ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬ್ರಿಜೇಶ್ ಪಟೇಲ್

ಬ್ರಿಜೇಶ್ ಪಟೇಲ್

ಬ್ರಿಜೇಶ್ ಪಟೇಲ್ ಕರ್ನಾಟಕದ ಪರವಾದ ಆಟಗಾರರಲ್ಲಿ ಎಪ್ಪತ್ತು ಎಂಭತ್ತರ ದಶಕದಲ್ಲಿ ಅತ್ಯಂತ ಜನಪ್ರಿಯರಾಗಿದ್ದವರು.  ಅವರು ಮತ್ತು ಗುಂಡಪ್ಪ ವಿಶ್ವನಾಥರ ಜೋಡಿ ಬ್ಯಾಟಿಂಗಿನಲ್ಲಿ ಕರ್ನಾಟಕಕ್ಕೆ ಹಿರಿಮೆ ತಂದಿತ್ತು.  ಬ್ರಿಜೇಶ್ ಪಟೇಲರು  ಜನಿಸಿದ್ದು ಮಾರ್ಚ್ 28, 1953ರ ವರ್ಷದಲ್ಲಿ.

ಬಿಷಪ್ ಕಾಟನ್ಸ್ ಶಾಲೆಯಲ್ಲಿನ ದಿನಗಳಲ್ಲೇ ಉತ್ತಮ ಬ್ಯಾಟುಗಾರನಾಗಿ ಮನಸೆಳೆದ ಬ್ರಿಜೇಶ್ ಮುಂದೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದ ಕಿರಿಯರ ತಂಡದಲ್ಲಿ ಭರವಸೆ ಮೂಡಿಸಿದರು.  ಇಂದಿನಂತೆ ಅಂತರ ರಾಷ್ಟ್ರೀಯ ಪಂದ್ಯಗಳು ಹೆಚ್ಚಿಲ್ಲದಿದ್ದ ಅಂದಿನ ದಿನದಲ್ಲಿ ಭಾರತೀಯ ಸ್ಥಳೀಯ ಪಂದ್ಯಗಳಾದ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಇರಾನಿ ಟ್ರೋಫಿ ಮುಂತಾದವು ಅತ್ಯಂತ ಜನಪ್ರಿಯವಾಗಿದ್ದು ನಾವು ಈ ಎಲ್ಲಾ ಪಂದ್ಯಗಳನ್ನೂ ಕಿವಿಯಲ್ಲಿ ಟ್ರಾನ್ಸಿಸ್ಟರ್ ಇಟ್ಟುಕೊಂಡು ಅಪಾರ ಆಸಕ್ತಿಯಿಂದ ವೀಕ್ಷಕ ವಿವರಣೆ  ಕೇಳುತ್ತಿದ್ದೆವು.  ಅಂದಿನ ದಿನದ ಈ ಸಾಧನೆಗಳಲ್ಲಿ ಬ್ರಿಜೇಶ್ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳ ಕಣ್ಮಣಿ.  ಅಂದಿನ ದಿನದಲ್ಲಿ ಆಡಿದ ಬಹುತೇಕ ಪಂದ್ಯಗಳಲ್ಲಿ ಬ್ರಿಜೇಶರಂತೆ ಆಕರ್ಷಕವಾಗಿ ಬಿರುಸಿನ ಆಟ ಆಡುತ್ತಿದ್ದವರು ಕಡಿಮೆ ಎನ್ನಬೇಕು.  ಅವರು ಕ್ರಿಕೆಟ್ಟಿನಿಂದ ನಿವೃತ್ತರಾದ ಸಮಯದಲ್ಲಿ ಪ್ರಥಮ ದರ್ಜೆ ಪಂದ್ಯಗಳಲ್ಲಿ 37 ಶತಕ ಮತ್ತು 11000ಕ್ಕೂ ಹೆಚ್ಚು ರನ್ನುಗಳಿಸಿದ್ದುದು ಅಂದಿನ ದಾಖಲೆಯಾಗಿತ್ತು.   ಕರ್ನಾಟಕ ತಂಡ ಪ್ರಸನ್ನರ ನಾಯಕತ್ವದಲ್ಲಿ ಗೆದ್ದ ಮೊದಲ ರಣಜಿ ಟ್ರೋಫಿ ಪ್ರಶಸ್ತಿ ಹಾಗೂ ಮುಂದಿನ ಕರ್ನಾಟಕದ ಪ್ರಮುಖ ಸಾಧನೆಗಳಿಗೆ ಬ್ರಿಜೇಶ್ ಪಟೇಲ್ ನೀಡಿದ ಕೊಡುಗೆ ಮಹತ್ವದ್ದಾಗಿತ್ತು.

ಅಂದಿನ ದಿನದಲ್ಲಿ ಟೆಸ್ಟ್ ಕ್ರಿಕೆಟ್ಟಿಗೆ ಪದಾರ್ಪಣೆ ಮಾಡಿದ ಆಟಗಾರರಲ್ಲಿ ಅತ್ಯಂತ ಭರವಸೆ ಮೂಡಿಸಿದ್ದ ಬ್ರಿಜೇಶ್ ತಾವು ಆಡಿದ 21 ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ ಮತ್ತು ನಾಲ್ಕೈದು ಅರ್ಧ ಶತಕ ಗಳಿಸಿದ್ದು ಬಿಟ್ಟರೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ರೀತಿಯ ಪ್ರದರ್ಶನ ತೋರಿದ್ದು ತುಂಬಾ ಕಡಿಮೆ.  ವೆಸ್ಟ್ ಇಂಡೀಜ್ ವಿರುದ್ಧ  ನಾಲ್ಕನೆಯ ಇನ್ನಿಂಗ್ಸ್ ನಲ್ಲಿ ನಾನೂರಕ್ಕೂ ಹೆಚ್ಚು ರನ್ ಗಳಿಸಿ ಭಾರತ ಸಾಧಿಸಿದ ಪ್ರಸಿದ್ಧ ದಾಖಲೆ ರನ್ ಚೇಸಿನಲ್ಲಿ ಸುನಿಲ್ ಗಾವಸ್ಕರ್, ವಿಶ್ವನಾಥ್ ಅವರಂತೆಯೇ ಬ್ರಿಜೇಶ್ ಪಟೇಲರ ಹೆಸರು ಕೂಡಾ ಶಾಶ್ವತವಾಗಿದೆ.  ಕವರ್ಸ್ ಕ್ಷೇತ್ರ ರಕ್ಷಣೆಯಲ್ಲಿ ಅವರು ಅಂದಿನ ದಿನದ ವಿಶ್ವ ಶ್ರೇಷ್ಠರ ಸಾಲಿನಲ್ಲಿ ಪ್ರತಿಷ್ಟಿತರಿದ್ದರು.  ಇಷ್ಟಾದರೂ ವೇಗಗತಿಯ ಬೌಲಿಂಗ್ ಎದುರಿಸುವಲ್ಲಿ ಅವರಿಗಿದ್ದ ಪರಿಣತಿ ಕಡಿಮೆಯದ್ದು ಎಂಬಂತೆ ಕಂಡುಬಂದ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಯುಗ 1974-1979ರ ಅವಧಿಗೆ ಸೀಮಿತಗೊಂಡಿತು.

ಮುಂದೆ ಬ್ರಿಜೇಶ್ ಕ್ರಿಕೆಟ್ ಆಡಳಿತಗಾರರಾಗಿ ಮೂಡಿದರು.  ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ, ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮತ್ತು ಕರ್ನಾಟಕ್ ಕ್ರಿಕೆಟ್ ಮಂಡಳಿಯ  ಕಾರ್ಯದರ್ಶಿಯಾಗಿ ಕ್ರಿಕೆಟ್ಟಿನ ಪ್ರಬಲ ಆರ್ಥಿಕ ವಲಯಕ್ಕೆ ಸೇರಿದವರು ಎಂದು ಗುರುತಿಸಲ್ಪಟ್ಟಿದ್ದರು.  ಅವರ ಅವಧಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸುಸಜ್ಜಿತಗೊಂಡು ಪ್ರಬಲವಾದ ಸಂಸ್ಥೆಯಾಗಿ ರೂಪುಗೊಂಡಿತು.  ಇದಲ್ಲದೆ ಬ್ರಿಜೇಶ್ ಪಟೇಲರು ತಮ್ಮದೇ ಆದ ಕ್ರಿಕೆಟ್ ಅಕಾಡೆಮಿ ಸಹಾ ಸ್ಥಾಪಿಸಿ ಹಲವಾರು ಪ್ರತಿಭೆಗಳಿಗೆ ಕಲಿಕೆಯ ಅವಕಾಶ ಕಲ್ಪಿಸಿದ್ದರು.

ಯಾವುದೇ ಸಾರ್ವಜನಿಕ ಸಂಸ್ಥೆಯ ಅಧಿಕಾರ ಸುದ್ಧಿಗೆ ಬಂದಂತೆ, ಬ್ರಿಜೇಶ್ ಪಟೇಲರ ಆಡಳಿತದ ಅವಧಿ ಕೂಡಾ ತನ್ನದೇ ಆದ ಸುದ್ಧಿಗಳಿಗೆ ಗ್ರಾಸವಾಗಿತ್ತು.  ಇಂದಿನ ಕ್ರಿಕೆಟ್ಟಿನ ಆಧುನಿಕ ವ್ಯಾಪಾರೀ ಯುಗದಲ್ಲಿ ಯಾವುದು ಸರಿ, ಯಾವುದಲ್ಲ, ಯಾರು ಹೇಗೆ, ಪತ್ರಿಕಾ ವಲಯದಲ್ಲಿನ ಮಾಹಿತಿಗಳು ಎಷ್ಟು ಸರಿ ಈ ಎಲ್ಲಾ ವಿಚಾರಗಳು ಅವರವರ ನಿಷ್ಕರ್ಷೆಗೆ ಬಿಟ್ಟ ವಿಚಾರ.

ಇವೆಲ್ಲವುಗಳ ಪರಿಧಿಯಾಚೆಗೆ ಕರ್ನಾಟಕ ರಾಜ್ಯದ ಕ್ರಿಕೆಟ್ ಎಂಬ ಆಟದ ನೆಲೆಯಲ್ಲಿ  ಬ್ರಿಜೇಶ್ ಪಟೇಲರು ಗಣ್ಯ ಪ್ರತಿಭೆ ಮತ್ತು ಅವರ ಆಟ ನಮ್ಮ ರಾಜ್ಯದ ಕ್ರೀಡೆಗೆ ನೀಡಿದ ಕೊಡುಗೆ ಮಹತ್ವದ್ದು ಎಂಬುದರಲ್ಲಿ ಎರಡು ಮಾತಿಲ್ಲ.  ಬ್ರಿಜೆಶರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

Tag: Brijesh Patel

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ