ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ. ಕೆ. ರಾಮರಾವ್


ಟಿ. ಕೆ.  ರಾಮರಾವ್

ನಮ್ಮ ಕಾಲದಲ್ಲಿ ನಮಗೆಲ್ಲಾ ಧಾರವಾಹಿ ಓದುವ ಹುಚ್ಚು ಹಿಡಿಸಿದ ಮಹನೀಯರು ಟಿ. ಕೆ. ರಾಮರಾವ್.

‘ಬಂಗಾರದ ಮನುಷ್ಯ’ ಸತತ ಎರಡು ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಓಡಿದ್ದು, ಅದರಲ್ಲಿ ರಾಜ್ ಕುಮಾರ್ - ಭಾರತಿ ಇದ್ದರು, ಸಿದ್ಧಲಿಂಗಯ್ಯನವರ ನಿರ್ದೇಶನವಿತ್ತು, ಜಿ.ಕೆ. ವೆಂಕಟೇಶ್ ಅವರ ಮನೋಜ್ನ ಸಂಗೀತವಿತ್ತು, ಎಲ್ಲವೂ ಚೆನ್ನಿತ್ತು ಎಂಬುದರ ಜೊತೆ ಜೊತೆಗೆ,  ನಮ್ಮ ಸಮಕಾಲೀನರು ಟಿ. ಕೆ. ರಾಮರಾಯರನ್ನು ಕೂಡಾ ಆ ಯಶಸ್ಸಿನ ಹಿಂದಿದ್ದ ಸೂಪರ್ ಸ್ಟಾರ್ ಎಂದೇ ಭಾವಿಸುತ್ತಿದ್ದುದು ನೆನಪಾಗುತ್ತದೆ.   ಅಂದಿನ ಕಾಲವೇ ಹಾಗೆ. ನಮಗೆ ತ.ರಾ.ಸು, ತ್ರಿವೇಣಿ, ಟಿ. ಕೆ. ರಾಮರಾವ್, ಕೃಷ್ಣಮೂರ್ತಿ ಪುರಾಣಿಕರು, ಅ.ನ. ಕೃ ಅಂತಹವರು ಚಿತ್ರರಂಗಕ್ಕೆ ನೀಡಿದ ಕಥೆಗಳಿಂದ ಅವರು ನಮಗೆ ಚಿತ್ರದ ಸ್ಟಾರ್ ಗುಂಪಿಗೇ  ಸೇರಿದವರಾಗಿದ್ದರು.  

ಟಿ.ಕೆ.ರಾಮರಾವ್ ಅವರು 1931ರ ಅಕ್ಟೋಬರ 7ರಂದು ಹೊಸದುರ್ಗದಲ್ಲಿ ಜನಿಸಿದರು.   ರೈಲ್ವೆ ಉದ್ಯೋಗಿಯಾಗಿದ್ದ ಅವರ ತಂದೆ ನಿಧನರಾದಾಗ, ದೊಡ್ಡ ಸಂಸಾರದ ಜವಾಬ್ಧಾರಿ ಹದಿನೆಂಟರ ಹರೆಯದ ರಾಮರಾಯರ ಮೇಲೆ ಬಿದ್ದು, ಅವರ ಓದು ಬೇಗದಲ್ಲಿ ಮೊಟಕುಗೊಂಡಿತು.  ಚನ್ನಪಟ್ಟಣದಲ್ಲಿ ಟುಟೋರಿಯಲ್ ಮತ್ತು ಫಾರ್ಮಸಿ ಸ್ಥಾಪಿಸಿಕೊಂಡು ಜೊತೆ ಜೊತೆಗೇ ಬರವಣಿಗೆಯನ್ನೂ ನಡೆಸುತ್ತ ಬಂದರು.  

ರಾಮರಾಯರು ಹೆಚ್ಚಿಗೆ ಬರೆದದ್ದು ಪತ್ತೇದಾರಿ ಕಥೆ ಕಾದಂಬರಿಗಳನ್ನು.  ಬಂಗಾರದ ಮನುಷ್ಯ ಅಂತಹ ಕೃತಿ ಅವರು ಏನನ್ನೇ ಆಗಲಿ ಮನೋಜ್ಞವಾಗಿ ತೆರೆದಿಡಬಲ್ಲರು ಎಂಬುದನ್ನೂ ಕೂಡಾ ನಿರೂಪಿಸಿತು.  ಅಂದಿನ ವಾರಪತ್ರಿಕೆಗಳಲ್ಲಿ ನಾವು ಓದಿದ ರಾಮರಾಯರ ಕಥೆಗಳ ಸಂಖ್ಯೆ ಲೆಕ್ಕಕ್ಕೆ ಮೀರಿದ್ದು.  ಓದಿಸಿಕೊಂಡು ಹೋಗುವ ಕುತೂಹಲಕಾರಿ ಗುಣ ಅವರಿಗೆ ಸಿದ್ಧಿಸಿದ್ದ ಕಲೆ.

ಬಂಗಾರದ ಮನುಷ್ಯ, ಸೇಡಿನ ಹಕ್ಕಿ, ಮರಳು ಸರಪಣಿ, ಪಶ್ಚಿಮದ ಬೆಟ್ಟ, ಲಂಗರು, ಡೊಂಕು ಮರ, ಕೋವಿ-ಕುಂಚ, ಆಕಾಶ ದೀಪ, ಸೀಳು ನಕ್ಷತ್ರ, ಕೆಂಪು ಮಣ್ಣು, ಸೀಮಾ ರೇಖೆ, ದಿಬ್ಬದ ಬಂಗಲೆ, ಮಣ್ಣಿನ ದೋಣಿ, ಕಹಳೆ ಬಂಡೆ, ವರ್ಣ ಚಕ್ರ, ತೋರು ಬೆರಳು, ಹಿಮಪಾತ ಇಂತಹ ಹಲವಾರು ಕಾದಂಬರಿಗಳನ್ನು ರಾಮರಾಯರು ಬರೆದರು.

ಉಬ್ಬರವಿಳಿತ, ಎತ್ತರದ ಮನೆಯವನು, ಬೆಂಕಿ ಗೂಡು ಮುಂತಾದವು ಕಥನ ಸಂಕಲನಗಳು. ಗೋಳದ ಮೇಲೊಂದು ಸುತ್ತು ಪ್ರವಾಸ ಕಥನ.  ಮಕ್ಕಳ ಸಾಹಿತ್ಯಮಾಲಿಕೆಯಲ್ಲಿ ಶ್ಯಾಮಪ್ರಸಾದ ಮುಖರ್ಜಿ, ಲಾಲಾ ಲಜಪತರಾಯ, ಜೆ.ಎನ್. ಟಾಟಾ, ಸ್ವಾಮಿ ವಿವೇಕಾನಂದ, ಟಿವಿ.ಸುಂದರಂ ಅಯ್ಯಂಗಾರ್ ಮುಂತಾದವುಗಳನ್ನು ಸೃಷ್ಟಿಸಿದರು. 

ರಾಮರಾಯರ ಬಂಗಾರದ ಮನುಷ್ಯ ಅಲ್ಲದೆ ಸೇಡಿನ ಹಕ್ಕಿ, ಮರಳು ಸರಪಣಿ, ಹಿಮಪಾತ ಮುಂತಾದವು ಚಲನಚಿತ್ರಗಳಾದವು.  

ಟಿ.ಕೆ.ರಾಮರಾವ್ 1988ರ ನವಂಬರ್ 11ರಂದು ನಿಧನರಾದರು.  ಕನ್ನಡ ಓದುಗರ ಮನದಲ್ಲಿ ಅವರು ಚಿರವಿರಾಜಮಾನರು.

On the birth anniversary of our great novelist T. K. Ramarao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ