ಭಾನುವಾರ, ಫೆಬ್ರವರಿ 9, 2014

ಕರುಣಾಳು ಬಾ ಬೆಳಕೆ

ಕರುಣಾಳು ಬಾ ಬೆಳಕೆ

ಕರುಣಾಳು ಬಾ ಬೆಳಕೆ ಎಂಬುದು ಕಳೆದ ಶತಮಾನದಲ್ಲಿ ‘ಕನ್ನಡದ ಕಣ್ವ’ ಆಚಾರ್ಯ ಬಿ. ಎಂ. ಶ್ರೀ ಅವರ ಕವಿತೆಯಿಂದ ಜನಮನದಲ್ಲಿ  ನಿಂತಿದ್ದರೆ ಇತ್ತೀಚಿನ ಹಲವು ವರ್ಷಗಳಿಂದ ಮಹಾನ್ ಶಿಕ್ಷಣ ತಜ್ಞರಲ್ಲಿ ಒಬ್ಬರಾಗಿರುವ ಡಾ. ಗುರುರಾಜ ಕರ್ಜಗಿಯವರ ‘ಅಂಕಣ’ ಬರಹದಿಂದ ಪ್ರಖ್ಯಾತವಾಗಿದೆ.

‘ಕರುಣಾಳು ಬಾ ಬೆಳಕೆ’ ಅಂಕಣ ಅಸಂಖ್ಯಾತ ಜನರನ್ನು ಪ್ರತಿದಿನ ಹಿಡಿದಿಡುತ್ತಿದೆ.  ನಾನಂತೂ ಒಂದೆರಡು ವರ್ಷದಿಂದ ಪ್ರತಿನಿತ್ಯ ಅದನ್ನು ಓದಿ ಸಂತೋಷಪಡುತ್ತಿದ್ದೇನೆ.  ನನಗೆ ಅತ್ಯಂತ ಪ್ರಭಾವೀ ಅನಿಸಿದ್ದನ್ನು ‘ಕನ್ನಡ ಸಂಪದ’ದ ಪುಟದಲ್ಲೂ ಹಂಚಿದ್ದೇನೆ.  ಇಷ್ಟಾದರೂ ಡಾ. ಗುರುರಾಜ ಕರ್ಜಗಿಯವರ ಈ ಅಂಕಣದ ಪ್ರಾರಂಭಿಕ ಬರಹಗಳಿಂದ ಮೊದಲ್ಗೊಂಡು ಎಲ್ಲವನ್ನೂ ಓದಲು ಪ್ರಾರಂಭಿಸಬೇಕೆಂಬ ಆಶಯ ಅದೇಕೋ ನನ್ನಿಂದ ಕೈಗೂಡಿಸಿಕೊಳ್ಳಲು ಆಗಿರಲಿಲ್ಲ.  ಎಲ್ಲಕ್ಕೂ ತನ್ನದೇ ಆದ ರೀತಿಯಲ್ಲಿ ಕಾಲಕೂಡಿಬರಬೇಕೇನೋ.  ಮೊನ್ನೆ ಸಪ್ನಾದಲ್ಲಿ ಪುಸ್ತಕ ನೋಡಲು ಹೋದಾಗ ಆ ಕರುಣಾಳು ತೋರಿದ ಬೆಳಕು ನನ್ನನ್ನು ಈ ‘ಕರುಣಾಳು ಬ ಬೆಳಕೆ’ ಪುಸ್ತಕದತ್ತ ಕರೆದು ತಂದು ನಿಲ್ಲಿಸಿತ್ತು.  ನಿನ್ನೆಯ ದಿನ ಆ ಪುಸ್ತಕವನ್ನು ಕೈಗೆತ್ತಿಕೊಂಡಾಗ ಅದನ್ನು ಕೆಳಗಿಡಲು ಮನಸ್ಸೇ ಆಗಲಿಲ್ಲ.  ಒಂದು ರೀತಿಯಲ್ಲಿ ನೋಡಿದರೆ, ಈ ರೀತಿ ಒಂದೇ ದಿನ ಈ ಪುಸ್ತಕವನ್ನು ಮುಗಿಸದೆ ಅದರಲ್ಲಿ ಪ್ರತಿಯೊಂದು ಸನ್ನಿವೇಶವನ್ನೂ ಆಪ್ತವಾಗಿ ಆಲೋಚಿಸಿ ಬದುಕಿಗೆ ಹೇಗೆ ಅನ್ವಯಿಸಿಕೊಳ್ಳಬಹುದು ಎಂದು ಚಿಂತಿಸುವಂತೆ ಡಾ. ಗುರುರಾಜ ಕರ್ಜಗಿಯವರು ತಮ್ಮ ಪುಸ್ತಕದ ಪ್ರಾರಂಭಿಕ ಭಿನ್ನಹದಲ್ಲಿ ಸೂಚಿಸಿದ್ದಾರೆ.  ಆದರೆ ಈ ಪುಸ್ತಕದಲ್ಲಿರುವ ಆಕರ್ಶಕ ಗುಣ ನನ್ನನ್ನು ಈ ಪುಸ್ತಕವನ್ನು ಪೂರ್ತಿ ಮುಗಿಸದೆ ಕೆಳಗಿಡಲು ಆಸ್ಪದ ನೀಡಲಿಲ್ಲ.  ಇಷ್ಟಾದರೂ ಪುನಃ ಪುನಃ ಒಂದೊಂದನ್ನೂ ಓದಿ ಮತ್ತಷ್ಟು ಆ ಕುರಿತು ಅಂತರ್ಗತ ಮಾಡಿಕೊಳ್ಳಬೇಕು ಎಂಬ ಆಶಯ ಕೂಡಾ ಅಂತರಾಳದಲ್ಲಿ ಚಿಮ್ಮುತ್ತಿದೆ.

‘ಕರುಣಾಳು ಬಾ ಬೆಳಕೆ’ ಭಾಗ – 1 ಖಂಡಿತವಾಗಿಯೂ ಒಂದು ಮನೋಜ್ಞ ಪುಸ್ತಕ.  ಇದರ ಬಗ್ಗೆ ಹಲವು ಮಹನೀಯರು ಹೇಳಿರುವ ಮಾತುಗಳು ಈ ಕುರಿತು ಹೆಚ್ಚಿನ ಬೆಳಕು ಚೆಲ್ಲುವಂತಹವಾಗಿವೆ.


ನಾವು ದಿನಾ ವ್ಯವಹರಿಸುತ್ತಿರುವ ಮತ್ತು ಅನುಭವಿಸುತ್ತಿರುವ ವಿಷಯಗಳೇ ಈ ಲೇಖನ ಮಾಲೆಯಲ್ಲಿ ಬಂದಾಗ “ಹೌದಲ್ಲಾ, ಈ ವಿಷಯ ಎಷ್ಟು ಸತ್ಯವಾದದ್ದು” ಎಂಬ ಭಾವನೆಯೊಂದಿಗೆ ವಿಚಾರ ಮಂಥನಕ್ಕೆ ಹಚ್ಚುತ್ತದೆ.  ಈ ಲೇಖನಗಳ ಲಾಭವೆಂದರೆ, ನಮ್ಮ ಮಸ್ತಕದ ಕಂಪ್ಯೂಟರಿನಲ್ಲಿ ಕರಜಗಿಯವರು ತುಂಬಿಟ್ಟ ಮಾಹಿತಿ ಸಂದರ್ಭೋಚಿತವಾಗಿ ತಟಕ್ಕನೆ ನೆನಪಿಗೆ ಬರುತ್ತದೆ.  ಎಷ್ಟೋ ಸಮಯ ಸಮಸ್ಯೆಗೊಂದು ಪರಿಹಾರವೂ ಆಗುತ್ತದೆ....
-ಡಿ. ವೀರೇಂದ್ರ ಹೆಗ್ಗಡೆಯವರು
ಮುನ್ನುಡಿಯಿಂದ

ಅಂಕಣ ಒಂದು ಪುಟ್ಟ ಕೋಣೆ ಅಲ್ಲ.   ಅದೊಂದು ವಿಶ್ವಾನುಭವದ ಸಂಗ್ರಹ ಸಂಸ್ಕೃತಿ.  ಅದನ್ನಿಲ್ಲಿ ಸಾಕ್ಷೀಕರಿಸಿದ್ದಾರೆ, ನಾನು ಕಂಡ ಶ್ರೇಷ್ಠ ಶಿಕ್ಷಣತಜ್ಞ ಡಾ. ಗುರುರಾಜ ಕರಜಗಿ.  “ಕರುಣಾಳು ಬಾ ಬೆಳಕೇ” ಶ್ರೀಯುತರ ಬಹುಶ್ರುತತ್ವಕ್ಕೆ ಹಿಡಿದ ಕನ್ನಡಿ
-ಸಾ. ಶಿ. ಮರುಳಯ್ಯ

ಪ್ರಜಾವಾಣಿಯಲ್ಲಿ ಈಗ ಅವರು ಪ್ರತಿದಿನ ಬರೆಯುತ್ತಿರುವುದು ಕೇವಲ ಒಂದು ಹಿಡಿಯಷ್ಟು!  ಆ ಹಿಡಿಯಲ್ಲಿ ಇಡೀ ವಿಷಯಾತ್ಮನನ್ನು ಪ್ರತಿಷ್ಠಾಪಿಸುತ್ತಾರಲ್ಲ!! ಅವರ ಸಾಮರ್ಥ್ಯವೇಷ್ಟು!!! ಅವರ ದಾರ್ಶನಿಕ ಜಗತ್ತಿನ ವಿಸ್ತಾರವೆಷ್ಟು!!! ಇಷ್ಟು ಸರಳವಾಗಿ ಕಥೆ ಹೇಳುವ ಕಲೆಯನ್ನು ಯಾರು ಕಲಿಸಿದರವರಿಗೆ!!! ಆಂ! ಆ ಬುದ್ಧನೇ ಇರಬೇಕು!!!

ಈ ಗುರುಗಳ ರಾಜರನ್ನು ಕಂಡರೆ ನನಗಂತೂ ಗೌರವಾಸೂಯೆ!
-ಹಂಸಲೇಖ

“ಕರುಣಾಳು ಬಾ ಬೆಳಕೆ” ಒಬ್ಬ ಮೌಲ್ಯ ನಿಷ್ಠರ ಮನೋವಿಲಾಸ.  ಸಂವೇದನಶೀಲರ ಸಹೃದಯ ಕಥನ.  ಈ ಕಾರಣದಿಂದ ಇಲ್ಲಿಯ ಕಥೆಗಳೆಲ್ಲ ಬರಿಗತೆಗಳಾಗದೆ “ಕೃತಿ”ಗಳಾಗುತ್ತವೆ.  ಸಂಸ್ಕೃತಿ, ಆಕೃತಿಗಳೇ ಆಗುತ್ತವೆ.  ಅನೇಕ ವರ್ಷಗಳ ಅಧ್ಯಯನ, ಪರಿಶೀಲನ, ಅನುಭವ ಹಾಗೂ ಆತ್ಮೀಯತೆಯ ಹದವಿಲ್ಲಿ ಬೆಳ್ದಿಂಗಳಾಗಿ ಹರಿದಿದೆ.
-ಶತಾವಧಾನಿ ಡಾ. ಆರ್. ಗಣೇಶ್

ಪ್ರಖ್ಯಾತ ಗಾಯಕ ಬಾಳಪ್ಪ ಹುಕ್ಕೇರಿ ಅವರಿಗೆ ಮಧ್ಯಪ್ರದೇಶದ ತುಳಸಿ ಸಮ್ಮಾನ ಪ್ರಶಸ್ತಿ ಬಂದ ನಿಮಿತ್ತ ಅವರ ಸಂದರ್ಶನ ಮಾಡಲು ಹೋಗಿದ್ದೆ. ನೀವು ಏಕೆ ಹಾಡುತ್ತೀರಿ ಎಂದು ಕೇಳಿದೆ ‘ನೋಡು ತಮ್ಮಾ ಈ ಜೀವನದಾಗ ದುಃಖಾನ ಜಾಸ್ತಿ ಐತಿ.  ಜನ ಸಂತೋಷ ಪಡಲಿ ಅಂತ ಹಾಡ್ತೀನಿ’ ಎಂದು ಬಾಳಪ್ಪ ಹೇಳಿದರು.  ಅದಕ್ಕೇ ಅವರಿಗೆ ‘ಹರುಷ ಹಂಚುವ ಹಾಡುಗಾರ’ ಎಂಬ ಹೆಸರು ಬಂದಿತ್ತು.  ನಮ್ಮ ಗುರುರಾಜ ಕರಜಗಿ ಅಂಥ ಮನುಷ್ಯ.  ಅವರು, ಜನರು ಚೆನ್ನಾಗಿ ಬಾಳಲಿ ಎಂದು ಭಾಷಣ ಮಾಡುತ್ತಾರೆ, ಕಥೆಗಳನ್ನು ಬರೆಯುತ್ತಾರೆ.  ಹಸಿರು ಗೋಡೆಯಲ್ಲಿ ಹರಳು ಇಟ್ಟಂತೆ ಅವರ ಕಥೆಗಳು ನೇರವಾಗಿ ಹೃದಯಕ್ಕೆ ತಟ್ಟುತ್ತವೆ.  ನಮ್ಮನ್ನು ಭಾವುಕರನ್ನಾಗಿ ಮಾಡುತ್ತವೆ.  ಅಂತಃಕರಣ ತಟ್ಟುತ್ತವೆ.  ಯೋಚಿಸುವಂತೆ ಮಾಡುತ್ತವೆ. ಕಣ್ಣಂಚಿನಲ್ಲಿ ನೀರು ತನ್ನಿಂದ ತಾನೇ ಬಂದು ನಿಲ್ಲುತ್ತದೆ.  ಒಂದು ಪುಟ್ಟ ಕಥೆ ಇಷ್ಟೆಲ್ಲಾ ಮಾಡಬಹುದೇ ಎಂಬುದೇ ಅಚ್ಚರಿಯ ಸಂಗತಿ. 
-ಪದ್ಮರಾಜ ದಂಡಾವತಿ

ಇಂಥಹ ಪುಸ್ತಕಗಳು ಹೇರಳವಾಗಿ ಬರಲಿ. ನಾವೆಲ್ಲಾ ಇಂಥದನ್ನು ಓದಿ ಅನುಭಾವಿಸಿ, ಸುಂದರವಾಗಿ ಬದುಕುವಂತಾಗಲಿ.   ನಾವೆಲ್ಲಾ ಈ ಪುಸ್ತಕ ಕೊಂಡು ಓದೋಣ.  ಕೊಳ್ಳಲಿಕ್ಕೆ ಕಷ್ಟವಿದ್ದವರಿಗೆ ಕೊಂಡುಕೊಟ್ಟು ಓದಲು ಪ್ರೇರೇಪಿಸೋಣ.


Tag: Karunalu Baa Belake

ಕಾಮೆಂಟ್‌ಗಳಿಲ್ಲ: