ಶುಕ್ರವಾರ, ಆಗಸ್ಟ್ 12, 2011

ಸಾಫ್ಟಾನುಭವ

ಸಾಫ್ಟಾನುಭವ!ಇಪ್ಪತ್ತನೆಯ ಶತಮಾನದ ಮಧ್ಯಭಾಗದಿಂದೀಚೆಗೆ ಬದುಕಲು ಪ್ರಾರಂಭಿಸಿದ ನನ್ನಂತಹವರಿಗೆ ಒಂದು ರೀತಿಯ ವಿಚಿತ್ರದ ಬದಲಾವಣೆಯ ಬದುಕು ವರುಷ ವರುಷಗಳು ಉರುಳಿದಂತೆ ಅನುಭವದಲ್ಲಿ ಸಿಕ್ಕಿದೆ. ಟಿ.ಪಿ ಕೈಲಾಸಂ ಅವರ “ನಾನ್ ಹುಟ್ಟಿದ್ ವಡ್ರಳ್ಳಿ, ಬೆಳೆದದ್ ಬ್ಯಾಡ್ರಳ್ಳಿ” ಎಂದು ಬದುಕಿದ ‘ಕೊಳೀಕೆ ರಂಗ’ ಇಪ್ಪತ್ತನೆಯ ಶತಮಾನದ ಎರಡನೇ ದಶಕದಲ್ಲಿ “ಎಣ್ಣೆ ಇಲ್ಲದ ದೀಪಗಳು ಎತ್ತಿಲ್ಲದ ಬಂಡಿಗಳು ಇದ್ದ” ಮೈಸೂರಲ್ಲಿ ಬಂದು ಕಣ್ ಕಣ್ ಬಿಟ್ಹಂಗೆ ನಾವು ಈಗಲೂ ಕಣ್ ಕಣ್ ಬಿಡ್ತಾನೇ ಬದುಕ್ತಾ ಇದ್ದೇವೆ. ನಾವು 1968ರಲ್ಲಿ ಮೈಸೂರಿಗೆ ಬಂದಾಗ ಅಲ್ಲಿ ತುಂಬಿದ್ದು ‘ಟಾಂಗಾ’ಗಳೆ. ಆಟೋ ಆಗ ಮೈಸೂರಲ್ಲಿದ್ದದ್ದು ಒಂದೇ ಒಂದು.

ನಾವು ಕೆಲಸಕ್ಕೆ ಅಂತ ಕಚೇರಿಗೆ ಹೋದಾಗಲೇ ಪೋನ್ ಹಿಡಿಯುವ ಕಾಲ ಕೂಡಿ ಬಂದದ್ದು. “ರೀ ನೋಡ್ರೀ, ನಿಮಗೆ ಪರ್ಸನಲ್ ಡಿಪಾರ್ಟ್ ಮೆಂಟಿನವರು ಫೋನ್ ಮಾಡಿದ್ದಾರೆ” ಅಂತ ನಮ್ಮ ಅಧಿಕಾರಿ ಹೇಳಿದರು. ಕೇಳುವ ಕಡೆ ಫೋನ್ ಹಿಡಿದು ನಾನು ತಬ್ಬಿಬ್ಬಾಗಿ ಮಾತಾಡುವ ಹೊತ್ತಿಗೆ ಆ ಕಡೆಯಿಂದ ಯಾವನೋ ಗಮಾರ ಇರ್ಬೇಕು ಅಂತ ಫೋನ್ ಇಟ್ಟಿದ್ದು ಕೇಳಿಸ್ತು. ಅಧಿಕಾರಿಗೆ ಹೇಳ್ದೆ “ಸಾರ್, ಅಲ್ಲಿಗೇ ಹೋಗಿ ಬರ್ತೇನೆ” ಅಂತ ಫರ್ಲಾಂಗ್ ದೂರದಲ್ಲಿದ್ದ ಸಿಬ್ಬಂಧಿ ವಿಭಾಗಕ್ಕೆ ಹೊರಟಾಗ “ರೀ, ಅಲ್ಲಿಗೆ ಹೋಗಿ ನೀವು ಆಟ ಆಡ್ತಾ ಇದ್ರೆ, ಇಲ್ಲಿ ಕೆಲಸ ಯಾರ್ರೀ ಮಾಡ್ತಾರೆ ಫೋನ್ ಡಯಲ್ ಮಾಡ್ರಿ” ಅಂದ್ರೆ, “ಸಾರ್ ಇದ್ಯಾಕೋ ಬರೋವಲ್ದು ಸಾ!” ಅಂತ ತೊದಲ ಬೇಕಾಯ್ತು. ಕ್ರಮೇಣ ಅರಿವಾಗ್ತಾ ಬಂತು, “ಈ ಬಾಸ್ಗಳ ಜೊತೆ ಬದುಕುವುದಕ್ಕಿಂತ ಇಂತಹ ಸಣ್ಣ ಪುಟ್ಟ ಯಂತ್ರಗಳ ಜೊತೆಗೆ ಬದುಕೇ ಬೆಟರ್ರು!”

ಅಂದಿನ ಕಚೇರಿಯ ಒಂದು ವಿಭಾಗದ ಫ್ಲಾಶ್ ಬ್ಯಾಕಿಗೆ ಹೀಗೆ ಬರೋಣ. ಅದೊಂದು ದೊಡ್ಡ ಮದುವೆ ಛತ್ರದ ಹಾಲ್ ಇದ್ದಂತೆ. ಅಲ್ಲಲ್ಲಿ ದೊಡ್ಡ ದೊಡ್ಡ ಟೇಬಲ್ಲುಗಳು; ಅದರ ತುಂಬಾ ತಲಾ ಐದಾರು ಕೆ.ಜಿ. ತೂಕದ, ಮೂರಡಿ ಅಗಲ, ಎರಡೂ ವರೆ ಅಡಿ ಉದ್ದವಿದ್ದ ಸೇಲ್ಸ್ ರಿಜಿಸ್ಟರ್ ಪುಸ್ತಕಗಳು; ಈ ಟೇಬಲ್ಲಿನ ಹಿಂದೆ ಗುಮಾಸ್ತ ಪುರುಷ ಸ್ತ್ರೀಯರು; ಅವರ ಹಿಂದೆ ತಮ್ಮಲ್ಲಿದ್ದ ಬಿಡಿ ಹಾಳೆಗಳ ಗಂಟಿನ ಭಾರವನ್ನು ತಡೆಯಲಾರದೆ ಸೊಟ್ಟ ಸೊಟ್ಟಗೆ ನಿಂತು, ಪರಂಪರಾನುಗತವಾಗಿ ಕುಡಿದ ಧೂಳಿನಿಂದ ಕಳೆಗೆಟ್ಟ ನೂರಾರು ಬಾಕ್ಸ್ ಫೈಲುಗಳನ್ನು ಅಲಂಕರಿಸಿದ ಕಪಾಟುಗಳು; ಅಧಿಕಾರಿಯ ಬಾಗಿಲ ಬಳಿ ಆಗಾಗ ಬರುವ ಕರ್ಕಶ ಧ್ವನಿಗೆ ಓಗೊಟ್ಟು, ಕರಿ ಬಣ್ಣದ ‘ಹಾಲ್ಡಾ ಬೆರಳಚ್ಚು’ ಯಂತ್ರದಲ್ಲಿ ಕಟ ಕಟ ಕುಟ್ಟುತ್ತಿದ್ದುದನ್ನು ಬಿಟ್ಟು. ಒಂದು ಗೆರೆಗೂ ಮತ್ತೊಂದು ಗೆರೆಗೂ ಸುಮಾರು ಮುಕ್ಕಾಲಿಂಚು ಗೆರೆ ವೆತ್ಯಾಸದ ಲೈನುಗಳಿದ್ದ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಕೊಂಡು ಸರಸರನೆ ಓಡುತ್ತಿದ್ದ ‘ಸ್ಟೆನೋಟೈಪಿಸ್ಟ್’ ಸಖಿಯರು ಇತ್ಯಾದಿ ಇತ್ಯಾದಿ. ಇಂಥದ್ದೇ ಹಲವು ಕಚೇರಿಗಳು ಮತ್ತು ಹಲವು ನೂರು ಜನ ಸೇರಿದರೆ ಅದೊಂದು ಲೆಖ್ಖಪತ್ರ ವಿಭಾಗ. ಇದಲ್ಲದೆ ಮಾರ್ಕೆಟಿಂಗ್, ಪರ್ಸನಲ್, ಸೇಲ್ಸ್, ಡಿಸ್ಟ್ರಿಬ್ಯೂಶನ್, ಸರ್ವಿಸ್ ಇಂಥಹ ಹಲವು ವಿಭಾಗ ಸೇರಿ ಒಂದು ಕಚೇರಿ. ಅದಕ್ಕೆ ರಿಪೋರ್ಟ್ ಮಾಡುವ ಹಲವು ಕಾರ್ಖಾನೆ, ಗೋಡೌನ್, ವೇರ್ ಹೌಸ್, ಮಾರಾಟ ಮಳಿಗೆಗಳು ಇವೆಲ್ಲಾ ಸೇರಿ ಒಂದು ಸಂಸ್ಥೆ ಹೀಗೆ ಅದೊಂದು ಹಲವು ಬಾಲಂಗೋಚಿಗಳಿದ್ದರೂ ಹಾರಲಾಗದ ಭಾರವಾದ ಗಾಳಿಪಟ!

ಈಗೊಂದು ಸಣ್ಣ ಉದಾಹರಣೆ ಬರೋಣ. ಒಂದು ಅಂಗಡಿಯಲ್ಲಿ ಒಂದು ಹತ್ತು ಪದಾರ್ಥಗಳು ಮಾರಾಟಕ್ಕಿವೆ. ಅದು ಮಾರಾಟವಾದಾಗಲೆಲ್ಲಾ ಯಾವ ಯಾವ ಪದಾರ್ಥ, ಯಾರಿಗೆ, ಎಷ್ಟು, ಯಾವ ದರದಲ್ಲಿ ಮಾರಾಟವಾಯ್ತು ಎಂಬುದನ್ನು ಒಬ್ಬ ಒಂದು ಇನ್ವಾಯ್ಸ್ ಪ್ರತಿಯಲ್ಲಿ ಬರೆಯುತ್ತಾನೆ. ದಿನಂಪ್ರತಿ ಅಂತಹ ಹಲವು ಇನ್ವಾಯ್ಸುಗಳು ತಯಾರಾಗುತ್ತವೆ. ಈಗ ನಮಗೆ ಯಾವ ಪದಾರ್ಥಗಳು ಒಟ್ಟು ಎಷ್ಟು ಸಂಖ್ಯೆಯಲ್ಲಿ ಮಾರಾಟವಾದವು ಅವುಗಳ ವೈಯಕ್ತಿಕ ಮೌಲ್ಯ ಮತ್ತು ಒಟ್ಟಾರೆ ಮೌಲ್ಯ ಎಷ್ಟು ಎಂದು ತಿಳಿಯಬೇಕಾದರೆ ಏನು ಮಾಡಬೇಕು? ಅದನ್ನು ಹಲವು ಕಾಲಂಗಳಿರುವ ಪುಸ್ತಕದಲ್ಲಿ ಬರೆದು ಅದನ್ನು ಸರಿಯಾದ ರೀತಿಯಲ್ಲಿ ಮೇಲಿನಿಂದ ಕೆಳಕ್ಕೆ ಮತ್ತು ಎಡದಿಂದ ಬಲಕ್ಕೆ ಕೂಡಬೇಕು.

ನಮ್ಮ ಕಚೇರಿಯಲ್ಲಿ ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಿ ಸುಮಾರು ನಾನೂರು ವಿವಿಧ ತರಹದ ಕೈಗಡಿಯಾರಗಳಿದ್ದು ಅವೆಲ್ಲಾ ಭಾರತದ ವಿವಿಧ ಭಾಗಗಳಲ್ಲಿ ಅಸಂಖ್ಯವಾಗಿ ಮಾರಾಟವಾಗುತ್ತಿದ್ದವು. ಇವನ್ನೆಲ್ಲಾ ದೊಡ್ಡ ದೊಡ್ಡ ಪುಸ್ತಕಗಳಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ದೊಡ್ಡ ದೊಡ್ಡ ಪುಸ್ತಕಗಳಲ್ಲಿ ಬರೆದು ಸರಿಯಾಗಿ ಕೂಡಿ, ಹಲವು ಜನ ಅದನ್ನು ಸರಿಯಾಗಿದೆಯೇ ಎಂದು ತಮಗೆ ಸಾಧ್ಯವಾದ ಮಟ್ಟಿಗೆ ಪರೀಕ್ಷಿಸಿ, ವಿವಿಧ ರೀತಿಯ ಲೆಖ್ಖ ಒಪ್ಪಿಸುವುದು ಅಂದಿನ ದಿನದ ನಮ್ಮ ಕಚೇರಿಯ ಪ್ರಮುಖ ಕೆಲಸ. ಇದಕ್ಕಾಗಿ ಅಂದು ನಮ್ಮ ಬಳಿ ಇದ್ದದ್ದು ಕ್ಯಾಲ್ಕ್ಯುಲೇಟರ್ ಎಂಬ ಒಂದು ಆಯುಧ ಮಾತ್ರ. ಒಬ್ಬ ಒಂದು ತಾಸು ನಿಧಾನ ಕಚೇರಿಗೆ ಬರುವುದು, ರಜೆ ತೆಗೆದುಕೊಳ್ಳುವುದು, ಸರಿಯಾದ ಸಮಯಕ್ಕೆ ಮನೆಗೆ ಹೋಗುವುದು, ವಾರದ ಕೊನೆಯಲ್ಲಿ ಸಿನಿಮಾಗೆ ಪ್ಲಾನ್ ಮಾಡುವುದು ಇತ್ಯಾದಿಗಳು ಯೋಚಿಸಲೂ ಅಸಾಧ್ಯವಾದಂತಿದ್ದವು. ಜೊತೆಗೆ ಅಂತಹವು ಅನಿವಾರ್ಯವೆನಿಸಿದಾಗ ದೊಡ್ಡ ರಗಳೆಗಳೇ ಸೃಷ್ಟಿಯಾಗುತ್ತಿದ್ದವು.

ಮುಂದೊಂದು ದಿನ ಡಾಟಾ ಪ್ರೋಸಿಸಿಂಗ್ ಎಂಬ ಹಲವು ಸಂಸ್ಥೆಗಳು ಹುಟ್ಟಿಕೊಂಡವು. ಈ ಸಂಸ್ಥೆಗಳಿಗೆ ನಾವು ನಮ್ಮ ಇನ್ವಾಯ್ಸ್ಗಳನ್ನೆಲ್ಲಾ ಕೊಟ್ಟರೆ, ಆ ಸಂಸ್ಥೆಗಳಲ್ಲಿ ಅವುಗಳನ್ನೆಲ್ಲಾ ಬೈನರಿ ಕೋಡುಗಳಲ್ಲಿ ಕುಟ್ಟಿ ಹಲವು ಸಣ್ಣ ಸಣ್ಣ ಚೌಕಗಳು ಮತ್ತು ಅದೇ ಗಾತ್ರದ ತೂತುಗಳೋಪಾದಿಯ ಡಾಟಾ ಕಾರ್ಡುಗಳನ್ನು ಸಿದ್ಧಪಡಿಸಿಕೊಂಡು ಅವೆಲ್ಲವನ್ನೂ ಒಟ್ಟಾರೆಯಾಗಿಸಿ ಹಲವು ಸಾವಿರ ಹಾಳೆಗಳ ಮೂರ್ನಾಲ್ಕು ಕಾರ್ಬನ್ ಪ್ರತಿ ಸಮೇತವಾದ ಹಾಳೆಗಳಲ್ಲಿ ವಿವರಗಳನ್ನು ಪ್ರಿಂಟ್ ಮಾಡಿ ನಮಗೆ ಕೊಡುತ್ತಿತ್ತು. ಇದರಲ್ಲಿ ನಾವು ಮೂಲ ಕೆಲಸಕ್ಕಿಂತ ಡಾಟಾ ಕುಟ್ಟಿದವ ಮಾಡಿದ್ದ ಕೆಲಸದ ಪ್ರೊಫ್ ರೀಡಿಂಗ್ ಮಾಡಿ ಅದನ್ನು ನಾಲ್ಕಾರು ಬಾರಿ ಓಡಾಡಿ ಸರಿ ಹೊಗಿಸುವುದರಲ್ಲೇ ಜೀವನ ಸಾಕು ಸಾಕಾಯ್ತು ಎನಿಸುವಂತೆ ಮಾರ್ಪಡಿಸಿಬಿಡುತ್ತಿತ್ತು. ಕಂಪ್ಯೂಟರ್ ಎಂಬುದು ನಮ್ಮ ಕಾರ್ಯ ಸ್ವಾವಲಂಬನೆ ಕಿತ್ತುಕೊಂಡು, ಯಾವುದೋ ಮತ್ತೊಂದು ಡಾಟಾ ಪ್ರೋಸಿಸಿಂಗ್ ಕಾರ್ಖಾನೆ ಮತ್ತು ಅಲ್ಲಿನ ಸಿಬ್ಬಂದಿಗೆ ನಮ್ಮನ್ನು ಅಡಿಯಾಳಾಸಿದ ಹಿಂಸೆ ನಮ್ಮಲ್ಲಿ ಸ್ವಾತಂತ್ರ್ಯಹೀನತೆಯನ್ನು ತುಂಬಿಸಿತ್ತು.

ಮುಂದೊಂದು ಕಂಪ್ಯೂಟರ್ ಎಂಬುದು ನಾವಿದ್ದ ಕಚೇರಿಗಳಲ್ಲೇ ಮಡಿ ಮೈಲಿಗೆ ತಗಲದ ಹಾಗೆ ಮೂಲೆಯೊಂದರಲ್ಲಿ ಬಂದು ಕುಳಿತಾಗ ಅಲ್ಲಿ ‘ಕುಳಿತುಕೊಳ್ಳುವ ಕೋಡು’ ನಮಗೆಂದು ಬರುತ್ತದೋ ಎಂದು ಕಾಯುತ್ತಾ ಕೂತ ನಮ್ಮನ್ನೂ ಆ ಅವಕಾಶ ಅರಸಿ ಬಂತು. ಅದರಲ್ಲಿನ ನೆನಪಿನ ಮೊದಲ ಅನುಭವ ಹೇಳುವುದಾದಾರೆ, ಅದೊಂದು ಸಿದ್ಧ ಪಡಿಸಿದ ಪಟ್ಟಿ. ಹೆಸರು ‘ಸೂಪರ್ ಕ್ಯಾಲ್ಕ್’. ನಾನು ಮಾಡಬೇಕಿದ್ದು ಅಲ್ಲಿನ ನಿಗದಿತ ಕಾಲಂಗಳಲ್ಲಿ ‘ಫಿಲ್ ಅಪ್ ದಿ ಬ್ಲಾಂಕ್’ ಪ್ರಶ್ನೆಪತ್ರಿಕೆಯಂತೆ ತುಂಬುತ್ತಾ ಹೋಗುವುದು. ಹಳೆಯ ಟೈಪ್ ರೈಟರುಗಳು, ಭೂತಾಕಾರದ ರೆಜಿಸ್ಟರುಗಳಲ್ಲಿ ಹೆಣಗಿದ್ದ ನಮಗೆ ಪ್ರಾರಂಭದ ದಿನಗಳಲ್ಲಿ ಕಂಪ್ಯೋಟರ್ ಕೀ ಬೋರ್ಡಿನ ಹಿತಸ್ಪರ್ಶದಲ್ಲಿ ದೊರೆತ ಅನುಭವ ಅತ್ಯಂತ ಮಧುರವಾದದ್ದು. ವಿಚಿತ್ರವಾದ ಕಮಾಂಡುಗಳನ್ನು ಹೊಂದಿದ್ದ ‘ವರ್ಡ್ ಸ್ಟಾರ್’ ಅಂತಹ ಸುಂದರವಾಗಿ ಪತ್ರ ಟೈಪಿಸ ಬಹುದಾದ ಪ್ರೋಗ್ರಾಮು, ಲೋಟಸ್ ಎಂಬ ಹಲವು ಕಾಲಮ್ಮುಗಳ ಹಾಳೆ, ‘ಡಿ ಬೇಸ್’ ಎಂಬ ಸಣ್ಣ ಸಣ್ಣ ಪಟ್ಟಿಯ ಮುಖಾಂತರ ನಾವು ಬೇಕಿದ್ದನ್ನು ಬರೆದು, ಅಳಿಸಿ, ತಿದ್ದಿ ಅವೆಲ್ಲವನ್ನೂ ಬೇಕಾದ ಹಾಗೆ ಕ್ರೋಡೀಕರಿಸಿ ಸುದೀರ್ಘ ವಿವರಗಳನ್ನು ಪಡೆಯುತ್ತಿದ್ದ ರೀತಿ ನಮ್ಮನ್ನು ಈ ಕಂಪ್ಯೂಟರ್ ಎಂಬ ಗೆಳೆಯನಿಗೆ ಆತ್ಮೀಯವಾಗಿಸಿದವು.

ಅಂದಿನ ದಿನದಲ್ಲಿ ಕಂಪ್ಯೂಟರ್ ಆರಂಭಿಸುವುದಕ್ಕೆ ವಿದ್ಯುತ್ ಸ್ವಿಚ್ ಒತ್ತುವುದರ ಜೊತೆಗೆ ಅಂದಿನ ದಿನಗಳಲ್ಲಿದ್ದ ಸಂಗೀತದ ಡಿಸ್ಕುಗಳಂತಹ ದೊಡ್ಡ ದೊಡ್ಡ ಚೌಕದ ಫ್ಲಾಪಿಗಳಲ್ಲಿ ಕೆಲವನ್ನು  ಬೂಟ್ ಮಾಡುವುದಕ್ಕೂ, ಮತ್ತೆ ಕೆಲವನ್ನು ನಾವು ಕಂಪ್ಯೂಟರಿನಲ್ಲಿ ಕುಟ್ಟುತ್ತಿದ್ದುದನ್ನು ಉಳಿಸುವುದಕ್ಕೂ ಉಪಯೋಗಿಸಬೇಕಿತ್ತು. ಆ ಡಿಸ್ಕ್ಗಳನ್ನೋ ಹಾಗೆ ಹಿಡ್ಕೋ ಬೇಡ, ಇಲ್ಲಿ ಮುಟ್ಟಬೇಡ ಎಂಬ ಅಜ್ಜಿ ಹೇಳುವಂತಹ ಕಣಿ ಬುದ್ಧಿವಾದಗಳು ಆಗ್ಗಿಂದಾಗ್ಗೆ ನಮಗೆ ಉಪದೇಶವಾಗುತ್ತಲೇ ಇರುತ್ತಿತ್ತು. ಬಹಳಷ್ಟು ವೇಳೆ ಇದ್ದಕ್ಕಿದ್ದಂತೆ ಪವರ್ ಕಟ್ ಆಗಿಯೋ, ಕಂಪ್ಯೂಟರಿಗೆ ಜ್ವರ ಬಂದೋ, ಫ್ಲಾಪಿ ಡಿಸ್ಕುಗಳು ಕೆಟ್ಟೋ, ಅದು ಬಹು ಬೇಗ ತುಂಬಿ ಅದರಲ್ಲಿ ಜಾಗ ಖಾಲಿ ಇಲ್ಲದೆಯೋ, ಹೊಸ ಫ್ಲಾಪಿ ಡಿಸ್ಕ್ ಸ್ಟಾಕ್ ಇಲ್ಲ ಎಂಬ ಕಾರಣಕ್ಕಾಗಿಯೋ ನಮಗೆ ಕೆಲಸಕ್ಕೆ ಬಿಡುವುಂಟಾಗುತ್ತಿದ್ದುದು ನಿಜವಾದರೂ ಮತ್ತೊಮ್ಮೆ ನಮ್ಮ ಸರದಿಗೆ ಕಾದು ಕಂಪ್ಯೂಟರ್ ಉಪಯೋಗಿಸಿ ಅದರ ಮಿತಿಗಳೊಂದಿಗೆ ಬದುಕನ್ನು ನಡೆಸುವುದು ಕೂಡ, ಕಷ್ಟ ಸಾಧ್ಯವೇ ಆಗಿತ್ತು. ಬಹಳಷ್ಟು ವೇಳೆ ಯಾವುದನ್ನೋ ಅಳಿಸುವುದಕ್ಕೆ ಬದಲು ಮತ್ಯಾವುದನ್ನೋ ಅಳಿಸಿ, ನಾವು ಅಳಬೇಕಾದ ಪರಿಸ್ಥಿತಿಯಲ್ಲಿ ತಿಪ್ಪರಲಾಗ ಹಾಕುತ್ತಿದ್ದುದು ಬೇರೆಯದೇ ಆದ ಮತ್ತೊಂದು ಕಥೆ.

ಅಂದಿನ ದಿನಗಳಲ್ಲಿ ಇಂದಿನಂತೆ ಸಂಸ್ಥೆಗಳಿಗೆ ಬೇಕಾದ ರೆಡಿಮೇಡ್ ಸಾಫ್ಟ್ವೇರ್ ತಯಾರಕುರುಗಳು ಇಲ್ಲದೆ ಸಂಸ್ಥೆಗೆ ಬೇಕಾದ ಸಾಫ್ಟ್ವೇರ್ ತಂತ್ರಜ್ಞಾನಗಳು ಆಯಾ ಸಂಸ್ಥೆಗಳಲ್ಲೇ ನಿರ್ಮಿತಗೊಳ್ಳುತ್ತಿತ್ತು. ಗಾರೆ ಕೆಲಸ ಮಾಡುವವರೆಲ್ಲಾ ಮೇಸ್ತ್ರಿಗಳಾಗಿ, ಕಾಂಟ್ರಾಕ್ಟರುಗಳಾಗಿ ಬದಲಾಗುವಂತೆ ನಾವೂ ಕಂಪ್ಯೂಟರ್ ಪ್ರೋಗ್ರಾಮರುಗಳಾಗಿ ಬದಲಾಗುವ ಚಪಲಗಾರರಾಗಿದ್ದವರು. ಈ ಕಂಪ್ಯೂಟರುಗಳು, ಅದರಲ್ಲಿಯೂ ಅದನ್ನು ಕಾಯುವ ಪ್ರೋಗ್ರಾಮುದಾರರ ಜೊತೆ ಹೆಣಗಿ ಕೆಲಸ ಮಾಡುವ ಅನುಭವ ಹೊಂದಿದವರು, ಅಯ್ಯೋ ಇವರ ಜೊತೆ ಹೆಣಗುವುದಕ್ಕಿಂತ ನಾವೇ ಮಾಡುವುದನ್ನು ಕಲಿಯುವ ಎಂಬ ಭಾವವೂ ಅದರಲ್ಲಿರುತ್ತಿತ್ತು. ಕಂಪ್ಯೂಟರುಗಳು ದಿನೇ ದಿನೇ ಬಂದು ನಮ್ಮ ಗುಮಾಸ್ತೆ ಹುದ್ದೆಗಳು ಖಾಲಿಯಾಗಿ ನಾವು ಮನೆಯಲ್ಲಿ ಸಂಭಳ ಇಲ್ಲದೆ ಕೂರಬೇಕಾದೀತು ಎಂಬ ಭಯ ಮತ್ತೊಂದು ಕಡೆ ಇದ್ದದ್ದೂ ಅಷ್ಟೇ ನಿಜ. ಕಂಪ್ಯೂಟರ್ ಗೊತ್ತಿರುವವರು ‘ವೈಟ್ ಕಾಲರ್ಡ್’ ಜನಾಂಗ, ನಾವು ಪ್ಯಾದೆಗಳು ಎಂಬ ಕೀಳರಿಮೆಯ ಒತ್ತಾಸೆ ಮತ್ತೊಂದೆಡೆ, ಹೀಗೆ ನಾವು ಹೇಗೆ, ಹೇಗೋ ಪ್ರಯತ್ನಿಸಿ ಅಷ್ಟಿಷ್ಟು ಬಂದ ಪ್ರೋಗ್ರಾಮರುಗಳಾಗಿ ಮಾರ್ಪಾಡಾದೆವು.

‘ಗ್ರಹಚಾರ!’. “ಕಾಲ ಕಾಲಕೆ ತಿಂದು ತೇಗಿ ಅಲೆಯುತ್ತಿದ್ದ ಪ್ರಾಣಿಗಳಿಗೆ ಏನು ಗತಿ ಬಂತು. ಏನು ಗ್ರಹಚಾರ.” ಮಾತೆದ್ದಿರೆ ‘ಓಎಸ್ಸು’, ‘ಡಿಬಿ’, ‘ಅಡ್ಮಿನ್ನು’, ‘ಸರ್ವರ್ರು’, ‘ಟೇಪು’, ‘ರಿಟ್ರೈವು’, ‘ಬ್ಯಾಕಪ್ಪು’, ‘ಪ್ರೊಸೆಸಿಂಗು’, ‘ಷಟ್ ಡೌನು’, ‘ಡಾಟಾ ಬೇಸ್ ಡಿಸೈನು’, ‘ಎಂಟಿಟಿ ರಿಲೇಶನ್ನು’, ‘ಡಾಟಾ ಫ್ಲೋ ಡಯಾಗ್ರಮ್ಮು’, ‘ಅರಾಕಲ್ಲು’, ‘ಯೂನಿಕ್ಸು’, ‘ಸನ್ ಸೋಲಾರಿಸ್ಸು’, ‘ಇ ಮೈಲು’, ‘ಅಟ್ಯಾಚ್ಮೆಂಟು’, ‘ಡಾಟಾ ಡಂಪು’, ‘ಡಾಟಾ ಪಂಪು’ ಇವೆಲ್ಲಾ ತಿಳುವಳಿಕೆಗಳಿಗಿಂತ ಬಾಯಿ ಮಾತಿನಲ್ಲಿ ಸವಕಳಿ ಕಾಣುತ್ತಿದ್ದ ವಿಚಿತ್ರ ಪ್ರಪಂಚದಲ್ಲಿ ನಾವು ಕಾಲಿಟ್ಟಿದ್ದೆವು. ಜೊತೆಗೆ ಮಾತೆದಿದ್ದರೆ ಅಮೆರಿಕದ ವಿವಿಧ ನಗರಗಳು, ಅಲ್ಲಿಗೆ ತಲುಪುವ ಬಗೆ ಹೇಗೆ ಎಂದು ಕನಸಿ ಕೊನರುತ್ತಿದ್ದ ಯುವ ಜೀವಿಗಳು ಎಲ್ಲೆಲ್ಲೂ.  ಹೀಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ಎಂಬ ವಿಸ್ಮಯ ಲೋಕದಲ್ಲಿ ‘ಗುಂಡಾದ ರಂಧ್ರಗಳಿಗೆ’ ಚೌಕದ ಹಲಗೆಗಳಂತೆ ನಮ್ಮ ಜೀವನ ಪ್ರಾರಂಭವಾಯ್ತು.

ಆದರೂ ನಾವು ಏನು ಕೇಳಬೇಕು ಎಂದು ಸ್ಪಷ್ಟವಾಗಿ ತಿಳಿದುಕೊಂಡು ಕೇಳಿದರೆ ಪಟಕ್ಕೆಂದು ಬೇಕಿದ್ದನ್ನು ಹೇಳುವ ಕಂಪ್ಯೋಟರ್ ಪರಿ ಮಾತ್ರ ಅದನ್ನು ಬಿಟ್ಟು ಹೋಗುವುದಕ್ಕೆ ಮನಸ್ಸು ಕೊಡುವುದಿಲ್ಲ. ಆನ್ ಮಾಡಿದ ತಕ್ಷಣವೇ “ಮುಂಚೆಯೇ ಸಿದ್ಧಗೊಳಿಸಿದ ಬರಹದ ಮುಖೇನ ಇದನ್ನು ಹೀಗೆ ಸಿದ್ಧ ಮಾಡಿ, ನಿನ್ನ ಮುಂದೆ ಕೂತಿರುವ ಈ ಭೂಪನಿಗೆ ಏನು ಬೇಕೋ ಅದನ್ನು ಮಾಡಲು ಸಿದ್ಧನಾಗು” ಎಂದು ಹೇಳುವ ಆಪರೇಟಿಂಗ್ ಸಿಸ್ಟಂ ಇಂದ ಮೊದಲುಗೊಂಡು, ಅದರಲ್ಲಿ ನಾವು ಉಪಯೋಗಿಸುವ ಹಲವು ಉಪಯೋಗಕರ ವ್ಯವಸ್ಥೆಗಳಾದ ವರ್ಡ್, ಎಕ್ಸೆಲ್, ಪ್ಯಾಡ್, ಎಕ್ಸ್ಪ್ಲೋರರ್ ಇವೆಲ್ಲಾ, ಜಗಳಕ್ಕೆ ಕಾದು ಕುಳಿತಿರುವ ಜೀವನ ಸಂಗಾತಿಗಳಿಂತಿರದೆ, ಮರುಮಾತಿಲ್ಲದೆ ನಾವು ಹೇಳಿದಂತೆ ಕೇಳುವ ರೀತಿ ಮಾತ್ರ ಬಹಳಷ್ಟು ಜನರನ್ನು ಅದಕ್ಕೇ ಪ್ರಣಯಿಗಳನ್ನಾಗಿ ಮಾಡಿದೆ!

ನಾನು ಮೊದ ಮೊದಲು ಅಲನ್ ಸಿಂಪ್ಸನ್ ಎಂಬಾತ ಬರೆದಿದ್ದ ‘ಡಿ ಬೇಸ್ ಪ್ರೋಗ್ರಾಮಿಂಗ್’ ಪುಸ್ತಕ ನೋಡಿ “ಓ, ಪ್ರೋಗ್ರಾಮಿಂಗ್ ಅಂದರೆ, ನನ್ನ ಆಜ್ಞೆಗಳು ಏನೇನಿದೆಯೋ ಅವನ್ನೆಲ್ಲಾ ಒಂದಕ್ಕೊಂದು ಪೋಣಿಸಿ ಅವಕ್ಕೆಲ್ಲ ಒಂದು ಕ್ಲಿಪ್ ಹಾಕಿದಂತೆ ಜೋಡಿಸಿ ಒಂದು ಹೆಸರು ಕೊಟ್ಟು, ಅದನ್ನು ಬೇಕಾದಾಗ ಕರೆಯುವುದು” ಎಂಬುದನ್ನು ಅರಿತುಕೊಂಡೆ. ಮುಂದೆ ನನ್ನ ಕಲಿಕೆಯ ಆಸಕ್ತಿಯನ್ನು ಗಮನಿಸಿದ ನಮ್ಮ ಕಂಪ್ಯೋಟರ್ ವಿಭಾಗದ ಮುಖ್ಯಸ್ಥರು ನನ್ನನ್ನು ಡಾಟಾಬೇಸುಗಳಲ್ಲಿ ಪ್ರಧಾನವಾದ ‘ಅರಾಕಲ್’ ಕ್ಷೇತ್ರದಲ್ಲಿ ನನಗೆ ಪ್ರಾರಂಭಿಕ ತಿಳುವಳಿಕೆ ಮತ್ತು ತರಬೇತಿ ದೊರಕಲು ಅವಕಾಶ ಮಾಡಿಕೊಟ್ಟು ನಾನು ಕಲಿತಿದ್ದೇನೆ ಎಂದು ನಂಬಿಕೆ ಪಡೆಯುವ ಮುಂಚೆಯೇ ಅಲ್ಲಿನ ಕೆಲಸಕ್ಕೂ ದೂಡಿ ಅದರಲ್ಲಿ ನಾನು ಹೇಗೋ ತೇಲಬೇಕೆಂಬುದನ್ನು ಅನಿವಾರ್ಯ ಮಾಡಿಬಿಟ್ಟರು.

ಈ ಡಾಟಾಬೇಸುಗಳು ನನಗೆ ತುಂಬಾ ಪ್ರಿಯ. ಕಂಪ್ಯೂಟರಿನ ಒಳಗೆ ಭೌತಿಕವಾಗಿ ಹೇಗೆ ಹೇಗೆ ವಿಚಾರಗಳನ್ನು ಎಲೆಕ್ಟ್ರಾನಿಕ್ ಸಂಜ್ಞೆಗಳಲ್ಲಿ ಇರಿಸಬೇಕೆಂದು ತಾನೇ ನಿರ್ಣಯಿಸಿಕೊಂಡು, ನಮಗೆ ಇಷ್ಟವಾಗುವ ಹಾಗೆ ಕರೆದ ರೀತಿಯಲ್ಲಿ ಮಾಹಿತಿಯನ್ನು ತಂದುಕೊಡುವ ವ್ಯವಸ್ಥೆ ಇಲ್ಲದಿದ್ದರೆ ಇಂದಿನ ಮಾಹಿತಿ ಯುಗ ಇಷ್ಟೊಂದು ಪ್ರಗತಿ ಸಾಧಿಸುವುದು ಕಷ್ಟ ಸಾಧ್ಯವಿತ್ತು. ಅದರಲ್ಲೂ ‘ಸೀಕ್ವಲ್’ ಅಥವಾ ‘ಎಸ್.ಕ್ಯೂ.ಎಲ್’ ಎಂದು ಕರೆಯಲ್ಪಡುವ ‘ವ್ಯವಸ್ಥಿತವಾಗಿ ಮಾಹಿತಿ ಕರೆಯುವ ಭಾಷೆ’ ಕಲಿಯುವುದಕ್ಕೆ ತೊಡಗಿದಂತೆ ಅದರ ಬಗ್ಗೆ ಇನ್ನಿಲ್ಲದ ಪ್ರೀತಿ ಹುಟ್ಟಿ ಬಿಡುತ್ತದೆ. ಇದರಲ್ಲಿ ಮಾಹಿತಿಯನ್ನು ಕರೆಯುವುದು ಎಷ್ಟು ಸುಂದರವಾಗಿರುತ್ತದೆಂದರೆ, “ಗಂಗೆ ಬಾರೆ, ಗೌರಿ ಬಾರೆ, ತುಂಗಭದ್ರೆ ನೀನು ಬಾರೆ, ಪುಣ್ಯಕೋಟಿ ನೀನು ಬಾರೆ ಎಂದು ರಾಗವಾಗಿ ಗೊಲ್ಲ ಕರೆದ ಹಾಡಿನ ನೆನಪಾಗುತ್ತದೆ”. ಇಂದಿನ ದಿನ ಇಂತಹ ರೈಲುಗಾಡಿಯಲ್ಲಿ ಪ್ರಯಾಣ ಮಾಡುವವರ ವಿವರಗಳಲ್ಲಿ ಹೆಸರು ಮತ್ತು ಸೀಟ್ ನಂಬರುಗಳು ಮಾತ್ರ ಬರಲಿ ಎಂದರೆ ಬರುತ್ತದೆ. ಯಾವ ಯಾವ ದಿನ ಎಷ್ಟು ಸೀಟು ಕಾಲಿ ಅಂದ್ರೆ ಬರುತ್ತದೆ. ಒಂದು ರೀತಿಯ “ಪ್ರೀತಿಯ ಕರೆಗೆ ಓಗೊಡುವ” ಮಿತ್ರ ಈ ಡಾಟಾಬೇಸಿನ ಕ್ವೈರಿ ಭಾಷೆ.

ಇಂದು ಹಲವಾರು ಸಾಫ್ಟ್ವೇರುಗಳು ಬಂದು ಯಾವುದು ಬೇಕೋ ಅದನ್ನು, ಭಾಷೆಗಳ ಮೂಲಕವೂ ಕೂಗುವುದೂ ಬೇಕಿಲ್ಲ. ನಮ್ಮ ಮುಂದಿರುವ ತಿಂಡಿ ತೀರ್ಥದ ಮೆನುವಿನಲ್ಲಿ ನಾವು ಆಯ್ದದನ್ನು ತಕ್ಷಣವೇ ತಾನೇ ತಾನಾಗಿ ತಂದು ನಮ್ಮ ಮುಂದೆ ನಿಲ್ಲಿಸುವಂತಹ ಹಿತಕರವಾದ ಸಾಫ್ಟ್ವೇರ್ ಸಾಧನಗಳು ನಿರ್ಮಾಣವಾಗಿವೆ.

ಮಾನವನ ಬದುಕಿನ ಅತ್ಯಂತ ಕ್ಲಿಷ್ಟಕರ ವಿಚಾರವೆಂದರೆ ಬದಲಾವಣೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿರುವವರನ್ನು ಗಮನಿಸಿದಾಗಲೆಲ್ಲಾ ಅನಿಸುತ್ತೆ. ಇಲ್ಲಿರುವವರೆಲ್ಲಾ ಮುಂದೆ ಯಾವ ಭೂತ ಕಾದಿದೆಯೋ ಅಂತಲೇ ಬದುಕುವುದು ಅವರ ಹಣೆಯ ಬರಹವಾಗಿರುತ್ತದೆ. ಇಂದು ಇದ್ದ ಒಂದು ಪದ್ಧತಿ ನಾಳೆ ಇರುವುದಿಲ್ಲ. ಮೈಕ್ರೋಸಾಫ್ಟ್ ಸಂಸ್ಥೆ ವರ್ಷಕ್ಕೊಂದು ಬಾರಿ ಹೊಸ ಆಪರೇಟಿಂಗ್ ಸಿಸ್ಟಂ ನಿರ್ಮಿಸಿ ಅದರಲ್ಲಿ ಹಲವೊಂದು ತಾಪತ್ರಯಗಳನ್ನು ಸೃಷ್ಟಿಸಿ ಮುಂದಿನ ವರ್ಷದಲ್ಲಿ ಬರುವ ಮತ್ತೊಂದು ಪರಿಷ್ಕರಣೆಯಲ್ಲಿ ಅದನ್ನು ಸರಿ ಮಾಡುತ್ತೇವೆ ಎನ್ನುತ್ತದೆ. ಅದರಲ್ಲಿ ಹಿಂದೆ ನಡೆಯುತ್ತಿದ ಹಲವಾರು ಸಾಫ್ಟ್ವೇರುಗಳು ಹತ್ತು ಹಲವು ರೀತಿಯಲ್ಲಿ ಕಾಲ್ತೆಗೆಯುತ್ತಿರುತ್ತವೆ. ಹಿಂದಿನ ವ್ಯವಸ್ಥೆಯಲ್ಲಿ ತನ್ನದೇ ಆದ ಸಾಫ್ಟ್ವೇರ್ ವ್ಯವಸ್ಥೆ ನಿರ್ಮಿಸಿಕೊಂಡಿದ್ದ ವ್ಯವಸ್ಥೆಗಳು ಹೊಸ ಸ್ಥಿತಿಯಲ್ಲಿ ಬದುಕಲು ಮಾಡಬೇಕಾದ ಹರ ಸಾಹಸ ಅಷ್ಟಿಷ್ಟಲ್ಲ. ಲೈನಕ್ಸ್, ಜಾವಾಗಳು ಮುಕ್ತ ಬರವಣಿಗೆ ಎಂಬ ಸೃಜನಾತ್ಮಕ ಬೆಳವಣಿಗೆಗೆ ಪೂರಕವಾಗಿದ್ದು ಯಾವುದೇ ಸೃಜನಕಾರ ಅದನ್ನು ಅಭಿವೃದ್ಧಿಪಡಿಸುವಂತಹ ಸಾಮರ್ಥ್ಯವನ್ನು ನೀಡಿದೆ. ಹಾಗಾಗಿ ಅದರ ಕಾರ್ಯಕ್ಷೇತ್ರದಲ್ಲಿ ತೊಡಗಿರುವವ ಆರಾಮವಾಗಿ ನೆನ್ನೆಯಂತೆ ನಾಳೆಯ ಬದುಕು, ನನ್ನ ವ್ಯಾಸಂಗ ಕಾಲೇಜಿನಲ್ಲೇ ಮುಗಿಯಿತು ಎಂದು ಬದುಕುವಂತಿಲ್ಲ.

ತೊಂಬತ್ತರ ದಶಕದಲ್ಲಿ ಬಂದ ವಿಂಡೋಸ್ ಮತ್ತು ಮೌಸುಗಳು ಆಗ ತಾನೇ ಒಂದು ರೀತಿಯಲ್ಲಿ ಪ್ರೋಗ್ರಾಂ ಮಾಡುವುದನ್ನು ಕಲಿತಿದ್ದ ನನ್ನಂತಹವನಿಗೆ ನುಂಗಲಾರದ ತುತ್ತಾಗಿತ್ತು. ಅಂದಿನ ದಿನಗಳಲ್ಲಿ ನಾವೊಂದು ಡಾಟಾಬೇಸ್ ಎಂದು ಸೃಜಿಸಿ ಅದಕ್ಕೊಂದು ಹೊರ ರೂಪವಾದ ಸ್ಕ್ರೀನ್ ಡಿಸೈನ್ ಕೊಟ್ಟು ಅದನ್ನು ಉಪಯೋಗಿಸುವವ ಒಂದೊಂದು ಕಾಲಂ ತುಂಬಿದಾಗ ಹೀಗೆ ಹೀಗೆ ಮಾಡಬೇಕು ಎಂದು ಪ್ರೋಗ್ರಾಂ ರಚಿಸುವುದು ವಾಡಿಕೆಯಾಗಿತ್ತು. ಆಗ ಕಂಪ್ಯೂಟರ್ ಕೀ ಬೋರ್ಡಿನಲ್ಲಿ ಇದ್ದ ಅಕ್ಷರಗಳು, ಎಂಟರ್ ಕೀ, ಕಂಟ್ರೋಲ್ ಕೀ, ಶಿಫ್ಟ್ ಕೀ, ಫಂಕ್ಷನ್ ಕೀ ಇತ್ಯಾದಿ ಬಿಟ್ಟರೆ ಬೇರೇನೋ ನಮ್ಮ ಊಹೆಗೆ ಸಿಲುಕುವಂತಿರಲಿಲ್ಲ. ಹಾಗಾಗಿ ನಮಗೆ ನಮ್ಮ ಪ್ರೋಗ್ರಾಂ ಉಪಯೋಗಿಸುವವನ ಕ್ರಿಯೆಯ ಬಗ್ಗೆ ಸ್ಪಷ್ಟ ಅರಿವಿರುತ್ತಿತ್ತು. ಈ ಮೌಸ್ ಮತ್ತು ವಿಂಡೋಸ್ ಬಂದು ನಮಗೆ ಮಾಡಿದ ಆಘಾತ ಅಂತಿತದ್ದಾಗಿರಲಿಲ್ಲ. ಮೊದಲಿಗೆ ಮೌಸ್ ಹಿಡಿಯುವುದು ಹೇಗೆ ಎಂಬುದನ್ನು ಅಭ್ಯಾಸ ಮಾಡುವುದನ್ನೇ ನಾವು ಹಲವು ದಿನಗಳವರೆಗೆ ಮಾಡಬೇಕಿತ್ತು. ಅಂದಿನ ದಿನದಲ್ಲಿ ನಮ್ಮಲ್ಲಿ ಕೆಂದ್ರೀಕೃತವಾದ ಸರ್ವರ್ ಒಂದಕ್ಕೆ ಸೇರಿದ ಎಲ್ಲಾ ಟರ್ಮಿನಲ್ಲುಗಳೂ ಮೂಖ ಟರ್ಮಿನಲ್ಲುಗಳಾಗಿದ್ದು ಮೂಲೆಯಲ್ಲಿ ಒಂದೇ ಒಂದು ವಿಂಡೋಸ್ ತಂತ್ರಜ್ಞಾನದ ಕಂಪ್ಯೂಟರ್ ಬಂದು ಕುಳಿತಿತ್ತು. ಅದನ್ನು ಅಭ್ಯಾಸ ಮಾಡಲು ಬೇರೆಯವರು ಉಪಯೋಗಿಸದ ಸಮಯಕ್ಕಾಗಿ ಕಾದು ಎಲ್ಲರೂ, ಯಾರಿಗೂ ನಮಗೆ ಇದು ಗೊತ್ತಿಲ್ಲ ಎಂದು ಹೇಳುವ ನಾಚಿಕೆಗಳಲ್ಲಿ ಕರಗಿ ಹೋಗಿ, ಎಲ್ಲರೂ ಕಚೇರಿಗೆ ಬರುವ ಮೊದಲು ಅಂದರೆ ಬೆಳಿಗ್ಗೆ ಏಳಕ್ಕೆ ಮುಂಚಿತವಾಗಿ ಅಥವಾ ಎಲ್ಲಾ ಬ್ಯುಸಿ ಪಾಳಿಗಳು ಮುಗಿದ ನಂತರದಲ್ಲಿ ಬಂದು ಕೂತು ಈ ವಿಂಡೋಸ್ ಮೌಸುಗಳನ್ನು ಹೇಗೆ ಉಪಯೋಗಿಸಬೇಕು ಎಂದು ಅರಿಯಬೇಕಾದ ಅನಿವಾರ್ಯತೆ ಇತ್ತು. ಈಗಲೂ ನೆನಪಿದೆ, ಮೈಕ್ರೋಸಾಫ್ಟ್ ಸಂಸ್ಥೆಯವರು ಮೌಸ್ ಹೇಗೆ ಉಪಯೋಗಿಸಬೇಕು ಎಂಬುದಕ್ಕಾಗಿಯೇ, “ಇದನ್ನು ಹೀಗೆ ಹಿಡಿದುಕೋ, ಎಡಗಡೆಯ ಗುಂಡಿಯನ್ನು ಕ್ಲಿಕ್ಕಿಸು, ನಿಧಾನವಾಗಿ ಅತ್ತಿಂದಿತ್ತ, ಇತ್ತಿಂದತ್ತ ಚಲಿಸು” ಹೀಗೆ ವಿವರಣಾತ್ಮಕವಾದ ಪ್ರೆಸೆಂಟೇಶನ್ ಕೂಡಾ ವಿಂಡೋಸಿನಲ್ಲಿ ದಯಪಾಲಿಸಿದ್ದರು.

ಅದೆಲ್ಲಾ ಸರಿ, ಅದುವರೆಗೆ ನಮ್ಮ ಪ್ರೋಗ್ರಾಂ ಉಪಯೋಗಿಸುತ್ತಿದ್ದವ ಒಂದು ವಿವರದಿಂದ ಮತ್ತೊಂದಕ್ಕೆ ಚಲಿಸುವಾಗ ಕೀ ಬೋರ್ಡಿನಲ್ಲಿ ಯಾವುದೋ ಅಕ್ಷರಗಳನ್ನು ಉಪಯೋಗಿಸುತ್ತಿದ್ದವ, ಈಗ ತನಗಿಷ್ಟ ಬಂದ ಹಾಗೆ ಮೌಸಿನಿಂದ ಎಲ್ಲೋ ಕ್ಲಿಕ್ಕಿಸಿ, ನಮ್ಮ ಪ್ರೋಗ್ರಾಮೀನಲ್ಲಿ ಕೆಲಸ ಮಾಡುವ ಮಧ್ಯೆ ಇನ್ಯಾವುದೋ ಪತ್ರ ಟೈಪು ಮಾಡಿ, ಎಲ್ಲಿಗೆ ಬೆಂಕೆದರಲ್ಲಿ ಕಂಪ್ಯೂಟರಿನಲ್ಲಿ ಹಾರಾಡುವ ಸ್ವತಂತ್ರ ಪಡೆದಾಗ, ಪ್ರೋಗ್ರಾಂ ಬರೆದ ನಾವು ಪೆದ್ದು ಪೆದ್ದಾದ ಮಿಕಗಳಂತೆ ನಮ್ಮ ಟೆಸ್ಟಿಂಗ್ ತಂಡಗಳ ಅಪಹಾಸ್ಯಕ್ಕೆ ಈಡಾಗಿ ಅವಮಾನ, ಬೇಸರ, ಅಸಹಾಯಕತೆಗಳಿಂದ ನರಳುವಂತಹ ಭೀಕರ ಯಾತನೆಯಲ್ಲಿ ಬದುಕುತ್ತಿದ್ದೆವು. “ಮೌಸು ಹಿಡಿದವನಿಗೆ ಆಟ, ಪ್ರೋಗ್ರಾಮುದಾರನಿಗೆ ಪ್ರಾಣಸಂಕಟ”.

ಇಂದೂ ಹೊಸ ಹೊಸ ತಂತ್ರಜ್ಞಾನ, ಹೊಸ ಪ್ರೋಗ್ರಾಮಿಂಗ್ ವ್ಯವಸ್ಥೆಗಳು, ಹೊಸ ಹೊಸ ಸಾಫ್ಟ್ವೇರ್ ಸಂಸ್ಥೆಗಳು ಇವೆಲ್ಲಾ ನೆನ್ನೆಯ ದಿನ ಕಲಿತವ ಮಂಗ ಎನ್ನುವಂತೆ ಭೀಕರತೆ ಹುಟ್ಟಿಸುತ್ತಲೇ ಸಾಗಿದ್ದು, ನೀನೂ ಏನಾದರೂ ಚಮತ್ಕಾರ ಮಾಡು, ಇನ್ನೊಬ್ಬ ಮಾಡಿದ್ದಕ್ಕಿಂತ ಬೇರೆ ನೀಡು, ನಿನ್ನ ಬಳಿ ಕೊಂಡುಕೊಂಡವ ಮುಂದೆ ಕೂಡಾ ನೀನು ತರುವ ಬದಲಾವಣೆಗಳಿಗೆ ಖರ್ಚು ಮಾಡಿ ನಿನ್ನನ್ನು ನಿರಂತರವಾಗಿ ಅವಲಂಬಿಸಿರುವಂತೆ ಮಾಡು ಎನ್ನುತ್ತಾ ಮುನ್ನಡೆಯುತ್ತಿದೆ ಮಾಹಿತಿ ತಂತ್ರಜ್ಞಾನ ವೆಂಬ ಹೆಸರಿನ ವ್ಯಾಪಾರೀ ಪ್ರಪಂಚ.

ಹೀಗಾಗಿ ಸಾಫ್ಟ್ವೇರ್ ಪ್ರೋಗ್ರಾಮುದಾರನಿಗೆ ಇಂದಿನ ಕೆಲಸ ಮುಗಿಯಿತು ಎಂಬುದು ಇಲ್ಲವೇ ಇಲ್ಲ. ಆತ ನಿರಂತರವಾಗಿ ಅನಿರೀಕ್ಷಿತ ಲೋಕದಲ್ಲಿನ ಅಲೆಮಾರಿಯಾಗಿಯೇ ಬದುಕುತ್ತಾ ಸಾಗುತ್ತಿರುತ್ತಾನೆ!. ಆತ ಕಲಿಯಲು ನಿಲ್ಲಿಸಿದ ದಿನ ಆತ ನಿರುದ್ಯೋಗಿ!

Tag: Softaanubhava. A Journey in Software

ಕಾಮೆಂಟ್‌ಗಳಿಲ್ಲ: