ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹರ್ಷಿ ಮಹೇಶ್ ಯೋಗಿ

ಮಹರ್ಷಿ ಮಹೇಶ್ ಯೋಗಿ

ಪಾಶ್ಚಿಮಾತ್ಯರಿಗೆ ಭಾರತೀಯ ಯೋಗಪದ್ಧತಿಯ ಮೂಲಕ ಧ್ಯಾನ ಕಲಿಸಿದ ಗುರು ಮಹರ್ಷಿ ಮಹೇಶ್ ಯೋಗಿ.    ಮಹರ್ಷಿ ಮಹೇಶ್ ಯೋಗಿ ಅವರ  ಯೋಗ ಪದ್ಧತಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಮಹರ್ಷಿ ಮಹೇಶ್ ಯೋಗಿ ಅವರು ಹುಟ್ಟಿದ್ದು ಮಧ್ಯಪ್ರದೇಶದ ಜಬಲ್‌ಪುರನಲ್ಲಿ. ಇವರ ಜನ್ಮದಿನಾಂಕದ ಬಗ್ಗೆ ನಿಖರವಾದ ದಾಖಲೆಗಳಿಲ್ಲ. ಕೆಲವೊಂದು ಮೂಲಗಳ ಪ್ರಕಾರ 1911ರಿಂದ 1918ರ ಕಾಲಾವಧಿಯಲ್ಲಿ ಮಹರ್ಷಿಯವರು  ಜನಿಸಿರಬಹುದೆಂದು ಊಹಿಸಲಾಗಿದೆ.  ಅವರ ಪಾಸ್ಪೋರ್ಟ್ ಪ್ರಕಾರ ಜನವರಿ 18, 1918 ಅವರ ಜನ್ಮದಿನ.

ಮನಸ್ಸಿನ ನಿಯಂತ್ರಣ, ಏಕಾಗ್ರತೆ ಸಾಧಿಸುವ ಯೋಗ ಪದ್ಧತಿಯನ್ನು ಕಲಿಸಿ ಅದಕ್ಕೆ ವೈದ್ಯಕೀಯ ಸ್ಥಾನಮಾನ ತಂದುಕೊಟ್ಟ ಘನತೆ ಮಹೇಶ್ ಯೋಗಿ ಅವರಿಗೆ ಸಲ್ಲುತ್ತದೆ. 1939ರಲ್ಲಿ ಆದಿ ಶಂಕರಾಚಾರ್ಯ ತತ್ವಾನುಯಾಯಿಗಳಾದ  ಸ್ವಾಮಿ ಬ್ರಹ್ಮಾನಂದ ಸರಸ್ವತಿ ಅವರ ಶಿಷ್ಯರಾಗಿದ್ದ ಮಹರ್ಷಿಯವರು ಕೆಲಕಾಲ ಹಿಮಾಲಯದಲ್ಲಿ ವಾಸವಾಗಿದ್ದರು. ಇವರ ಯೋಗ ಪದ್ಧತಿ Transcendental Meditation ಎಂದು ಸುಪ್ರಸಿದ್ಧ.   ಮಹರ್ಷಿ ಯೋಗಿಯವರು 1955ರಿಂದ ಬೋಧಿಸುತ್ತಿದ್ದ ಈ  ತರ್ಕಾತೀತ ಯೋಗರಹಸ್ಯವನ್ನು 1959ರಲ್ಲಿ ಅಮೆರಿಕದಲ್ಲೂ ಪರಿಚಯಿಸಿದರು. 1968ರಲ್ಲಿ ಭಾರತದ ಇವರ ಆಶ್ರಮಕ್ಕೆ ರಾಕ್ ಮತ್ತು ಪಾಪ್ ಗಾಯಕರು ಭೇಟಿ ಕೊಟ್ಟು ಇವರ ಶಿಷ್ಯರಾದ ಮೇಲೆ ಮಹೇಶ್ ಯೋಗಿ ಅವರಿಗೆ ಬೀಟಲ್ಸ್ ಗುರು ಎಂಬ ಪ್ರಖ್ಯಾತಿ ಬಂತು. ಮಾದಕ ವ್ಯಸನಗಳಿಗೆ ಬಲಿಯಾದ ರಾಕ್ ಗಾಯಕರಿಗೆ ಇವರ ಯೋಗ ಪದ್ಧತಿಯ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು.   ಹೀಗೆ ಮುಂದುವರಿದ ಅವರ  ಯೋಗ ಚಳುವಳಿ ಜಗತ್ತಿನಾದ್ಯಂತ ಪ್ರಸಿದ್ಧವಾಯಿತು.

ವಿಶ್ವಾದ್ಯಂತ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿರುವ ಮಹರ್ಷಿಯವರು ಕಮಲದ ಭಂಗಿಯಲ್ಲಿ ಕುಳಿತು ಗಾಳಿಯಲ್ಲಿ ತೇಲುವ ಪ್ರಕ್ರಿಯೆ ಕುರಿತಂತೆ ಹಲವಾರು ದೇಶಗಳಲ್ಲಿ ಪ್ರಸಿದ್ಧಿಯಿದೆ.  ಪುರಾತನವಾದ ಯೋಗ ಪದ್ಧತಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ ಘನತೆ ಮಹರ್ಷಿ ಅವರಿಗಿದೆ.

"ಕತ್ತಲೆಯೊಂದಿಗೆ ಹೋರಾಡಬೇಡಿ. ಬೆಳಕನ್ನು ತನ್ನಿ. ಕತ್ತಲೆಯು ಮಾಯವಾಗುತ್ತದೆ" ಎಂಬುದು  ಮಹರ್ಷಿ ಮಹೇಶ್ ಯೋಗಿ ಅವರ ಪ್ರಸಿದ್ಧ ಮಂತ್ರೋಕ್ತಿ.

ಅವರು ಫೆಬ್ರುವರಿ 5, 2008ರ ವರ್ಷದಲ್ಲಿ ಈ ಲೋಕವನ್ನಗಲಿದರು.


ಹೆಚ್ಚಿನ ವಿವರಗಳು  ಇಲ್ಲಿ ಲಭ್ಯ.. http://www.maharishi.org/

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ