ಮಂಗಳವಾರ, ಸೆಪ್ಟೆಂಬರ್ 3, 2013

ಗಮಗಮಾ ಗಮಾಡಸತಾವs ಮಲ್ಲಿಗಿಗಮಗಮಾ ಗಮಾಡಸತಾವs ಮಲ್ಲಿಗಿ 
ನೀವು  ಹೊರಟಿದ್ದೀಗ ಎಲ್ಲಿಗೆ?
ಗಮಗಮಾ............................

ತುಳುಕ್ಯಾಡತಾವ ತೂಕಡಿಕಿ 
ಎವಿ ಅಪ್ಪತ್ತಾವ ಕಣ್ಣ  ದುಡುಕಿ
ಕನಸು ತೇಲಿ ಬರತಾವ ಹುಡುಕಿ||
ನೀವು ಹೊರಟಿದ್ದೀಗ ಎಲ್ಲಿಗೆ?

ಚಿಕ್ಕಿ ತೋರಸ್ತಾವ ಚಾಚಿ ಬೆರಳ 
ಚಂದ್ರಮ ಕನ್ನಡಿ ಹರಳ
ಮನ ಸೋತು ಆಯಿತು ಮರುಳ||
ನೀವು ಹೊರಟಿದ್ದೀಗ ಎಲ್ಲಿಗೆ?

ಗಾಳಿ ತಬ್ಬತಾವ ಹೂಗಂಪು
ಚಂದ್ರನ ತೆಕ್ಕಿಗಿದೆ ತಂಪು
ನಿಮ ಕಂಡರ ಕವದಾವ ಜೊಂಪು||
ನೀವು ಹೊರಟಿದ್ದೀಗ ಎಲ್ಲಿಗೆ?

ನೆರಳಲ್ಲಾಡತಾವ ಮರದ ಬುಡsಕ 
ರಿ ತೇರಿ ನೂಗತಾವ ದಡಕs
ಹಿಂಗ ಬಿಟ್ಟು ಇಲ್ಲಿ ನನ್ನ ನಡsಕ
ನೀವು ಹೊರಟಿದ್ದೀಗ ಎಲ್ಲಿಗೆ?

ನಮ್ಮ ನಿಮ್ಮ ಒಂದತನದಾಗ 
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀವು ಹೊರಟಿದ್ದೀಗ ಎಲ್ಲಿಗೆ?

ನಾವು ಬಂದೆವಲ್ಲಿಂದಿಲ್ಲಿಗೆ
ಬಾಯಿ ಬಿಟ್ಟವಲ್ಲ ಮಲ್ಲಿಗೆ
ನೀರೊಡೆದಿತಲ್ಲ ಕಲ್ಲಿಗೆ||
ನೀವು ಹೊರಟಿದ್ದೀಗ ಎಲ್ಲಿಗೆ?

ಬಂತ್ಯಾಕ ನಿಮಗ ಇಂದ ಮುನಿಸು 
ಬೀಳಲಿಲ್ಲ ನಮಗ ಇದರ ಕನಸು
ರಾಯಾ ತಿಳಿಯಲಿಲ್ಲ ನಿಮ್ಮ ಮನಸು||
ನೀವು ಹೊರಟಿದ್ದೀಗ ಎಲ್ಲಿಗೆ?

ಸಾಹಿತ್ಯ: ಅಂಬಿಕಾತನಯದತ್ತ

(ಗಮಗಮಾ ಸುವಾಸನೆಯನ್ನು ಕೊಟ್ಟ, ಮಲ್ಲಿಗೆಯ ಮೊಗ್ಗುಗಳನ್ನು ಅರಳಿಸಿ, ಮನಸ್ಸನ್ನು ಮರುಳುಗೊಳಿಸಿದ ಮಾರುತ ತನ್ನನ್ನು ಬಿಟ್ಟು ಬೇರೆಡೆಗೆ ಹೊರಟನೋ ಎಂಬ ಭಯ, ವಿಹ್ವಲತೆ ಈ ಕವನದಲ್ಲಿ ರೂಪಗೊಂಡಿದೆ)

Tag: Gama Gama  gamaadstava aaha mallige, gamagama 

ಕಾಮೆಂಟ್‌ಗಳಿಲ್ಲ: