತಾಯಿನಾಡು’ ರಾಜ್ಯಾದ್ಯಂತ ತನ್ನ ಪ್ರಭಾವವನ್ನು ಬೀರಿತ್ತು. ಹೊಸ ಓದುಗರನ್ನು ಸೃಷ್ಟಿಸಿತ್ತು; ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಿತ್ತು. ಕನ್ನಡ ದಿನಪತ್ರಿಕೆ ಹೇಗಿರಬೇಕು ಎಂಬುದಕ್ಕೆ ಒಂದು ಪ್ರಮುಖ ಮಾದರಿಯಾಗಿ ಬೆಳೆದಿತ್ತು.
ರಾಮಯ್ಯನವರು ವಿವಿಧ ಕಾಲಘಟ್ಟಗಳಲ್ಲಿ ‘ಡೇಲಿ ನ್ಯೂಸ್’, ‘ನ್ಯೂ ಲೈಫ್’, ‘ಚೇತನಾ’ ಮತ್ತು ‘ಚಿತ್ರಗುಪ್ತ’ ಮುಂತಾದ ಪತ್ರಿಕೆಗಳನ್ನೂ ನಡೆಸಿದ್ದರು.
ಸಾರ್ವಜನಿಕ ಜೀವನ
ರಾಮಯ್ಯನವರ ಸಮಾಜಸೇವೆ ಬಹುಮುಖವಾಗಿತ್ತು. ಬೆಂಗಳೂರು ನಗರಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ 1943ರಲ್ಲಿ ಹಾಗೂ ನಂತರ ಪಕ್ಷೇತರ ಅಭ್ಯರ್ಥಿಯಾಗಿ 1947ರಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ಮೈಸೂರು ವಿಧಾನಸಭೆಗೆ ಬೆಂಗಳೂರಿನ ಬಸವನಗುಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 1952ರಲ್ಲಿ ಚುನಾಯಿತರಾಗಿ ಸೇವೆ ಸಲ್ಲಿಸಿದರು.
ಪತ್ರಿಕಾ ಸಮುದಾಯದ ಏಳಿಗೆಗೂ ಅವರು ಶ್ರಮಿಸಿದರು. ಮೈಸೂರು ಸಂಸ್ಥಾನದ ಪತ್ರಿಕೋದ್ಯೋಗಿಗಳ ಸಂಘದ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾದದ್ದು ಅವರ ಸೇವೆಗೆ ಸಂದ ಗೌರವವಾಗಿತ್ತು. 1934, 1941 ಮತ್ತು 1943ರಲ್ಲಿ ಅವರು ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ಸಿದ್ದಗಂಗೆಯಲ್ಲಿ ನಡೆದ ಮೈಸೂರು ಸಂಸ್ಥಾನದ ಪತ್ರಿಕೋದ್ಯೋಗಿಗಳ ಮೂರನೇ ಸಮ್ಮೇಳನದ ಅಧ್ಯಕ್ಷರಾಗಿಯೂ ಅವರು ಆಯ್ಕೆಯಾಗಿದ್ದರು.
ಮೈಸೂರು ಸಂಸ್ಥಾನದ ಹರಿಜನ ಸೇವಕ ಸಂಘ, ಆದಿವಾಸಿ ಸಂಘ, ವಿವಿಧ ಪ್ರಚಾರ ಸಂಸ್ಥೆಗಳು, ಮೈಸೂರಿನಲ್ಲಿ ಎಂ. ವೆಂಕಟಕೃಷ್ಣಯ್ಯನವರ ಪ್ರತಿಮೆ ಸ್ಥಾಪನೆ ಸಮಿತಿ ಹಾಗೂ ಇನ್ನೂ ಅನೇಕ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಅಥವಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಸಾಹಿತ್ಯ ಮತ್ತು ಕೃತಿಗಳು
ಅಂದಿನ ಪ್ರಮುಖ ವಿಷಯಗಳು ಮತ್ತು ವ್ಯಕ್ತಿಗಳ ಕುರಿತು ರಾಮಯ್ಯನವರು ಅಸಂಖ್ಯಾತ ಲೇಖನಗಳನ್ನು ಬರೆದು ಪ್ರಕಟಿಸಿದ್ದರು. ಕೆಲವು ಐತಿಹಾಸಿಕ ಕೃತಿಗಳನ್ನೂ ರಚಿಸಿದರು.
ಅವುಗಳಲ್ಲಿ ‘ಫ್ರಾನ್ಸಿನ ದುಃಖಕ್ರಾಂತಿ’, ‘ಆಧುನಿಕ ರಷ್ಯಾ’, ‘ಮೈಸೂರಿನ ಪೊಲಿಟಿಕಲ್ ಎವಲ್ಯೂಷನ್’, ‘ದಯಾಸಾಗರ ಎಂ. ವೆಂಕಟಕೃಷ್ಣಯ್ಯ’ ಮುಂತಾದ ಕೃತಿಗಳು ಸೇರಿವೆ. ಗಾಂಧೀಜಿಯವರ ಕುರಿತು ಅವರು ಬರೆದಿಟ್ಟಿದ್ದ ಕೃತಿಯೊಂದೂ ಮರಣಾನಂತರ ಪ್ರಕಟವಾಯಿತು ಎನ್ನಲಾಗಿದೆ.
ದೇಶ, ಸಮಾಜ ಮತ್ತು ಜನತೆಗೆ ಪಿ. ಆರ್. ರಾಮಯ್ಯನವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಸರ್ಕಾರವು 1969ರಲ್ಲಿ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತು.
ಕೊನೆಯ ದಿನಗಳು
‘ತಾಯಿನಾಡು’ದಿಂದ ದೂರವಾದ ನಂತರದ ವರ್ಷಗಳನ್ನು ರಾಮಯ್ಯನವರು ಬರವಣಿಗೆ ಮತ್ತು ಅಧ್ಯಯನದಲ್ಲಿ ಕಳೆದರು. ಪುಸ್ತಕಗಳನ್ನು ಪ್ರಕಟಿಸಿದರು. ಆಧ್ಯಾತ್ಮಿಕ ಅಧ್ಯಯನ, ಧ್ಯಾನ ಮತ್ತು ಯೋಗದತ್ತ ಹೆಚ್ಚು ಗಮನ ಹರಿಸಿದರು.
ತಾವು ಅಕ್ಷರ ಕಲಿತ ಹಾಗೂ ‘ತಾಯಿನಾಡು’ ಪತ್ರಿಕೆಯನ್ನು ಆರಂಭಿಸಿದ ಮೈಸೂರಿನಲ್ಲಿಯೇ ಜೀವನದ ಕೊನೆಯ ದಿನಗಳನ್ನು ಸಮಾಧಾನಚಿತ್ತದಿಂದ ಕಳೆದರು. ಬಂಧುಗಳು, ಸ್ನೇಹಿತರು ಮತ್ತು ಆತ್ಮೀಯರು ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರು.
1970ರ ಮೇ 25ರಂದು ಅನಾರೋಗ್ಯದ ನಂತರ ಪಿ. ಆರ್. ರಾಮಯ್ಯನವರು ನಿಧನರಾದರು.
ಅವರ ಪತ್ನಿ ಪಿ. ಆರ್. ಜಯಲಕ್ಷಮ್ಮ ಅವರು ಸಮಾಜಸೇವಕಿ ಮತ್ತು ಬರಹಗಾರ್ತಿಯಾಗಿದ್ದರು. ಅರ್ಥಶಾಸ್ತ್ರಜ್ಞ ಡಾ. ಪಿ. ಆರ್. ಬ್ರಹ್ಮಾನಂದ, ವಿಜ್ಞಾನಿ ಪಿ. ಆರ್. ವಿಶ್ವನಾಥ್ ಹಾಗೂ ಕಲಾವಿದೆ-ಪ್ರಾಧ್ಯಾಪಕಿ ರಾಮೇಶ್ವರಿ ವರ್ಮಾ ಈ ದಂಪತಿಯ ಮಕ್ಕಳು. ಮಹಾನ್ ಲೇಖಕರೂ ಆದ ರಾಮಯ್ಯನವರ ಪುತ್ರ ಪಾಲಹಳ್ಳಿ ವಿಶ್ವನಾಥ್ ಅವರು ‘ಹೀಗೊಂದು ಕುಟುಂಬದ ಕಥೆ' ಎಂಬ ರಾಮಯ್ಯನವರ ಕುಟುಂಬದ ಅಮೋಘ ಚರಿತ್ರೆ ಪ್ರಕಟಿಸಿದ್ದಾರೆ.
ಮೆದುಮಾತಿನ, ಉಜ್ವಲ ರಾಷ್ಟ್ರಪ್ರೇಮದ ಅಪ್ಪಟ ಪತ್ರಕರ್ತರಾಗಿದ್ದ ಪಿ. ಆರ್. ರಾಮಯ್ಯನವರು ಪತ್ರಿಕಾ ಕ್ಷೇತ್ರದಲ್ಲಿಯೂ ಸಾರ್ವಜನಿಕ ಜೀವನದಲ್ಲಿಯೂ ಬಿಟ್ಟುಹೋದ ಆದರ್ಶ ಚಿರಸ್ಮರಣೀಯವಾದುದು. ಅವರ ಹೆಜ್ಜೆಗುರುತುಗಳು ಮುಂದಿನ ತಲೆಮಾರುಗಳಿಗೆ ಸದಾ ಮಾರ್ಗದರ್ಶಕ.🌷🙏🌷
On the birth anniversary of Great Journalist, Freedom Fighter and writer ‘Thayinadu’ fame P. R. Ramaiah 🌷🙏🌷

ಕಾಮೆಂಟ್ಗಳು