ಮಂಗಳವಾರ, ಮಾರ್ಚ್ 4, 2014

ನಮ್ಮ ಮಕ್ಕಳೇಕೆ ನಮ್ಮಂತಿಲ್ಲ?ನಮ್ಮ ಮಕ್ಕಳೇಕೆ ನಮ್ಮಂತಿಲ್ಲ?
ಅವರೇಕೆ ನಮ್ಮ ಉಡುಗೆತೊಡುಗೆಗಳನ್ನು
ಮಾತು ರೀತಿಗಳನ್ನು ಅನುಕರಿಸುತ್ತಿಲ್ಲ?
ಅವರೇಕೆ ನಮ್ಮಂತೆ ಚಿಂತಿಸುತ್ತಿಲ್ಲ?

ಅವರೇಕೆ ನಮ್ಮಂತೆ ನಾಮ ಮುದ್ರೆ ವಿಭೂತಿಗಳನ್ನು ಮೆರೆಸುತ್ತಿಲ್ಲ?
ಇವಕ್ಕೆಲ್ಲ ಉತ್ತರಗಳು ಪ್ರಶ್ನೆಗಳಲ್ಲೇ ಇವೆಯೇನೋ?

ನಾವೇಕೆ ನಮ್ಮ ಅಪ್ಪ ಅಜ್ಜರಂತಿಲ್ಲ?
ನಾವೇಕೆ ನಮ್ಮ ಮಕ್ಕಳು ಅಪ್ಪ ಅಜ್ಜರಂತಿರಲು ಬಿಡುತ್ತಿಲ್ಲ?

ನಾವೇಕೆ ಅವನ್ನು ದೇಶವಿದೇಶಗಳ ಭಾವ ಭಾವನೆಗಳ,
ಮಾತು ವೇಷಗಳ ಜಾಹೀರಾತುಗಳನ್ನಾಗಿಸಿದ್ದೇವೆ?
ನಮ್ಮದಲ್ಲದ, ನಮಗೂ ಅರ್ಥವಾಗದ ಭಾಷೆಗಳಲ್ಲಿ
ಅವು ತೊದಲಿದಾಗಾ ನಾವೇಕೆ ಹಿಗ್ಗುತ್ತೇವೆ?

ಇವಕ್ಕೆಲ್ಲ ಉತ್ತರಗಳು ಪ್ರಶ್ನೆಗಳಲ್ಲೇ ಇದೆಯೇನೋ?

ನಾವು ನಿನ್ನಿನ ಆಸೆಯ ಹೆಣಗಳು ಹೌದೆ?
ಅವು ನಾಳಿನ ಕನಸುಗಳ ಮೊಗ್ಗೆಗಳು ಹೌದೆ?
ಪ್ರಕೃತಿಯ ವಿಕಾಸದ ಪಯಣ ನಾಳೆಯತ್ತ
ನಮ್ಮದು ತಂಗಳನ್ನು ವೈಭವೀಕರಿಸುವ ದಾಸಚಿತ್ತ!

ಸಾಹಿತ್ಯ:  ಪ್ರಭುಶಂಕರ್

Tag: Namma Makkaleke Nammantilla


ಕಾಮೆಂಟ್‌ಗಳಿಲ್ಲ: