ಸೋಮವಾರ, ಅಕ್ಟೋಬರ್ 14, 2013

ಎತ್ತಿಕೋ ಎನ್ನ


ಆತುರದಿ ಹಾತೊರೆದು ಬಂದೆ ಅವ್ವಾ ಎಂದು |
ಯಾತರದು ಕಾತರವು ನಿನ್ನ ಬಳಿಗಿಂದು ||

ಹೆರತನದ ಹೆದರಿಕೆಯು ಹೃದಯದೊಳು ಹೊಕ್ಕಿಹುದು
ನರತನದ ಹುದುರೊಳಗೆ ಜೀವ ಸಿಕ್ಕಿಹುದು |
ಹೊರೆತನದ ಬಲೆಯೊಳಗೆ ಬುದ್ಧಿ ಬಳಲಾಡುವುದು
ಪರೆ ನಿನ್ನ ಕಿಂಕರಗೆ ಅಭಯಕರ ನೀಡೌ ||

ಎತ್ತೆತ್ತ ನೋಡಿದರು ಮತ್ತೆ ಬೇರೆ ಇಲ್ಲ
ಅತ್ತ ನೀನೇ ಮತ್ತು ಇತ್ತ ನೀನು  |
ಸುತ್ತಿರುವ ಬೆದರಿಕೆಯ ಬಟ್ಟೆಯನು ಕಳೆದೊಗೆದು
ಬತ್ತಲಾದೆನು ಅವ್ವ ಬಾಲನಂತೆ ನಾನು ||

ಮುಚ್ಚಿಡುವುದೇಕಿನ್ನು ಬಚ್ಚಿಡುವುದಿನ್ನೆಲ್ಲಿ
ಮುಚ್ಚುಮರೆ ಮಾಳ್ಪುದಕೆ ಮುಸುಕು ಇಹುದೆಲ್ಲಿ |
ನೆಚ್ಚು ಮೆಚ್ಚುಗಳನು ಬಿಚ್ಚು ಜೀವದೊಳೆತ್ತಿ
ಹೊಚ್ಚಿ ಪ್ರೀತಿಯ ಸೆರಗ ಎತ್ತಿಕೋ ಎನ್ನ ||

ಸಾಹಿತ್ಯ: ದ. ರಾ. ಬೇಂದ್ರೆ


ಕಾಮೆಂಟ್‌ಗಳಿಲ್ಲ: