ಭಾನುವಾರ, ಅಕ್ಟೋಬರ್ 6, 2013

ಟಿ. ಕೆ. ರಾಮರಾವ್

ಟಿ. ಕೆ. ರಾಮರಾವ್

ಟಿ. ಕೆ. ರಾಮರಾವ್ ಅಂದರೆ ಜನ ತಕ್ಷಣವೇ ಬಂಗಾರದ ಮನುಷ್ಯಎಂದು ನೆನಪಿಸಿಕೊಳ್ಳುತ್ತಾರೆ.   ಕನ್ನಡ ಕಥಾಲೋಕ ಮತ್ತು ಚಿತ್ರಲೋಕದಲ್ಲಿ ಬಂಗಾರದ ಮನುಷ್ಯ’  ಮತ್ತು ಅದರ ಕಥಾ ಸೃಷ್ಟಿಕರ್ತ ಚಿರಸ್ಮರಣೀಯರು.  ಬಂಗಾರದ ಮನುಷ್ಯ ಕಥೆಯ ಪರಿಧಿಯ ಆಚೆಗೆ ಜನ ರಾಮರಾವ್ ಅವರನ್ನು ಗುರುತಿಸುವುದು ಅವರ ಪ್ರಸಿದ್ಧ ಪತ್ತೇದಾರಿ ಕಾದಂಬರಿಗಳಿಂದ.

ರೋಚಕ ಶೈಲಿ, ತೀಕ್ಷ್ಣವಾದ ಲಯಬದ್ಧವಾದ ವಾಕ್ಯಸರಣಿ, ವಿಸ್ಮಯಕಾರಿ ತಿರುವುಗಳು, ರಹಸ್ಯವನ್ನು ಕೊನೆಯವರೆವಿಗೂ ಕಾಯ್ದಿಟ್ಟು ಓದುಗರನ್ನು ಬೆರಗಾಗುವಂತೆ ಮಾಡುವ ತಂತ್ರಗಾರಿಕೆಯ ಬರಹಗಳಿಂದ ಕನ್ನಡದ ಓದುಗರಿಗೆ ಚಿರಪರಿಚಿತರಾಗಿದ್ದ ಟಿ.ಕೆ. ರಾಮರಾಯರು 1931ರ ಅಕ್ಟೋಬರ್ 7ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಜನಿಸಿದರು. ತಂದೆ ಟಿ. ಕೃಷ್ಣಮೂರ್ತಿಯವರು ರೈಲ್ವೆ ಇಲಾಖೆಯಲ್ಲಿ ಸ್ಟೇಷನ್‌ ಮಾಸ್ಟರ್ ಆಗಿದ್ದವರು.  ತಾಯಿ ನಾಗಮ್ಮನವರು.

ರಾಮರಾವ್ ಅವರ ಪ್ರಾರಂಭಿಕ ಶಿಕ್ಷಣ ಕಡೂರು, ಅರಸೀಕೆರೆ ಮುಂತಾದೆಡೆ ನೆರವೇರಿ ಮುಂದೆ ಕೋಲಾರದಲ್ಲಿ ಹೈಸ್ಕೂಲಿಗೆ ಸೇರಿದರು.  ಹೈಸ್ಕೂಲಿನಲ್ಲಿದ್ದಾಗಲೇ ಅವರಿಗೆ  ವಿಪರೀತ ಓದಿನ ಹುಚ್ಚು. ಆಗಲೇ ಅವರು  ಭಾಸ್ಕರ ಅಥವಾ ಸೇಡುಎಂಬ ಪತ್ತೇದಾರಿ ಕಾದಂಬರಿಯೊಂದನ್ನು  ಬರೆದಿದ್ದರಂತೆ. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್‌ ಷಾ ಮುಂತಾದವರು ಇವರ ಅಚ್ಚುಮೆಚ್ಚಿನ ಲೇಖಕರಾಗಿದ್ದರು.

ಬಿ.ಎಸ್‌ಸಿ. ಆನರ್ಸ್ ಪದವಿ ಪಡೆದ ನಂತರ ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿದರೂ ಎರಡು ತಿಂಗಳಲ್ಲೇ ಅದನ್ನು ಬಿಟ್ಟು ಮದರಾಸಿನಲ್ಲಿ ರೈಲ್ವೆಗಾರ್ಡ್ ಕೆಲಸಕ್ಕೆ ಸೇರಿದರು.  ಇದು ರೈಲ್ವೆಯಲ್ಲಿ ಸ್ಟೇಷನ್‌ಮಾಸ್ಟರಾಗಿದ್ದ ಅವರ ತಂದೆಯವರ ಅಕಾಲ ಮರಣದಿಂದ ಇವರಿಗೆ  ಮಾನವೀಯ ದೃಷ್ಟಿಯಿಂದ ದೊರೆತ ಉದ್ಯೋಗವಾಗಿತ್ತು. ಆದರೆ ಇದಕ್ಕೆ ಹಿಂದೆಯೇ ಅವರ ಅಣ್ಣನೊಬ್ಬನ ಮರಣದಿಂದ ಇಡೀ  ಸಂಸಾರದ ಹೊಣೆ ಇವರ ಮೇಲೆ ಬಿದ್ದು ತಮ್ಮ ತಂಗಿ ತಾಯಿ  ಇವರೆಲ್ಲರ ಜವಾಬ್ದಾರಿ ಹೊರಲು ಮದರಾಸಿನ ಕೆಲಸ ತೊರೆದು ಚನ್ನಪಟ್ಟಣದಲ್ಲಿ ನೆಲೆಸಿ ಟ್ಯೂಟೋರಿಯಲ್ಸ್ ತೆರೆದು ತರಗತಿಗಳನ್ನು ಪ್ರಾರಂಭಿಸಿದರು.  ಹೀಗೆ ಎಸ್‌.ಎಸ್.ಎಲ್‌.ಸಿ., ಪಿ.ಯು.ಸಿ, ಪಾಲಿಟೆಕ್ನಿಕ್‌ ತರಗತಿಯ ವಿದ್ಯಾರ್ಥಿಗಳಿಗೆ 20ವರ್ಷಗಳ ಕಾಲ ಪಾಠ ಹೇಳಿದ ಅವರು ನಂತರದಲ್ಲಿ  ಔಷಧಿ ಅಂಗಡಿಯೊಂದನ್ನು ಪ್ರಾರಂಭಿಸಿದರು.

ಇವರು ಬರೆದ ಮೊಟ್ಟಮೊದಲ ಕಾದಂಬರಿ ದೂರ ಗಗನಪ್ರಕಟವಾದುದು 1966ರಲ್ಲಿ. ಆಗ ಅವರಿಗೆ 35ರ ಪ್ರಾಯ. ರಂಜನೀಯವಾಗಿ, ಸೊಗಸಾಗಿ ಬರೆದ ಈ ಕಾದಂಬರಿ ಓದುಗರ ಗಮನ ಸೆಳೆದ ನಂತರ ಇನ್ನೂ  ಹಲವಾರು ಕಾದಂಬರಿಗಳನ್ನು ಬರೆದರು. ಮೊದಲು ಪ್ರಕಟಿಸಲಾಗದೆಂದು ವಿಷಾದ ಪತ್ರ ಕಳುಹಿಸಿದ್ದ  ಸಂಪಾದಕರೇ ಇವರಿಗಾಗಿ  ಕ್ಯೂನಲ್ಲಿ ಕಾಯ್ದು ಕಾದಂಬರಿ ಬರೆಸಿ ತಮ್ಮ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಬೇಕೆಂದು ಆಶಿಸಿದರು. ದೂರ ಗಗನದಿಂದ ಹಿಡಿದು 1988ರಲ್ಲಿ ಬರೆದ  ಪಯಣದ ಕೊನೆಎಂಬ  ಕಡೆಯ ಕಾದಂಬರಿಯವರೆಗೆ ಅವರು  ಬರೆದ ಕಾದಂಬರಿಗೆಲ್ಲವೂ ಒಂದಲ್ಲ ಒಂದು ಪತ್ರಿಕೆಯಲ್ಲಿ ಧಾರಾವಾಹಿಯಾಗಿಯೇ ಪ್ರಕಟಗೊಂಡವು.  ಪತ್ತೇದಾರಿ ಕಾದಂಬರಿಗಳ ರಚನೆಗೆ ತೊಡಗಿಕೊಂಡದ್ದರ ಹಿನ್ನೆಲೆಯಲ್ಲಿ ಅವರು  ಅಪರಾಧಶಾಸ್ತ್ರ, ವಿಷವೈದ್ಯಶಾಸ್ತ್ರ, ನ್ಯಾಯಶಾಸ್ತ್ರ, ಮನೋವೈದ್ಯಕೀಯ ಶಾಸ್ತ್ರ ಮೊದಲಾದವುಗಳ ಸುದೀರ್ಘ  ಅಧ್ಯಯನವನ್ನು ನಡೆಸಿದರು.

ದಿಬ್ಬದಮೇಲೆಕಾದಂಬರಿಯು ಸುಧಾವಾರ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ ಅವರ ಮತ್ತೊಂದು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಬಹುಮಾನವೂ ದೊರೆಯಿತು. ಆದರೆ ರಾಮರಾಯರ ಮೊಟ್ಟಮೊದಲ ಕಾದಂಬರಿ ದೂರಗಗನದಂತೆ ಅವರ ಸಾಹಿತ್ಯಿಕ ಆಸೆ ಆಕಾಂಕ್ಷೆಗಳು ದೂರ ಗಗನವಾಗಿಯೇ ಉಳಿದು ಬಿಟ್ಟವು.

1969ರಲ್ಲಿ ಗ್ರೀಸ್‌, ಸ್ವಿಜರ್ ಲ್ಯಾಂಡ್‌, ಫ್ರಾನ್ಸ್‌, ಇಂಗ್ಲೆಂಡ್‌, ಅಮೆರಿಕಾ, ಕೆನಡಾ, ಜಪಾನ್‌, ಹಾಂಕಾಂಗ್‌, ಥಾಯ್‌ಲ್ಯಾಂಡ್‌, ಸಿಂಗಾಪೂರ್, ಶ್ರೀಲಂಕಾ ಮುಂತಾದ ದೇಶಗಳನ್ನು ಸುತ್ತಿಬಂದು ರಚಿಸಿದ ಅವರ ಪ್ರವಾಸಾನುಭವದ ಕೃತಿ ಗೋಳದ ಮೇಲೊಂದು ಸುತ್ತುನಾಲ್ಕು ಮುದ್ರಣಗಳನ್ನು ಕಂಡ ಕೃತಿ.   ಬಂಗಾರದ ಮನುಷ್ಯಕಾದಂಬರಿಯು 1972ರ ವರ್ಷದಲ್ಲಿ ಚಲನಚಿತ್ರವಾಗಿ ಮೂಡಿಬಂದು ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ 2 ವರ್ಷಗಳ ಕಾಲ ಪ್ರದರ್ಶಿತಗೊಂಡ ಅಪೂರ್ವ ದಾಖಲೆ ನಿರ್ಮಿಸಿದ ಮಹೋನ್ನತ ಚಲನಚಿತ್ರವೆಂದು ಖ್ಯಾತಿ ಪಡೆಯಿತು. ಇದೇ ಕಾದಂಬರಿಯು ತೆಲುಗುಭಾಷೆಯಲ್ಲಿ ದೇವುಡುಲಾಂಬ ಮನಿಷಿಹೆಸರಿನ ಚಲನಚಿತ್ರವಾಗಿ ಆಂಧ್ರದಾದ್ಯಂತ ಪ್ರದರ್ಶಿತವಗಿ ಶತದಿನೋತ್ಸವ ಕಂಡರೆ ಕಾದಂಬರಿ ರೂಪದಲ್ಲಿ ಬಂಗಾರು ಮನಿಷಿಹೆಸರಿನಿಂದ ತೆಲುಗು ಭಾಷೆಗೂ ಅನುವಾದಗೊಂಡಿತು. ಹಿಂದಿ ಭಾಷೆಯಲ್ಲಿಯೂ ಚಲನಚಿತ್ರವಾಗಿ ತೆರೆಕಂಡು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿತು.  ಇವರ ಐವತ್ತನೆಯ ಕಾದಂಬರಿ ಕೆಂಪುಮಣ್ಣು,

53 ಕಾದಂಬರಿಗಳು; 14 ಕಥಾ ಸಂಕಲನಗಳು; ಜೆ.ಎನ್‌.ಟಾಟಾ, ಲಾಲಾ ಲಜಪತರಾಯ್‌, ಟಿ.ವಿ. ಸುಂದರಂ ಐಯ್ಯಂಗಾರ್, ಶಾಮ ಪ್ರಸಾದ ಮುಖರ್ಜಿ, ಸ್ವಾಮಿ ಶಿವಾನಂದ ಎಂಬ 5 ಶಿಶು ಸಾಹಿತ್ಯ ಕೃತಿಗಳುಜಗದೇವರಾಯ ಎಂಬ ಐತಿಹಾಸಿಕ ಕಾದಂಬರಿ ಮತ್ತು ಒಂದು ವಿದೇಶಿ ಪ್ರವಾಸ ಕೃತಿಯೂ ಸೇರಿ ರಾಮರಾವ್ ಆವರು ಒಟ್ಟು  74 ಕೃತಿಗಳನ್ನು ರಚಿಸಿದ್ದಾರೆ.

ರಾಮರಾವ್ ಅವರಿಗೆ ಬೆಂಗಳೂರು, ಮದ್ದೂರು, ವಿರಾಜಪೇಟೆ, ಧರ್ಮಸ್ಥಳ ಮುಂತಾದೆಡೆಗಳಲ್ಲಿ ಸನ್ಮಾನ ಕಾರ್ಯಕ್ರಮಗಳು ನಡೆದವು. 1981ರಲ್ಲಿ ಅಮೆರಿಕೆಯಲ್ಲಿ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರ  ಕರುಳಿನ ಶಸ್ತ್ರ ಚಿಕಿತ್ಸೆಯನ್ನೂ  ಮಾಡಿಸಿಕೊಂಡಿದ್ದರಿಂದ ವಿಧಿಯಿಲ್ಲದೆ ಕೆಲವು ಕಾರ್ಯಕ್ರಮಗಳಿಗೆ ಮಾತ್ರ ಹೋಗಿ ಬರುತ್ತಿದ್ದರು. 1984ರಲ್ಲಿ ಕರ್ನಾಟಕ ಸರ್ಕಾರವು ರಾಮರಾಯರನ್ನು ಸಾಹಿತ್ಯ ಅಕಾಡಮಿಯ ಸದಸ್ಯರನ್ನಾಗಿ ನೇಮಿಸಿತು. ಅವರು 1985ರಲ್ಲಿ ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯದ ಪ್ರಥಮ ಪತ್ತೇದಾರಿ ಲೇಖಕರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಅ. ನ. ಕೃ, ತ.ರಾ.ಸು., ಮ. ರಾಮಮೂರ್ತಿ ಮುಂತಾದವರುಗಳಂತೆ ಟಿ.ಕೆ. ರಾಮರಾಯರು ಕನ್ನಡಿಗರಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರಿನ ಬಿ.ಎಚ್‌.ಇ.ಎಲ್‌. ಕನ್ನಡ ಹಿತರಕ್ಷಣಾ ಸಮಿತಿಯವರು ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದ್ಭುತವಾಗಿ ಭಾಷಣ ಮಾಡಿದ ನಂತರ ಶಾಲು, ಗಂಧದ ಹಾರ, ಹಣ್ಣಿನ ಬುಟ್ಟಿ ಹಿಡಿದುಕೊಂಡು ಬಂದು ಕಾರಿನಲ್ಲಿ ಕುಳಿತವರು ಮೇಲೇಳಲೇ ಇಲ್ಲ.  ವಿಶಿಷ್ಟ ರೀತಿಯಲ್ಲಿ ಪತ್ತೇದಾರಿ ಕಾದಂಬರಿಗಳನ್ನು ಬರೆದು, ಈ ಪ್ರಕಾರಕ್ಕೊಂದು ಘನತೆ, ಗೌರವಗಳನ್ನು ತಂದು ಕೊಟ್ಟ ರಾಮರಾಯರು 1988ರ ನವಂಬರ್ 11ರಂದು ಈ ಲೋಕವನ್ನಗಲಿದರು.  ಈ ಮಹಾನ್ ಪ್ರತಿಭಾವಂತ ಚೇತನಕ್ಕೆ ನಮ್ಮ ನಮನ.

ಮಾಹಿತಿ ಕೃಪೆ: ಕಣಜ


Tag: T. K. Ramarao


1 ಕಾಮೆಂಟ್‌:

mudgal venkatesh ಹೇಳಿದರು...

Shri.T.K.Ramrao was my favorite novelist. His way of creating suspense was splendid. Super write-up Sir,,,,congrats.