ಬದುಕಿನ ಸಂಧ್ಯೆಯಲ್ಲಿ
ಬದುಕಿನ ಸಂಧ್ಯೆಯಲ್ಲಿ
ವಿಶ್ವ ಆರೋಗ್ಯ ಸಂಸ್ಥೆ ಅಕ್ಟೋಬರ್ 1 ದಿನವನ್ನು ವೃದ್ಧರ
ದಿನವನ್ನಾಗಿ ಪರಿಗಣಿಸಿದೆ ಯಾವುದೋ ಪಾಠದಲ್ಲಿ ನಮ್ಮ ಶಾಲೆಯ ಸಂಸ್ಕ್ರತ ಪಂಡಿತರಾಗಿದ್ದ
ಸೋಮಯಾಜಿಗಳು ಓದಿದ ನೆನಪುಮೂಡುತ್ತಿದೆ: “ಮುಪ್ಪೆಂದರೆ ಕಣ್ಣು ಕಾಣುವುದಿಲ್ಲ, ಕಿವಿ ಕೆಳುವುದಿಲ್ಲ, ಕೈ ಕಾಲು ಆಡುವುದಿಲ್ಲ, ಕೈ ಹಿಡಿದವರು ಕಿವಿಗೊಡುವುದಿಲ್ಲ, ಮಕ್ಕಳು ಆಸ್ಥೆ ವಹಿಸುವುದಿಲ್ಲ....”.
“ಲಗೇ ರಹೋ ಮುನ್ನಾಭಾಯಿ” ಚಿತ್ರದಲ್ಲಿ ವೃದ್ಧರಿಗಾಗಿ
ಅರಳುವ ಹೃದಯಗಳನ್ನು ನೆನೆದು ಖುಷಿಪಡುತ್ತೇವೆ. ಬೆಂಗಳೂರಿನ ಜಯನಗರದ ಕಾಂಪ್ಲೆಕ್ಸ್ ಮುಂದಿರುವ
ಬೆಂಚುಗಳಲ್ಲಿ ಪ್ರತೀದಿನ ಒಬ್ಬರಿಗೊಬ್ಬರು ಕಾಯುವ ಹಿರಿತನದ ಜ್ಞಾನಪೂರ್ಣ ಹಿರಿಯರನ್ನು ಕಂಡು
ಮುದಗೊಳ್ಳುತ್ತಿದ್ದ ನೆನಪಾಗುತ್ತದೆ. ಈಗಲೂ ಪಾರ್ಕುಗಳಲ್ಲಿ ಬೆಳಗಾಗೆದ್ದು ವಾಕ್ ಹೋದಾಗ ತಮ್ಮ
ಕೈಲಾದ ಮಟ್ಟಿಗೆ ವ್ಯಾಯಾಮಾಸಕ್ತರಾದ ಹಲವಾರು ಹಿರಿಯ ಜೀವಗಳನ್ನು ಕಂಡು ಏನೋ ಕಾಣದ್ದು ನಮ್ಮ
ಹೃದಯದಲ್ಲಿ ಒಂದು ಕ್ಷಣ ಮೂಡಿ ಮರೆಯಾಗುತ್ತದೆ.
ಮುನ್ನಾಭಾಯಿಯ ಚಿತ್ರದಲ್ಲಿ ಆತನ ಜೊತೆಯಾದ ವಿದ್ಯಾಬಾಲನ್ ಖುಷಿ ಖುಷಿಯಿಂದ
ರೇಡಿಯೋದಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್ ಹೇಳಿ, ದೊಡ್ಡ ಮನೆ ಇಟ್ಟುಕೊಂಡು
ದೊಡ್ಡವರಿಗಾಗಿ ತುಂಬಾ ತುಂಬಾ ಅಕ್ಕರೆ ಹೊಂದಿ, ನಮಗೂ ಮುನ್ನಾಭಾಯಿಯಂತಹ ಏನು ಬೇಕಾದರೂ ಮಾಡಬಹುದಾದ ಒಬ್ಬ ಬೇತಾಳ ಸಿಕ್ಕರೆ ನಾವೂ
ಹಿರಿಯರನ್ನು ಅಷ್ಟೇ ಪ್ರೀತಿಯಿಂದ ನೋಡುತ್ತಿದ್ದೆವೇನೋ!. ಉಹುಂ. ನಮ್ಮ ಕೆಲಸ, ನಗರದಲ್ಲಿನ ಓಡಾಟ, ತುಂಬದ ಈಡೇರದ ದೊಡ್ಡ ದೊಡ್ಡ
ಪಟ್ಟಿಗಳ ಮರೆಯಲ್ಲಿ ನಮಗೆಲ್ಲಾ ಇದು ಸಾಧ್ಯವೇ. ನಮಗೆ ನಮ್ಮನ್ನೇ ನೋಡಿಕೊಳ್ಳುವ ವ್ಯವಧಾನವಿಲ್ಲ.
ನಾವು ಯಾರನ್ನು ತಾನೇ ನೋಡಿಕೊಳ್ಳಬಲ್ಲೆವು.
ಎಲ್ಲೋ ವಯಸ್ಸಾದವರಲ್ಲೂ ನನ್ನ ಜಮಾನಾದ ನನ್ನಂತಹವನ ಮುಂದೆ ಇಂದಿನ ಯುಗವೆಲ್ಲಾ
ಬಚ್ಚಾಗಳದು, ನನಗೆ ಒಂದಿಷ್ಟು ಹುಟ್ಟಿದ ಹಬ್ಬದ
ದಿನಗಳು ಹೆಚ್ಚಾಗಿಬಿಟ್ಟರೇನು ಮಹಾ, ನಾನು ನನ್ನ ಸೊಸೆಯ ಮುಂದೆ ರಾಣಿಯ ಹಾಗೆ ಬದುಕದಿರುವುದು ಹೇಗೆ ತಾನೇ ಸಾಧ್ಯ ಎಂಬಂತಹ
ರೀತಿ ನೀತಿಗಳನ್ನು ಹಿರಿಯರಲ್ಲೂ; ವಯಸ್ಸಾಗದವರಿಗೆ ಈ ವಯಸ್ಸಾದವರಿಗೆ, ಈ ಚಪಲವೇಕೆ, ನಮ್ಮ ಮನೇಲೇ ಏಕಿರಬೇಕು, ಉಳಿದ ಮಕ್ಕಳು ಯಾಕೆ ನೋಡ್ಕೊಬಾರ್ದು, ಇಷ್ಟು ದಿನ ಜಬರ್ದಸ್ತು ಮಾಡಿದ್ದಾಯ್ತು ಈಗ್ಲಾದ್ರೂ ತೆಪ್ಪಗಿರಲಿಕ್ಕೆ ಏನು ಕಷ್ಟ; ನಾವೂ ಇತರರಂತೆ ಎಲ್ಲ
ರಗಳೆಗಳಿಂದ ಇನ್ಯಾವುದೋ ದೇಶದಲ್ಲಿ ಏಕಿರಬಾರದು ಎಂಬಂತಹ ಭಾವಗಳನ್ನು ನಿಚ್ಚಳವಾಗಿ
ಗುರುತಿಸಬಹುದಾಗಿದೆ.
ಒಂದು ರೀತಿಯಲ್ಲಿ ಇದು ಬಾಲ್ಯ, ಮುಪ್ಪು, ಯೌವನದ ಪ್ರಶ್ನೆಯಲ್ಲ. ಇದು
ಪ್ರೀತಿಯ ಪ್ರಶ್ನೆ. ಮಗು ಚಿಕ್ಕದಿದ್ದಾಗ ಏನೇ ಹಿಂಸೆ ಆದರೂ ಅದಕ್ಕೆ ಪ್ರೀತಿಯ ಆಳದಿಂದ
ಸ್ಪಂದಿಸುತ್ತೇವೆ. ಯೌವನದಲ್ಲಿ ನಾವು ಇಷ್ಟಪಟ್ಟ ಜೀವಕ್ಕಾಗಿ ಪ್ರಾರಂಭದಲ್ಲಿ ಏನೂ ಮಾಡಲು
ತಯಾರಿರುತ್ತೇವೆ. ರಸ್ತೆಯಲ್ಲಿ ಆಗಾಗ ಕಾಣುವ ಪ್ರಸನ್ನತೆಯ ಮುಖದ ಹಿರಿಯರನ್ನು ಅತ್ಯಂತ ಆಪ್ತವಾಗಿ
ಗೌರವಿಸುತ್ತೇವೆ. ಆದರೆ ನಮ್ಮೊಡನೆ ಜೀವಿಸುವ ಹೃದಯಗಳಲ್ಲಿ ಹೊಂದಾಣಿಕೆಗಳು ಕಾಣದೆ
ತಳಮಳಿಸುತ್ತೇವೆ.
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ.
ನಮ್ಮ ಜಿ.ಎಸ್.ಎಸ್ ಅವರ ಈ ಕವನದ ಸಾಲಿನಲ್ಲಿ ಕಾಣುವಂತಹ ಹೊಂದಾಣಿಕೆ ಕಾಣದ ಬದುಕು
ಒಂದು ತೆರೆನದ್ದಾದರೆ, ಇಂದು
ಕಾಣುತ್ತಿರುವ ಮಾತೆತ್ತಿದ್ದರೆ ಸಾವಿರ, ಲಕ್ಷಗಳೆನ್ನುವ ವೈದ್ಯಕೀಯ ಸೌಲಭ್ಯಗಳ ಪರಿಧಿ, ಕಾಸು ಕೊಟ್ಟರೂ ಕ್ಯಾರೇ
ಅನ್ನದಂತಹ ಎಲ್ಲೆಲ್ಲೂ ಕಾಣುವ ನೌಕರ ಪಡೆ, ಹಣವಿದ್ದರೆ ಸಾಕು ಅದಕ್ಕಾಗಿ ಬಾಯಿ ಬಾಯಿ ಬಿಡುವ ಬಕಾಸುರತನ, ಈ ಮುದಿ ಜೀವ ತೊಲಗಿ ನನ್ನ ಕೈಗೆ ಒಂದಿಷ್ಟು ಬರಲಿ ಎನ್ನುವ ಕೌಟುಂಬಿಕ ವ್ಯಕ್ತಿಗಳ
ನಿಲುವುಗಳು ಇವೆಲ್ಲವುಗಳ ಆಳದಲ್ಲಿ ವೃದ್ಧಾಪ್ಯದ ಚಿಂತನೆಗಳು ಪ್ರತಿಯೊಬ್ಬರಲ್ಲೂ
ಭಯ ಮೂಡಿಸುತ್ತವೆ.
ಅಂದು ಬುದ್ಧನಿಗೆ ಅರಮನೆಯಿಂದ ಹೊರಬಂದಾಗ ಮುಪ್ಪು ಮೂಡಿದ ಒಬ್ಬ ಮುದುಕನನ್ನು
ಕಂಡು ವೈರಾಗ್ಯ ಹುಟ್ಟಿತು. ಇಂದು ವೃದ್ಧರ ಬದುಕನ್ನು ನೋಡಿದಾಗ ನಮಗೂ ಇಂಥಹ ಬದುಕು ಬಗಲಲ್ಲೇ ಇದೇ
ಎಂಬ ಭಯ ಮೂಡುತ್ತದೆ. ಈ ಮುಪ್ಪಿನ ಭಯವಿರಲೀ, ಭಯವೇ ಎಲ್ಲರಿಗೂ ಮುಪ್ಪಾಗಿ
ಪರಿಣಮಿಸುತ್ತಿದೆ. ಮುಪ್ಪನ್ನು ತಪ್ಪಿಸಲು ಸಾಧ್ಯವಿಲ್ಲ, ಆದರೆ ಮುಪ್ಪಿನ ಭಾವವನ್ನು
ಪ್ರೀತಿಯ ಹೊನಲಿನಲ್ಲಿ ಹಗುರಾಗಿಸಿ ಮತ್ತೊಮ್ಮೆ ಮಕ್ಕಳಾಗಿ ಹಸನಾಗಿರಿಸಿಕೊಳ್ಳಲು, ಹಸನಾಗಿಸಲು ನಮಗೆಲ್ಲಾ
ಸಾಧ್ಯವಿದೆ. ಅದು ಪ್ರೀತಿ, ವಿಶ್ವಾಸ, ತಾಳ್ಮೆ, ಮತ್ತು ಅಂತಃಕರಣದಲ್ಲಿ ಕಂಡುಕೊಳ್ಳಬಹುದಾದ ನಲ್ಮೆ ಎಂಬ ಬೆಳಕಿನಲ್ಲಿದೆ. ಅಂತದ್ದು ಈ
ವಿಶ್ವದಲ್ಲಿ ಸಾಧ್ಯವಾಗಲಿ.
"ಜಯಂತಿ ತೆ ಸುಕೃತಿನೋ ರಸ ಸಿದ್ಧ ಕವೀಶ್ವರಃ, ನಾಸ್ತಿ ತೇಷಾಂ ಯಶಃ ಕಾಯೇ, ಜರಾ ಮರಣಜಂ ಭಯ” - ಭರ್ತ್ರಹರಿ
ದುಃಖ, ಅನಾರೋಗ್ಯ,ಬಡತನ, ತಿರಸ್ಕಾರ, ಮೋಸ, ಅಗೌರವ, ಪ್ರೇಮರಾಹಿತ್ಯ, ಮರಣಗಳೆಂಬ ಭಯಗಳು ಅಥವಾ
ಭಯಗಳೆಂಬ ಮುಪ್ಪುಗಳು ಈ ಲೋಕದಿಂದ ಪಲಾಯನಗೈಯಲ್ಲಿ. ಎಲ್ಲರ ಬದುಕು ವಿಶ್ವದ ಅನಂತತೆ ಎಂಬ
ಸುಂದರತೆಯಲ್ಲಿ ಭವ್ಯವಾಗಿರಲಿ.
ಕಾಮೆಂಟ್‌ಗಳು