ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೀರಪ್ಪ ಮೊಯ್ಲಿ


 ವೀರಪ್ಪ ಮೊಯ್ಲಿ 


ವೀರಪ್ಪ ಮೊಯ್ಲಿ ಕರ್ನಾಟಕ ರಾಜ್ಯದ 13ನೇ ಮುಖ್ಯಮಂತ್ರಿಗಳಾಗಿ ಮತ್ತು ಕೇಂದ್ರಸಚಿವರಾಗಿ ರಾಜಕಾರಣದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಸಾಹಿತ್ಯಕೃಷಿಯಲ್ಲೂ ಮಹತ್ವದ ಸಾಧನೆ ಮಾಡಿದವರಾಗಿದ್ದಾರೆ.  

ವೀರಪ್ಪ ಮೊಯ್ಲಿಯವರು 1940ರ ಜನವರಿ 12ರಂದು ಜನಿಸಿದರು. ತಾಯಿ ಪೂವಮ್ಮ ಮತ್ತು ತಂದೆ ತಮ್ಮಯ್ಯ ಮೊಯ್ಲಿ ಅವರು. ಮೊಯ್ಲಿಯವರು ತಮ್ಮ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರಿಯಲ್ಲಿ ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಪೂರೈಸಿ, ಪದವಿ ಪಡೆದರು. ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಲ್ಲಿ ನಂತರ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದಂತೆಯೆ, ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್.ಪದವಿ ಪಡೆದರು. ಕಾರ್ಕಳ ಹಾಗು ಮಂಗಳೂರುಗಳಲ್ಲಿ ವಕೀಲಿ ವೃತ್ತಿಯನ್ನಾರಂಭಿಸಿ ಮೊಯ್ಲಿಯವರು ನಂತರದಲ್ಲಿ ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಮುಂದುವರಿದರು.

1968ರಲ್ಲಿ ಮೊಯ್ಲಿಯವರು ಕಾಂಗ್ರೆಸ್ ಪಕ್ಷದ ಸದಸ್ಯರಾದರು. 1969ರಲ್ಲಿ ಕಿಸಾನ ಸಭಾ ಸ್ಥಾಪಿಸಿದರು. 1972ರಿಂದ 1999ರವರೆಗೆ ಮೊಯ್ಲಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. 1974ರಿಂದ 1977ರವರೆಗೆ ಮೊಯ್ಲಿಯವರು ಸಣ್ಣ ಕೈಗಾರಿಕೆ ಖಾತೆಯ ಮಂತ್ರಿಯಾಗಿದ್ದರು. 1980ರಿಂದ 1982ರವರೆಗೆ ಹಣಕಾಸು ಮತ್ತು ಯೋಜನಾ ಖಾತೆಯ ಮಂತ್ರಿಯಾಗಿದ್ದರು. 1989ರಿಂದ 1992ರ ವರೆಗೆ ವಿವಿಧ ಇಲಾಖೆಗಳ ಸಚಿವರಾಗಿದ್ದ ಮೊಯ್ಲಿ ಅವರು, 1992ರಿಂದ 1994ರವರೆಗೆ ಕರ್ನಾಟಕದ 13ನೇ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು.  2009ರಿಂದ 2019 ಅವಧಿಯಲ್ಲಿ  ಮೊಯ್ಲಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ವಿದ್ಯುತಚ್ಚಕ್ತಿ ಖಾತೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಖಾತೆ, ಕಾನೂನು ಖಾತೆ, ಕಾರ್ಪೊರೇಟ್ ನಿರ್ವಹಣಾ ಖಾತೆ ಮುಂತಾದ ಖಾತೆಗಳನ್ನು ಮನಮೋಹನ್ ಸಿಂಗ್ ಅವರ ಮಂತ್ರಿ ಮಂಡಲದಲ್ಲಿ ನಿರ್ವಹಿಸಿದ್ದರು. 


ಸಾಹಿತ್ಯ ಕ್ಷೇತ್ರದಲ್ಲೂ ಮಹತ್ವದ ಸಾಧನೆ ಮಾಡಿರುವ ವೀರಪ್ಪ ಮೊಯ್ಲಿಯವರ ಪ್ರಮುಖ ಕೃತಿಗಳಲ್ಲಿ ಸುಳಿಗಾಳಿ, ಸಾಗರದೀಪ, ಕೊಟ್ಟ, ತೆಂಬರೆ ಕಾದಂಬರಿಗಳು;  ಮಿಲನ, ಪ್ರೇಮವೆಂದರೆ, ಪರಾಜಿತ, ಮೂರು ನಾಟಕಗಳು;
ಹಾಲು ಜೇನು, ಮತ್ತೆ ಮಡೆಯಲಿ ಸಮರ, ಯಕ್ಷಪ್ರಶ್ನೆ, ಜೊತೆಯಾಗಿ ನಡೆಯೋಣ (ಶ್ರೀಮತಿ ಮಾಲತಿ ಮೊಯ್ಲಿಯವರ ಜೊತೆಯಲ್ಲಿ) ಶ್ರೀರಾಮಾಯಣ ಅನ್ವೇಷಣಂ ಕಾವ್ಯಗಳು ಸೇರಿವೆ. ಇಂಗ್ಲಿಷಿನಲ್ಲೂ ಹಲವಾರು ಕೃತಿಗಳನ್ನು ರಚಿಸಿರುವ ಮೊಯ್ಲಿ ಅವರ ಬರಹಗಳು ಅನೇಕ ಇತರ ಭಾಷೆಗಳಿಗೆ ತರ್ಜುಮೆಗೊಂಡಿವೆ. 

ವೀರಪ್ಪ ಮೊಯ್ಲಿ ಅವರಿಗೆ 2000ದ ಸಾಲಿನಲ್ಲಿ ಅಲ್-ಅಮೀನ್ ಸದ್ಭಾವನಾ ಪ್ರಶಸ್ತಿ, 2001ನೆಯ ಸಾಲಿನಲ್ಲಿ ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರ ಸುಧಾರಣೆಗಾಗಿ ಕೊಡಮಾಡುವ ದೇವರಾಜ ಅರಸು ಪ್ರಶಸ್ತಿ, 2001ರ ಆರ್ಯಭಟ ಪುರಸ್ಕಾರ, 2002ರಲ್ಲಿ ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, 2002ರಲ್ಲಿ ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪುರಸ್ಕಾರ, 2013ರ ಬ್ಯಾಂಕಾಕಿನ ಏಷಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ಲೋಬಲ್ ಸಿಟಿಜನ್ ಪ್ರಶಸ್ತಿ, ನ್ಯಾಯ್ಯಾಂಗದಲ್ಲಿನ ವೈಶಿಷ್ಟ್ಯಮಯ ಕೊಡುಗೆಗಳಿಗಾಗಿ ಯುನೈಟೆಡ್ ಕಿಂಗ್ಡಂನ ಹೌಸ್ ಆಫ್ ಕಾಮನ್ಸ್ ನೀಡುವ ನೆಕ್ಸ್ಟ್ ಸ್ಟೆಪ್ ಫೌಂಡೆಶನ್ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ವೈವಿಧ್ಯಮಯ ಗೌರವಗಳು ಸಂದಿವೆ. ಜೊತೆಗೆ ಇವರ ‘ಶ್ರೀರಾಮಾಯಣ ಅನ್ವೇಷಣಂ’ ಕೃತಿಗೆ ಸಾಹಿತ್ಯಕ್ಷೆತ್ರದ ಮಹತ್ವದ ಪ್ರಶಸ್ತಿಗಳಾದ ಭಾರತೀಯ ಜ್ಞಾನಪೀಠ ಪ್ರತಿಷ್ಠಾನ ನೀಡುವ 2010ರ ಸಾಲಿನ ಮೂರ್ತಿದೇವಿ ಪ್ರಶಸ್ತಿ ಹಾಗೂ 2014ರ ಸಾಲಿನ ಪ್ರತಿಷ್ಟಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಗೌರವಗಳು ಸಂದಿವೆ.

ವೀರಪ್ಪ ಮೊಯ್ಲಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of former chief minister of Karnataka and writer Dr Veerappa Moily 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ