ಇನ್ನಿಲ್ಲ ನಮ್ಮಕ್ಕರೆಯ ತುಳಸಜ್ಜಿ
ಇನ್ನಿಲ್ಲ ನಮ್ಮಕ್ಕರೆಯ ತುಳಸಜ್ಜಿ
ಪ್ರಕೃತಿಪ್ರಿಯತೆಯನ್ನು ಕರ್ಮಯೋಗಿಯಾಗಿ ಸಾಧಿಸಿದ ತುಳಸಜ್ಜಿ ಇಂದು ನಮ್ಮನ್ನಗಲಿದ್ದಾರೆ
ಶ್ರೀಕೃಷ್ಣನಿಗೆ ಒಂದು ದಳ ತುಳಸಿ ಅರ್ಪಿತವಾದರೆ ಇಷ್ಟವಂತೆ.
ಒಂದು ದಳ ಶ್ರೀತುಳಸಿ ಬಿಂದು ಗಂಗೋದಕ
ಇಂದಿರಾ ರಮಣಗೆ ಅರ್ಪಿತ ಎನುತ
ಒಂದೇ ಮನಸಿನಲಿ ಇಂದು ಶಯನನೆನೆ
ಎಂದೆಂದೂ ವಾಸಿಪ ಮಂದಿರದೊಳಗೆ.
ಈ ಅರ್ಪಣೆ ಎಂಬುದು ಕರ್ಮಯೋಗದಲ್ಲಿನ ಸಂತೃಪ್ತಿಯ ಸಂಕೇತವೂ ಹೌದು. ಹೀಗೆ ಈ ಲೋಕದಲ್ಲಿದ್ದು, ತಮ್ಮ ಕಾಯಕವನ್ನೇ ಭಕ್ತಿಪ್ರೀತಿಯನ್ನಾಗಿಸಿಕೊಂಡು ಬಾಳಿದವರು ಸ್ವಯಂ ತಾವೇ 'ತುಳಸಿ' ಆಗಿದ್ದ ತುಳಸಿಗೌಡ. ಅವರು ನಾಡಿನ ಪ್ರೀತಿಯ ತುಳಸಜ್ಜಿಯಾಗಿದ್ದರು.
ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರು ನಮ್ಮ ನಡುವಿನ ಪ್ರಕೃತಿ ರಕ್ಷಕಿಯಾಗಿ ಕಂಗೊಳಿಸುತ್ತಿದ್ದವರು.
ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದವರಾದ ತುಳಸಿಗೌಡ ಅವರು ಜನಿಸಿದ್ದು 1944ರಲ್ಲಿ. ಅವರು ಸದ್ದಿಲ್ಲದೇ ಪ್ರಕೃತಿ ರಕ್ಷಣೆ ಮಾಡುತ್ತಾ ಬಂದವರು. ಲಕ್ಷಾಂತರ ಗಿಡಗಳನ್ನು ನೆಟ್ಟು ಬೋಳು ಬಿದ್ದ ಗುಡ್ಡಗಳಿಗೆ ಹಸಿರ ಹೊದಿಕೆ ಹೊದಿಸಿದವರು. ಬಾಲ್ಯದಲ್ಲೇ ಅಪ್ಪನನ್ನು ಹಾಗೂ ಮದುವೆಯಾದ ಬಳಿಕ ತಮ್ಮ 17ನೇ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡರೂ, ಕಾಡಿನ ಕಟ್ಟಿಗೆ ಮಾರಿ ಬದುಕು ಕಟ್ಟಿಕೊಂಡರು.
ಹಾಲಕ್ಕಿ ಸಮುದಾಯಕ್ಕೆ ಸೇರಿದವರಾದ ತುಳಸಿ ಗೌಡ ಅವರಿಗೆ ಪರಿಸರದ ಜೊತೆ ಒಡನಾಟ ಆಪ್ತವಾಗಿತ್ತು. ಮರ, ಗಿಡ, ಬಳ್ಳಿ, ಹೂವುಗಳ ಬಗ್ಗೆ ಆತ್ಮೀಯ ಪರಿಚಯವಿತ್ತು. ಅರಣ್ಯ ಇಲಾಖೆ ಸ್ಥಳೀಯ ಜನರ ಗುಂಪೊಂದನ್ನು ದಿನಗೂಲಿ ನೌಕರರಾಗಿ ನೇಮಿಸಲು ತೀರ್ಮಾನಿಸಿದ ಸಂದರ್ಭದಲ್ಲಿ ತುಳಸಿ ಗೌಡ ಅವರು ತಮ್ಮ ಮತ್ತು ತಮ್ಮ ಸಣ್ಣ ಮಕ್ಕಳ ಬದುಕು ಸಾಗಿಸಲು ಈ ಕೆಲಸಕ್ಕೆ ಸೇರಿದರು.
ಅಂದು ತುಳಸಿ ಗೌಡ ಅವರಿಗೆ ಸಿಗುತ್ತಿದ್ದುದು 1 ರೂಪಾಯಿ 25 ಪೈಸೆ ದಿನಗೂಲಿ. ಅದು ಕುಟುಂಬ ಪೋಷಣೆಗೆ ಸಾಲುತ್ತಿರಲಿಲ್ಲ. ಅಷ್ಟು ಕಡಿಮೆ ಸಂಬಳಕ್ಕೆ ದುಡಿಯಬೇಡ ಎಂದು ಬಂಧುಗಳು, ಸ್ನೇಹಿತರು ಅವರಿಗೆ ಹೇಳಿದರು. ಆದರೆ ಗಿಡ ನೆಡುವುದು, ಮರ ಬೆಳೆಸುವುದು ಅವರಿಗೆ ಹಿಂದಿನಿಂದಲೂ ಇಷ್ಟವಿದ್ದ ಕಾರಣ ಆ ಕೆಲಸವನ್ನು ಬಿಡಲಿಲ್ಲ. ಕಾಡೆಲ್ಲಾ ಸುತ್ತಿ ಅಪರೂಪದ ಬೀಜ, ಗಿಡಗಳನ್ನು ಸಂಗ್ರಹಿಸುತ್ತಿದ್ದರು. ನಂತರ ಅದನ್ನು ಬಿತ್ತಲು ಆರಂಭಿಸಿದರು. ಗಿಡವಾಯಿತು. ನೋಡುನೋಡುತ್ತಿದ್ದಂತೆ ಇದು ಹೆಚ್ಚಾಗುತ್ತಾ ಹೋಗಿ ಹೊನ್ನಾಳಿ, ಮಸ್ತಿಗಟ್ಟ, ಹೆಗ್ಗೂರು, ಹೊಲಿಗೆ, ವಜ್ರಹಳ್ಳಿ, ದೊಂಗ್ರಿ, ಕಲ್ಲೇಶ್ವರ, ಅಡಗೂರು, ಅಗಸೂರು, ಸಿರಗುಂಜಿ, ಎಲೊಗಡ್ಡೆಗಳಲ್ಲಿ ಖಾಲಿ ಭೂಮಿಯಲ್ಲಿ ಅರಣ್ಯ ಇಲಾಖೆ ಇವರ ಗಿಡಗಳನ್ನು ನೆಡಿಸಿತು. ಇಂದು ಇವೆಲ್ಲಾ ಸೇರಿ 30 ಸಾವಿರಕ್ಕೂ ಅಧಿಕ ಮರಗಳಾಗಿವೆ.
ನಾವು ತೇಗ, ಎಳ್ಳು, ನಂದಿ, ಪೀಪುಲ್, ಫಿಕಸ್, ಬಿದಿರು, ರಾಟನ್, ಜಮುನ್, ಗೋಡಂಬಿ, ಜಾಯಿಕಾಯಿ, ಮಾವು, ಹಲಸು, ಕೊಕುಮ್‌ನಂತಹ ಹಣ್ಣಿನ ಮರಗಳನ್ನು ಬೆಳೆಸಿದ್ದೇವೆ ಎಂದು ತುಳಸಿ ಗೌಡ ಹೇಳುತ್ತಿದ್ದರು. ಗ್ರಾಮಸ್ಥರಿಗೆ, ಸುತ್ತಮುತ್ತಲಿನ ಜನರಿಗೆ ತುಳಸಜ್ಜಿ ಎಂದೇ ಅವರು ಪ್ರಿಯರು.
ಯಾವ ಯಾವ ಸಸಿಯನ್ನು ಯಾವ ಸಮಯದಲ್ಲಿ ನೆಡಬೇಕು. ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ ಈ ಎಲ್ಲ ಮಾಹಿತಿಗಳು ತುಳಸಜ್ಜಿಯ ಜ್ಞಾನ ಭಂಡಾರದಲ್ಲಿತ್ತು.
ತುಳಸಿ ಗೌಡ ಅವರ ಶ್ರಮ ಹಾಗೂ ಉತ್ಸಾಹವನ್ನು ಪರಿಗಣಿಸಿ ಅಂದಿನ ಅರಣ್ಯಾಧಿಕಾರಿ ಯಲ್ಲಪ್ಪ ರೆಡ್ಡಿಯವರು ಮಾಸ್ತಿಕಟ್ಟೆ ಅರಣ್ಯವಲಯವನ್ನು ಪೋಷಿಸುವ ಕೆಲಸವನ್ನು ಅವರಿಗೆ ಕೊಡಿಸಿದ್ದರು. ಹೀಗೆ ಈಕೆ ಜೀವಮಾನದಲ್ಲಿ ಲಕ್ಷಗಟ್ಟಲೇ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದರು.
ತುಳಸಜ್ಜಿ ಅವರ ಸಾಧನೆಗೆ ರಾಜ್ಯೋತ್ಸವ, ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಮತ್ತು ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
ಪ್ರಶಸ್ತಿಗಳೆಲ್ಲ ಆಕೆ ತನ್ನ ಪ್ರಕೃತಿ ಪ್ರೇಮದಲ್ಲಿ ಮತ್ತು ನಿರ್ಮಲ ಆತ್ಮಸಂತೋಷದಲ್ಲಿ ಕಂಡಿರಬಹುದಾದ ಶ್ರೇಷ್ಠತೆಯ ಮುಂದೆ ತುಂಬಾ ತುಂಬಾ ಸಣ್ಣವು.
ತುಳಸಜ್ಜಿ ತಮ್ಮ 80 ವರ್ಷದ ಬದುಕಿಗೆ 2024ರ ಡಿಸೆಂಬರ್ 16ರಂದು ಮಂಗಳ ಹಾಡಿದರು.
ಬಾಳಿದರೆ ಹೀಗೆ ಬಾಳಬೇಕು ಎಂದು ಬಾಳಿ ತೋರಿಸಿದ ತುಳಸಜ್ಜಿಯವರ ಬದುಕು ನಮ್ಮನ್ನೂ ಕಿಂಚಿತ್ತು ಪ್ರೇರಿಸಲಿ.
Respects to departed soul Great environmentalist by deed, Tulasi Gowda. 🌷🙏🌷
ಕಾಮೆಂಟ್‌ಗಳು